ಅಣ್ಣಾವ್ರು, ಶಿವಣ್ಣ ಮಾಡಿದ್ದ ಪಾತ್ರದಲ್ಲಿ ಮಂಚು ವಿಷ್ಣು.. ₹90 ಕೋಟಿ ಬಜೆಟ್‌ನಲ್ಲಿ ಡ್ರೀಮ್ ಪ್ರಾಜೆಕ್ಟ್ ಶುರು
ಪ್ಯಾನ್ ಇಂಡಿಯಾ ಜಮಾನದಲ್ಲಿ ಪೌರಾಣಿಕ, ಐತಿಹಾಸಿಕ ಸಿನಿಮಾಗಳು ತೆರೆಗೆ ಬರ್ತಿವೆ. ಯೂನಿವರ್ಸಲ್ ಸಬ್ಜೆಕ್ಟ್ ಸಿನಿಮಾಗಳನ್ನು ಹಲವು ಭಾಷೆಗಳಿಗೆ ಡಬ್ ಮಾಡಿ ವಿಶ್ವದಾದ್ಯಂತ ಏಕಕಾಲಕ್ಕೆ ರಿಲೀಸ್ ಮಾಡುವ ಅವಕಾಶ ಇದೆ. ಇನ್ನು ಇವತ್ತಿನ ತಂತ್ರಜ್ಞಾನ ಅಳವಿಡಿಸಿಕೊಂಡು ಹಳೇ ಹಿಟ್ ಸಿನಿಮಾಗಳನ್ನು ಹೊಸ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನಗಳು ನಡೀತಿದೆ.
ಸದ್ಯ ಟಾಲಿವುಡ್‌ನಲ್ಲಿ 'ಕಣ್ಣಪ್ಪ' ಸಿನಿಮಾ ಮುಹೂರ್ತ ನೆರವೇರಿದೆ. ಇದು ಕಲೆಕ್ಷನ್ ಕಿಂಗ್ ಮೋಹನ್ ಬಾಬು ಕನಸಿನ ಸಿನಿಮಾ. ಅಷ್ಟೇ ಅಲ್ಲ ಅವರ ಪುತ್ರ ಮಂಚು ವಿಷ್ಣು ಕನಸಿನ ಸಿನಿಮಾ ಕೂಡ ಹೌದು. ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ಚಿತ್ರ ಸೆಟ್ಟೇರಿದೆ. ನಾಲ್ಕೈದು ವರ್ಷಗಳಿಂದ ಮೋಹನ್ ಬಾಬು ಈ ಸಿನಿಮಾ ಆರಂಭಿಸಲು ಪ್ರಯತ್ನಿಸಿದ್ದರು. ಆದರೆ ಕೊರೊನಾ ಹಾವಳಿಯಿಂದ ತಡವಾಗಿತ್ತು.

ಶಿವನ ಅಚಲ ಭಕ್ತನಾದ ಕಣ್ಣಪ್ಪನ ಕಥೆಯು ಯುಗಯುಗಗಳಿಂದಲೂ ಭಾರತೀಯ ಮನಸ್ಸುಗಳಲ್ಲಿ ಅಚ್ಚಳಿಯದೇ ಉಳಿದಿದೆ. ಕಣ್ಣಪ್ಪನ ಕಥೆಯು ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ಮೂಡಿಬರುತ್ತಿದ್ದು, ಶುಕ್ರವಾರ, ಕಾಳಹಸ್ತಿಯಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಭಾರತೀಯ ಚಿತ್ರರಂಗದ ಜನಪ್ರಿಯ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ. 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳ ಅಡಿಯಲ್ಲಿ 'ಕಣ್ಣಪ್ಪ' ಚಿತ್ರವನ್ನು ಮೋಹನ್ ಬಾಬು ನಿರ್ಮಿಸುತ್ತಿದ್ದಾರೆ.
'ಕಣ್ಣಪ್ಪ' ಚಿತ್ರವು ಅಚಲವಾದ ಭಕ್ತಿಯ ಮೇಲೆ ಬೆಳಕು ಚೆಲ್ಲುತ್ತದೆ. ನಾಸ್ತಿಕನಾದ ಬೇಡರ ಕಣ್ಣಪ್ಪ ಬಳಿಕ ಶಿವಭಕ್ತನಾದ ಕಥೆ ಗೊತ್ತೇಯಿದೆ. ಡಾ. ರಾಜ್‌ಕುಮಾರ್ 'ಬೇಡರ ಕಣ್ಣಪ್ಪ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ಶಿವ ಮೆಚ್ಚಿನ ಕಣ್ಣಪ್ಪ' ಚಿತ್ರದಲ್ಲಿ ಶಿವರಾಜ್‌ಕುಮಾರ್ ಮಿಂಚಿದ್ದರು. ಇದೇ ಕಥೆಯಲ್ಲಿ ಈ ವಿಷ್ಣು ನಟಿಸುತ್ತಿದ್ದಾರೆ. ತೆಲುಗಿನಲ್ಲೂ ಕೃಷ್ಣಂರಾಜು 'ಭಕ್ತ ಕಣ್ಣಪ್ಪ' ಚಿತ್ರದಲ್ಲಿ ನಟಿಸಿದ್ದರು. ಆದರೆ ಇವತ್ತಿನ ತಂತ್ರಜ್ಞಾನ ಬಳಸಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಕಣ್ಣಪ್ಪ' ನಿರ್ಮಾಣ ಮಾಡಲು ಸಿದ್ಧತೆ ನಡೀತಿದೆ.
ನಾಟಕಗಳಲ್ಲಿ ನಟಿಸುತ್ತಿದ್ದ ಮುತ್ತುರಾಜ್ 'ಬೇಡರ ಕಣ್ಣಪ್ಪ' ಸಿನಿಮಾ ಮೂಲಕ ಹೀರೊ ಆಗಿ ಪರಿಚಿತರಾದರು. ಮೊದಲ ಸಿನಿಮಾವೇ ಭರ್ಜರಿ ಯಶಸ್ಸು ಗಳಿಸಿತ್ತು. ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಬಳಿಕ ಡಾ. ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಮರೆದದ್ದು ಗೊತ್ತೇಯಿದೆ.

"ಈಶ್ವರನ ಅಪ್ರತಿಮ ಭಕ್ತನಾಗಿ ಮತ್ತು ಇತಿಹಾಸದ ಅತ್ಯಂತ ಅಸಾಧಾರಣ ಭಕ್ತರಲ್ಲಿ ಒಬ್ಬನಾದ ಕಣ್ಣಪ್ಪನ ಪಾತ್ರ ಮಾಡುವ ಅವಕಾಶ ಸಿಕ್ಕಿರುವುದು ತಮ್ಮ ಭಾಗ್ಯ ಎಂದು ವಿಷ್ಣು ಮಂಚು ಹೇಳಿಕೊಂಡಿದ್ದಾರೆ. ಇದುವರೆಗೂ ಹಲವು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿರುವ ವಿಷ್ಣು ಮಂಚು, ಇದೇ ಮೊದಲ ಬಾರಿಗೆ ಪೌರಾಣಿಕ ಚಿತ್ರವೊಂದರಲ್ಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ.
ಚಿತ್ರಕ್ಕೆ ಪರುಚೂರಿ ಗೋಪಾಲಕೃಷ್ಣ, ತೋಟ ಪ್ರಸಾದ್, ತೋಟಪಲ್ಲಿ ಸಾಯಿನಾಥ್ ಮತ್ತು ಬುರ್ರಾ ಸಾಯಿ ಮಾಧವ್ ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದು, ಮಣಿಶರ್ಮಾ ಮತ್ತು ಸ್ಟೀಫನ್ ದೇವಸ್ಸೆ ಸಂಗೀತ ಹಾಗೂ ಶೆಲ್ಡನ್ ಶಾ ಅವರ ಛಾಯಾಗ್ರಹಣವಿದೆ. ಮೋಹನ್ ಬಾಬು ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.
ಈ ಹಿಂದೆ ಸ್ಟಾರ್ ಪ್ಲಸ್ ವಾಹಿನಿಗಾಗಿ 'ಮಹಾಭಾರತ' ಧಾರಾವಾಹಿ ನಿರ್ದೇಶಿಸಿದ್ದ ಮುಖೇಶ್ ಕುಮಾರ್ ಸಿಂಗ್, 'ಕಣ್ಣಪ್ಪ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೇರುಕೃತಿಯನ್ನು ನಿರ್ದೇಶಿಸುತ್ತಿದ್ದಾರೆ. ಬಾಲಿವುಡ್ ನಟಿ ನೂಪುರ್ ಸನೋನ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ. ಕೃಷ್ಣರಾಜು ಈ ಚಿತ್ರದಲ್ಲಿ ಪ್ರಭಾಸ್ ನಟಿಸಬೇಕು ಎಂದು ಆಸೆ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಲೇ ಇಲ್ಲ.


Click it and Unblock the Notifications











