ನನ್ನ ಮಗುವೇ ನನ್ನ ಪ್ರಪಂಚ; ತಾಯ್ತನದ ಬಗ್ಗೆ ನಟಿ ಸಮಂತಾ ಹೇಳಿಕೆ ವೈರಲ್
ತೆಲುಗು ನಟಿ ಸಮಂತಾ ತಾಯಿಯಾಗುತ್ತಿದ್ದಾರೆ. ಅಧಿಕೃತವಾಗಿ ಈ ಬಗ್ಗೆ ಸ್ಯಾಮ್ ಪ್ರತಿಕ್ರಿಯಿಸಿಲ್ಲ. ಆದರೆ ಆಪ್ತ ಸ್ನೇಹಿತೆ, ನಿರ್ದೇಶಕಿ ನಂದಿನಿ ರೆಡ್ಡಿ ಈ ವಿಚಾರವನ್ನು ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ. 6 ತಿಂಗಳ ಹಿಂದೆಯಷ್ಟೆ ನಿರ್ದೇಶನ ರಾಜ್ ನಿಡುಮೊರು ಜೊತೆ ಸಮಂತಾ 2ನೇ ಮದುವೆ ನಡೆದಿತ್ತು.
ಕಳೆದ ನಾಲ್ಕೈದು ದಿನಗಳಿಂದ ಸಮಂತಾ ಗರ್ಭಿಣಿ ಆಗಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತು. ಸ್ಯಾಮ್ ನಟನೆಯ 'ಮಾ ಇಂಟಿ ಬಂಗಾರಂ' ಸಿನಿಮಾ ತೆರೆಗೆ ಬಂದು ಸಖತ್ ಸದ್ದು ಮಾಡ್ತಿದೆ. ಸಿನಿಮಾ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಸಿನಿಮಾ ಸಕ್ಸಸ್ ಸಂಭ್ರಮಾಚರಣೆಯಲ್ಲಿ ಬಿಳಿ ಬಣ್ಣದ ಟೀ-ಶರ್ಟ್ ಧರಿಸಿ ಸಮಂತಾ ಕಾಣಿಸಿಕೊಂಡಿದ್ದರು. ಈ ವೇಳೆ ಬೇಬಿ ಬಂಪ್ ವೀಡಿಯೋ ವೈರಲ್ ಆಗಿತ್ತು. ಅದಕ್ಕೂ ಮುನ್ನ ಸಿನಿಮಾ ಪ್ರಚಾರದಲ್ಲಿ ಸೀರೆ ಉಟ್ಟು ಆಕೆ ಭಾಗಿ ಆಗಿದ್ದರು. ಬೇಬಿ ಬಂಪ್ ಮುಚ್ಚಿಡಲು ಹೀಗೆ ಮಾಡ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಮಗು, ತಾಯ್ತನದ ಬಗ್ಗೆ ಆಕೆ ಹಳೇ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ ವೈರಲ್ ಆಗ್ತಿದೆ.

ನಟ ನಾಗಚೈತನ್ಯಾ ಜೊತೆ ಮದುವೆಯಾಗಿದ್ದ ಹೊಸತರಲ್ಲಿ ಫಿಲ್ಮ್ ಕಂಪಾನಿಯನ್ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಫ್ಯಾಮಿಲಿ ಪ್ಲಾನಿಂಗ್, ತಾಯ್ತನ ಎಲ್ಲದರ ಬಗ್ಗೆ ಸಮಂತಾ ಮಾತನಾಡಿದ್ದರು. ಮಗು ಮಾಡಿಕೊಳ್ಳುವ ಬಗ್ಗೆ ಕೇಳಿದ ಪ್ರಶ್ನೆಗೆ ತಮಾಷೆಯಾಗಿ ತಮ್ಮದೇ ಶೈಲಿಯಲ್ಲಿ ಸ್ಯಾಮ್ ಪ್ರತಿಕ್ರಿಯಿಸಿದ್ದರು. ನಾನು-ಚೈತು ಯಾವಾಗ ಮಗು ಮಾಡಿಕೊಳ್ಳಬೇಕು ಎಂದು ಚರ್ಚಿಸಿದ್ದೇವೆ ಎಂದು ತಿಳಿಸಿದ್ದರು. ಎಷ್ಟು ವರ್ಷಗಳ ಬಳಿಕ ಮಗು ಮಾಡಿಕೊಳ್ಳಬೇಕು ಎನ್ನುವುದನ್ನು ನಾವು ನಿರ್ಧರಿಸಿದ್ದೇವೆ ಎಂದಿದ್ದರು.
ಮಗು ಹುಟ್ಟಿದ ಮೇಲೆ ಫ್ಯಾಮಿಲಿ ಮೊದಲ ಆದ್ಯತೆ ಆಗಿರಲಿದೆ ಎಂದು ಸಮಂತಾ ಹೇಳಿದ್ದರು. "ನನಗೆ ಹುಟ್ಟುವ ಮಗುವೇ ನನ್ನ ಪ್ರಪಂಚ ಆಗಲಿದೆ. ಕೆಲಸ ಮಾಡುವ ತಾಯಂದಿರ ಬಗ್ಗೆ ನನಗೆ ಹೆಚ್ಚಿನ ಗೌರವವಿತ್ತು. ನನ್ನ ಬಾಲ್ಯವು ತುಂಬಾ ಸುಂದರವಾಗಿರಲಿಲ್ಲ. ತುಂಬಾ ಸುಂದರ ಬಾಲ್ಯವನ್ನು ಅನುಭವಿಸದೇ ಇರುವವರು ನಮ್ಮ ಮಕ್ಕಳು ಅದನ್ನೆಲ್ಲಾ ಅನುಭವಿಸಬೇಕು, ನಾವು ಎಲ್ಲವನ್ನು ಅವರಿಗೆ ಕೊಡಬೇಕು ಎಂದು ಬಯಸುತ್ತಾರೆ. ಅದು ನನ್ನ ಮನಸ್ಸಿನಲ್ಲಿ ಕೂಡ ಉಳಿದುಬಿಟ್ಟಿದೆ. ಹಾಗಾಗಿ ನಾನು ಮಗುವನ್ನು ಪಡೆದ ಮೊದಲ ಕೆಲವು ವರ್ಷಗಳನ್ನು ಮಗುವಿಗೆ ಮೀಸಲಿಡುತ್ತೇನೆ. ಆ ಮಗು ನನಗೆ ಎಲ್ಲವೂ ಆಗಿರುತ್ತೆ" ಎಂದಿದ್ದರು.

ಸಮಂತಾ ಗರ್ಭಿಣಿ ಎನ್ನುತ್ತಿದ್ದಂತೆ ತಾಯ್ತನದ ಬಗ್ಗೆ ಆಕೆಯ ಹೇಳಿಕೆ ವೈರಲ್ ಆಗ್ತಿದೆ. ಅದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಬಹಳ ಬೇಗ ಮಗು ಮಾಡಿಕೊಳ್ಳಬೇಕು ಎಂದು ಸ್ಯಾಮ್ ಹೇಳಿದ್ದರು. 30 ವರ್ಷ ವಯಸ್ಸಾಗುತ್ತಿದ್ದಂತೆ ಮಗು ಮಾಡಿಕೊಳ್ಳುವುದು ಉತ್ತಮ. ಅದು ಸರಿಯಾದ ಸಮಯ. ಇನ್ನು ತಡ ಮಾಡಿದರೆ ಭವಿಷ್ಯದಲ್ಲಿ ಕಷ್ಟವಾಗುತ್ತದೆ. ನನಗೆ 50- 60 ವರ್ಷ ವಯಸ್ಸಾದಾಗ ಮಗುವಿಗೆ 15 ಆಗಿದ್ರೆ, ಅವರೊಟ್ಟಿಗೆ ಆಟವಾಡಿ ಖುಷಿಪಡಲು ಆಗಲ್ಲ. ನಾವು ಗಟ್ಟಿಯಾಗಿರುವಾಗಲೇ ಮಕ್ಕಳು ಮಾಡಿಕೊಂಡು ಅವರೊಟ್ಟಿಗೆ ಆಡುತ್ತಾ ಚೆನ್ನಾಗಿ ಬೆಳೆಸಬೇಕು ಎನ್ನುವ ಅರ್ಥದಲ್ಲಿ ಸ್ಯಾಮ್ ಮಾತನಾಡಿದ್ದರು.
ಸದ್ಯ 'ಮಾ ಇಂಟಿ ಬಂಗಾರಂ' ಸಿನಿಮಾ ಹಿಟ್ ಆಗಿದೆ. ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ 40 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಸ್ವತಃ ಸಮಂತಾ ಪತಿ ರಾಜ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಒದಗಿಸಿದ್ದಾರೆ. ಸ್ಯಾಮ್ ಜೊತೆ ಸೇರಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಗೃಹಿಣಿ ಪಾತ್ರದಲ್ಲಿ ಸ್ಯಾಮ್ ನಟಿಸಿದ್ದಾರೆ. ಖಡಕ್ ಫ್ಯಾಶ್‌ಬ್ಯಾಕ್ ಸಹ ಇದ್ದು ತನ್ನ ಫ್ಯಾಮಿಲಿ ತಂಟೆಗೆ ಬರುವವರನ್ನು ಮಟ್ಟಹಾಕುವ ಕಥೆ ಚಿತ್ರದಲ್ಲಿದೆ. ಸ್ಯಾಮ್ ಜೋಡಿಯಾಗಿ ಕನ್ನಡ ನಟ ದಿಗಂತ್ ನಟಿಸಿದ್ದಾರೆ.


Click it and Unblock the Notifications