ನೀನೆ ಆ ಚಿತ್ರಕ್ಕೆ ನಾಯಕಿ ಅಂತ ಪ್ರಶಾಂತ್ ನೀಲ್ ಬೆಂಗಳೂರಿಗೆ ಕರೆಸಿ ಹೇಳಿದ್ರು.. ಆಮೇಲೆ..
ಸಿನಿಮಾ ಅವಕಾಶಗಳು ಅಷ್ಟು ಸುಲಭವಾಗಿ ಸಿಗಲ್ಲ. ಅದರಲ್ಲೂ ಕ್ರೇಜಿ ಪ್ರಾಜೆಕ್ಟ್‌ಗಳಲ್ಲಿ ನಟಿಸೋದಕೆ ನಾಯಕಿಯರಿಗೆ ಅದೃಷ್ಟ ಇರಬೇಕು. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಮಾಳವಿಕಾ ಮೋಹನನ್ ನಟಿಸಬೇಕಿತ್ತು. ಈ ಬಗ್ಗೆ ಮಾತುಕತೆ ಕೂಡ ನಡೆದಿತ್ತು. ಆದರೆ ಬಳಿಕ ಸಾಧ್ಯವಾಗಲಿಲ್ಲ ಎಂದು ಆಕೆ ಹೇಳಿದ್ದಾರೆ.
ಪ್ರಭಾಸ್ ಹಾಗೂ ಮಾಳವಿಕಾ ಮೋಹನನ್ ನಟನೆಯ 'ದಿ ರಾಜಾಸಾಬ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜನವರಿ 9ರಂದು ಈ ಹಾರರ್ ಕಾಮಿಡಿ ಥ್ರಿಲ್ಲರ್ ಸಿನಿಮಾ ತೆರೆಗೆ ಬರಲಿದೆ. ಮಾರುತಿ ನಿರ್ದೇಶನ ಚಿತ್ರದಲ್ಲಿ ಪ್ರಭಾಸ್ ಜೊತೆ ಮಾಳವಿಕಾ, ರಿದ್ದಿ ಕುಮಾರ್, ನಿಧಿ ಅಗರ್‌ವಾರ್ ನಾಯಕಿಯರಾಗಿ ನಟಿಸಿದ್ದಾರೆ. ಸಂಜಯ್ ದತ್, ಅನುಪಮ್ ಖೇರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

'ದಿ ರಾಜಾಸಾಬ್' ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸುತ್ತಿರುವುದಕ್ಕೆ ಮಾಳವಿಕಾ ಖುಷಿಯಾಗಿದ್ದಾರೆ. ಆದರೆ 'ಸಲಾರ್' ಚಿತ್ರದಲ್ಲಿ ನಾನೇ ನಾಯಕಿಯಾಗಿ ನಟಿಸಬೇಕಿತ್ತು. ಪ್ರಶಾಂತ್ ನೀಲ್ ಸರ್ ಬೆಂಗಳೂರಿಗೆ ಕರೆಸಿ ಮಾತನಾಡಿದ್ದರು. ಆದರೆ ಬಳಿಕ ಯಾಕೋ ಸಾಧ್ಯವಾಗಲಿಲ್ಲ. ಅದೃಷ್ಟ ಎನ್ನುವಂತೆ ಕೆಲವೇ ತಿಂಗಳಲ್ಲಿ ಬೇರೆ ಚಿತ್ರದಲ್ಲಿ ನಟಿಸುವಂತಾಗಿದೆ.
ಪ್ರಶಾಂತ್ ನೀಲ್ ಭೇಟಿ ಬಗ್ಗೆ ಫಿಲ್ಮಿ ಫೋಕಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾಳವಿಕಾ ಮಾತನಾಡಿದ್ದಾರೆ. "ಮಾಸ್ಟರ್ ಸಿನಿಮಾ ಬಿಡುಗಡೆ ಬಳಿಕ ನನಗೆ ಪ್ರಶಾಂತ್ ನೀಲ್ ಸರ್ ಕಡೆಯಿಂದ ಕರೆ ಬಂತು. ಅವರು ಪ್ರಭಾಸ್ ಜೊತೆ ಸಿನಿಮಾ ಮಾಡ್ತಿದ್ದಾರೆ, ನಿಮ್ಮನ್ನು ಭೇಟಿ ಆಗಬೇಕು ಅಂದ್ರು. ಬೆಂಗಳೂರಿಗೆ ಹೋಗಿದ್ದೆ. ಪ್ರಶಾಂತ್ ಸರ್ ಸ್ವತಃ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿದ್ದರು. ಆ ಪಾತ್ರಕ್ಕೆ ಸೆಟ್ ಆಗ್ತೀನಾ ಅಂತ ನೋಡಲು ಫೋಟೊ ತೆಗೆದಿದ್ದರು. ಬಳಿಕ ಏನಾಯ್ತೋ ಗೊತ್ತಿಲ್ಲ" ಎಂದಿದ್ದಾರೆ.
ಕೆಲ ದಿನಗಳ ಬಳಿಕ ಪ್ರಭಾಸ್ ಚಿತ್ರಕ್ಕೆ ನಾಯಕಿ ಎಂದು ಹೇಳಲಾಯಿತು. ಅರೇ ಈಗಾಗಲೇ 'ಸಲಾರ್' ಸಿನಿಮಾ ಬಂದು ಹೋಯ್ತಲ್ಲ ಎಂದುಕೊಂಡೆ. ಬಳಿಕ ಬೇರೆ ಸಿನಿಮಾ, ಅದು ರಾಜಾಸಾಬ್ ಸಿನಿಮಾ ಎಂದು ಗೊತ್ತಾಯಿತು. 'ಸಲಾರ್' ಬಳಿಕ ಪ್ರಭಾಸ್ ನಟನೆಯ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗುವಂತಾಯಿತು ಎಂದು ಮಾಳವಿಕಾ ಮೋಹನನ್ ಹೇಳಿದ್ದಾರೆ. ಅಂದಹಾಗೆ 'ಸಲಾರ್' ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಮಿಂಚಿದ್ದರು.
'ದಿ ರಾಜಾಸಾಬ್' ಚಿತ್ರದಲ್ಲಿ ಒಳ್ಳೆ ಪಾತ್ರ ಸಿಕ್ಕಿದೆ. ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಗೊತ್ತಿಲ್ಲ. ಪ್ರಭಾಸ್ ಸರ್ ಜೊತೆ ನಟಿಸಿದ್ದೇನೆ. ಈ ಚಿತ್ರದಲ್ಲಿ ಟ್ರೆಡೀಷನಲ್, ವೆಸ್ಟರ್ನ್ ಹೀಗೆ ಎಲ್ಲಾ ತರಹದ ಕಾಸ್ಟ್ಯೂಮ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಮಾಳವಿಕಾ ತಿಳಿಸಿದ್ದಾರೆ. ಕೇರಳ ಮೂಲದ ಚೆಲುವೆ ಈಗಾಗಲೇ ಕನ್ನಡ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ.
ಕನ್ನಡ 'ಉಗ್ರಂ' ಚಿತ್ರವನ್ನು ಎರಡು ಭಾಗಗಳಾಗಿ 'ಸಲಾರ್' ಸಿನಿಮಾ ಮಾಡ್ತಿದ್ದಾರೆ ಪ್ರಶಾಂತ್ ನೀಲ್. ಹೊಂಬಾಳೆ ಫಿಲ್ಮ್ಸ್ ಸಿನಿಮಾ ನಿರ್ಮಾಣ ಮಾಡ್ತಿದೆ. ಈಗಾಗಲೇ ಮೊದಲ ಭಾಗ ಸಕ್ಸಸ್ ಕಂಡಿದೆ. ಪ್ರಭಾಸ್, ನೀಲ್ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ತಮ್ಮ ಕಮೀಟ್‌ಮೆಂಟ್ ಮುಗಿಸಿ ಬಳಿಕ 'ಸಲಾರ್'-2 ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.
ಬರೀ ಆಕ್ಷನ್ ಸಿನಿಮಾಗಳಲ್ಲೇ ನಟಿಸಿದ್ದ ಪ್ರಭಾಸ್ ಈ ಬಾರಿ ಕಾಮಿಡಿ, ಹಾರರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. 'ದಿ ರಾಜಾಸಾಬ್' ಸಿನಿಮಾ ಅಷ್ಟೇನು ನಿರೀಕ್ಷೆ ಹುಟ್ಟಾಕ್ಕಿಲ್ಲ. ಸಂಕ್ರಾಂತಿ ಸಂಭ್ರಮದಲ್ಲಿ ಬಹಳ ದೊಡ್ಡದಾಗಿ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ.


Click it and Unblock the Notifications











