13 ವರ್ಷದ ಹಿಂದೆ ತನಗಾಗಿ ಬರೆದಿದ್ದ ಕತೆಯನ್ನು ಈಗ ಒಪ್ಪಿಕೊಂಡ ಪ್ರಭಾಸ್
ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರು ನಟ ಪ್ರಭಾಸ್. ಬಾಹುಬಲಿ ಸಿನಿಮಾ ಬಳಿಕ ಅವರ ಮಾರುಕಟ್ಟೆ ಐದಾರು ಪಟ್ಟು ಹೆಚ್ಚಾಗಿದೆ.
Recommended Video
ತೆಲುಗು ಸಿನಿರಂಗದಲ್ಲಿ ಮಾತ್ರವಲ್ಲ ಬಾಲಿವುಡ್‌ನಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ ಪ್ರಭಾಸ್. ಹಾಗಾಗಿಯೇ ಬಹಳ ಎಚ್ಚರಿಕೆಯಿಂದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಅವರು.
ಆದರೆ ನಿರ್ದೇಶಕರೊಬ್ಬರು ಪ್ರಭಾಸ್ ಗಾಗಿ ಎಂದೇ 13 ವರ್ಷದ ಹಿಂದೆ ಬರೆದಿದ್ದ ಕತೆಯನ್ನು ಈಗ ಒಪ್ಪಿಕೊಂಡಿದ್ದಾರೆ ನಟ ಪ್ರಭಾಸ್. ಯಾವುದಾ ಕತೆ? ನಿರ್ದೇಶಕ ಯಾರು? ಸಿನಿಮಾ ಪ್ರಾರಂಭವಾಗಿದೆಯಾ? ಎಲ್ಲಾ ಕುತೂಹಲಗಳಿಗೆ ಮುಂದಿದೆ ಉತ್ತರ.

13 ವರ್ಷಗಳ ಹಿಂದೆ ಮಾಡಿಕೊಂಡಿದ್ದ ಕತೆ
ಮಹಾನಟಿ ಅಂಥಹಾ ಸೂಪರ್ ಡೂಪರ್ ಹಿಟ್ ಸಿನಿಮಾ ನೀಡಿರುವ ನಾಗ್ ಅಶ್ವಿನ್ 13 ವರ್ಷಗಳ ಹಿಂದೆ ಅಂದರೆ 2007 ರಲ್ಲಿಯೇ ಪ್ರಭಾಸ್ ಗಾಗಿ ಕತೆ ಸಿದ್ಧಪಡಿಸಿ ಕಾಯುತ್ತಿದ್ದರಂತೆ. ಅವರಿಗೆ ಈಗ ಅವಕಾಶ ಸಿಕ್ಕಿದೆ ಪ್ರಭಾಸ್ ಜೊತೆ ಸಿನಿಮಾ ಮಾಡಲು.

ಫ್ಯಾಂಟಸಿ ಕತೆಯುಳ್ಳ ಸಿನಿಮಾ
ನಾಗ್ ಅಶ್ವಿನ್ ಹೇಳಿದ ಕತೆಯನ್ನು ಪ್ರಭಾಸ್ ಮೆಚ್ಚಿಕೊಂಡಿದ್ದು, ಸಿನಿಮಾ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಇದು ಫ್ಯಾಂಟಸಿ ಕತೆಯಾಗಿರಲಿದೆ ಎನ್ನಲಾಗಿದ್ದು, ಸಿನಿಮಾದಲ್ಲಿ ಪ್ರಭಾಸ್ ಅತಿಮಾನುಷ ಶಕ್ತಿಯುಳ್ಳ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.

ಸಿನಿಮಾ ಬಿಡುಗಡೆ ಯಾವಾಗ?
ಪ್ರಭಾಸ್-ನಾಗ್ ಅಶ್ವಿನ್ ಕಾಂಬಿನೇಶನ್ ನ ಈ ಸಿನಿಮಾ 2022 ರಲ್ಲಿ ಬಿಡುಗಡೆ ಆಗಲಿದೆಯಂತೆ. ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ಹಿಂದಿ, ಮಲೆಯಾಳಂ, ತಮಿಳು, ಕನ್ನಡದಲ್ಲೂ ಬಿಡುಗಡೆ ಮಾಡಲು ಈಗಲೇ ಸಿದ್ಧತೆ ಆರಂಭವಾಗಿದೆ.

ಹೆಸರಿಡದ ಸಿನಿಮಾದಲ್ಲಿ ನಟನೆ
ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದ್ದು, ಶೀಘ್ರದಲ್ಲಿಯೇ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ. ಪ್ರಭಾಸ್ ಸದ್ಯಕ್ಕೆ ಪ್ರಭಾಸ್20 ಎಂಬ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊರೊನಾ ಕಾರಣದಿಂದ ಸಿನಿಮಾದ ಚಿತ್ರೀಕರಣ ಸ್ಥಗಿತಗೊಂಡಿದೆ.


Click it and Unblock the Notifications











