ಹಣವಿಲ್ಲದೆ ಪರದಾಡುತ್ತಿದ್ದ ಸಿನಿಮಾ ತಂತ್ರಜ್ಞನಿಗೆ ಲಕ್ಷ-ಲಕ್ಷ ಸಹಾಯ ನೀಡಿದ ಚಿರಂಜೀವಿ
ನಟ ಚಿರಂಜೀವಿ ತಮ್ಮ ನಟನೆ, ಸೂಪರ್ ಹಿಟ್ ಸಿನಿಮಾಗಳಿಂದ ಮಾತ್ರವೇ ಅಲ್ಲದೆ ತಮ್ಮ ಜನಪರ ಕಾಳಜಿ, ಸಮಾಜ ಸೇವೆ ಹಾಗೂ ಸಿನಿಮಾ ಮಂದಿಗೆ ಬೆನ್ನೆಲುಬಾಗಿ ನಿಲ್ಲುವ ಗುಣದಿಂದಲೂ ಗುರುತಿಸಿಕೊಂಡವರು.
ಬ್ಲಡ್ ಬ್ಯಾಂಕ್‌ಗಳು, ಆರೋಗ್ಯ ತಪಾಸಣೆ ಶಿಬಿರಗಳನ್ನು ದಶಕಗಳಿಂದಲೂ ಮಾಡುತ್ತಲೇ ಬಂದಿರುವ ನಟ ಚಿರಂಜೀವಿ, ತಮ್ಮ ಸಿನಿಮಾರಂಗದ ಸಹೋದ್ಯೋಗಿಗಳು, ತಮ್ಮ ಅಭಿಮಾನಿಗಳು ಕಷ್ಟಕ್ಕೆ ಸಿಲುಕಿದ್ದಾಗಲೂ ನೆರವಿಗೆ ಧಾವಿಸಿದ್ದಾರೆ.
ಚಿರಂಜೀವಿಯ ಮಾನವೀಯತೆಗೆ ಈಗ ಮತ್ತೊಂದು ಸಾಕ್ಷಿ ದೊರಕಿದ್ದು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಿನಿಮಾ ರಂಗದ ಸಹೋದ್ಯೋಗಿಯೊಬ್ಬರಿಗೆ ನಟ ಚಿರಂಜೀವಿ ದೊಡ್ಡ ಮಟ್ಟದ ನೆರವನ್ನು ನೀಡಿದ್ದಾರೆ. ಚಿರಂಜೀವಿ ನೀಡಿರುವ ನೆರವನ್ನು ಅವರ ಅಭಿಮಾನಿಗಳು, ಚಿತ್ರರಂಗದ ಇತರರು ಕೊಂಡಾಡಿದ್ದಾರೆ.

ಹಣ ನೀಡಿ ಸಹಾಯ ಮಾಡಿದ ಚಿರಂಜೀವಿ
ತೆಲಗು ಚಿತ್ರರಂಗದಲ್ಲಿ ದಶಕಗಳಿಂದಲೂ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿರುವ ಪಿ ದೇವರಾಜ್ ಎಂಬುವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಮ್ಮ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದರು. ಇದನ್ನು ಗಮನಿಸಿದ ನಟ ಚಿರಂಜೀವಿ ಹಿರಿಯ ಸಿನಿಮಾ ತಂತ್ರಜ್ಞನನ್ನು ಮನೆಗೆ ಕರೆಸಿ ಉಪಚರಿಸಿದ್ದಲ್ಲದೆ ಅವರಿಗೆ ಐದು ಲಕ್ಷ ರುಪಾಯಿ ಚೆಕ್ ನೀಡಿ ಸಹಾಯ ಮಾಡಿದ್ದಾರೆ.

300 ಕ್ಕೂ ಹೆಚ್ಚು ಸಿನಿಮಾಗಳಿಗೆ ದುಡಿದಿರುವ ದೇವರಾಜ್
ಪಿ ದೇವರಾಜ್, ತೆಲುಗು ಚಿತ್ರರಂಗದ ಪ್ರಮುಖ ಸಿನಿಮಾಟೋಗ್ರಾಫರ್ ಆಗಿದ್ದವರು. ನಟ ಎನ್‌ಟಿಆರ್, ಸೂಪರ್ ಸ್ಟಾರ್ ಕೃಷ್ಣ, ಅಕ್ಕಿನೇನಿ ನಾಗೇಶ್ವರ ರಾವ್ ಹಾಗೂ ಸ್ವತಃ ನಟ ಚಿರಂಜೀವಿಯವರ ಆರಂಭಿಕ ಸಿನಿಮಾಗಳಿಗೆ ತಂತ್ರಜ್ಞರಾಗಿ ದುಡಿದವರು. ತೆಲುಗಿನ ಸುಮಾರು 300 ಕ್ಕು ಹೆಚ್ಚು ಸಿನಿಮಾಗಳಿಗೆ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಆದರೆ ವಯೋಸಹಜ ಸಮಸ್ಯೆಗಳಿಗೆ ಸಿಕ್ಕು ಆರೋಗ್ಯ ಹದಗೆಟ್ಟು, ಆರ್ಥಿಕ ಪರಿಸ್ಥಿತಿಯೂ ಕ್ಷೀಣವಾಗಿದ್ದರಿಂದ ಇತ್ತೀಚೆಗೆ ಬಾಡಿಗೆ ಕಟ್ಟಲು ಸಹ ಕಷ್ಟಪಡುತ್ತಿದ್ದರಂತೆ.

ಕನ್ನಡ ಸಿನಿಮಾಗಳಿಗೂ ಕೆಲಸ ಮಾಡಿರುವ ದೇವರಾಜ್
ದೇವರಾಜ್ ಅವರು ಚಿರಂಜೀವಿ ಅಭಿನಯದ 'ನಾಗು', 'ಪುಲಿ ಬೆಬ್ಬುಲಿ', 'ರಾಣಿ ಕಸುವಿನ ರಂಗಮ್ಮ', 'ಟಿಂಗು ರಂಗಡು' ಚಿತ್ರಗಳಿಗೆ ಕ್ಯಾಮರಾಮನ್ ಆಗಿ ಕೆಲಸ ಮಾಡಿದ್ದರು. ದೇವರಾಜ್ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ 300 ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ದೇವರಾಜ್ ಗೆ ಮಗ ಇದ್ದಾರಾದರೂ ಅವರೂ ಸಹ ಆರ್ಥಿಕವಾಗಿ ಅಷ್ಟೋಂದು ಸಭಲರಾಗಿಲ್ಲ. ಅಲ್ಲದೆ ಇತ್ತೀಚೆಗೆ ಅಪಘಾತಕ್ಕೀಡಾಗಿ ಸರಿಯಾಗಿ ನಡೆಯಲು ಸಹ ದೇವರಾಜ್‌ಗೆ ಸಾಧ್ಯವಾಗುತ್ತಿಲ್ಲ. ಅವರ ಚಿಕಿತ್ಸೆಗೆ ಸುಮಾರು ಆರು-ಏಳು ಲಕ್ಷ ಹಣ ಖರ್ಚಾಗಲಿದೆ ಎಂದು ದೇವರಾಜ್ ಪುತ್ರ ಹೇಳಿಕೊಂಡಿದ್ದರು.

ಚಿರಂಜೀವಿ ಅವರಿಂದ ಸಹಾಯ ಪಡೆದ ಪ್ರಮುಖರು
ನಟ ಚಿರಂಜೀವಿ ಹಲವು ಹಿರಿಯ ಸಿನಿಮಾ ತಂತ್ರಜ್ಞರು, ನಟ-ನಟಿಯರಿಗೆ ಸಹಾಯ ಮಾಡಿದ್ದಾರೆ. ಒಟ್ಟಾರೆ ಟಾಲಿವುಡ್‌ನಲ್ಲಿ ಯಾವುದೇ ಸಮಸ್ಯೆಗಳು ಎದುರಾದಾಗ ಪರಿಹರಿಸಲು ಒಂದು ಹೆಜ್ಜೆ ಮುಂದಿಟ್ಟಿರುತ್ತಾರೆ. ಇಂಡಸ್ಟ್ರಿಯಲ್ಲಿ ಒಳ್ಳೆ ಸ್ಥಾನದಲ್ಲಿದ್ದು ಬಳಿಕ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಷ್ಟದಲ್ಲಿರುವ ಎಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಚಿರಂಜೀವಿ ಅವರಿಂದ ಸಹಾಯ ಪಡೆದವರಲ್ಲಿ ಪಾವಲ ಶ್ಯಾಮಲಾ, ಗುಂಡು ಹನುಮಂತ ರಾವ್, ಡ್ಯಾನ್ಸ್ ಮಾಸ್ಟರ್ ಶಿವಶಂಕರ್, ಪೊಟ್ಟಿ ವೀರಯ್ಯ, ತಮಿಳು ನಟ ಪೊನ್ನಂಬಲಂ ಸೇರಿದಂತೆ ಹಲವರು ಇದ್ದಾರೆ.


Click it and Unblock the Notifications











