For Quick Alerts
  ALLOW NOTIFICATIONS  
  For Daily Alerts

  'ಮಾ' ಚುನಾವಣೆ: ಪ್ರಕಾಶ್ ರೈ ವ್ಯಕ್ತಿತ್ವ ಕೊಂಡಾಡಿದ ಚಿರಂಜೀವಿ ಸಹೋದರ

  |

  ತೆಲುಗು ಚಿತ್ರರಂಗದ ಪ್ರತಿಷ್ಠಿತ 'ಮಾ' (ಮೂವಿ ಆರ್ಟಿಸ್ಟ್ ಅಸೋಸಿಯೇಷನ್)ನ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ ಸ್ಪರ್ಧಿಸಿದ್ದು, ಚುನಾವಣಾ ಕಣ ಬಹುವಾಗಿ ರಂಗೇರಿದೆ.

  ನಟ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಬೆಂಬಲ ಪ್ರಕಾಶ್ ರೈಗೆ ದೊರಕಿದೆಯಾದರೂ ಚುನಾವಣೆಯಲ್ಲಿ ಗೆಲುವು ಸುಲಭವೇನೂ ಇಲ್ಲ. ಪ್ರಕಾಶ್ ರೈ ಎದುರಾಳಿ ಬಣವೂ ಪ್ರಬಲವಾಗಿಯೇ ಇದ್ದು ಕೆಲವು ಚುನಾವಣಾ ಗಿಮಿಕ್‌ಗಳನ್ನು ಸಹ ಮಾಡುತ್ತಿದೆ ಎಂದು ತೆಲುಗು ಮಾಧ್ಯಮಗಳ ವರದಿ ಮಾಡಿವೆ.

  ಪ್ರಕಾಶ್ ರೈ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಾರಣ ತೆಲುಗು ಚಿತ್ರರಂಗದಲ್ಲಿ ಈಗ 'ಲೋಕಲ್-ನಾನ್ ಲೋಕಲ್' ವಿಷಯ ಚರ್ಚೆಗೆ ಬಂದಿದೆ. ಪ್ರಕಾಶ್ ರೈ ತೆಲುಗು ರಾಜ್ಯಗಳಿಗೆ ಸೇರಿದವರಲ್ಲ ಆದ್ದರಿಂದ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆರಿಸಬಾರದು ಎಂದು ಎದುರಾಳಿ ಮಂಚು ವಿಷ್ಣು ಬಳಗ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡುತ್ತಿದೆ. ಇದಕ್ಕೆ ಎದುರಾಗಿ, 'ನಟನೆಗೆ ಗಡಿ ಇಲ್ಲ. ಪ್ರಕಾಶ್ ರೈ ತೆಲುಗು ಚಿತ್ರರಂಗಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ' ಎಂದು ಸಹ ವಾದಗಳು ಕೇಳಿ ಬರುತ್ತಿವೆ.

  ಇದೀಗ ಮಾಧ್ಯಮಗಳೆದುರು ಮಾತನಾಡಿರುವ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು, 'ಪ್ರಕಾಶ್ ರೈ ಭಾರತೀಯ ನಟ. ತೆಲುಗು ಚಿತ್ರರಂಗಕ್ಕೆ ದೊಡ್ಡ ಸೇವೆಯನ್ನು ಅವರು ಒದಗಿಸಿದ್ದಾರೆ. ಸಣ್ಣ ಸಿನಿಮಾಗಳು, ಬಿಗ್‌ ಬಜೆಟ್ ಸಿನಿಮಾಗಳು ಎಂಬ ಭೇದವಿಲ್ಲದೆ ನಟಿಸಿದ್ದಾರೆ. ಅವರ ಕಲೆಯನ್ನು ಭಾಷೆಗಳಿಗೆ ಸೀಮಿತ ಮಾಡುವುದು ಬೇಡ'' ಎಂದು ಮನವಿ ಮಾಡಿದ್ದಾರೆ.

  'ಮಾ' ಚುನಾವಣೆಯಲ್ಲಿ ಪ್ರಕಾಶ್ ರೈ ಎದುರಾಳಿ ಮಂಚು ವಿಷ್ಣು ಬಣದ ವಿರುದ್ಧ ವಾಗ್ದಾಳಿ ನಡೆಸಿರುವ ನಾಗಬಾಬು, ''ಒಂದು ಮತಕ್ಕೆ ಹತ್ತು ಸಾವಿರ ಹಣ ನೀಡುತ್ತಿದ್ದಾರೆ ಮಂಚು ವಿಷ್ಣು ಬಣ. ಅಷ್ಟು ಮಾತ್ರವೇ ಅಲ್ಲದೆ ಗೆದ್ದ ಮೇಲೆ ಇನ್ನಷ್ಟು ಹಣ ನೀಡುವುದಾಗಿಯೂ ಭರವಸೆ ನೀಡುತ್ತಿದ್ದಾರೆ'' ಎಂದು ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಕಾಶ್ ರೈ ಸಹ ಇದೇ ಆರೋಪವನ್ನು ಮಾಡಿದ್ದರು. ಹಿರಿಯ ನಟರಿಂದ ಪೋಸ್ಟಲ್ ಮತಕ್ಕೆ ಅರ್ಜಿ ಹಾಕಿಸಿ ಆ ಮತಪತ್ರಗಳನ್ನು ತಾವೇ ಇರಿಸಿಕೊಂಡು ತಮಗೆ ಮತ ಹಾಕಿಕೊಳ್ಳುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದರು ಪ್ರಕಾಶ್ ರೈ.

  ಮುಂದುವರೆದು ಮಾತನಾಡಿರುವ ನಾಗಬಾಬು, ''ಕೋಟ ಶ್ರೀನಿವಾಸಮೂರ್ತಿ ಅಂಥಹಾ ಹಿರಿಯ ನಟರೇ ಪ್ರಕಾಶ್ ಯಾರು ಎಂದು ಪ್ರಶ್ನೆ ಮಾಡಿರುವುದು ಸರಿಯಾದ ಕ್ರಮವಲ್ಲ. ಪ್ರಕಾಶ್ ರೈ ಅಂಥಹಾ ವಿಚಾರವಂತ, ಕಲಾವಿದರ ಬಗ್ಗೆ ಕಾಳಜಿ ಹೊಂದಿರುವ ನಟರು ಮಾ ಅಧ್ಯಕ್ಷ ಗಾದಿಯಲ್ಲಿದ್ದರೆ ಎಲ್ಲ ಕಲಾವಿದರಿಗೂ ಒಳಿತಾಗುತ್ತದೆ. ಮಾ ಸಂಘಕ್ಕೂ ಒಳಿತಾಗುತ್ತದೆ'' ಎಂದಿದ್ದಾರೆ ನಾಗಬಾಬು.

  ''ಪ್ರಕಾಶ್ ರೈ ಒಬ್ಬ ಅದ್ಭುತ ನಟ. ಸಿನಿಮಾಕ್ಕೆ ಕೋಟ್ಯಂತರ ಸಂಭಾವನೆ ಪಡೆವ ಪ್ರಕಾಶ್ ಅದನ್ನೆಲ್ಲ ಬದಿಗೆ ಸರಿಸಿ ಚುನಾವಣೆಗೆ ಬಂದಿದ್ದಾರೆ. ತೆಲುಗು ಕಲಾವಿದರಿಗಾಗಿ ಕೆಲಸ ಮಾಡುವ ಇಚ್ಛೆಯಿಂದ ಸಿನಿಮಾಗಳನ್ನು ಬಿಟ್ಟು ಚುನಾವಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರನ್ನು ಗೆಲ್ಲಿಸಿ ಕಲಾವಿದರಿಗೆ ಒಳ್ಳೆಯದಾಗುವಂತೆ ಮಾಡಬೇಕು ಎಂದಿದ್ದಾರೆ ನಾಗಬಾಬು.

  ಮಾ ಚುನಾವಣೆ ಅಕ್ಟೋಬರ್ 10 ರಂದು ನಡೆಯಲಿದೆ. ಪ್ರಕಾಶ್ ರೈ ಸಿಂಡಿಕೇಟ್‌ನಲ್ಲಿ ಹಲವು ಪರಿಚಿತ ನಟ-ನಟಿಯರು ಇದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ, ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ಥಾನಕ್ಕೆ ಮೇಕಾ ಶ್ರೀಕಾಂತ್, ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾ ಮತ್ತು ಬ್ಯಾನರ್ಜಿ, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಜೀವಿತಾ ರಾಜಶೇಖರ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಉತ್ತೇಜ್, ಅನಿತಾ ಚೌಧರಿ, ಖಜಾಂಚಿ ಸ್ಥಾನಕ್ಕೆ ನಾಗಿನೇಡು ಸ್ಪರ್ಧಿಸುತ್ತಿದ್ದಾರೆ. ಸಮಿತಿ ಸದಸ್ಯರ ಸ್ಥಾನಕ್ಕೆ, ಅನುಸೂಯಾ, ಅಜಯ್, ಭೂಪಾಲ್, ಬ್ರಹ್ಮಾಜಿ, ಈಟಿವಿ ಪ್ರಭಾಕರ್, ಗೋವಿಂದ ರಾವ್, ಖಾಯುಮ್, ಕೌಶಿಕ್, ಪ್ರಗತಿ, ರಮಣ ರೆಡ್ಡಿ, ಶ್ರೀಧರ್ ರಾವ್, ಶಿವಾ ರೆಡ್ಡಿ, ಸುಡಿಗಾಲಿ ಸುಧೀರ್, ಡಿ ಸುಬ್ಬರಾಜು, ಸುರೇಶ್ ಕೊಂಡೇಟಿ, ತನಿಶ್ ಮತ್ತು ತರ್ಜಾನ್ ಅವರುಗಳು ಸ್ಪರ್ಧಿಸುತ್ತಿದ್ದಾರೆ.

  ಎದುರಾಳಿ ಮಂಚು ವಿಷ್ಣು ಬಣದಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಮಂಚು ವಿಷ್ಣು, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಪೋಷಕರ, ಹಾಸ್ಯ ನಟ ರಘು ಬಾಬು, ಕಾರ್ಯನಿರ್ವಹಾಕ ಉಪಾಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಬಾಬು ಮೋಹನ್, ಉಪಾಧ್ಯಕ್ಷ ಸ್ಥಾನಕ್ಕೆ ಪೃಥ್ವಿರಾಜ ಬಾಲಿ ರೆಡ್ಡಿ ಮತ್ತು ಮದ್ದಾಲ ರವಿ, ಖಜಾಂಚಿ ಸ್ಥಾನಕ್ಕೆ ನಾಯಕ ನಟ, ಪೋಷಕ ನಟ ಶಿವ ಬಾಲಾಜಿ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಕರಾಟೆ ಕಲ್ಯಾಣಿ ಮತ್ತು ನಟ ಗೌತಮ್ ರಾಜು ಸ್ಪರ್ಧಿಸುತ್ತಿದ್ದಾರೆ. ಕಾರ್ಯನಿರ್ವಾಹಕ ಸದಸ್ಯರ ಸ್ಥಾನಕ್ಕೆ ಕನ್ನಡದ 'ಆ ದಿನಗಳು', 'ಮೈತ್ರಿ' ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಅರ್ಚನಾ. ಸಟೈರಿಕಲ್ ಸಿನಿಮಾ ಮೂಲಕ ದೊಡ್ಡ ಮಟ್ಟದ ಅಭಿಮಾನಿಗಳನ್ನು ಸಂಪಾದಿಸಿರುವ ಸಂಪೂರ್ಣೇಶ್ ಬಾಬು, ನಟರಾದ ಅಶೋಕ್ ಕುಮಾರ್, ಗೀತಾ ಸಿಂಗ್, ಹರಿನಾತ್ ಬಾಬು, ಜಯವಾಣಿ, ಮಲಕ್‌ಪೇಟ ಶೈಲಜಾ, ಮಾಣಿಕ್, ಪೂಜಿತಾ, ರಾಜೇಶ್ವರಿ ರೆಡ್ಡಿ, ರೇಖಾ, ಶಶಾಂಕ್, ಶಿವನಾರಾಯಣ, ಶ್ರೀಲಕ್ಷ್ಮಿ, ಶ್ರೀನಿವಾಸುಲು, ಸ್ವಪ್ನ ಮಧುರಿ, ವಿಷ್ಣು ಭೋಪಣ್ಣ, ಎಂಆರ್‌ಸಿ ವಡ್ಲಪಟ್ಲ ಸ್ಪರ್ಧೆ ಮಾಡುತ್ತಿದ್ದಾರೆ.

  English summary
  Actor Nagababu praised Praksh Raj. Nagababu alleged that actor Manchu Vishnu and his syndicate giving money to actors to get votes in MAA election.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X