ಎರಡನೇ ಮದುವೆಗೆ ನಾಗಚೈತನ್ಯ ರೆಡಿ, ಇಂದೇ ನಡೆಯಲಿದೆ ನಿಶ್ಚಿತಾರ್ಥ...?
ಸಮಂತಾ ಅವರಿಂದ ನಾಗಚೈತನ್ಯ ದೂರವಾದ ನಂತರ, ಪಕ್ಕದ ಆಂಧ್ರದಲ್ಲಿ ಅನೇಕರು ನಾಗಚೈತನ್ಯಗೆ ಮತ್ತೊಂದು ಮದುವೆ ಮಾಡಿಸುವ ಶಪಥವನ್ನ ಮಾಡಿದ್ದಾರೆ. ನಾಗಚೈತನ್ಯ ನಡೆ-ನುಡಿಯ ಮೇಲೆ ಕಣ್ಣಿಟ್ಟಿದ್ದಾರೆ.ಇದಕ್ಕೆ ಪುಷ್ಠಿ ನೀಡುವಂತೆ ಸಮಂತಾ ತೆಕ್ಕೆಯಿಂದ ಮೆಲ್ಲಗೆ ಜಾರಿದ ನಾಗಚೈತನ್ಯ, ಸೀದಾ ಶೋಭಿತಾ ಪಕ್ಕದಲ್ಲಿ ಬಿದ್ದಿದ್ದಾರೆ ಅನ್ನುವ ಅನುಮಾನ ಅನೇಕರಲ್ಲಿ ಇದೆ. ಈ ಅನುಮಾನಕ್ಕೆ ಈಗ ಇನ್ನೂ ಹೆಚ್ಚಾಗಿದೆ. ನಾಗ ಚೈತನ್ಯ ಮತ್ತು ಶೋಭಿತಾ ಇಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೈದ್ರಾಬಾದ್ ತುಂಬಾ ಹಬ್ಬಿದೆ.
ಗ್ರೇಟ್ ಆಂಧ್ರ ವೆಬ್ ಸೈಟ್ ಪ್ರಕಾರ ಇಂದು ನಾಗಾರ್ಜುನ ನಿವಾಸದಲ್ಲಿ ನಾಗಚೈತನ್ಯ ಮತ್ತು ಶೋಭಿತಾ ದುಲಿಪಾಲ ಅವರ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಖುದ್ದು ನಾಗಾರ್ಜುನ್ ಅವರೇ ನಿಶ್ಚಿತಾರ್ಥ ಸಮಾರಂಭದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಿದ್ದಾರೆ ಎಂದು ಕೂಡ ಗ್ರೇಟ್ ಆಂಧ್ರ ವರದಿ ಮಾಡಿದೆ.

ಅಂದ್ಹಾಗೇ ನಾಗಚೈತನ್ಯ ಮತ್ತು ಶೋಭಿತಾ ಈ ಹಿಂದೆ ತಿಪೇಶ್ವರ್ ವನ್ಯಜೀವಿಧಾಮದಿಂದ ಪ್ರತೈಕವಾಗಿ ಫೋಟೋ ಹಂಚಿಕೊಂಡು, ಎಲ್ಲರಲ್ಲಿನ ಅನುಮಾನ ಹೆಚ್ಚಿಸಿದ್ದರು. ಆ ನಂತರ ಸಪ್ತಸಾಗರದಾಚೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದರು. ಎಲ್ಲರ ಹುಬ್ಬೇರಿಸಿದ್ದರು.
ಹೌದು, ಕೆಲ ದಿನಗಳ ಹಿಂದೆ ಯುರೋಪ್‌ನಲ್ಲಿ ರಜಾ-ಮಜಾ ಕಾರ್ಯಕ್ರಮವನ್ನು ಜಂಟಿಯಾಗಿ ಹಮ್ಮಿಕೊಂಡಿದ್ದ ನಾಗಚೈತನ್ಯ ಮತ್ತು ಶೋಭಿತಾ ಅಲ್ಲಿನ ವೈನ್ ಟೇಸ್ಟಿಂಗ್ ಸೆಷನ್‌ನ ಕಣ್ತುಂಬಿಕೊಂಡಿದ್ದರು. ಈ ಅನುಬಂಧದ ಅಭೂತಪೂರ್ವ ಘಳಿಗೆಯನ್ನ ರೆಡಿಟ್‌ನ ಬಳಕೆದಾರರೊಬ್ಬರು ಸೆರೆಹಿಡಿದು ಹಂಚಿಕೊಂಡಿದ್ದರು.

ಯುರೋಪ್‌ನಲ್ಲಿ ಸೆರೆ ಸಿಕ್ಕಾಗಲೇ, ಇಬ್ಬರು ಶೀಘ್ರದಲ್ಲಿಯೇ ಮದುವೆ ಸುದ್ದಿ ಕೊಡಬಹುದು ಎನ್ನುವ ಮಾತು ಕೇಳಿ ಬಂದಿತ್ತು. ಶೋಭಿತಾ ವಿರುದ್ಧ ಸಮಂತಾ ಅವರ ಅಭಿಮಾನಿ ಬಣ ರೊಚ್ಚಿಗೆದ್ದಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಸಂಸಾರ ಕೆಡಿಸೋದು ಬಿಡಮ್ಮಾ, ಹೋಗಿ ಸಿನಿಮಾ ಮಾಡು ಎಂದು ಟ್ರೋಲಿಗರ ಗುಂಪು ಶೋಭಿತಾ ಅವರನ್ನು ಟ್ರೋಲ್ ಕೂಡ ಮಾಡಿತ್ತು.
ಮಿಕ್ಕಂತೆ ನಾಗಚೈತನ್ಯ ಮತ್ತು ಶೋಭಿತಾ ನಡುವೆ ಪ್ರೇಮಾಂಕುರದ ಸುಳಿವು, ಮೊದಲು.. ಲಂಡನ್‌ನಲ್ಲಿ ಸಿಕ್ಕಿತ್ತು. ಇಬ್ಬರ ಡಿನ್ನರ್ ಡೇಟ್ ಗೆ ಅಲ್ಲಿನ ಪಂಚತಾರಾ ಹೊಟೇಲ್ ಸಾಕ್ಷಿಯಾಗಿದೆ ಅನ್ನುವ ಅನುಮಾನ ಅನೇಕರಿಗೆ ಬಂದಿತ್ತು. ಯಾಕೆಂದರೆ ಅಲ್ಲಿಯ ಶೆಫ್ ಅಭಿಮಾನಿ ನಾಗ ಚೈತನ್ಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ನಾಗಚೈತನ್ಯ ದುರಾದೃಷ್ಟ, ಬ್ಯಾಕ್‌ಗ್ರೌಂಡ್‌ನಲ್ಲಿ ಶೋಭಿತಾ ಮುಖ ಮುಚ್ಚಿಕೊಂಡಿದ್ದರು.

ಅವತ್ತು ನಾಗಚೈತನ್ಯ ಮತ್ತು ಶೋಭಿತಾ ಫೋಟೋ ವೈರಲ್ ಆದ ಬೆನ್ನಲ್ಲಿಯೇ, ಸಮಂತಾ ಸಂಬಂಧದ ಪಾಠ ಮಾಡಿದ್ದರು. ಯಾರು ಯಾರ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದರೆ ನನಗೇನು? ಪ್ರೀತಿಯ ಮೌಲ್ಯವನ್ನು ತಿಳಿಯದವರು ಎಷ್ಟು ಜನರೊಟ್ಟಿಗೆ ಡೇಟ್ ಮಾಡಿದರೂ ಕಣ್ಣೀರು ಹಾಕುತ್ತಾರೆ. ಕನಿಷ್ಠ ಆ ಹುಡುಗಿ ಆದ್ರು ಸಂತೋಷವಾಗಿರಬೇಕು. ಅವರು ತಮ್ಮ ನಡವಳಿಕೆ ಬದಲಾಯಿಸಿಕೊಂಡು ಆ ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು" ಎಂದು ಸಮಂತಾ ಹೇಳಿದ್ದಾಗಿ ಸುದ್ದಿಯಾಗಿತ್ತು. ಆದರೆ ವಾಸ್ತವದಲ್ಲಿ ಸಮಂತಾ ಈ ವಿಚಾರ ತಳ್ಳಿ ಹಾಕಿದ್ದರು. ನಾನು ಯಾವತ್ತು ಈ ರೀತಿ ಹೇಳಿಯೇ ಇಲ್ಲ ಎಂದಿದ್ದರು.
ಹೀಗೆ ಕಾಲ ಕಾಲಕ್ಕೆ ಸುದ್ದಿಯಾಗುತ್ತಾ ಬಂದ ಈ ಜೋಡಿ ಈಗ ಇನ್ನೊಮ್ಮೆ ಸುದ್ದಿಯಲ್ಲಿದೆ. ನಾಗಚೈತನ್ಯ ಮತ್ತು ಶೋಭಿತಾ ನಿಶ್ಚಿತಾರ್ಥ ಇಂದು ನಡೆಯಲಿದೆ ಎನ್ನುವ ವಿಚಾರ ಎಲ್ಲೆಡೆ ಗುಲ್ಲಾಗಿದೆ.


Click it and Unblock the Notifications











