ಸದ್ದಿಲ್ಲದೇ ಮದುವೆಯಾದ ಶಿವಣ್ಣನ ನಟಿ ; ಮೆಹ್ರೀನ್ ಪಿರ್ಜಾದಾ ಕೈ ಹಿಡಿದ ಹುಡುಗ ಯಾರು?
ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ.
ಇಂತಹ ಬಂಧನಕ್ಕೆ ನಂದ ಗೋಕುಲದ ರಕ್ಷಾ.. ಗತ ವೈಭವದ ಹೀರೋ ದುಷ್ಯಂತ್ .. ಕನ್ನಡ ಕಿರುತೆರೆಯ ಜೋಡಿ ಹಕ್ಕಿ ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್.. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ.. ಅಲ್ಲು ಶಿರೀಶ್ ಮತ್ತು ನಯನಿಕಾ ರೆಡ್ಡಿ.. ನಿಮಿಕಾ ರತ್ನಾಕರ್ ಹೀಗೆ ಹಲವರು ಈ ವರ್ಷ ಒಳಗಾಗಿದ್ದಾರೆ. ಈ ಸಾಲಿಗೆ ಈಗ ಮೆಹ್ರೀನ್ ಪಿರ್ಜಾದಾ ಕೂಡ ಸೇರಿಕೊಂಡಿದ್ದಾರೆ.

ಹೌದು, ಮೆಹ್ರೀನ್ ಪಿರ್ಜಾದಾ.. ಹೇಳಿಕೊಳ್ಳಲು ಪಂಜಾಬ್‌ನ ಚೆಲುವೆ. ಆದರೆ ಮಿಂಚಿದ್ದು ದಕ್ಷಿಣದಲ್ಲಿ. 2016ರಲ್ಲಿ ''ಕೃಷ್ಣ ಗಾದಿ ವೀರ ಪ್ರೇಮ ಗಾಧ'' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದ ಮೆಹ್ರೀನ್ ಆ ನಂತರ ಮಹಾನುಭಾವಡು.. ''ರಾಜಾ ದಿ ಗ್ರೇಟ್''.. ''ಎಫ್ 2''.. ''ಎಫ್ 3''.. ''ಕೇರ್ ಆಫ್ ಸೂರ್ಯ''.. ''ಪಟಾಸ್''.. ''ನೋಟಾ''.. ಹೀಗೆ ಒಂದಾದ ಮೇಲೊಂದು ಚಿತ್ರಗಳನ್ನು ಮಾಡಿದರು. ''ಫಿಲೌರಿ'' ಚಿತ್ರದ ಮೂಲಕ ಹಿಂದಿ ಚಿತ್ರರಂಗವನ್ನು ಕೂಡ ಪ್ರವೇಶಿಸಿದರು.
ಆದರೆ ದಿನಗಳು ಉರುಳಿದಂತೆ ಅವಕಾಶಗಳ ಬರ ಇವರಿಗೆ ಎದುರಾಯ್ತು. 2025ರಲ್ಲಿ ತೆರೆಗೆ ಬಂದ ತಮಿಳಿನ ''ಇಂದ್ರ'' ಇವರ ಕೊನೆಯ ಚಿತ್ರ. ಅದಕ್ಕೂ ಮುನ್ನ ಎರಡು ವರ್ಷ ಖಾಲಿ ಕುಂತಿದ್ದರು ಮೆಹ್ರೀನ್.
ಇನ್ನೂ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮೆಹ್ರೀನಾ ಪಿರ್ಜಾದಾ ಕನ್ನಡದಲ್ಲಿಯೂ ಅಭಿನಯಿಸಬೇಕಿತ್ತು. ಶಿವಣ್ಣ ಎದುರು ನಾಯಕಿಯಾಗಿ ಮಿಂಚಬೇಕಿತ್ತು. ಚಿತ್ರದ ಮುಹೂರ್ತ ಸಮಾರಂಭ ಕೂಡ ಅದ್ಧೂರಿಯಾಗಿ ನಡೆದಿತ್ತು. ಆ ಚಿತ್ರದ ಹೆಸರು ''ನೀ ಸಿಗೋವರೆಗೂ''. ಆದರೆ.. ಅದೇನಾಯ್ತೋ 2021ರಲ್ಲಿ ಮುಹೂರ್ತ ಭಾಗ್ಯ ಕಂಡ ಈ ಚಿತ್ರದ ಚಿತ್ರೀಕರಣ ಇನ್ನೂ ಶುರುವಾದಂತೆ ಇಲ್ಲ.
ಅದೇ ವರ್ಷ ಅಂದರೆ 2021ರಲ್ಲೇ ಮೆಹ್ರೀನ್ ಪಿರ್ಜಾದಾ ಅವರ ನಿಶ್ಚಿತಾರ್ಥ ಹರಿಯಾಣಾದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಬಿಷ್ಣೋಯ್ ಅವರ ಮಗ ಭವ್ಯ ಬಿಷ್ಣೋಯ್ ಅವರ ಜೊತೆ ನಡೆದಿತ್ತು. ಆದರೆ.. ಆ ನಂತರ ಕಾರಣಾಂತರಗಳಿಂದ ಈ ಸಂಬಂಧ ಮುರಿದು ಬಿದ್ದಿತ್ತು.

ಇಂಥಾ ಮೆಹ್ರೀನ್ ಪಿರ್ಜಾದಾ ಈಗ ಸದ್ದಿಲ್ಲದೇ ಅರ್ಷ್ ಔಲಾಖ್ ಅವರ ಜೊತೆ ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಇಬ್ಬರ ಮದುವೆ ಸಮಾರಂಭ ನಡೆದಿದ್ದು ಗುರು ಹಿರಿಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇಬ್ಬರು ಸಪ್ತಪದಿ ತುಳಿದಿದ್ದಾರೆ.
ಅರ್ಷ್ ಔಲಾಖ್ ಅವರ ಹಿನ್ನೆಲೆ ಇನ್ನೂ ಬಹಿರಂಗಗೊಂಡಿಲ್ಲವಾದರೂ ಅರ್ಷ್ ಸಂಗೀತಗಾರ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಇನ್ನು ಇಬ್ಬರದ ಹಿನ್ನೆಲೆ ಪಂಜಾಬಿ. ಎರಡು ಕುಟುಂಬದ ನಡುವೆ ಮೊದಲಿಂದ ಪರಿಚಯ ಇತ್ತು. ಅರ್ಷ್ ಮತ್ತು ಮೆಹ್ರೀನ್ ಸ್ನೇಹಿತರಾಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ 2021ರಲ್ಲಿ ನಿಶ್ಚಿತಾರ್ಥ ಮುರಿದು ಬಿದ್ದಾಗ ಮೆಹ್ರೀನ್ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಆ ಸಮಯದಲ್ಲಿ ಮೆಹ್ರೀನ್‌ಗೆ ಮಾನಸಿಕ ಸ್ಥೈರ್ಯ ತುಂಬಿದವರು ಇದೇ ಅರ್ಷ್ ಔಲಾಖ್. ಇಬ್ಬರ ನಡುವೆ ಹೀಗೆ ಪ್ರೇಮಾಂಕುರವಾಯ್ತು ಎನ್ನುವ ಸುದ್ದಿ ಕೂಡ ಸದ್ಯ ಕೇಳಿ ಬರುತ್ತಿದೆ.
ಸದ್ಯ ಸೋನಲ್ ಚವ್ಹಾಣ್.. ಪಾಯಲ್ ರಜಪೂತ್.. ನಿಧಿ ಅಗರ್ವಾಲ್.. ಶ್ರೀನಿಧಿ ಶೆಟ್ಟಿ.. ಅನುರಾಗ್ ಕಶ್ಯಪ್.. ಹನ್ಸಿಕಾ ಮೋಟ್ವಾನಿ.. ಹೀಗೆ ಚಿತ್ರರಂಗದ ಹಲವರು ನವ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ. ಅಭಿಮಾನಿಗಳು ಕೂಡ ಅಭಿನಂದನೆ ಸಲ್ಲಿಸುತ್ತಿದ್ದಾರೆ.


Click it and Unblock the Notifications