'ಪುಷ್ಪ-2' ಮ್ಯೂಸಿಕ್ ವಿವಾದ; ವೇದಿಕೆ ಮೇಲೆ ನಗುತ್ತಲೇ ತಿರುಗೇಟು ಕೊಟ್ಟ ದೇವಿಶ್ರೀ ಪ್ರಸಾದ್
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ'-2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚೆನ್ನೈನಲ್ಲಿ ಅದ್ಧೂರಿ ಈವೆಂಟ್ ಮಾಡಿ 'ಕಿಸ್ಸಿಕ್' ಸಾಂಗ್ ರಿಲೀಸ್ ಮಾಡಲಾಗಿದೆ. ಪುಷ್ಪರಾಜ್ ಜೊತೆ ಶ್ರೀಲೀಲಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಚಿತ್ರತಂಡದ ಜೊತೆ ಸಂಗೀತ ನಿರ್ದೇಶಕರ ಭಿನ್ನಾಭಿಪ್ರಾಯ ಹೊರಬಿದ್ದಿದೆ.
ತೆಲುಗಿನ ಕ್ರೇಜಿ ಮ್ಯೂಸಿಕ್ ಡೈರೆಕ್ಟರ್ ದೇವಿಶ್ರೀ ಪ್ರಸಾದ್. ಕನ್ನಡದ ಕೆಲ ಚಿತ್ರಗಳಿಗೆ ಟ್ಯೂನ್ ಹಾಕಿದ್ದಾರೆ. ' ಪುಷ್ಪ' ಚಿತ್ರಕ್ಕೂ ಡಿಎಸ್‌ಪಿ ಸಾಂಗ್ಸ್, ಬಿಜಿಎಂ ಪ್ಲಸ್ ಆಗಿತ್ತು. ಇದೀಗ ಸೀಕ್ವೆಲ್‌ಗೆ ಕೂಡ ಅವರು ಟ್ಯೂನ್ ಹಾಕಿದ್ದಾರೆ. ಆದರೆ ಇತ್ತೀಚೆಗೆ ಚಿತ್ರದ ಬಿಜಿಎಂ ಬಗ್ಗೆ ಭಾರೀ ಚರ್ಚೆ ನಡೀತಿತ್ತು. ದೇವಿಶ್ರೀ ಪ್ರಸಾದ್ ಜೊತೆಗೆ ಎಸ್. ತಮನ್ ಹಾಗೂ ಕನ್ನಡದ ಅಜನೀಶ್ ಲೋಕನಾಥ್ ರೀರೆಕಾರ್ಡಿಂಗ್ ಮಾಡಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

'ಪುಷ್ಪ'-2 ಚಿತ್ರತಂಡದ ಜೊತೆಗೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ಗೆ ಭಿನ್ನಾಭಿಪ್ರಾಯಗಳಿವೆ. ಅದೇ ಕಾರಣಕ್ಕೆ ಮತ್ತಿಬ್ಬರಿಂದ ರೀ-ರೆಕಾರ್ಡಿಂಗ್ ಮಾಡಿಸುತ್ತಿದ್ದಾರೆ ಎನ್ನುವ ವದಂತಿ ಹರಡಿತ್ತು. ಅದಕ್ಕೆ ಇಂಬು ನೀಡುವಂತೆ ಇದೀಗ ಸಂಗೀತ ನಿರ್ದೇಶನದ ದೇವಿಶ್ರೀ ಪ್ರಸಾದ್ ಮಾತನಾಡಿದ್ದಾರೆ. ಚೆನ್ನೈ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡುತ್ತ ನಿರ್ಮಾಪಕರಿಗೆ ತಿವಿದಿದ್ದಾರೆ. ಡಿಎಸ್‌ಪಿ ಮಾತುಗಳನ್ನು ಕೇಳಿ ತಂಡದಲ್ಲಿ ಭಿನ್ನಾಭಿಪ್ರಾಯ ಮೂಡಿರುವುದು ನಿಜ ಎಂದು ಹೇಳಲಾಗುತ್ತಿದೆ.
ದೇವಿಶ್ರೀ ಪ್ರಸಾದ್ ತೆಲುಗು, ತಮಿಳಿನ ದೊಡ್ಡ ದೊಡ್ಡ ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಹಾಗಾಗಿ ಕೊಂಚ ತಡವಾಗಿರಬಹುದು. ಇದು ನಿರ್ಮಾಪಕರು ಅರ್ಥ ಮಾಡಿಕೊಂಡಿಲ್ಲ. ಅದಕ್ಕೆ ದೇವಿಶ್ರೀ ಪ್ರಸಾದ್ ಹೀಗೆ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗ್ತಿದೆ. ಅಷ್ಟಕ್ಕೂ ವೇದಿಕೆ ಏರಿದ ಡಿಎಸ್‌ಪಿ ಹೇಳಿದ್ದೇನು? ಮುಂದೆ ಓದಿ.

"ನಮಗೆ ಏನು ಬೇಕು, ನಾವು ಅದನ್ನು ಕೇಳಿ ಪಡೆಯಬೇಕು. ನಿರ್ಮಾಪಕರು ಕೊಡುವ ಸಂಭಾವನೆ ಆಗಿರಲಿ ಅಥವಾ ತೆರೆಮೇಲೆ ನಮ್ಮ ಹೆಸರೇ ಆಗಿರಲಿ? ಕೇಳದಿದ್ದರೆ ಯಾರೂ ಕೊಡುವುದಿಲ್ಲ. ಕರೆಕ್ಟ್ ಅಲ್ವಾ ಬನ್ನಿ? (ಅಲ್ಲು ಅರ್ಜುನ್)" ಎಂದು ಪರೋಕ್ಷವಾಗಿ ದೇವಿಶ್ರೀ ಪ್ರಸಾದ್ ತಿವಿದಿದ್ದಾರೆ. ಸಾಕಷ್ಟು ನಾಯಕಿಯರ ಸ್ಪೆಷಲ್ ಸಾಂಗ್ಸ್‌ಗೆ ನಾನೇ ಟ್ಯೂನ್ ಹಾಕಿದ್ದು ವಿಶೇಷ ಎಂದು ಅವರು ಹೇಳಿಕೊಂಡಿದ್ದಾರೆ.
'ಪುಷ್ಪ-2' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ರವಿಶಂಕರ್ ಅವರ ಬಗ್ಗೆ ದೇವಿಶ್ರೀ ಪ್ರಸಾದ್ ಮಾತನಾಡುತ್ತಾ "ನಾನು ವೇದಿಕೆ ಮೇಲೆ ಹೆಚ್ಚು ಹೊತ್ತು ಮಾತನಾಡುತ್ತಿದ್ದೀನಿ ಎಂದುಕೊಳ್ಳಬೇಡಿ ರವಿ ಸರ್. ಯಾಕಂದರೆ ನಾನು ಸಮಯಕ್ಕೆ ಸರಿಯಾಗಿ ಹಾಡು ಕೊಟ್ಟಿಲ್ಲ. ಸಮಯಕ್ಕೆ ಸರಿಯಾಗಿ ಹಿನ್ನೆಲೆ ಸಂಗೀತ ಕೊಟ್ಟಿಲ್ಲ. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಬರಲಿಲ್ಲ ಎನ್ನುತ್ತೀರಾ? ನಿಮಗೆ ನನ್ನ ಮೇಲೆ ತುಂಬಾ ಪ್ರೀತಿ ಇದೆ, ಪ್ರೀತಿ ಇದ್ದಾಗ ಕಂಪ್ಲೆಂಟ್ಸ್ ಕೂಡ ಇರುತ್ತವೆ. ಆದರೆ ನಿಮಗೆ ನನ್ನ ಮೇಲೆ ಪ್ರೀತಿಗಿಂತ ಕಂಪ್ಲೆಂಟ್ಸ್ ಜಾಸ್ತಿ. ಯಾಕೋ ಗೊತ್ತಿಲ್ಲ. ಈಗ ಕೂಡ ಕಾರ್ಯಕ್ರಮಕ್ಕೆ ತಡವಾಗಿ ಬಂದೆ ಎಂದು ಹೇಳಿದ್ರಿ" ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲು ಅರ್ಜುನ್ ಹಾಗೂ ದೇವಿಶ್ರೀ ಪ್ರಸಾದ್ ಕಾಂಬಿನೇಷನ್ ಸೂಪರ್ ಹಿಟ್ ಆಗಿದೆ. ಇವರಿಬ್ಬರ ಕಾಂಬಿನೇಷನ್ ಸಿನಿಮಾ ಆಲ್ಬಮ್‌ಗಳು ಸಖತ್ ಸದ್ದು ಮಾಡಿದ್ದು ಇದೆ. ಆದರೆ 'ಪುಷ್ಪ'-2 ವಿಚಾರದಲ್ಲಿ ಗೊಂದಲ ಶುರುವಾಗಿದೆ. ದೇವಿಶ್ರೀ ಪ್ರಸಾದ್ ತಡ ಮಾಡುತ್ತಿದ್ದಾರೆ ಎಂದೇ ಮತ್ತಿಬ್ಬರನ್ನು ಕರೆಸಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಎನ್ನಲಾಗ್ತಿದೆ. ಇದು ಸಹಜವಾಗಿಯೇ ಡಿಎಸ್‌ಪಿ ಬೇಸರಕ್ಕೆ ಕಾರಣವಾಗಿದೆ.
ಮುಂದೆ ಅಲ್ಲು ಅರ್ಜುನ್ ಸಿನಿಮಾಗಳಿಗೆ ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡ್ತಾರಾ? ಇಲ್ವಾ? ಎನ್ನುವ ಊಹಾಪೋಹ ಅಭಿಮಾನಿಗಳಲ್ಲಿ ಶುರುವಾಗಿದೆ. ಏನೇ ಗೊಂದಲ್ಲ ಇದ್ದರೂ ಬಗೆಹರಿಸಿಕೊಳ್ಳಬೇಕಿತ್ತು. ಈ ರೀತಿ ಆಗಬಾರದು ಎಂದು ಸಿನಿರಸಿಕರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











