20 ಕೋಟಿ ವೆಚ್ಚದ 'ಆಚಾರ್ಯ' ಸೆಟ್ ಬೆಂಕಿಗಾಹುತಿ: ಅಗ್ನಿ ದುರಂತಕ್ಕೆ ಕಾರಣ ಅದೇನಾ?
ಕೊರಟಾಲ ಶಿವ ನಿರ್ದೇಶನದಲ್ಲಿ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಫ್ಲಾಪ್ ಆಗಿತ್ತು. ಬಹುಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿತ್ತು. ಚಿತ್ರಕ್ಕಾಗಿ ಚಿರಂಜೀವಿ ತಮ್ಮದೇ ಜಾಗದಲ್ಲಿ ಭಾರೀ ಸೆಟ್ ನಿರ್ಮಿಸಿದ್ದರು. ಬರೋಬ್ಬರಿ 20 ಕೋಟಿ ವೆಚ್ಚದಲ್ಲಿ ದೇವಸ್ಥಾನ ಪಟ್ಟಣದ ಸೆಟ್ ಹಾಕಲಾಗಿತ್ತು. 20 ಎಕರೆ ಜಾಗದಲ್ಲಿ ಹಾಕಿದ್ದ ಸೆಟ್ ಅನ್ನು ಶೂಟಿಂಗ್ ನಂತರ ತೆಗೆದಿರಲಿಲ್ಲ. ಇದೀಗ ಆ ಸೆಟ್ ಬೆಂಕಿಗಾಹುತಿ ಆಗಿದೆ.
ತಮ್ಮದೇ ಜಾಗದಲ್ಲಿ ಸೆಟ್ ಹಾಕಿದ್ದರಿಂದ ಮುಂದಿನ ದಿನಗಳಲ್ಲಿ ಬೇರೆ ಸಿನಿಮಾಗಳ ಶೂಟಿಂಗ್‌ಗೆ ಬಳಸಬಹುದು ಎಂದು ಸೆಟ್ ಅನ್ನು ಕೆಡವದೇ ಬಿಡಲಾಗಿತ್ತು. ನಿನ್ನೆ ಸಂಜೆ ಯಾರೋ ಕೆಲವರು ಅಲ್ಲಿ ಸಿಗರೇಟ್ ಸೇದುತ್ತಾ ಕೂತಿದ್ದರು. ಅವರು ಎದ್ದು ಹೋದ ಮೇಲೆ ಸೆಟ್‌ಗೆ ಬೆಂಕಿ ತಲುಲಿದೆ ಎನ್ನಲಾಗ್ತಿದೆ. ಕೂಡಲೇ ಸ್ಥಳದಲ್ಲಿ ಇದ್ದವರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆದರೆ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುವ ವೇಳೆಗೆ ಸೆಟ್‌ಗೆ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎನ್ನಲಾಗ್ತಿದೆ.

ಕಾಳೀ ಮಾತೆಯ ದೇವಸ್ಥಾನ, ದೇವಸ್ಥಾನದ ಬೀದಿ ಹೀಗೆ ನಯನಮನೋಹರವಾಗಿ ಧರ್ಮಸ್ಥಳಿ ಸೆಟ್ ನಿರ್ಮಿಸಲಾಗಿತ್ತು. ಸೆಟ್ ನಿರ್ಮಾಣವಾದಾಗ ಚಿರಂಜೀವಿ ನೋಡಿ ಬಹಳ ಖುಷಿಪಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಸಂತಸ ಹಂಚಿಕೊಂಡಿದ್ದರು. ಚಿತ್ರದ ಕೆ ಸಂದರ್ಶನಗಳನ್ನು ಕೂಡ ಇದೇ ಸೆಟ್ ಆವರಣದಲ್ಲಿ ಶೂಟ್ ಮಾಡಲಾಗಿತ್ತು. 'ಆಚಾರ್ಯ' ಚಿತ್ರದಲ್ಲಿ ಚಿರು ಜೊತೆಗೆ ರಾಮ್‌ಚರಣ್ ಕೂಡ ನಟಿಸಿದ್ದರು.
ಮೆಗಾ ಮಲ್ಟಿಸ್ಟಾರರ್ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ತಂದೆ ಮಗ ನಕ್ಸಲೈಟ್ ಪಾತ್ರಗಳಲ್ಲಿ ಮಿಂಚಿದ್ದರು. ಆದರೆ ಸಿನಿಮಾ ದಯನೀಯವಾಗಿ ಸೋಲುಂಡಿತ್ತು. ಚಿತ್ರದಿಂದ ಭಾರೀ ನಷ್ಟವಾಗಿತ್ತು. ವಿತರಕರು ಇದರಿಂದ ಬೇಸರಗೊಂಡಿದ್ದರು. ಆರ್ಟ್ ಡೈರೆಕ್ಟರ್ ಸುರೇಶ್ ಸೆಲ್ವರಾಜನ್ ಮತ್ತವರ ತಂಡ ಹಲವು ದಿನಗಳ ಕಾಲ ಧರ್ಮಸ್ಥಳಿ ಸೆಟ್ ಅನ್ನು ನಿರ್ಮಾಣ ಮಾಡಿದ್ದರು. ಚಿತ್ರದಲ್ಲಿ ಈ ಆಲಯ ಪಟ್ಟಣ ಕೂಡ ಪ್ರಮುಖ ಪಾತ್ರ ವಹಿಸಿತ್ತು.

ಬೆಂಕಿ ದುರಂತದ ವೇಳೆ ಯಾರು ಸ್ಥಳದಲ್ಲಿ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮ್ಯಾಟ್ನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಜೊತೆ ಸೇರಿ ರಾಮ್‌ಚರಣ್ 'ಆಚಾರ್ಯ' ಸಿನಿಮಾ ನಿರ್ಮಿಸಿದ್ದರು. 100 ಕೋಟಿಗೂ ಅಧಿಕ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದರು ಎನ್ನಲಾಗಿತ್ತು. ಆದರೆ ಸಿನಿಮಾ ಮಾತ್ರ ಭಾರೀ ನಷ್ಟವನ್ನು ತಂದೊಡ್ಡಿದ್ದು ಸುಳ್ಳಲ್ಲ. ಒಂದೇ ವಾರಕ್ಕೆ ಸಿನಿಮಾ ಥಿಯೇಟರ್‌ಗಳಿಂದ ಎತ್ತಂಗಡಿ ಆಗಿತ್ತು. ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದರೆ ಸೋನು ಸೂದ್ ವಿಲನ್ ಆಗಿ ಅಬ್ಬರಿಸಿದ್ದರು.


Click it and Unblock the Notifications











