5 ತಿಂಗಳು 4 ಮೆಗಾ ಫ್ಯಾಮಿಲಿ ಸ್ಟಾರ್ಸ್ ಸಿನಿಮಾಗಳು; ಮೆಗಾ ಫ್ಯಾನ್ಸ್‌ಗೆ ಸಮ್ಮರ್ ಸಂಭ್ರಮ
ಸಿನಿಮಾಗಳ ರಿಲೀಸ್ ಡೇಟ್ ವಿಚಾರದಲ್ಲಿ ಭಾರೀ ಚರ್ಚೆ ನಡೆಯುತ್ತದೆ. ಇದ್ದಕ್ಕಿದಂತೆ ಕೆಲ ಸಿನಿಮಾಗಳ ಬಿಡುಗಡೆ ದಿನಾಂಕ ಬದಲಾಗಿಬಿಡುತ್ತದೆ. ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಬಹಳ ಮುಖ್ಯ ಎನಿಸಿಕೊಳ್ಳುತ್ತದೆ. ಸದ್ಯ ಸಮ್ಮರ್ ಸೀಸನ್ ಶುರುವಾಗುತ್ತಿದೆ. ಚಿತ್ರರಂಗ ಕಾವೇರುತ್ತಿದೆ.
ಶಾಲಾ ಕಾಲೇಜುಗಳ ರಜೆ ಸಮಯದಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡುವ ಲೆಕ್ಕಾಚಾರ ನಡೆಯುತ್ತದೆ. ಹೀಗೆ ಸಮ್ಮರ್ ಸೀಸನ್‌ನಲ್ಲಿ ತೆರೆಕಂಡ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡಿರುವುದು ಉದಾಹರಣೆಯಿದೆ. ಮಾರ್ಚ್ 27ಕ್ಕೆ ತೆರೆಗೆ ಬರಬೇಕಿದ್ದ 'ಪೆದ್ದಿ' ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ರಾಮ್‌ಚರಣ್ 'ಪೆದ್ದಿ' ಬದಲು ಚಿಕ್ಕಪ್ಪ ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಮಾರ್ಚ್ ಕೊನೆ ವಾರ ತೆರೆಗೆ ಬರ್ತಿದೆ.

ಮಾರ್ಚ್ 19ಕ್ಕೆ 'ಟಾಕ್ಸಿಕ್' ಹಾಗೂ 'ಧುರಂಧರ್- 2' ಚಿತ್ರಗಳು ಒಟ್ಟಿಗೆ ತೆರೆಗಪ್ಪಳಿಸುತ್ತಿದೆ. ಎರಡು ವಾರ ಬಹುತೇಕ ಚಿತ್ರಮಂದಿರಗಳನ್ನು ಈ 2 ಚಿತ್ರಗಳು ಕಬಳಿಸುತ್ತವೆ. ಹಾಗಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುವ 'ಪೆದ್ದಿ' ಚಿತ್ರಕ್ಕೆ ಹಿನ್ನಡೆ ಆಗಬಹುದು ಎಂದು ಮೇಕರ್ಸ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಏಪ್ರಿಲ್ 30ರಂದು 'ಪೆದ್ದಿ' ಸಿನಿಮಾ ತೆರೆಗೆ ಬರಲಿದೆ. ಆ ಮೂಲಕ ತಿಂಗಳ ಅಂತರದಲ್ಲಿ ಮೆಗಾ ಫ್ಯಾಮಿಲಿ ಹೀರೊಗಳ 2 ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುವಂತಾಯಿತು.
ಚಿರಂಜೀವಿ ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ನಟನೆಯ 'ಕೊರಿಯನ್ ಕನಕರಾಜು' ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಮೇ ತಿಂಗಳಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಇನ್ನು ಜುಲೈ 10ರಂದು ಚಿರಂಜೀವಿ ನಟನೆಯ 'ವಿಶ್ವಂಭರ' ಸಿನಿಮಾ ತೆರೆಗೆ ತರಲು ಪ್ರಯತ್ನ ಜೋರಾಗಿದೆ. ಹಾಗಾಗಿ 5 ತಿಂಗಳ ಅಂತರದಲ್ಲಿ ಮೆಗಾ ಫ್ಯಾಮಿಲಿ ಹೀರೊಗಳ 4 ಸಿನಿಮಾಗಳಿಗೆ ಬಿಡುಗಡೆ ಭಾಗ್ಯ ಸಿಗುವಂತಾಗುತ್ತಿದೆ. ಇದು ಮೆಗಾ ಫ್ಯಾನ್ಸ್‌ಗೆ ಹಬ್ಬವೇ ಸರಿ.

ಇತ್ತೀಚೆಗೆ ಮೆಗಾ ಫ್ಯಾಮಿಲಿಗೆ ಹೊಸ ಅತಿಥಿಗಳ ಆಗಮನವಾಗಿದೆ. ರಾಮ್‌ಚರಣ್ ಹಾಗೂ ಉಪಾಸನಾ ದಂಪತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು ಕುಟುಂಬದಲ್ಲಿ ಸಂಭ್ರಮ ತಂದಿದೆ. ಅಭಿಮಾನಿಗಳು ಕೂಡ ಮೆಗಾ ವಾರಸ್ದಾರ ಬಂದ ಎಂದು ಖುಷಿಯಾಗಿದ್ದಾರೆ. ಇದೀಗ ಸಾಲು ಸಾಲಾಗಿ ಮೆಗಾ ಸ್ಟಾರ್ಸ್ ಸಿನಿಮಾಗಳು ತೆರೆಗೆ ಬರುತ್ತಿರುವುದು ವಿಶೇಷ. ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
ಈಗಾಗಲೇ 'ಪೆದ್ದಿ' ಚಿತ್ರದ ಟೀಸರ್ ಹಾಗೂ ಸಾಂಗ್ ರಿಲೀಸ್ ಆಗಿ ಹಿಟ್ ಆಗಿದೆ. 'ಚಿಕ್ಕಿರಿ' ಸಾಂಗ್ ಬಳಿಕ ಮತ್ತೊಂದು ಸಾಂಗ್ ರಿಲೀಸ್ ಪ್ರಯತ್ನ ನಡೀತಿದೆ. ಬುಚ್ಚಿಬಾಬು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ. ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹರೀಶ್ ಶಂಕರ್ ನಿರ್ದೇಶನದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಬಹಳ ಹಿಂದೆ ಶುರುವಾಗಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಿದೆ.
ಪವನ್ ಕಲ್ಯಾಣ್ ಚುನಾವಣೆ, ರಾಜಕೀಯ ಎಂದ ಬ್ಯುಸಿಯಾಗಿಬಿಟ್ಟರು. ಹಾಗಾಗಿ ಅವರ ಸಿನಿಮಾಗಳು ಅರ್ಧಕ್ಕೆ ನಿಂತಿತ್ತು. 'ಹರಿಹರ ವೀರಮಲ್ಲು' ಹಾಗೂ 'OG' ಚಿತ್ರಗಳು ಇತ್ತೀಚೆಗೆ ತೆರೆಕಂಡು ಸದ್ದು ಮಾಡಿದ್ದವು. ಹಾಗಾಗಿ ನಿಂತಿದ್ದ 'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕೂ ಜೀವ ಬಂದಿದೆ. ಪವನ್ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದಾರೆ. ಶ್ರೀಲೀಲಾ ನಾಯಕಿಯಾಗಿ ಮಿಂಚಿದ್ದಾರೆ.
'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿ ಚಿರಂಜೀವಿ ತೇಲುತ್ತಿದ್ದಾರೆ. ಮುಂದೆ 'ವಿಶ್ವಂಭರ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇದೊಂದು ಫ್ಯಾಂಟಸಿ ಸಿನಿಮಾ ಆಗಿದ್ದು ಆಶಿಕಾ ರಂಗನಾಥ್ ಕೂಡ ನಟಿಸಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











