ಅರಣ್ಯ ಬೆಳೆಸಲು 1000 ಎಕರೆ ಭೂಮಿ ದತ್ತು ಪಡೆದ ನಟ ನಾಗಾರ್ಜುನ
ತೆಲುಗು ಚಿತ್ರರಂಗದ ಸ್ಟಾರ್ ನಟ ನಾಗಾರ್ಜುನ, ಕೇವಲ ನಟರಷ್ಟೆ ಅಲ್ಲ ಒಳ್ಳೆಯ ಉದ್ಯಮಿಯೂ ಹೌದು, ಜೊತೆಗೆ ಪರಿಸರ ಪ್ರೇಮಿಯೂ ಸಹ.
ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ನಾಗಾರ್ಜುನ ಆಗಾಗ್ಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಳ್ಳುತ್ತಿರುತ್ತಾರೆ. ಇದೀಗ ನಟ ನಾಗಾರ್ಜುನ ಪರಿಸರ ಅಭಿಯಾನದಡಿ ದೊಡ್ಡ ಸಾಮಾಜಿಕ ಕಾರ್ಯವೊಂದನ್ನು ಮಾಡಿದ್ದಾರೆ.
ನಾಗಾರ್ಜುನ ಬರೋಬ್ಬರಿ 1000 ಎಕರೆ ಕಾಡನ್ನು ದತ್ತು ಪಡೆದಿದ್ದಾರೆ! ಈ ಬಗ್ಗೆ ಕೆಲವು ತಿಂಗಳ ಹಿಂದೆ ಬಿಗ್‌ಬಾಸ್ ವೇದಿಕೆಯಲ್ಲಿ ನಾಗಾರ್ಜುನ ಮಾತನಾಡಿದ್ದರು. ಈಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಪರಿಸರ ಉಳಿವಿಗಾಗಿ ದೊಡ್ಡ ಮೊತ್ತದ ಹಣ ದೇಣಿಗೆ ನೀಡುವ ಜೊತೆಗೆ 1000 ಎಕರೆ ಕಾಡು ದತ್ತು ಪಡೆದಿದ್ದಾರೆ.
Recommended Video

ಪರಿಸರ ಪ್ರೇಮಿ ರಾಜ್ಯಸಭಾ ಸದಸ್ಯ ಜೆ ಸಂತೋಶ್ ಕುಮಾರ್ ತೆಲಂಗಾಣ ರಾಜ್ಯದಾದ್ಯಂತ ಹಸಿರು ಅಭಿಯಾನ ನಡೆಸುತ್ತಿದ್ದು ಈಗಾಗಲೇ 16 ಕೋಟಿ ಸಸಿಗಳನ್ನು ಅವರು ನೆಟ್ಟಿದ್ದಾರೆ. ಅವರ ಈ ಬೃಹತ್ ಅಭಿಯಾನಕ್ಕೆ ಸಿನಿಮಾ ನಟರು ಸಾಥ್ ನೀಡಿದ್ದು, ಇದೀಗ ನಾಗಾರ್ಜುನ ತಮ್ಮ ಪಾಲಿನ ನೆರವು ನೀಡಿದ್ದಾರೆ.
'ನಗರ ಅರಣ್ಯೀಕರಣ' ಅಭಿಯಾನದಡಿ ಹೈದಾರಾಬಾದ್ ಹೊರವಲಯದಲ್ಲಿರುವ ಚೆಂಗಿಚೆರೆಲಾ ಎಂಬಲ್ಲಿ ನಾಗಾರ್ಜುನ 1000 ಎಕರೆ ಭೂಪ್ರದೇಶವನ್ನು ತಮ್ಮ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಹೆಸರಲ್ಲಿ ದತ್ತು ಪಡೆದಿದ್ದು, ಇಂದು ಸಸಿ ನೆಟ್ಟು ಭೂಮಿ ಪೂಜಾ ಮಾಡಿ ಭೂಪ್ರದೇಶವನ್ನು ಅರಣ್ಯವನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲ್ತಿ ನೀಡಿದರು.
ಈ ಶುಭ ಕಾರ್ಯಕ್ರಮದಲ್ಲಿ ನಾಗಾರ್ಜುನ ಅವರ ಕುಟುಂಬ ಸದಸ್ಯರೆಲ್ಲರೂ ಪಾಲ್ಗೊಂಡಿದ್ದರು. ನಾಗಾರ್ಜುನ ಪತ್ನಿ ಅಮಲಾ ಅಕ್ಕಿನೇನಿ, ಪುತ್ರರಾದ ನಾಗ ಚೈತನ್ಯ, ಅಖಿಲ್ ಅಕ್ಕಿನೇನಿ, ನಟ ಸುಶಾಂತ್ ಅವರುಗಳು ಸ್ಥಳದಲ್ಲಿ ಹಾಜರಿದ್ದು ಸಸಿ ನೆಡುವ ಕಾರ್ಯ ಮಾಡಿದರು.

ಸಸಿ ನೆಡುವುದು ಮಾತ್ರವೇ ಅಲ್ಲದೆ ರಾಜ್ಯಸರ್ಕಾರ ಹಸಿರು ನಿಧಿಗೆ 2 ಕೋಟಿ ರುಪಾಯಿಗಳ ದೇಣಿಗೆಯನ್ನು ನಟ ನಾಗಾರ್ಜುನ ನೀಡಿದರು. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸಂದೇಶ ಪ್ರಕಟಿಸಿರುವ ನಾಗಾರ್ಜುನ, '' ಸಿಎಂ ಕೆಸಿಆರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಚೆನಿಗೆಚೆರ್ಲಾ ಬಳಿ 'ನಗರ ಅರಣ್ಯ' ನಿರ್ಮಾಣ ಮಾಡಲು 1000 ಎಕರೆ ಭೂಮಿ ದತ್ತು ಪಡೆವ ಕಾರ್ಯ ಆಗಿದ್ದು ಶಂಕುಸ್ಥಾಪನೆಯೂ ಆಗಿದೆ. ಈ ಅವಕಾಶ ನೀಡಿದ ನಿಮಗೆ ಹಾಗೂ ಸಂಸದ ಸಂತೋಶ್ ಕುಮಾರ್ ಅವರಿಗೆ ಧನ್ಯವಾದ'' ಎಂದಿದ್ದಾರೆ.
ನಟ ಚಿರಂಜೀವಿ, ರಾಮ್ ಚರಣ್ ತೇಜ, ಜೂ ಎನ್‌ಟಿಆರ್ ಸೇರಿದಂತೆ ಹಲವಾರು ಮಂದಿ ಸಂಸದ ಸಂತೋಶ್ ಕುಮಾರ್ ಮಾಡುತ್ತಿರುವ ಹಸಿರು ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಹಸಿರು ಅಭಿಯಾನ ಜೋರಾಗಿ ಸಾಗುತ್ತಿದೆ.


Click it and Unblock the Notifications











