ಇಂದು ಮದುವೆಯ ನಂತರ ಈ 'ದೇವರ' ದರ್ಶನ ಪಡೆಯಲಿದ್ದಾರೆ ನಾಗಚೈತನ್ಯ-ಶೋಭಿತಾ...!
ನಾಗಚೈತನ್ಯ ಮತ್ತು ಶೋಭಿತಾ ಅವರ ಅದ್ಧೂರಿ ಮದುವೆ ಸಮಾರಂಭಕ್ಕೆ ಇಂದು ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋ ಸಾಕ್ಷಿಯಾಗಿದೆ. ನವ ಜೋಡಿಗೆ ಶುಭ ಕೋರಲು ಗಣ್ಯಾತಿಗಣ್ಯರ ದಂಡು ಹೈದ್ರಾಬಾದ್‌ನಲ್ಲಿ ಬಂದು ಇಳಿದಿದೆ.
ಇನ್ನೂ..ತೆಲುಗು ಸಂಪ್ರದಾಯದ ಪ್ರಕಾರ ನಡೆಯುತ್ತಿರುವ ಈ ಮದುವೆ ಒಂದಲ್ಲ, ಎರಡಲ್ಲ, ಎಂಟು ಗಂಟೆ
ನಡೆಯಲಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಯಾಕೆಂದರೆ ನಾಗಚೈತನ್ಯ ಜೊತೆ ಮದುವೆಯಾಗುತ್ತಿರುವ ಶೋಭಿತಾ ಮೊದಲಿಂದ ಆಧ್ಯಾತ್ಮಿಕ ಮನೋಭಾವದವರು. ಸಂಪ್ರದಾಯ-ಆಚರಣೆ-ಪದ್ದತಿಗಳಲ್ಲಿ ಅಪಾರವಾದ ನಂಬಿಕೆಯನ್ನು ಹೊಂದಿರುವವರು. ತಮ್ಮ ಮದುವೆ ಸಾಂಪ್ರದಾಯಿಕವಾಗಿಯೇ ನಡೆಯಬೇಕು ಎನ್ನುವ ಕನಸನ್ನು ಮೊದಲಿಂದ ಕಂಡಿರುವ ಶೋಭಿತಾ ದೇವಾಲಯದ ಗಂಟೆ, ಹಿತ್ತಾಳೆ ದೀಪ, ಬಾಳೆ ಎಲೆ ಮತ್ತು ಹಸುವಿನ ಚಿತ್ರಣವನ್ನು ಹೊಂದಿರುವ ಸಾಂಪ್ರದಾಯಿಕ ಶೈಲಿಯ ನೀಲಿ ಬಣ್ಣದ ಆಮಂತ್ರಣ ಪತ್ರಿಕೆಯನ್ನು ಕೂಡ ಮುದ್ರಿಸಿದ್ದರು.

ಎಲ್ಲ ತಾರೆಯರಂತೆ ತಮ್ಮ ಮದುವೆಗೆ ಯಾವುದೇ ಡಿಸೈನರ್, ಸೈಲಿಸ್ಟ್‌ಗಳ ಮೊರೆ ಹೋಗದೇ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿರುವ ಜವಳಿ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿರುವ ಅಂಗಡಿಗಳಿಗೆ ತೆರಳಿ ಬಟ್ಟೆಗಳನ್ನು ಖರೀದಿ ಮಾಡಿದರು. ಮದುವೆ ಮುನ್ನ ನಡೆದ ಶಾಸ್ತ್ರಗಳಲ್ಲಿ ಪಿತ್ರಾರ್ಜಿತ ಚಿನ್ನದ ಒಡವೆಗಳನ್ನು ಧರಿಸಿಕೊಂಡಿದ್ದರು.
ಹೀಗೆ ಈ ನೆಲದ ಸಂಸ್ಕ್ರತಿ ಮತ್ತು ಪದ್ದತಿಗಳಲ್ಲಿ ಅಪಾರವಾದ ನಂಬಿಕೆ ಇಟ್ಟಿರುವ ಶೋಭಿತಾ ಈ ಹಿಂದೆ ನಾಗಾರ್ಜುನ ಮತ್ತು ನಾಗಚೈತನ್ಯ ಸರಳ ಮದುವೆಯ ಪ್ರಸ್ತಾಪವನ್ನು ಇಟ್ಟಿದ್ದರು ಕೂಡ ಅದನ್ನು ತಿರಸ್ಕರಿಸಿ ಶಾಸ್ತ್ರೋಕ್ತವಾಗಿ ಮದುವೆಯಾಗಲು ಮುಂದಾಗಿದ್ದಾರೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಮದುವೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಹೊಸ ಬದುಕಿಗೆ ಮುನ್ನುಡಿ ಬರೆಯುತ್ತಿದ್ದಾರೆ. ಇನ್ನು ತಮ್ಮ ಮದುವೆಯ ಶಾಸ್ತ್ರಗಳಲ್ಲಿ ಅತ್ಯಾಕರ್ಷಕ ಉಡುಪುಗಳನ್ನು ಧರಿಸಿ ಎಲ್ಲರ ಗಮನ ಸೆಳೆದ ಶೋಭಿತಾ ಇಂದು ನಡೆಯಲಿರುವ ಮದುವೆಯಲ್ಲಿ ಧರಿಸಲಿರುವ ಸೀರೆಯ ಬಗ್ಗೆ ಅನೇಕರಲ್ಲಿ ಕುತೂಹಲ ಇದೆ. ಇನ್ನೊಂದು ಕಡೆ ನಾಗಚೈತನ್ಯ ಬಿಳಿ ಪಂಚೆ ಮತ್ತು ಶರ್ಟ್ ಧರಿಸಿ ಹಸೆಮಣೆ ಏರಲಿದ್ದಾರೆ. ತಮ್ಮ ಉಡುಪಿನ ಮೂಲಕ ತಮ್ಮ ಅಜ್ಜ ಅಕ್ಕಿನೇನಿ ನಾಗೇಶ್ವರ್ ರಾವ್ ಅವರಿಗೆ ನಮನವನ್ನು ಕೂಡ ಸಲ್ಲಿಸಲಿದ್ಧಾರೆ.
ಇದರ ನಡುವೆ ಮದುವೆಯ ನಂತರ ನಾಗಚೈತನ್ಯ ಮತ್ತು ಶೋಭಿತಾ ತಿರುಪತಿಯ ಬಾಲಾಜಿ ದೇವಸ್ಥಾನಕ್ಕೆ ಅಥವಾ ಶ್ರೀಶೈಲಂ ದೇವಸ್ಥಾನಕ್ಕೆ ತೆರಳಲಿದ್ದಾರೆ. ದೇವರ ಆಶೀರ್ವಾದವನ್ನು ಪಡೆದು ಹೊಸ ಬದುಕನ್ನು ಶುರು ಮಾಡಲಿದ್ದಾರೆ ಎನ್ನುವ ಮಾತು ಸದ್ಯ ಆಂಧ್ರದಲ್ಲಿ ಕೇಳಿ ಬರುತ್ತಿದೆ.
ಇನ್ನುಳಿದಂತೆ ಇಂದು ನಡೆಯಲಿರುವ ಮದುವೆಗೆ ರಾಮ್ ಚರಣ್ ತೇಜಾ ತಮ್ಮ ಪತ್ನು ಉಪಾಸನಾ ಜೊತೆ ಆಗಮಿಸಲಿದ್ದಾರೆ. ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಕೂಡ ನವ ಜೋಡಿಗೆ ಶುಭ ಹಾರೈಸಲು ಬರುತ್ತಿದ್ದಾರೆ. ಪುಷ್ಟ 2 ಚಿತ್ರದ ಪ್ರಚಾರದಲ್ಲಿ ತಲ್ಲೀನವಾಗಿರುವ ಅಲ್ಲು ಅರ್ಜುನ್ ಕೂಡ ಬಿಡುವು ಮಾಡಿಕೊಂಡು ಮದುವೆಗೆ ಆಗಮಿಸಲಿದ್ದಾರೆ ಎಂದು ಹೈದ್ರಾಬಾದ್ ಮಾಧ್ಯಮಗಳು ವರದಿ ಮಾಡಿವೆ.


Click it and Unblock the Notifications











