ಮೇಲುಕೋಟೆಯಲ್ಲಿ ಬಾರ್ ಸೆಟ್: ನಾಗ ಚೈತನ್ಯ ಚಿತ್ರತಂಡ ವಿರುದ್ಧ ಗ್ರಾಮಸ್ಥರ ಕಿಡಿ
'ಲಾಲ್ ಸಿಂಗ್ ಚೆಡ್ಡ' ಸಿನಿಮಾ ಬಳಿಕ ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಕೈಗೆತ್ತಿಕೊಂಡಿರುವ '3 ನಾಟ್ 2' ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. '3 ನಾಟ್ 2' ಚಿತ್ರತಂಡ ಕರ್ನಾಟಕದಲ್ಲಿ ಚಿತ್ರೀಕರಣ ನಡೆಸುತ್ತಿದ್ದು, ಚಿತ್ರತಂಡ ಮಾಡಿರುವ ಯಡವಟ್ಟು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ '3 ನಾಟ್ 2' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರ ತಂಡದಿಂದ ಮೇಲುಕೋಟೆ ವೈಷ್ಣವ ಕ್ಷೇತ್ರದಲ್ಲಿ ಪರಂಪರೆಗೆ ಧಕ್ಕೆಯಾಗುವ ರೀತಿಯಲ್ಲಿ ಸೆಟ್ ಹಾಕಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ನಾಗ ಚೈತನ್ಯ ಅಭಿನಯದ '3 ನಾಟ್ 2' ಸಿನಿಮಾಕ್ಕಾಗಿ ಮೇಲುಕೋಟೆಯ ಪಾರಂಪರಿಕ ಸ್ಮಾರಕ ರಾಯಗೋಪುರದಲ್ಲಿ ಲೈಟ್ ಸೆಟ್ಟಿಂಗ್‌ಗಳನ್ನು ಮಾಡಲಾಗಿದ್ದು, ರಾಯಗೋಪುರದ ಮುಂಭಾಗ ಪಾರ್ಟಿಯ ಸೆಟ್ ಹಾಕಿ ವಿವಿಧ ರೀತಿಯ ಮದ್ಯದ ಬಾಟಲ್‍ಗಳನಿಟ್ಟು ಚಿತ್ರೀಕರಣ ಮಾಡಲಾಗಿದೆ. ಬಾರ್ ರೀತಿಯ ಸೆಟ್ ಹಾಕುವ ಮೂಲಕ ಮೇಲುಕೋಟೆ ಭಕ್ತರ ಹಾಗೂ ಸ್ಥಳೀಯರ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ.

'3 ನಾಟ್ 2' ಸಿನಿಮಾಗೆ ಚಿತ್ರೀಕರಣಕ್ಕಾಗಿ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಎರಡು ದಿನಗಳ ಚಿತ್ರೀಕರಣಕ್ಕೆ ಷರತ್ತು ಬದ್ಧ ಅನುಮತಿ ನೀಡಿದ್ದರು. ಆದರೆ ಚಿತ್ರತಂಡ ಐತಿಹಾಸಿಕ ಕ್ಷೇತ್ರವನ್ನು ಚಿತ್ರತಂಡ ದುರ್ಬಳಕೆ ಮಾಡಿಕೊಂಡಿದ್ದು, ಜಿಲ್ಲಾಧಿಕಾರಿಗಳು ವಿಧಿಸಿದ್ದ ಷರತ್ತನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಇನ್ನು ಚಿತ್ರೀಕರಣದ ಸೆಟ್‌ನಲ್ಲಿ ಭಾರೀ ಗಾತ್ರದ ಕಬ್ಬಿಣದ ಕಂಬ ಬಳಕೆ ಮಾಡಲಾಗಿದ್ದು, ಇದರಿಂದ ರಾಯಗೋಪುರಕ್ಕೆ ಹಾನಿಯಾಗುತ್ತಿದೆ ಎಂದು ಚಿತ್ರದ ತಂಡದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಜೊತೆಗೆ ಪೂಜನೀಯ ಸ್ಥಳದಲ್ಲಿ ಬಾರ್ ಸೆಟ್ ಹಾಕಿರುವುದಕ್ಕೆ ಕಿಡಿಕಾರಿದ್ದಾರೆ.
ಈ ಹಿಂದೆಯೂ ಮೇಲುಕೋಟೆ ದೇವಾಲಯಲ್ಲಿ ನಾಗಚೈತನ್ಯ ನಟನೆಯ ಸಿನಿಮಾ ಚಿತ್ರೀಕರಣ ವೇಳೆ ರಾಜಮುಡಿ ಉತ್ಸವಕ್ಕೆ ಅಡಚಣೆಯಾಗಿತ್ತು. ಅಲ್ಲದೇ ದೇವಾಲಯದ ಅಕ್ಕ-ತಂಗಿ ಕೊಳದ ನೀರನ್ನು ಕಲುಷಿತ ಮಾಡಲಾಗಿತ್ತು. ಪರಭಾಷೆಯ ಚಿತ್ರತಂಡಗಳಿಂದ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇನ್ನು ಮುಂದೆ ಮೇಲುಕೋಟೆ ಸೇರಿದಂತೆ ಇತರ ಸ್ಥಳೀಯ ಪಾರಂಪರಿಕ ಕ್ಷೇತ್ರದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇನ್ನು ಮೊದಲೆಲ್ಲಾ ಹಿಟ್ ಲೀಸ್ಟ್‌ನಲ್ಲಿರುತ್ತಿದ್ದ ನಾಗ ಚೈತನ್ಯ ಚಿತ್ರಗಳು ಇತ್ತೀಚೆಗೆ ಸೋಲು ಕಾಣುತ್ತಿವೆ. ಟಾಲಿವುಡ್‌ನಲ್ಲಿ ನಾಗ ಚೈತನ್ಯ ಬೇಡಿಕೆಯ ನಟರಾಗಿದ್ದು, ನಾಗ ಚೈತನ್ಯ ಸಿನಿಮಾಗಳ ಬಗ್ಗೆ ಟಾಲಿವುಡ್‌ನಲ್ಲಿ ಉತ್ತಮ ಅಭಿಪ್ರಾಯವಿತ್ತು. ಆದರೆ ಈ ಹಿಂದೆ ತೆರೆ ಕಂಡ 'ಥ್ಯಾಂಕ್ಯೂ' ಚಿತ್ರ ನಾಗ ಚೈತನ್ಯ ಹಿಂದೆದೂ ಕಂಡಿರದ ಸೋಲು ಕಾಣುವಂತೆ ಮಾಡಿತ್ತು. ಇದಾದ ಬಳಿಕ ನಾಗ ಚೈತನ್ಯ ಕೆಲವು ಚಿತ್ರಗಳನ್ನಷ್ಟೇ ಆಯ್ಕೆ ಮಾಡುತ್ತಿದ್ದು, ಉತ್ತಮ ನಿರ್ದೇಶಕರ ಚಿತ್ರಕ್ಕಷ್ಟೇ ನಾಗ ಚೈತನ್ಯ ಓಕೆ ಎನ್ನುತ್ತಿದ್ದಾರೆ. ಇನ್ನು ನಾಗ ಚೈತನ್ಯ ವೈಯಕ್ತಿಕ ಜೀವನವೂ ಕೂಡ ಟಾಲಿವುಡ್‌ನಲ್ಲಿ ಚರ್ಚೆಯ ವಿಷಯವಾಗಿದೆ. ನಟಿ ಸಮಂತಾಗೆ ವಿಚ್ಚೇದನ ನೀಡಿದ ಬಳಿಕ ನಟ ನಾಗ ಚೈತನ್ಯ ಹೆಸರು ಶೋಭಿತಾ ದುಲಿಪಾಲ ಜೊತೆ ತಳುಕು ಹಾಕಿಕೊಂಡಿದೆ.


Click it and Unblock the Notifications











