'ಲೈಗರ್': ವಿಜಯ್ ದೇವರಕೊಂಡಗಿಂತಲೂ ಹೆಚ್ಚಿನ ಸಂಭಾವನೆ ಪಡೆದ ಮೈಕ್ ಟೈಸನ್
ತೆಲುಗು ಸೆನ್ಸೇಶನ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಕೊರೊನಾ ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭಮಾಡಿರುವ ಸಿನಿಮಾತಂಡ ಇತ್ತೀಚಿಗಷ್ಟೆ ಚಿತ್ರದ ಬಗ್ಗೆ ಸಖತ್ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು ಚಿತ್ರದಲ್ಲಿ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ನಟಿಸುವ ವಿಚಾರವನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿದ್ದಾರೆ. ಈ ಸುದ್ದಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ನಿರ್ದೇಶಕ ಪುರಿ ಜಗನ್ನಾಥ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಚಿತ್ರಕ್ಕೆ ಸದ್ಯ ಎಂಟ್ರಿ ಕೊಟ್ಟಿರುವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಸಂಭಾವನೆ ವಿಚಾರ ಇದೀಗ ಸದ್ದು ಮಾಡುತ್ತಿದೆ. ಟಾಲಿವುಡ್ ನಲ್ಲಿಗ ಅವರ ಸಂಭಾವನೆ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಈ ಸಿನಿಮಾಗೆ ಟೈಸನ್ ಹೀರೋ ವಿಜಯ್ ದೇವರಕೊಂಡ ಅವರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಅಂದಹಾಗೆ ಲೈಗರ್ ನಲ್ಲಿ ಮೈಕ್ ಟೈಸನ್ ಕಾಣಿಸಿಕೊಳ್ಳುವುದು ಅತಿಥಿ ಪಾತ್ರದಲ್ಲಿ. ಕ್ಲೈಮ್ಯಾಕ್ಸ್ಗಿಂತಲೂ ಮುನ್ನ ಬರುವ ಒಂದು ದೃಶ್ಯದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಪುಟ್ಟ ಪಾತ್ರಕ್ಕಾಗಿ ಅವರು ದುಬಾರಿ ಸಂಭಾವನೆಯನ್ನು ಜೇಬಿಗೆ ಇಳಿಸುತ್ತಿರುವುದು ಅಚ್ಚರಿ ಮೂಡಿಸಿದೆ. ವಿಜಯ್ ದೇವರಕೊಂಡ ಅವರ ಸಂಬಳಕ್ಕಿಂತಲೂ ದೊಡ್ಡ ಮೊತ್ತ ಎಂಬ ಸುದ್ದಿ ಕೇಳಿಬಂದಿದೆ. ಆದರೆ ನಿರ್ದಿಷ್ಟವಾಗಿ ಎಷ್ಟು ಎಂಬುದು ಬಹಿರಂಗವಾಗಿಲ್ಲ.

ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಲೈಗರ್ ಸಿನಿಮಾವನ್ನು ನಿರ್ದೇಶಕ ಪುರಿ ಜಗನ್ನಾಥ್, ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ, ಹೀರೂ ಯಶ್ ಜೋಹರ್ ಸೇರಿಕೊಂಡು ನಿರ್ಮಿಸುತ್ತಿದ್ದಾರೆ. ಸದ್ಯದಲ್ಲೇ ಮೈಕ್ ಟೈಸನ್ ಭಾಗದ ಚಿತ್ರೀಕರಣ ನೆಡೆಯಲಿದ್ದು ಅದಕ್ಕಾಗಿ ಅವರು ಅಮೆರಿಕದಿಂದ ಗೋವಾಗೆ ಬರಲಿದ್ದಾರೆ ಎನ್ನಲಾಗುತ್ತಿದೆ.
ಮೈಕ್ ಟೈಸನ್ ಸಿನಿಮಾಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಈ ಹಿಂದೆ ಅವರು ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬ್ಲ್ಯಾಕ್ ಆಂಡ್ ವೈಟ್', 'ಹ್ಯಾಂಗ್ ಓವರ್', 'ರಾಕಿ ಬಲ್ಬೋವಾ', 'ಸ್ಕೇರಿ ಮೂವಿ', 'ಗ್ರಡ್ಜ್ ಮ್ಯಾಚ್', 'ಐಪಿ ಮ್ಯಾನ್ 3', 'ಚೈನಾ ಸೇಲ್ಸ್ ಮ್ಯಾನ್', 'ಕಿಕ್‌ಬಾಕ್ಸರ್; ರಿಟ್ಯಾಲಿಯೇಷನ್', 'ಗರ್ಲ್ಸ್ 2', 'ಹ್ಯಾಮ್ಲೆಟ್ ಫರಾನ್' ಸಿನಿಮಾಗಳಲ್ಲಿ ಮೈಕ್ ಟೈಸನ್ ನಟಿಸಿದ್ದಾರೆ. ಆದರೆ ಅವರು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.
ಚಿತ್ರದಲ್ಲಿ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಸಿನಿಮಾವು ಪ್ರಸ್ತುತ ಗೋವಾದಲ್ಲಿ ಕೆಲವು ಭರ್ಜರಿ ಆಕ್ಷನ್ ಸೀನ್‌ಗಳನ್ನು ಚಿತ್ರಿಸಿಕೊಳ್ಳುತ್ತಿದೆ.


Click it and Unblock the Notifications











