ಎರಡನೇ ಮದುವೆ ಸಂಭ್ರಮದಲ್ಲಿ ನಾಗಚೈತನ್ಯ, ಶೋಭಿತಾ ಮನೆಯಲ್ಲಿ ಸಮಾರಂಭ ಆರಂಭ...!
ಕೆಲವರು ಪ್ರೇಮ ಪಾಶದಲ್ಲಿ ಸಿಲುಕಿ ಕಾಯಾ, ವಾಚಾ, ಮನಸಾ ಪ್ರೀತಿಸಿ ಮದುವೆಯಾಗುತ್ತಾರೆ. ಆದರೆ, ಮದುವೆಯಾದ ನಂತರ ಪರಸ್ಪರ ಅಸಹನೆ ಮತ್ತು ಅನುಮಾನ ಬೆಳೆಸಿಕೊಳ್ಳುತ್ತಾರೆ. ಆ ನಂತರ ಇನ್ನೂ ಸಾಧ್ಯವೇ ಇಲ್ಲ ಎಂದು ವಿಚ್ಛೇದನ ಪಡೆಯುತ್ತಾರೆ. ಪ್ರೀತಿಸಿ ಮದುವೆಯಾದವರು, ಮದುವೆಯಾಗಲೆಂದೇ ಪ್ರೀತಿಸಿದವರು ಹೀಗೇ ಯಾಕೆ ಮಾಡುತ್ತಾರೆ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ಸದ್ಯಕ್ಕೆ ಇಲ್ಲದಿದ್ದರೂ ಸಮಂತಾ ಅವರಿಂದ ದೂರವಾದ ನಾಗಚೈತನ್ಯ ಮನೆಯಲ್ಲಿ ಮದುವೆಯ ತಯಾರಿ ಶುರುವಾಗಿದೆ. ಶೋಭಿತಾ ಮೊಗದಲ್ಲಿ ಸಂಭ್ರಮ ಮನೆ ಮಾಡಿದೆ.
ರೇಶ್ಮೆ ಸೀರೆಯಲ್ಲಿ ಮಿಂಚುತ್ತಿರುವ ಶೋಭಿತಾ ತಮ್ಮ ಮನೆಯ ಸದಸ್ಯರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅರ್ಚಕರ ವೇದ ಘೋಷಗಳ ನಡುವೆ ಪೂಜಾ ಕೈಂಕರ್ಯ ನೆರವೇರಿಸಿ ಗುರು ಹಿರಿಯರ ಆಶೀರ್ವಾದವನ್ನು ಪಡೆದಿದ್ದಾರೆ. ತಮ್ಮ ಆಪ್ತ ಸ್ನೇಹಿತರ ಜೊತೆ ಖುಷಿಯಾಗಿ ಕಾಲ ಕಳೆದಿದ್ದಾರೆ. ಇನ್ನೂ ಮದುವೆಯ ಸಂಭ್ರಮದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೋಭಿತಾ ಹಂಚಿಕೊಂಡ ಬೆನ್ನಲ್ಲಿಯೇ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ದು ಗದ್ದಲ ಇಲ್ಲದೇ ಮದುವೆ ಕಾರ್ಯ ಶುರುವಾಯ್ತಾ ಎನ್ನುತ್ತಿದ್ದಾರೆ. ಇನ್ನೂ ತೆಲುಗು ಮಾಧ್ಯಮದವರಿಗೂ ಕೂಡ ಸುಳಿವು ಕೊಡದೇ ಶೋಭಿತಾ ಮತ್ತು ನಾಗಚೈತನ್ಯ ತಮ್ಮ ಹೊಸ ಬದುಕಿನ ಸಂಭ್ರಮಕ್ಕೆ ಮುನ್ನುಡಿ ಬರೆದಿದ್ದು ಅನೇಕರ ಹುಬ್ಬೇರಿಸಿದೆ.

ಇನ್ನೂ ನಾಗಚೈತನ್ಯ ಮತ್ತು ಶೋಭಿತಾ ಮದುವೆ ಎಲ್ಲಿ ನಡೆಯಲಿದೆ ಎನ್ನುವ ಪ್ರಶ್ನೆಗೆ ಕೂಡ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ರಾಜಸ್ಥಾನ ಇವರಿಬ್ಬರ ಅದ್ಧೂರಿ ಮದುವೆಗೆ ಸಾಕ್ಷಿಯಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಶೀಘ್ರದಲ್ಲಿಯೇ ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಗಟ್ಟಿಮೇಳ ಮೊಳಗಲಿದೆ.
ಅಂದ್ಹಾಗೇ ನಾಗಚೈತನ್ಯ ಮತ್ತು ಶೋಭಿತಾ ನಡುವೆ ಪ್ರೇಮಾಂಕುರದ ಸುಳಿವು, ಮೊದಲು.. ಲಂಡನ್‌ನಲ್ಲಿ ಸಿಕ್ಕಿತ್ತು. ಇಬ್ಬರ ಡಿನ್ನರ್ ಡೇಟ್ ಗೆ ಅಲ್ಲಿನ ಪಂಚತಾರಾ ಹೊಟೇಲ್ ಸಾಕ್ಷಿಯಾಗಿದೆ ಅನ್ನುವ ಅನುಮಾನ ಅನೇಕರಿಗೆ ಬಂದಿತ್ತು. ಯಾಕೆಂದರೆ ಅಲ್ಲಿಯ ಶೆಫ್ ಅಭಿಮಾನಿ ನಾಗ ಚೈತನ್ಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ನಾಗಚೈತನ್ಯ ದುರಾದೃಷ್ಟ, ಬ್ಯಾಕ್‌ಗ್ರೌಂಡ್‌ನಲ್ಲಿ ಶೋಭಿತಾ ಮುಖ ಮುಚ್ಚಿಕೊಂಡಿದ್ದರು. ಇಲ್ಲಿಂದ ಇವರಿಬ್ಬರ ಸಂಬಂಧದ ಕುರಿತು ಚರ್ಚೆ ನಡೆಯುತ್ತಲೇ ಇತ್ತು. ಇದಕ್ಕೆ ಪೂರಕವಾಗಿ ತಿಪೇಶ್ವರ್ ವನ್ಯಜೀವಿಧಾಮದಲ್ಲಿ ಇಬ್ಬರು ಸುತ್ತಾಡಿದ ಫೋಟೋಗಳು ಕೂಡ ವೈರಲ್ ಆಗಿದ್ದವು. ಯುರೋಪ್‌ನಲ್ಲಿ ರಜಾ-ಮಜಾ ಕಾರ್ಯಕ್ರಮದ ಕ್ಷಣಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದವು. ಈ ಎಲ್ಲ ಕಾರಣಗಳಿಂದ ಇಬ್ಬರು ಪ್ರೇಮದ ಅಮಲನ್ನೇರಿಸಿಕೊಂಡಿರುವುದು ಖಚಿತ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆಗಸ್ಟ್ 08ರಂದು ಸದ್ದಿಲ್ಲದೇ ನಿಶ್ಚಿತಾರ್ಥವನ್ನು ಮಾಡಿಕೊಳ್ಳುವ ಮೂಲಕ ನಾಗಚೈತನ್ಯ ಮತ್ತು ಶೋಭಿತಾ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಅಂತೆ-ಕಂತೆಗಳಿಗೆಲ್ಲ ಪೂರ್ಣ ವಿರಾಮ ಹಾಕಿದರು.

ಇನ್ನುಳಿದಂತೆ ನಾಗಚೈತನ್ಯ ಮತ್ತು ಸಮಂತಾ ನಡುವೆ ವಯಸ್ಸಿನ ಅಂತರ ಇರಲಿಲ್ಲ. ಇದ್ದಿದ್ದು ಕೇವಲ ಐದು ತಿಂಗಳಿನ ಅಂತರವಷ್ಟೇ. ಆದರೆ .. ನಾಗ ಚೈತನ್ಯ ಮತ್ತು ಶೋಭಿತಾ ನಡುವೆ ಐದು ವರ್ಷಗಳ ಅಂತರ ಇದೆ. ನಾಗಚೈತನ್ಯ ಅವರಿಗೆ ಈಗ 37 ವರ್ಷವಾದರೆ, ಶೋಭಿತಾ ಅವರಿಗೆ ಈಗ 32 ವರ್ಷ. ಇನ್ನೂ ವಯಸ್ಸಿನಲ್ಲಿ ನಾಗಚೈತನ್ಯ ಅವರಿಗಿಂತ ಶೋಭಿತಾ ಚಿಕ್ಕವರಾದರೂ, ಚಿತ್ರರಂಗದಲ್ಲಿ ಶೋಭಿತಾ ಮಾಡಿರುವ ಸಾಧನೆ ದೊಡ್ಡದು. ನಾಗಚೈತನ್ಯ ಅವರಂತೆ ಇವರಿಗೆ ಸಿನಿಮಾ ಹಳೆಯದ್ದಲ್ಲ ಬದಲಿಗೆ ಹೊಸದು. ಇವರ ಕುಟುಂಬದಲ್ಲಿ ಸಿನಿಮಾ ಹಿನ್ನೆಲೆ ಹೊಂದಿರುವವರು ಯಾರು ಇಲ್ಲ. ಆದರೂ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿದವರು ಶೋಭಿತಾ. ಒಟ್ನಲ್ಲಿ ಸದ್ಯಕ್ಕೆ ನಾಗಚೈತನ್ಯ ಮತ್ತು ಶೋಭಿತಾ ಮನೆಯಲ್ಲಿ ಮದುವೆ ಸಮಾರಂಭ ಆರಂಭವಾಗಿದೆ. ಮದುವೆ ನಡೆಯುವ ಸ್ಥಳದ ವಿವರ ಇನ್ನೂ ಬಹಿರಂಗವಾಗಬೇಕಿದೆ.


Click it and Unblock the Notifications











