"ಇದಕ್ಕೆಲ್ಲಾ ಗರ್ಭಿಣಿ ಆಗುವ ಅಗತ್ಯ ಇಲ್ಲ"; 'ನೀ ಸಿಗೊವರೆಗೂ' ಸಿನಿಮಾ ನಟಿ ಕೆಂಡಾಮಂಡಲ
ಪಂಜಾಬ್ ಮೂಲದ ತೆಲುಗು ನಟಿ ಮೆಹ್ರೀನ್ ಪಿರ್ಜಾದಾ ಇತ್ತೀಚೆಗೆ ತಮ್ಮ 'ಎಗ್ ಫ್ರೀಜಿಂಗ್' ಮಾಡಿಸಿದ್ದರು. ಆ ಪ್ರಕ್ರಿಯೆಯನ್ನು ವಿಡಿಯೋ ಸಮೇತ ಹಂಚಿಕೊಂಡಿದ್ದರು. ಇತ್ತೀಚೆಗೆ ಹಲವರು 'ಎಗ್ ಫ್ರೀಜಿಂಗ್' ಮೊರೆ ಹೋಗುತ್ತಿದ್ದಾರೆ. ಇದರಲ್ಲಿ ನಟಿಯರು ಇದ್ದಾರೆ.
ಮೆಹ್ರೀನ್ ಪಿರ್ಜಾದಾ ಕನ್ನಡ ಚಿತ್ರವೊಂದಕ್ಕೆ ಕೂಡ ಸಹಿ ಮಾಡಿದ್ದಾರೆ. ತೆಲುಗಿನ 'ಕೃಷ್ಣಗಾಡಿ ವೀರ ಪ್ರೇಮಗಾಥ' ಚಿತ್ರಕ್ಕೆ ಬಣ್ಣ ಹಚ್ಚಿ ಹಾಕಿ ಬೆಳ್ಳಿ ಪರದೆ ಎಂಟ್ರಿ ಕೊಟ್ಟರು. ಅದಕ್ಕೂ ಮುನ್ನ ಮಾಡೆಲಿಂಗ್ ಕ್ಷೇತ್ರದಲ್ಲಿ ಆಕೆ ಗುರ್ತಿಸಿಕೊಂಡಿದ್ದರು. ಕರಿಯರ್ ಮುಖ್ಯ, ಲೈಫ್ ಸೆಟ್ಲ್ ಆಗಬೇಕು ಆಮೇಲೆ ಮದುವೆ ಎಂದು ಹೆಣ್ಣು ಮಕ್ಕಳು ಯೋಚಿಸುತ್ತಿದ್ದಾರೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿ ಅಂಡಾಣು ಶೇಖರಣೆ ಮಾಡಿಸುತ್ತಿದ್ದಾರೆ.

ಕಾರಣಾಂತರಗಳಿಂದ ಮದುವೆ ತಡವಾಗಿ ಆಗುತ್ತೇವೆ ಎನ್ನುವವರು ಆರೋಗ್ಯವಂತ ಅಂಡಾಣು ಶೇಖರಿಸಿ ಮುಂದೆ ಬೇಕಾದಾಗ ಮಗು ಪಡೆಯುವ ವಿಧಾನ ಇದು. ನಟಿ ತಮ್ಮ 'ಎಗ್ ಫ್ರೀಜಿಂಗ್' ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹಲವರು ಇದಕ್ಕೆ ಮೆಚ್ಚುಗೆ ಸೂಚಿಸಿ ಆಕೆಗೆ ಬೆಂಬಲವಾಗಿ ಕಾಮೆಂಟ್ ಮಾಡಿದ್ದರು. ಆದರೆ ಕೆಲವರು ಇದನ್ನು ತಪ್ಪಾಗಿ ಅರ್ಥೈಸಿದರು. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದರು. ಈ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಮೆಹ್ರೀನ್ ಗರ್ಭಿಣಿಯಾಗಿದ್ದು, ವಿವಾಹವಾಗದೇ ತಾಯಿಯಾಗಿದ್ದಾಳೆ ಎಂದು ಕೆಲವರು ಯೂಟ್ಯೂಬ್ ಹಾಗೂ ವೆಬ್‌ಸೈಟ್‌ಗಳಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಆಕೆ ಪ್ರತಿಕ್ರಿಯಿಸಿದ್ದು ಸುದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಎಗ್ ಫ್ರೀಜಿಂಗ್' ಮಾಡಿಸಲು ಗರ್ಭೀಣಿ ಆಗಬೇಕಿಲ್ಲ. ನಿಮ್ಮ ಸ್ವಾರ್ಥಕ್ಕಾಗಿ ಸುಳ್ಳು ಕಥೆ ಕಟ್ಟಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಮಕ್ಕಳು ಬೇಡ ಎಂದುಕೊಳ್ಳುವ ಪಾಲಕರು ಎಲ್ಲ ರೀತಿಯಲ್ಲೂ ತಯಾರಾದ ಬಳಿಕ ಮಕ್ಕಳಾಗಲು ಎಗ್ ಫ್ರೀಜಿಂಗ್ ವಿಧಾನ ಉಪಯುಕ್ತ. ಈ ಬಗ್ಗೆ ಸರಿಯಾಗಿ ಗೊತ್ತಿಲ್ಲದವರಂತೆ ಏನೇನೊ ಬರೆಯುತ್ತಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೆಹ್ರೀನ್ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಆರೋಗ್ಯಕರ ಅಂಡಾಣು ಶೇಖರಣೆ ಮಾಡುವ ಮೂಲಕ ಭವಿಷ್ಯದಲ್ಲಿ ಆರೋಗ್ಯವಂತ ಮಕ್ಕಳನ್ನು ಪಡೆಯಬಹುದು. ತೆಲುಗು ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೂಡ ಎಗ್ ಫ್ರೀಜಿಂಗ್ ಮಾಡಿಸಿದ್ದಾಗಿ ಹೇಳಿಕೊಂಡಿದ್ದರು. ಇತ್ತೀಚೆಗೆ ನಟಿ ಮೃಣಾಲ್ ಠಾಕೂರ್ ಕೂಡ ತಾವು ಎಗ್ ಫ್ರೀಜಿಂಗ್ ಮಾಡಿಸುವ ಬಗ್ಗೆ ಚಿಂತಿಸುತ್ತಿರುವುದಾಗಿ ಮಾತನಾಡಿದ್ದರು.
ಇತ್ತೀಚೆಗೆ ತಮ್ಮ 'ಎಗ್ ಫ್ರೀಜಿಂಗ್' ಪ್ರಕ್ರಿಯೆಯ ಬಗ್ಗೆ ಮೆಹ್ರೀನ್ ಈ ರೀತಿ ಬರೆದುಕೊಂಡಿದ್ದರು. "ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದೆ. ಈಗ ಎಗ್ ಫ್ರೀಜಿಂಗ್ ಪ್ರಕ್ರಿಯೆ ಮುಗಿದಿದ್ದಕ್ಕೆ ಬಹಳ ಸಂತೋಷವಾಗುತ್ತಿದೆ. ಆದರೆ ಇದು ನನ್ನ ವೈಯಕ್ತಿಕ ವಿಚಾರ ಅಲ್ಲವೇ? ಇದನ್ನು ಎಲ್ಲರಿಗೂ ಹೇಳಬೇಕಾ? ಬೇಡ್ವಾ? ಎಂದು ಸಾಕಷ್ಟು ಆಲೋಚಿಸಿದ್ದೆ" ಎಂದಿದ್ದಾರೆ.
"ನನ್ನಂತೆ ಸಾಕಷ್ಟು ಮಹಿಳೆಯರು ಪ್ರಪಂಚದಲ್ಲಿದ್ದಾರೆ. ಮದುವೆ, ಮಕ್ಕಳು ಮಾಡಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಮಾತ್ರ ಭವಿಷ್ಯಕ್ಕಾಗಿ ಇದು ಬಹಳ ಮುಖ್ಯ ಎಂದು ಭಾವಿಸಿದೆ. ಈ ಬಗ್ಗೆ ನಾವು ದೊಡ್ಡದಾಗಿ ಮಾತನಾಡುತ್ತಿಲ್ಲ. ಆದರೆ ತಂತ್ರಜ್ಞಾನದ ಸಹಾಯದಿಂದ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ"
"ತಾಯಿ ಆಗಬೇಕು ಎನ್ನುವುದು ನನ್ನ ಕನಸು. ಆದರೆ ಅದು ಕೆಲ ವರ್ಷಗಳು ತಡವಾಗಬಹುದು. ಆ ಕಾರಣಕ್ಕೆ ಅದನ್ನು ಬಿಡೋಕೆ ಸಾಧ್ಯವಿಲ್ಲ. ಅದಕ್ಕೆ ಈ ಎಗ್ ಫ್ರೀಜಿಂಗ್ ಎಂದು ಬರೆದುಕೊಂಡಿದ್ದರು. ಕನ್ನಡದಲ್ಲಿ ಮೆಹ್ರೀನ್ 'ನೀ ಸಿಗೊವರೆಗೂ' ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಚಿತ್ರದಲ್ಲಿ ಶಿವಣ್ಣ ಜೊತೆ ನಟಿಸುತ್ತಿದ್ದಾರೆ. ಆದರೆ ಕಾರಣಾಂತರಗಳಿಂದ ತಡವಾಗುತ್ತಿದೆ.


Click it and Unblock the Notifications











