ಯಶಸ್ಸಿನ ಅಲೆಯಲ್ಲಿದ್ದಾಗ ಬದುಕಿನಲ್ಲಿ ನಡೆಯಿತು ದುರಂತ-ಪಟಾಕಾ ನಭಾ ನಟೇಶ್ ಭಾವುಕ..!
ಎಲ್ಲೋ ಕೆಲವು ಅದೃಷ್ಟವಂತರನ್ನು ಹೊರತು ಪಡಿಸಿದರೆ ಎಲ್ಲರೂ ರಾತ್ರಿ ಕಳೆದು ಹಗಲು ಆಗುವಷ್ಟರಲ್ಲಿ ಸ್ಟಾರ್ ಆಗಿಬಿಡಲು ಸಾಧ್ಯವಿಲ್ಲ. ಒಂದರ ಹಿಂದೊಂದು ಸಿನಿಮಾಗಳು ಶುರುವಾಗಿ ಅವು ಹಿಟ್ ಆಗಿ, ಅದರಲ್ಲಿ ಅಭಿನಯ, ಮ್ಯಾನರಿಸಮ್ಮು ಇತ್ಯಾದಿಗಳು ಪ್ರೇಕ್ಷಕರ ಮನಸ್ಸಿಗೆ ಹಿಡಿಸಿ, ಹಂತ ಹಂತವಾಗಿ ಜನ ಇಷ್ಟ ಪಡಲು ಶುರು ಮಾಡುತ್ತಾರೆ. ಶಿಳ್ಳೆ, ಚಪ್ಪಾಳೆಗಳು ಹೆಚ್ಚಾಗುತ್ತವೆ. ಆದರೆ, ಬದುಕು ಹೀಗೆ ಎಂದು ಹೇಳಲು ಸಾಧ್ಯ ಇಲ್ಲ. ಯಾವ ಕ್ಷಣದಲ್ಲಾದರೂ ಬದುಕು ಬದಲಾಗಬಹುದು. ಇನ್ನೇನು ಬದುಕು ಒಂದು ಹಂತಕ್ಕೆ ತಲುಪಿದೆ ಎಂದುಕೊಳ್ಳುವಷ್ಟರಲ್ಲಿಯೇ ಮತ್ತಿನ್ನೇನೋ ಆಗಿ ಬದುಕಿನಲ್ಲಿ ವಿಚಿತ್ರ ತಿರುವು ಬರಬಹುದು. ಇದಕ್ಕೆ ನಭಾ ನಟೇಶ್ ಅತ್ಯುತ್ತಮ ಉದಾಹರಣೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ವಜ್ರಕಾಯ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ ನಭಾ ನಟೇಶ್. ಆನಂತರ ಕನ್ನಡದ 'ಲೀ' ಚಿತ್ರದಲ್ಲಿ ನಟಿಸಿ ತೆಲುಗಿನ 'ನನ್ನು ದೋಚುಕುಂದುವಟೆ' ಎಂಬ ಸಿನಿಮಾದ ಮೂಲಕ 'ಟಾಲಿವುಡ್' ಗೂ ಎಂಟ್ರಿ ಪಡೆದರು. ಆ ನಂತರ ಬಂದ 'ಇಸ್ಮಾರ್ಟ್ ಶಂಕರ್', ನಭಾ ನಟೇಶ್ ಅವರ ಬದುಕನ್ನೇ ಬದಲಿಸಿತ್ತು. ಜನಪ್ರಿಯತೆಯನ್ನೂ ತಂದು ಕೊಟ್ಟಿತ್ತು.

ಅಲ್ಲಿಂದಾಚೆ.. ಒಂದಾದ ಮೇಲೊಂದು ನಾಲ್ಕು ಚಿತ್ರಗಳನ್ನು ಮಾಡಿದರು ನಭಾ ನಟೇಶ್. ಆದರೆ, ಆಗಲೇ ಹೇಳಿದಂತೆ.. ಬದುಕು ಹಲವು ಮುಖಗಳನ್ನ ಹೊಂದಿದ ಕ್ರಿಯೆ. ಇಲ್ಲಿ ಯಾವುದು ಶಾಶ್ವತ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ತೆಲುಗು ಚಿತ್ರಪ್ರೇಮಿಗಳು ಈ 'ಶೃಂಗೇರಿಯ ಸುಂದರಿ'ಯನ್ನೂ ಅಪ್ಪಿಕೊಂಡಾಗ್ಲೇ ನಭಾ ನಟೇಶ್ ರಸ್ತೆ ಅಪಘಾತಕ್ಕೆ ಒಳಗಾದರು. ಎಡಗೈ ಮತ್ತು ಎಡಭುಜಕ್ಕೆ ಪೆಟ್ಟು ಮಾಡಿಕೊಂಡರು. ಶಸ್ತ್ರ ಚಿಕಿತ್ಸೆಗೂ ಒಳಗಾದರು. ಚೇತರಿಸಿಕೊಳ್ಳಲು ಹೆಚ್ಚು ಕಡಿಮೆ ಒಂದೂವರೆ ವರ್ಷವೇ ಬೇಕಾಯಿತು.
ಇನ್ನೂ .. ನಭಾ ನಟೇಶ್ ಚಿತ್ರರಂಗದಿಂದ ದೂರ ಇದ್ದ ಸಮಯದಲ್ಲಿ, ರಶ್ಮಿಕಾ ಮಂದಣ್ಣ ಸೇರಿ ಅನೇಕ ಹೊಸ ಹುಡುಗಿಯರು ಇವರ ಜಾಗವನ್ನ ಆಕ್ರಮಿಸಿಕೊಂಡಿದ್ದರು. ಮರಳಿ ಬರುವ ಪ್ರಯತ್ನಕ್ಕೆ ನಭಾ ಮುಂದಾದಾಗ, ವಜ್ರಕಾಯದ ಈ ಪಟಾಕಾಗೆ ಅವಕಾಶ ಮರಿಚೀಕೆಯಂತೆ ಭಾಸವಾಯಿತು. ಆದರೂ.. ನಂಬಿಕೆ ಕಳೆದುಕೊಳ್ಳದೇ, ಪ್ರಯತ್ನವನ್ನು ಮುಂದುವರೆಸಿದ್ದ ನಭಾ ಕೈಯಲ್ಲಿ ಸದ್ಯಕ್ಕೆ ಸ್ವಯಂಭು ಎಂಬ ಸಿನಿಮಾ ಇದೆ. ಇದಲ್ಲದೇ ಪ್ರಿಯದರ್ಶಿ ನಾಯಕನಾಗಿ ಅಭಿನಯಿಸಿರುವ ಡಾರ್ಲಿಂಗ್ ಎಂಬ ಚಿತ್ರದಲ್ಲಿ ಕೂಡ ನಭಾ ನಾಯಕಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಭಾ ನಟೇಶ್ ಭಾವುಕರಾಗಿದ್ದಾರೆ.

ಕೈ ತುಂಬಾ ಅವಕಾಶ ಇರುವ ಸಮಯದಲ್ಲಿಯೇ ನನಗೆ ಅಪಘಾತವಾಯಿತು ಎಂದಿರುವ ನಭಾ, ಆ ನಂತರ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ಧಾರೆ. ಆ ಕರಾಳ ದಿನದ ನಂತರ ನನ್ನ ಮನಸ್ಥಿತಿಯೇ ಸಂಪೂರ್ಣ ಬದಲಾಗಿ ಹೋಗಿತ್ತು ಎಂದಿರುವ ನಭಾ, ಆಪರೇಷನ್ ಆದ ಹತ್ತು ದಿನಗಳ ನಂತರ ಶೂಟಿಂಗ್ ನಲ್ಲಿ ಭಾಗವಹಿಸಿದ್ದೆ ಆದರೆ ಅದರಿಂದ ಮತ್ತೆ ನನ್ನ ಆರೋಗ್ಯ ಬಿಗಡಾಯಿಸಿತು ಎಂದಿದ್ಧಾರೆ. ಆ ನಂತರ ನನಗೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದಿದ್ದಾರೆ. ಇನ್ನೂ.. ನನ್ನ ದೇಹಕ್ಕೆ ಖಂಡಿತವಾಗಿಯೂ ವಿಶ್ರಾಂತಿ ಬೇಕು. ಆರೋಗ್ಯವಾಗಿದ್ದರೆ ಮಾತ್ರ ಏನು ಬೇಕಾದರೂ ಮಾಡಬಹುದು ಎಂದು ನನಗೆ ಅರಿವು ಆಗಿದ್ದು ಆಗಲೇ ಹೀಗಾಗಿಯೇ ಗ್ಯಾಪ್ ತೆಗೆದುಕೊಂಡು ಆರೋಗ್ಯದ ಕಡೆ ಹೆಚ್ಚೆಚ್ಚು ಗಮನ ವಹಿಸಿದೆ ಎಂದಿರುವ ನಭಾ, ಅವಕಾಶಗಳನ್ನು ನಾನು ಮತ್ತೆ ಎದುರು ನೋಡುತ್ತಿದ್ದಾಗ ಸಿಕ್ಕ ಸಿನಿಮಾನೇ ಈ ''ಡಾರ್ಲಿಂಗ್'' ಎಂದಿದ್ದಾರೆ.
ಇನ್ನೂ ಇಸ್ಮಾರ್ಟ್ ಶಂಕರ್ ಅಂತಹ ಕಮರ್ಷಿಯಲ್ ಸಿನಿಮಾ ಮಾಡಿದ ನಂತರ, ''ಡಾರ್ಲಿಂಗ್''ನಂತಹ ಪ್ರಯತ್ನಕ್ಕೆ ಮುಂದಾಗಿದ್ದೇಕೆ ಎಂಬ ಪ್ರಶ್ನೆಯನ್ನು ನನಗೆ ಹಲವಾರು ಜನ ಕೇಳುತ್ತಿದ್ದಾರೆ ಎಂದಿರುವ ನಭಾ, ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕಥೆಯೇ ಚಿತ್ರಕ್ಕೆ ಬಹುಮುಖ್ಯವಾದದ್ದು ಎಂದಿದ್ದಾರೆ. ನಿರ್ದೇಶಕ ಅಶ್ವಿನ್ ಅವರು ನನ್ನನ್ನು ಸಂಪರ್ಕಿಸಿದ ರೀತಿ ಮತ್ತು ಅವರು ನನ್ನ ಪಾತ್ರವನ್ನು ಹೆಣೆದ ರೀತಿ ಇಷ್ಟವಾಗಿ ಈ ಚಿತ್ರವನ್ನು ನಾನು ಒಪ್ಪಿಕೊಂಡೆ ಎಂದಿದ್ದಾರೆ. ನನ್ನ ಪಾತ್ರ ತುಂಬಾ ವಿಭಿನ್ನವಾಗಿದೆ ನಿಮಗೆಲ್ಲ ಈ ಚಿತ್ರ ಗ್ಯಾರಂಟಿ ಇಷ್ಟವಾಗುತ್ತೆ ಎಂಬ ಭರವಸೆಯನ್ನೂ ನಭಾ ವ್ಯಕ್ತಪಡಿಸಿದ್ದಾರೆ
ಸದ್ಯಕ್ಕೆ ನಭಾ ನಟೇಶ್ ಅವರ ಈ ಭಾವುಕ ನುಡಿಗಳಿಗೆ ಇವರ ಅಭಿಮಾನಿಗಳ ಮನಸು ಕರಗಿದೆ. ನಭಾ ನಟೇಶ್ ಅವರ ಮನಸು ಕೂಡ ಹಗುರಾಗಿದೆ. ಅಂದ್ಹಾಗೇ ಡಾರ್ಲಿಂಗ್ ಈ ಜುಲೈ 19ಕ್ಕೆ ತೆರೆಗೆ ಬರಲಿದೆ. ಬಿಡುಗಡೆಯಾದ ಟ್ರೇಲರ್ ಯೂಟ್ಯೂಬ್‌ನಲ್ಲಿ ಎಲ್ಲರ ಗಮನವನ್ನೂ ಸೆಳೆಯುತ್ತಿದೆ.


Click it and Unblock the Notifications











