ಹೊಸ ಮನೆ ಖರೀದಿಸಿದ ನಟ ನಾಗ ಚೈತನ್ಯ: ಹಳೆಯ ನಿವಾಸದ ಕಥೆ ಏನು?
ಟಾಲಿವುಡ್ ಸ್ಟಾರ್ ಕಪಲ್ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯ ಜೀವನ ಅಂತ್ಯಗೊಳಿಸಿ ಅನೇಕ ದಿನಗಳಾಗಿದೆ. ಆದರೂ ಇಬ್ಬರ ವಿಚ್ಛೇದನ ವಿಚಾರ ಇನ್ನು ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ವಿಚ್ಛೇದನ ಬಗ್ಗೆ ಚರ್ಚೆ ನಡೆಯುತ್ತಿದ್ದು, ತರಹೇವಾರಿ ಸುದ್ದಿಗಳು ಹರಿಡುತ್ತಿವೆ. ಆದರೂ ಸಮಂತಾ ಅಥವಾ ನಾಗ ಚೈತನ್ಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದೀಗ ನಾಗ ಚೈತನ್ಯ ಕಡೆಯಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಸಮಂತಾರಿಂದ ದೂರ ಆಗಿರುವ ನಾಗ ಚೈತನ್ಯ ಇದೀಗ ಹೊಸ ಮನೆ ಖರೀದಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ನಾಗ್ ಮತ್ತು ಸಮಂತಾ ವಾಸವಿದ್ದ ಹಳೆಯ ಮನೆಯಲ್ಲಿ ಸಮಂತಾ ವಾಸವಿರಲಿದ್ದಾರೆ ಎನ್ನಲಾಗುತ್ತಿದೆ. ನಾಗ ಚೈತನ್ಯ ತಾವಾಗಿಯೇ ಹಳೆಯ ಮನೆಯನ್ನು ಬಿಟ್ಟು ಹೊರಬರುತ್ತಿದ್ದು, ಹೊಸ ಮನೆ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ನಾಗ ಚೈತನ್ಯ ತನ್ನ ಹೊಸ ಮನೆಯನ್ನು ಹೈದರಾಬಾದ್ ನ ಪ್ರತಿಷ್ಟಿತ ಪ್ರದೇಶದಲ್ಲಿ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಜುಬಿಲಿ ಹಿಲ್ಸ್ ನಲ್ಲಿ ಖರೀದಿ ಮಾಡಿದ್ದು, ನವೀಕರಣ ಕೆಲಸ ನಡೆಯುತ್ತಿದೆ ಎನ್ನಲಾಗುತ್ತಿದೆ. ಹೊಸ ಮನೆಯ ನವೀಕರಣ ಕಾರ್ಯ ಮುಗಿದ ಬಳಿಕ ಶಾಶ್ವತವಾಗಿ ಅಲ್ಲೇ ನೆಲೆಸಲಿದ್ದಾರೆ. ಸಮಂತಾ ಹಳೆಯ ನಿವಾಸವಾದ ಗಚಿಗೌಲಿ ಭವನದಲ್ಲೇ ತಂಗಲಿದ್ದಾರೆ ಎನ್ನುವ ಮಾಹಿತಿ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ನಾಗ ಚೈತನ್ಯ ವಿಚ್ಛೇದನದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಸಹೋದರ ಅಖಿಲ್ ಅಕ್ಕಿನೇನಿ ಅವರ ಬಹುನಿರೀಕ್ಷೆಯ ಬ್ಯಾಚುಲರ್ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ನಾಗ ಚೈತನ್ಯ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ನಾಗ ಚೈತನ್ಯ ಸದ್ಯ ಲವ್ ಸ್ಟೋರಿ ಸಿನಿಮಾದ ಸಕ್ಸಸ್ ನಲ್ಲಿದ್ದಾರೆ. ಈ ಸಿನಿಮಾ ನಾಗ ಚೈತನ್ಯ ಸಿನಿಮಾ ಪಯಣಕ್ಕೆ ದೊಡ್ಡ ಮೈಲೇಜ್ ತಂದುಕೊಟ್ಟ ಚಿತ್ರವಾಗಿದೆ.
ಇನ್ನು ಸಮಂತಾ ವಿಚಾರಕ್ಕೆಬರುವುದಾದರೆ ವಿಚ್ಛೇದನದ ಬಳಿಕ ಸಿಕ್ಕಾಪಟ್ಟೆೆ ಟ್ರೋಲ್ ಆಗುತ್ತಿರುವ ಸಮಂತಾ ಇತ್ತೀಚಿಗಷ್ಟೆ ತನ್ನ ಬಗ್ಗೆ ಕೇಳಿಬರುತ್ತಿದ್ದ ವದಂತಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ತುಂಬಾ ನೋವಿನ ಪ್ರಕ್ರಿಯೆಯಾಗಿದೆ ಎಂದು ಸಮಂತಾ ಹೇಳಿದ್ದರು. ಇನ್ನು ಸಮಂತಾ ಹೆಸರು ಸ್ಟೈಲಿಸ್ಟ್ ಪ್ರೀತಂ ಜೊತೆ ಕೇಳಿಬರುತ್ತಿತ್ತು. ಇಬ್ಬರ ಸಂಬಂಧ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದರಿಂದ ಬೇಸರಗೊಂಡಿರುವ ಸ್ಟೈಲಿಸ್ಟ್ ಪ್ರೀತಂ ಪ್ರತಿಕ್ರಿಯೆ ನೀಡಿದ್ದಾರೆ.
ನಾಗ ಚೈತನ್ಯ ಮೌನದಿಂದ ಬೇಸರವಾಗಿರುವುದಾಗಿ ಹೇಳಿರುವ ಪ್ರೀತಂ, ಸಮಂತಾ ತನ್ನ ಸಹೋದರಿ ಇದ್ದಹಾಗೆ ಎಂದು ಪ್ರೀತಂ ಹೇಳಿದರು. "ಸಮಂತಾಳನ್ನು ನಾನು ಜಿಜಿ ಎಂದು ಕರೆಯುತ್ತೇನೆ ಎಂಬುದು ಎಲ್ಲರಿಗೂ ತಿಳಿದಿದೆ. ಜಿಜಿ ಉತ್ತರ ಭಾರತದ ಪದ, ಜಿಜಿ ಎಂದರೆ ಸಹೋದರಿ. ಹೀಗಿರುವಾಗ ನಮ್ಮ ನಡುವೆ ಯಾಕೆ ಲಿಂಕ್ ಅಪ್ ಮಾಡುತ್ತೀರಿ" ಎಂದು ಪ್ರೀತಂ ಪ್ರಶ್ನಿಸಿದ್ದಾರೆ.
"ನಾನು ಚೈತನ್ಯ ಅವರನ್ನು ಹಲವು ವರ್ಷಗಳಿಂದ ನೋಡಿದ್ದೇನೆ. ಅವರಿಗೆ ನನ್ನ ಮತ್ತು ಸಮಂತಾ ನಡುವೆ ಯಾವ ರೀತಿಯ ಸಂಬಂಧವಿದೆ ಎನ್ನುವುದು ತಿಳಿದಿದೆ. ಸಮಂತಾ ಮತ್ತು ನನ್ನ ಬಗ್ಗೆ ಹೀಗೆ ಮಾತನಾಡಬೇಡಿ ಎಂದು ನಾಗ ಚೈತನ್ಯ ಪ್ರತಿಕ್ರಿಯೆ ನೀಡಬಹುದು ಎಂದು ಭಾವಿಸಿದ್ದೆ. ಅವರು ಒಂದು ಹೇಳಿಕೆ ನೀಡಿದರೂ ಅದು ತುಂಬಾ ಬದಲಾವಣೆ ಉಂಟುಮಾಡುತ್ತದೆ. ಇದೀಗ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಅಭಿಮಾನಿಗಳಿಗೆ ಚೈತನ್ಯ ಕಡೆಯಿಂದ ಒಂದು ಹೇಳಿಕೆ ಬಂದರೆ ಇದಕ್ಕೆ ಬ್ರೇಕ್ ಹಾಕಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದರು.


Click it and Unblock the Notifications











