"ರಾಮನಿಗಿಂತ ನನಗೆ ರಾವಣ ಬಹಳ ಇಷ್ಟ" ಎಂದು ಹೊಸ ಚರ್ಚೆ ಹುಟ್ಟಾಕ್ಕಿದ ರಾಜಮೌಳಿ
ನಿರ್ದೇಶಕ ಎಸ್. ಎಸ್ ರಾಜಮೌಳಿ ಜೀವನಾಧರಿತ 'ಮಾಡ್ರನ್ ಮಾಸ್ಟರ್ಸ್' ಡಾಕ್ಯುಮೆಂಟರಿ ರಿಲೀಸ್ ಆಗಿದೆ. ಸೋಲಿಲ್ಲದ ಸರದಾರ ಜಕ್ಕಣ್ಣ ಸಿನಿಮಾ ಹಾಗೂ ಜೀವನದ ಸಾಕಷ್ಟು ವಿಚಾರಗಳನ್ನು ಇದರಲ್ಲಿ ತೆರೆದಿಡಲಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಡಾಕ್ಯುಮೆಂಟರಿ ವೀಕ್ಷಣೆಗೆ ಲಭ್ಯವಿದೆ. ಪ್ರಭಾಸ್, ರಾಮ್‌ಚರಣ್, ತಾರಕ್, ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಲವರು ರಾಜಮೌಳಿ ಬಗ್ಗೆ ಮಾತನಾಡಿದ್ದಾರೆ.
ಡಾಕ್ಯುಮೆಂಟರಿಯಲ್ಲಿ ಜಕ್ಕಣ್ಣ ತಮ್ಮ ಸಕ್ಸಸ್ ಸೀಕ್ರೆಟ್ ಬಗ್ಗೆ ಮಾತನಾಡಿದ್ದಾರೆ. ರಾಜಮೌಳಿ ಪರಿಶ್ರಮ, ಸಾಧನೆ ಬಗ್ಗೆ ಹಲವರು ತಮ್ಮ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇನ್ನು ಖುದ್ದು ಜಕ್ಕಣ್ಣ ಸಂದರ್ಶನದ ರೀತಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಮ್ಮ ಸಿನಿಮಾಗಳ ಬಗ್ಗೆ ಹಲವು ಸಂಗತಿಗಳನ್ನು ವಿವರಿಸಿದ್ದಾರೆ. 'ಬಾಹುಬಲಿ' ಚಿತ್ರದ ವಿವಾದಾತ್ಮಕ ಸನ್ನಿವೇಶದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

'ಬಾಹುಬಲಿ' ಚಿತ್ರದ ಆರಂಭದಲ್ಲಿ ಪ್ರಭಾಸ್ ಹಾಗೂ ತಮನ್ನಾ ಭೇಟಿಯ ಸನ್ನಿವೇಶಗಳಿವೆ. ಆಗ ಆವಂತಿಕಾ(ತಮನ್ನಾ) ಹೆಣ್ತನವನ್ನು ಮರೆತ ಯೋಧನಂತೆ ಕಾಣುತ್ತಾಳೆ. ಒಂದು ಹಾಡಿನಲ್ಲಿ ತಾನು ಹುಡುಗಿ ಎಂದು ಶಿವುಡು(ಪ್ರಭಾಸ್) ಆಕೆಗೆ ಮತ್ತೆ ನೆನಪಿಸಿಸುತ್ತಾನೆ. ಆದರೆ ಆ ದೃಶ್ಯದಲ್ಲಿ ಶಿವುಡು ಆಕೆಯ ಅನುಮತಿ ಇಲ್ಲದೇ ಬಲವಂತವಾಗಿ ಸ್ಪರ್ಶಿಸುತ್ತಾನೆ. ಈ ಬಗ್ಗೆ ಕೆಲವರು ಚಕಾರ ಎತ್ತಿದ್ದರು.
ದೇವಸೇನಾ ಮೇಲೆ ಕೈಇಟ್ಟವನ ಕೈ ಕಡಿಯದೇ ಬಾಹುಬಲಿ ಆತನ ತಲೆ ಕಡಿಯುತ್ತಾನೆ. ಆದರೆ ಶಿವುಡು ಮಾತ್ರ ಮಾಡಿದ್ದು ಸರೀನಾ? ಎಂದು ಕೆಲವರು ಟೀಕಿಸಿದ್ದರು. ಈ ಬಗ್ಗೆ ಡಾಕ್ಯುಮೆಂಟರಿಯಲ್ಲಿ ಜಕ್ಕಣ್ಣ ಮಾತನಾಡಿದ್ದಾರೆ. ಆವಂತಿಕಾಗೆ ಯುದ್ಧ, ಕ್ರಾಂತಿ ಯಾವುದು ಇಷ್ಟವಿಲ್ಲ ಎಂದು ಶಿವುಡು ತಿಳಿದುಕೊಳ್ಳುತ್ತಾನೆ, ಅವರಿಬ್ಬರು ಭೇಟಿ ಆಗುವಾಗ ಕೂಡ ಆವಂತಿಕಾ ಆತನ ಎದೆಗೆ ಕತ್ತಿ ಇಡುತ್ತಾಳೆ. ಆಗ ಶಿವಡು ಪ್ರತಿಕ್ರಿಯಿಸಿದ ರೀತಿ ನೋಡಿದರೆ ಎಲ್ಲವೂ ಅರ್ಥವಾಗುತ್ತದೆ. ಹಾಗಿದ್ದರೂ ಯಾರಾದರೂ ಮಾತನಾಡಿದರೆ ಏನು ಮಾಡೋಕೆ ಆಗೊಲ್ಲ ಎಂದು ರಾಜಮೌಳಿ ಹೇಳಿದ್ದಾರೆ.
ಮತ್ತೊಂದು ಕಡೆ ರಾಮಾಯಣದ ಬಗ್ಗೆ ರಾಜಮೌಳಿ ಮಾತನಾಡಿರುವ ವಿಚಾರ ಈಗ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇತ್ತೀಚೆಗೆ ಬಂದ 'ಕಲ್ಕಿ 2989AD' ಚಿತ್ರದಲ್ಲಿ ಅರ್ಜುನನಿಂಗ ಕರ್ಣ ಪರಾಕ್ರಮಿ ಎಂದು ತೋರಿಸುವ ಸನ್ನಿವೇಶ ಇತ್ತು. ಈ ಬಗ್ಗೆ ಪರ- ವಿರೋಧ ಚರ್ಚೆ ಬಹಳ ನಡೆಯಿತು. ವ್ಯಾಸ ಭಾರತದಲ್ಲಿ ಇದರ ಪ್ರಸ್ತಾಪ ಇಲ್ಲ. ಅರ್ಜುನನಿಗಿಂತ ಕರ್ಣ ಬಲಶಾಲಿ ಎನ್ನುವುದು ಸುಳ್ಳು ಎಂದು ಸಾಕಷ್ಟು ಜನ ಹೇಳಿದ್ದರು.

ನಿರ್ದೇಶಕರು ಸಿನಿಮಾಗೆ ತಕ್ಕಂತೆ ಆ ದೃಶ್ಯ ಬಳಸಿಕೊಂಡಿದ್ದಾರೆ. ಅರ್ಜುನ್ ಯಾವತ್ತಿಗೂ ಮಹಾ ಪರಾಕ್ರಮಿ ಎಂದಿದ್ದರು. ಆದರೆ ಕೆಲವರು ಮಾತ್ರ, ಕರ್ಣ ತನ್ನ ಶಾಪಗಳಿಂದ ಸೋತು ಕೊನೆಯುಸಿರೆಳೆದ. ಇಲ್ಲದೇ ಹೋಗಿದ್ದರೆ ಪಾಂಡವರನ್ನು ಏಕಾಂಗಿಯಾಗಿ ಸದೆ ಬಡೆಯುತ್ತಿದ್ದ. ನಿಜಕ್ಕೂ ಕರ್ಣ ಬಲಶಾಲಿ ಎಂದು ಹೇಳಿದ್ದರು. ಹೀಗೆ ಪೌರಾಣಿಕ ಪಾತ್ರಗಳನ್ನು ಚಿತ್ರಿಸಿದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯಿತು.
ಸದ್ಯ ನಿರ್ದೇಶಕ ರಾಜಮೌಳಿ 'ಮಾಡ್ರನ್ ಮಾಸ್ಟರ್ಸ್' ಡಾಕ್ಯುಮೆಂಟರಿಯಲ್ಲಿ ರಾವಣನ ಪಾತ್ರ ನನಗೆ ಬಹಳ ಇಷ್ಟ ಎಂದು ಹೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ರಾಜಮೌಳಿ ಮಾತನಾಡುತ್ತಾ "ನಾವು ಚಿಕ್ಕವರಿದ್ದಾಗ ಕೌರವರು ಕೆಟ್ಟವರು ಮತ್ತು ಪಾಂಡವರು ಒಳ್ಳೆಯವರು ಎಂದು ಕಲಿತಿದ್ದೇವೆ. ರಾವಣ ಕೆಟ್ಟವನು. ರಾಮ ಒಳ್ಳೆಯವನು. ಆದರೆ ನೀವು ಬೆಳೆದಂತೆ, ನೀವು ಅದನ್ನು ಹೆಚ್ಚು ಓದಿದ್ದಾಗ ಅದು ಅಷ್ಟು ಸಿಂಪಲ್ ಅಲ್ಲ ಎಂದು ಗೊತ್ತಾಗುತ್ತದೆ"
"ನನಗೆ ರಾಮನಿಗಿಂತ ರಾವಣನೇ ಹೆಚ್ಚು ಇಷ್ಟ. ಅವರದು ಅದ್ಭುತ ಪಾತ್ರ. ಇದು ಕೊಂಚ ಕಾಂಪ್ಲಿಕೇಟ್ ಎನಿಸಬಹುದು. ನನ್ನ ಖಳನಾಯಕರು ತುಂಬಾ ಸ್ಟ್ರಾಂಗ್ ಆಗಿರಲು ನಾನು ಇಷ್ಟಪಡುತ್ತೇನೆ. ಅವರನ್ನು ಸೋಲಿಸುವುದು ತುಂಬಾ ಕಠಿಣ ಕೆಲಸವಾಗಬೇಕು" ಎಂದು ಜಕ್ಕಣ್ಣ ವಿವರಿಸಿದ್ದಾರೆ. ರಾವಣ ಬಹಳ ಶ್ರೇಷ್ಠ ಎಂದು ಕೆಲ ಕಾವ್ಯಗಳಲ್ಲಿ ಹೇಳಿರುವುದನ್ನು ಕೇಳಿದ್ದೇವೆ. ಅದೇ ಅರ್ಥದಲ್ಲಿ ರಾಜಮೌಳಿ ಹೇಳಿರಬಹುದು ಎಂದು ಕೆಲವರು ವಾದಿಸುತ್ತಿದ್ದಾರೆ.


Click it and Unblock the Notifications











