ಅನನ್ಯಾ ಪಾಂಡೆ ಕಿವಿಗೆ ಬಾಯಿ ಹಾಕಿದ ಮೈಕ್ ಟೈಸನ್
ಮೈಕ್ ಟೈಸನ್ ಬಗ್ಗೆ ಗೊತ್ತಿಲ್ಲದ ಕ್ರೀಡಾ ಪ್ರೇಮಿಗಳು ಕಡಿಮೆ. ಬಾಕ್ಸಿಂಗ್ ರಿಂಗ್‌ನ ದೊರೆ ಟೈಸನ್. ವಿವಾದಿತ ದೊರೆಯೂ ಹೌದು.
ಬಾಕ್ಸಿಂಗ್‌ನಿಂದ ನಿವೃತ್ತಿ ಹೊಂದಿದ ಬಳಿಕವೂ ಅದೇ ಮೈಕಟ್ಟು ಮೇಂಟೇನ್ ಮಾಡಿರುವ ಟೈಸನ್ ಸಿನಿಮಾಗಳು, ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿ ಭಾರತದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಟೈಸನ್.
ತೆಲುಗು ಸಿನಿಮಾ 'ಲೈಗರ್' ನಲ್ಲಿ ಮೈಕ್ ಟೈಸನ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಮೈಕ್ ಟೈಸನ್ ನಟಿಸಲಿರುವ ಭಾಗದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಮೈಕ್ ಟೈಸನ್ ತಮ್ಮ ಚಿತ್ರತಂಡ ಸೇರಿಕೊಂಡ ಕ್ಷಣಗಳನ್ನು ಚಿತ್ರತಂಡ ಚಿತ್ರಗಳು ಮೂಲಕ ಹಂಚಿಕೊಂಡಿದೆ. ಅದರಲ್ಲಿ ಅನನ್ಯಾ ಪಾಂಡೆ ಹಂಚಿಕೊಂಡಿರುವ ಚಿತ್ರ ಕುತೂಹಲಕಾರಿಯಾಗಿದೆ.
'ಲೈಗರ್' ಸಿನಿಮಾದ ನಾಯಕಿ ಅನನ್ಯಾ ಪಾಂಡೆ ಹಂಚಿಕೊಂಡಿರುವ ಚಿತ್ರದಲ್ಲಿ ಮೈಕ್ ಟೈಸಲ್ ಅನನ್ಯಾ ಪಾಂಡೆಯ ಕಿವಿಗೆ ಬಾಯಿ ಹಾಕಿ ಕಚ್ಚಲು ಯತ್ನಿಸುತ್ತಿದ್ದಾರೆ. ಅನನ್ಯಾ ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಿವಿ ಕಚ್ಚಿದ್ದ ಮೈಕ್ ಟೈಸನ್
ಮೈಕ್ ಟೈಸನ್ ಬಾಕ್ಸಿಂಗ್ ಬಗ್ಗೆ ಗೊತ್ತಿದ್ದರೆ ಅವರು ಎದುರಾಳಿಯ ಕಿವಿ ಕಚ್ಚಿದ ಪ್ರಕರಣ ಖಂಡಿತ ಗೊತ್ತಿರುತ್ತದೆ. 1997ರಲ್ಲಿ ನಡೆದ ಡಬ್ಲುಬಿಎ ಹೆವಿವೇಯ್ಟ್ ಚಾಂಪಿಯನ್‌ಶಿಪ್ ನಲ್ಲಿ ಇವ್ಯಾಂಡರ್ ಹೋಲಿಫೀಲ್ಡ್ ಮತ್ತು ಮೈಕ್ ಟೈಸನ್ ನಡುವೆ ಬಾಕ್ಸಿಂಗ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮೈಕ್ ಟೈಸನ್ ಎದುರಾಳಿ ಇವ್ಯಾಂಡರ್ ಹೋಲಿಫೀಲ್ಡ್‌ನ ಕಿವಿ ಕಚ್ಚಿದ್ದರು. ಇದರಿಂದಾಗಿ ಮೈಕ್ ಟೈಸನ್ ಬಾಕ್ಸಿಂಗ್ ರಿಂಗ್‌ನಿಂದ ಹೊರ ಹೋಗಬೇಕಾಯಿತು. ಈ ಘಟನೆ ಭಾರಿ ದೊಡ್ಡ ಸುದ್ದಿಯಾಗಿತ್ತು. ಮೈಕ್ ಟೈಸನ್ ವೃತ್ತಿ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಿತ್ತು. 'ಭೂಮಿಯ ಮೇಲಿನ ಅತಿ ಕೆಟ್ಟ ಮನುಷ್ಯ' ಎಂಬ ಕುಖ್ಯಾತಿಗೆ ಮೈಕ್ ಟೈಸನ್ ಒಳಗಾಗಬೇಕಾಯಿತು.

ಚಿತ್ರ ಹಂಚಿಕೊಂಡಿರುವ ಅನನ್ಯಾ, ವಿಜಯ್
ಮೈಕ್ ಟೈಸನ್ ಜೊತೆಗೆ ಅನನ್ಯಾ ಪಾಂಡೆ ಮಾತ್ರವೇ ಅಲ್ಲದೆ ನಟ ವಿಜಯ್ ದೇವರಕೊಂಡ ಸಹ ಚಿತ್ರ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ''ಫೈರ್ ಶುರು'' ಎಂಬ ಕ್ಯಾಪ್ಷನ್ ಅನ್ನು ವಿಜಯ್ ದೇವರಕೊಂಡ ಕೊಟ್ಟಿದ್ದಾರೆ.

ಮೈಕ್ ಟೈಸನ್‌ಗೆ ಸ್ಟಾರ್ ನಟ ಧ್ವನಿ
'ಲೈಗರ್' ಸಿನಿಮಾವು ಕಿಕ್ ಬಾಕ್ಸಿಂಗ್ ಸ್ಪರ್ಧೆಯ ಕುರಿತಾದ ಸಿನಿಮಾ ಆಗಿದೆ. ವಿಜಯ್ ದೇವರಕೊಂಡ ಕಿಕ್ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಮೈಕ್ ಟೈಸನ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಮೈಕ್ ಟೈಸನ್‌ಗೆ ನಟ ಬಾಲಕೃಷ್ಣ ಧ್ವನಿ ನೀಡಲಿದ್ದಾರಂತೆ. ಸಿನಿಮಾದ ಫೈಟ್ ದೃಶ್ಯಗಳನ್ನು ವಿದೇಶಿ ತಂತ್ರಜ್ಞರು ಸಂಯೋಜಿಸಿದ್ದು, ಮೈನವಿರೇಳಿಸುವ ಫೈಟಿಂಗ್ ದೃಶ್ಯಗಳು ಸಿನಿಮಾದಲ್ಲಿರಲಿವೆ ಎನ್ನಲಾಗಿದೆ.

ಕೆಲವೇ ತಿಂಗಳಲ್ಲಿ ಸಿನಿಮಾ ಬಿಡುಗಡೆ
ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಅನನ್ಯಾ ಪಾಂಡೆ ನಾಯಕಿ, ಸಿನಿಮಾಕ್ಕೆ ಬಂಡವಾಳ ಹೂಡಿರುವುದು ನಟಿ ಚಾರ್ಮಿ ಮತ್ತು ಕರಣ್ ಜೋಹರ್. ಸಿನಿಮಾದ ಚಿತ್ರೀಕರಣವು ಹೈದರಾಬಾದ್, ಗೋವಾ, ಅಮೆರಿಕಗಳಲ್ಲಿ ನಡೆದಿದೆ. ಇದೀಗ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಕೆಲವೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಮೈಕ್ ಟೈಸನ್
ಮೈಕ್ ಟೈಸನ್‌ಗೆ ಸಿನಿಮಾಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಈ ಹಿಂದೆ ಅವರು ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬ್ಲ್ಯಾಕ್ ಆಂಡ್ ವೈಟ್', 'ಹ್ಯಾಂಗ್ ಓವರ್', 'ರಾಕಿ ಬಲ್ಬೋವಾ', 'ಸ್ಕೇರಿ ಮೂವಿ', 'ಗ್ರಡ್ಜ್ ಮ್ಯಾಚ್', 'ಐಪಿ ಮ್ಯಾನ್ 3', 'ಚೈನಾ ಸೇಲ್ಸ್ ಮ್ಯಾನ್', 'ಕಿಕ್‌ಬಾಕ್ಸರ್; ರಿಟ್ಯಾಲಿಯೇಷನ್', 'ಗರ್ಲ್ಸ್ 2', 'ಹ್ಯಾಮ್ಲೆಟ್ ಫರಾನ್' ಸಿನಿಮಾಗಳಲ್ಲಿ ಮೈಕ್ ಟೈಸನ್ ನಟಿಸಿದ್ದಾರೆ. ಆದರೆ ಅವರು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











