ChaySo ; ಈ ದಿನ ನಡೆಯಲಿದೆ ನಾಗಚೈತನ್ಯ-ಶೋಭಿತಾ ಮದುವೆ, ಹೇಗಿದೆ ಆಮಂತ್ರಣ ಪತ್ರಿಕೆ...?
ಇದು ಬಣ್ಣದ ಲೋಕ. ಇಲ್ಲಿ ಲವ್ವು.. ಡವ್ವು.. ಎಲ್ಲವೂ ಮಾಮೂಲಿ. ಇವತ್ತು ಜೊತೆ ಇದ್ದವರು, ಮರು ದಿನ 'ಹಮ್ ಆಪ್ಕೆ ಹೇ ಕೌನ್' ಎಂದರೆ, ಇನ್ನೂ ಕೆಲವರು 'ಹಮ್ ಸಾಥ್-ಸಾಥ್ ಹೈ' ಎನ್ನುತ್ತಾರೆ. ಇದಕ್ಕೆ ನಾಗಚೈತನ್ಯ ಬದುಕು ಸದ್ಯದ ಅತ್ಯುತ್ತಮ ಉದಾಹರಣೆ
ಹೌದು, ಹಿಂದೊಮ್ಮೆ ಆಂಧ್ರದ ಅಪ್ರತಿಮ ಸುಂದರಿ ಸಮಂತಾಗೆ ತನ್ನ ಹೃದಯವನ್ನು ಕೊಟ್ಟಿದ್ದ ನಾಗಚೈತನ್ಯ ಇಂದು ಅದೇ ಹೃದಯವನ್ನು ಶೋಭಿತಾಗೆ ನೀಡಿದ್ದಾರೆ. ನಿಜಾ.. ಎರಡು ಜೀವಗಳ ಅನುರಾಗದ ಅನುಬಂಧಕ್ಕೆ ಯಾರ ಅಪ್ಪಣೆ ಬೇಕಿಲ್ಲ. ಆದರೆ, ಸಮಂತಾ ಅವರಿಂದ ದೂರವಾದ ನಾಗಚೈತನ್ಯ ಮತ್ತೊಬ್ಬ ಚೆಲುವೆಯ ಮನದರಸವಾಗಬಹುದು ಎನ್ನುವ ಕಲ್ಪನೆಯನ್ನೂ ಯಾರು ಮಾಡಿರಲಿಲ್ಲ. ಆದರೆ ಆ ಕಲ್ಪನೆ ಸುಳ್ಳಾಗಿದೆ. ಅಗಸ್ಟ್‌ನಲ್ಲಿ ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಾಗಚೈತನ್ಯ ಮದುವೆಯ ಬಂಧನಕ್ಕೊಳಗಾಗಲು ಮುಹೂರ್ತ ನಿಗದಿಯಾಗಿದೆ.

ಹೌದು, ನಾಗಚೈತನ್ಯ ಮತ್ತು ಶೋಭಿತಾ ನಿಶ್ಚಿತಾರ್ಥ ಸಮಾರಂಭ ನಡೆದ ನಂತರ ಅನೇಕರು ಇಬ್ಬರಿಗೆ ಮದ್ವೆ ಯಾವಾಗ ಎನ್ನುವ ಪ್ರಶ್ನೆ ಕೇಳುತ್ತಿದ್ದರು. ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆಗೆ ಸಕಲ ತಯಾರಿಯನ್ನೂ ಮಾಡಿಕೊಳ್ಳಲಾಗುತ್ತಿದೆ ಎಂದು ಅವರವರೇ ಮಾತನಾಡಿಕೊಂಡರು.
ಇನ್ನೂ ಇದು ಡೆಸ್ಟಿನೇಶನ್ ವೆಡ್ಡಿಂಗ್ ಕಾಲ. ತಮ್ಮ ಇಷ್ಟದ ಸ್ಥಳದಲ್ಲಿ, ದೇಶದಲ್ಲಿ ಮದುವೆಯಾಗುವ ಕಾಲ. ಪ್ರಿಯಾಂಕ ಚೋಪ್ರಾ ಅವರಿಂದ ಹಿಡಿದು ದೀಪಿಕಾ ಪಡುಕೋಣೆಯವರೆಗೆ, ಅನುಷ್ಕಾ ಶರ್ಮಾ ಅವರಿಂದ ಹಿಡಿದು ಪರಿಣಿತಿ ಚೋಪ್ರಾವರೆಗೆ ಅನೇಕರು ಈ ಪರಿಕಲ್ಪನೆಯಡಿಯಲ್ಲಿಯೇ ಮದುವೆಯಾಗಿದ್ದಾರೆ. ನಾಗಚೈತನ್ಯ ಮತ್ತು ಶೋಭಿತಾ ಕೂಡ ಈ ಸಾಲಿಗೆ ಸೇರಲಿದ್ದಾರೆ. ಡೆಸ್ಟಿನೇಶನ್ ವೆಡ್ಡಿಂಗ್ ಗೆ ಅಣಿಯಾಗಿದ್ದಾರೆ. ಹೈದ್ರಾಬಾದ್ ಅಥವಾ ರಾಜಸ್ಥಾನದಲ್ಲಿ ಮದುವೆಯ ಸ್ಥಳವನ್ನು ಹುಡುಕುತ್ತಿದ್ದಾರೆ ಎಂದು ಇನ್ನು ಕೆಲವರು ಪುಕಾರು ಹಬ್ಬಿಸಿದರು. ಆದರೆ.. ಇಬ್ಬರ ಮದ್ವೆ ನಿಜಕ್ಕೂ ನಡೆಯುತ್ತಿರುವುದು ಎಲ್ಲಿ ? ಯಾವಾಗ ? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಆ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ನಾಗಚೈತನ್ಯ ಮತ್ತು ಸಮಂತಾ ಅವರ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಂಪ್ರದಾಯಿಕ ಶೈಲಿಯಲ್ಲಿ ನೀಲಿ ಬಣ್ಣದಲ್ಲಿ ಮುದ್ರಣಗೊಂಡಿರುವ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಡಿಸೆಂಬರ್ ನಾಲ್ಕರಂದು ಮದುವೆ ನೆರವೇರಲಿದೆ ಎಂದು ಉಲ್ಲೇಖಿಸಲಾಗಿದೆ. ಇನ್ನೂ ಶೋಭಿತಾ ಅವರ ಪೋಷಕರ ಹೆಸರಿನ ಜೊತೆ ನಾಗಚೈತನ್ಯ ಅವರ ಅಜ್ಜ ಅಕ್ಕಿನೇನಿ ನಾಗೇಶ್ವರ್‌ರಾವ್ ಮತ್ತು ಅನ್ನಪೂರ್ಣಮ್ಮ ಅವರ ಹೆಸರು ಕೂಡ ಇದೆ. ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ದೇವಾಲಯದ ಗಂಟೆ, ಹಿತ್ತಾಳೆ ದೀಪ, ಬಾಳೆ ಎಲೆ ಮತ್ತು ಹಸುವಿನ ಚಿತ್ರಣವನ್ನು ಸುಂದರವಾಗಿ ಬಿಡಿಸಲಾಗಿದೆ. ಬಾಸ್ಕೆಟ್‌ನಲ್ಲಿ ಆಮಂತ್ರಣ ಪತ್ರಿಕೆಯ ಜೊತೆ ಮಲ್ಲಿಗೆ ಹೂವು ಮತ್ತು ಸೀರೆಯನ್ನು ಇಡಲಾಗಿದೆ.
ಇನ್ನೂ ಈ ಶುಭ ಸಂದರ್ಭದಲ್ಲಿ ನಿಮ್ಮ ಶುಭ ಹಾರೈಕೆ ಮತ್ತು ಆಶೀರ್ವಾದವನ್ನು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಕೂಡ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿದೆ. ಆದರೆ, ಇಷ್ಟೆಲ್ಲಾ ವಿಶೇಷತೆಗಳನ್ನೊಂದಿರುವ ಈ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮದುವೆ ನಡೆಯುವ ಸ್ಥಳ ಮತ್ತು ಮುಹೂರ್ತದ ಸಮಯ ಇಲ್ಲದಿರುವುದು ಅಚ್ಚರಿಯನ್ನು ಮೂಡಿಸಿದೆ.
ಇನ್ನುಳಿದಂತೆ ಎಲ್ಲ ತಾರೆಯರಂತೆ ಶೋಭಿತಾ ತಮ್ಮ ಮದುವೆಗೆ ಯಾವುದೇ ಡಿಸೈನರ್, ಸೈಲಿಸ್ಟ್‌ಗಳ ಮೊರೆ ಹೋಗದೇ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿರುವ ಜವಳಿ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿರುವ ಅಂಗಡಿಗಳಿಗೆ ತೆರಳಿ ಬಟ್ಟೆಗಳನ್ನು ಖರೀದಿ ಮಾಡಲಿದ್ದಾರೆ ಅನ್ನುವ ಸುದ್ದಿ ಇದೆ. ಡಿಸೆಂಬರ್ 04ರಂದು ನಡೆಯಲಿರುವ ಮದುವೆ ಸಮಾರಂಭಕ್ಕೆ ಭಾರತೀಯ ಚಿತ್ರರಂಗದ ಅನೇಕ ದಿಗ್ಗಜರು ಆಗಮಿಸುವ ನಿರೀಕ್ಷೆ ಇದೆ.


Click it and Unblock the Notifications











