ಪ್ರಕಾಶ್ ರಾಜ್ ನಟನೆ ಮೆಚ್ಚಿ ಅಭಿನಂದಿಸಿದ ಚಿರಂಜೀವಿ
ತೆಲುಗು ನಟ ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ಸುಮಾರು ಮೂರುವರೆ ವರ್ಷದ ನಂತರ ಪವನ್ ಕಲ್ಯಾಣ್ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಿರುವ ಚಿತ್ರ ಇದಾಗಿದ್ದು, ಭರ್ಜರಿ ರೆಸ್‌ಪಾನ್ಸ್ ಸಿಕ್ಕಿದೆ.
'ವಕೀಲ್ ಸಾಬ್' ಚಿತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕ ನಟ ಪವನ್ ಕಲ್ಯಾಣ್‌ಗೆ ಟಕ್ಕರ್ ಕೊಡುವ ವಕೀಲನಾಗಿ ಪ್ರಕಾಶ್ ರಾಜ್ ಅಭಿನಯಿಸಿದ್ದಾರೆ.
ಪ್ರಕಾಶ್ ರಾಜ್ ಪಾತ್ರ ಹಾಗೂ ಅವರ ಅಭಿನಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವಾಗಿ ಮೆಗಾಸ್ಟಾರ್ ಚಿರಂಜೀವಿ ಅವರು ಪ್ರಕಾಶ್ ರಾಜ್ ಅವರನ್ನು ಶ್ಲಾಘಿಸಿದ್ದಾರೆ. ಇತ್ತೀಚಿಗಷ್ಟೆ ಚಿರಂಜೀವಿ ತಮ್ಮ ಕುಟುಂಬ ಸಮೇತ ವಕೀಲ್ ಸಾಬ್ ಚಿತ್ರವನ್ನು ವೀಕ್ಷಿಸಿದ್ದರು.

ಇದೀಗ, ಪ್ರಕಾಶ್ ರಾಜ್ ಅವರ ಬಗ್ಗೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಚಿರಂಜೀವಿ ''ಪ್ರಕಾಶ್ ರಾಜ್ ಅಂತಹ ಕಲಾವಿದ ಇದ್ದರೆ, ಸಹಜವಾಗಿ ಸಹ ಕಲಾವಿದರು ಪರ್ಫಾಮೆನ್ಸ್ ಹೆಚ್ಚಾಗುತ್ತದೆ. ವಕೀಲ್ ಸಾಬ್ ಚಿತ್ರದಲ್ಲಿ ಅವರ ನಟನೆ ಅದ್ಭುತ ಹಾಗೂ ಪವನ್ ಕಲ್ಯಾಣ್ ಎದುರು ಅತ್ಯುತ್ತಮವಾಗಿ ನಟಿಸಿದ್ದಾರೆ. ಶುಭಾಶಯಗಳು ಪ್ರಕಾಶ್, ಹೀಗೆ ಮುಂದುವರಿಯಲಿ'' ಎಂದು ಶುಭಕೋರಿದ್ದಾರೆ.
ಚಿರಂಜೀವಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ ಪ್ರಕಾಶ್ ರಾಜ್ ''ಎಂದಿಗೂ ಸ್ಪೂರ್ತಿದಾಯಕ .. ಎಂದಿಗೂ ಪ್ರೋತ್ಸಾಹಿಸುವ ಅಣ್ಣಾ...'' ಎಂದು ಸಂತಸ ಹಂಚಿಕೊಂಡಿದ್ದಾರೆ.

ಅಂದ್ಹಾಗೆ, ವಕೀಲ್ ಸಾಬ್ ಚಿತ್ರಕ್ಕೆ ವೇಣು ಶ್ರೀರಾಮ್ ಆಕ್ಷನ್ ಕಟ್ ಹೇಳಿದ್ದಾರೆ. ನಿವೇತಾ ಥಾಮಸ್, ಶ್ರುತಿ ಹಾಸನ್, ಅನನ್ಯಾ ಮತ್ತು ಅಂಜಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಕೀಲ್ ಸಾಬ್ ಹಿಂದಿಯ ಪಿಂಕ್ ಚಿತ್ರದ ರಿಮೇಕ್ ಆಗಿದ್ದು, ಅಮಿತಾಬ್ ಬಚ್ಚನ್ ನಿರ್ವಹಿಸಿದ ಪಾತ್ರವನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ಮಾಡಿದ್ದಾರೆ.


Click it and Unblock the Notifications











