ಕಣಕ್ಕಿಳಿದ ತೆಲುಗು ಚಿತ್ರರಂಗ: ಸಾಲು-ಸಾಲು ಸಿನಿಮಾ ಬಿಡುಗಡೆ ಘೋಷಣೆ
ಜನವರಿ ಮೊದಲ ಹಾಗೂ ಎರಡನೇ ವಾರದಲ್ಲಿ ದೇಶದಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಳವಾದ ಕಾರಣ ಹಲವು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ದಿನಾಂಕ ಮುಂದೂಡಿಕೊಂಡಿದ್ದವು. ಆದರೆ ಈಗ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದ್ದಂತೆ ಮತ್ತೆ ಸಿನಿಮಾಗಳು ಬಿಡುಗಡೆ ಆಗಲು ಸಜ್ಜಾಗುತ್ತಿವೆ.
ತೆಲುಗು ಚಿತ್ರರಂಗದಲ್ಲಂತೂ ದೊಡ್ಡ ಸ್ಟಾರ್ ನಟರ, ಬಿಗ್ ಬಜೆಟ್ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಎಲ್ಲ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲು ಕಾದು ಕುಳಿತಿವೆ. ಆದರೆ ಕೊರೊನಾ ಕಾರಣಕ್ಕೆ ಸಿನಿಮಾ ಬಿಡುಗಡೆ ತಡವಾಗುತ್ತಿದೆ.
ನಿನ್ನೆ ಬಹುನಿರೀಕ್ಷಿತ ಸಿನಿಮಾ 'ಆರ್‌ಆರ್‌ಆರ್' ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಅದರ ಬೆನ್ನಲ್ಲೆ ಹಲವು ಬಿಗ್ ಬಜೆಟ್, ಸ್ಟಾರ್ ಸಿನಿಮಾಗಳು ತಮ್ಮ ಬಿಡುಗಡೆ ದಿನಾಂಕ ಘೋಷಿಸಿವೆ. ಪವನ್ ಕಲ್ಯಾಣ್, ಚಿರಂಜೀವಿ ಸಿನಿಮಾಗಳು ಸಹ ಈ ಪಟ್ಟಿಯಲ್ಲಿವೆ. ಹಾಗಿದ್ದರೆ ಯಾವ ಸಿನಿಮಾ ಎಂದು ಬಿಡುಗಡೆ? ಇಲ್ಲಿದೆ ಮಾಹಿತಿ.

ಚಿರಂಜೀವಿ ನಟನೆಯ 'ಆಚಾರ್ಯ' ಬಿಡುಗಡೆ ಯಾವಾಗ
ನಟ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಆಚಾರ್ಯ' ಸಿನಿಮಾ ಏಪ್ರಿಲ್ 29ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ಅವರ ಪುತ್ರ ರಾಮ್ ಚರಣ್ ತೇಜ ಸಹ ನಟಿಸಿದ್ದಾರೆ. ನಾಯಕಿಯರಾಗಿ ಕಾಜಲ್ ಅಗರ್ವಾಲ್ ಹಾಗೂ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಕೊರಟಾಲ ಶಿವ. ಈ ಮೊದಲು ಫೆಬ್ರವರಿ 4ಕ್ಕೆ ಸಿನಿಮಾ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಬಳಿಕ ಸಿನಿಮಾ ಬಿಡುಗಡೆ ಮುಂದೂಡಲಾಯ್ತು. ರಾಮ್ ಚರಣ್ ತೇಜ ನಟನೆಯ 'ಆರ್‌ಆರ್‌ಆರ್' ಸಿನಿಮಾ ಬಿಡುಗಡೆ ಆಗಿ ತಿಂಗಳ ಬಳಿಕ 'ಆಚಾರ್ಯ' ಬಿಡುಗಡೆ ಆಗಲಿದೆ.

ಪವನ್ ನಟನೆಯ 'ಭೀಮ್ಲಾ ನಾಯಕ್'
ಪವನ್ ಕಲ್ಯಾಣ್ ನಟನೆಯ 'ಭಿಮ್ಲ ನಾಯಕ್' ಸಿನಿಮಾವು ಎರಡು ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. 'ಭೀಮ್ಲಾ ನಾಯಕ್' ಸಿನಿಮಾವು ಫೆಬ್ರವರಿ 25 ತಪ್ಪಿದರೆ ಅದರ ಮುಂದಿನ ವಾರ ಅಂದರೆ ಏಪ್ರಿಲ್ 1 ರಂದು ಬಿಡುಗಡೆ ಆಗಲಿದೆ. ರಾಣಾ ದಗ್ಗುಬಾಟಿ ಹಾಗೂ ಪವನ್ ಕಲ್ಯಾಣ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಈ ಸಿನಿಮಾ ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಆಗಿದೆ. ಈ ಹಿಂದೆ ಈ ಸಿನಿಮಾವನ್ನು ಜನವರಿ 12 ರಂದು ಸಂಕ್ರಾಂತಿ ಸಮಯಕ್ಕೆ ಬಿಡುಗಡೆ ಮಾಡಲು ಯೋಜಿಸಲಾಗಿತ್ತು.

'ಸರ್ಕಾರು ವಾರಿ ಪಾಠ' ಯಾವಾಗ ಬಿಡುಗಡೆ
ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಠ' ಸಿನಿಮಾವು ಮೇ 12 ರಂದು ತೆರೆಗೆ ಬರಲಿದೆ. ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಸಹ ಫೆಬ್ರವರಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಲಿತ್ತು. ಆದರೆ 'ಆರ್‌ಆರ್‌ಆರ್' ಸಿನಿಮಾಕ್ಕೆ ದಾರಿ ಮಾಡಿಕೊಡಲೆಂದು ಸಿನಿಮಾ ಬಿಡುಗಡೆಯನ್ನು ಮುಂದೂಡಲಾಯ್ತು. ಆದರೆ ಕೊರೊನಾ ಕಾರಣಕ್ಕೆ 'ಆರ್‌ಆರ್‌ಆರ್' ಸಿನಿಮಾದ ಬಿಡುಗಡೆಯೇ ಮುಂದೂಡಲ್ಪಟ್ಟಿತು. ಈಗ ಈ ಸಿನಿಮಾವು ಮೇ 12ರಂದು ತೆರೆಗೆ ಬರಲಿದೆ.

'ರಾಧೆ-ಶ್ಯಾಮ್' ಸಿನಿಮಾ ಯಾವಾಗ?
ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಜನವರಿ 14 ರಂದು ಬಿಡುಗಡೆ ಆಗುದರಲ್ಲಿತ್ತು. ಆದರೆ ಕೊರೊನಾ ಕಾರಣಕ್ಕೆ ಬಿಡುಗಡೆ ಮುಂದೂಡಲಾಯ್ತು. ಈಗ ಹೊಸ ಬಿಡುಗಡೆ ದಿನಾಂಕವನ್ನು 'ರಾಧೆ-ಶ್ಯಾಮ್' ಸಿನಿಮಾ ಇನ್ನೂ ಘೋಷಣೆ ಮಾಡಿಲ್ಲ. ಕೆಲವು ಮೂಲಗಳ ಪ್ರಕಾರ ಸಿನಿಮಾವನ್ನು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುವ ಬಗ್ಗೆಯೂ ಮಾತುಕತೆ ಚಾಲ್ತಿಯಲ್ಲಿದೆ. ಇದರ ಜೊತೆಗೆ ರವಿತೇಜ ನಟನೆಯ 'ಖಿಲಾಡಿ', ವೆಂಕಟೇಶ್ ನಟನೆಯ 'ಎಫ್ 3' ಇನ್ನೂ ಹಲವು ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ ಆಗುವುದು ಬಾಕಿ ಇದೆ.


Click it and Unblock the Notifications











