ತಂದೆ ನಾಗೇಶ್ವರರಾವ್ ಬಯೋಪಿಕ್ ಕನಸು ಬಿಚ್ಚಿಟ್ಟ ನಾಗಾರ್ಜುನ; ಹೀರೊ ಆಗೋದ್ಯಾರು?
ತೆಲುಗು ನಟ ಅಕ್ಕಿನೇನಿ ನಾಗೇಶ್ವರರಾವ್ ಬಯೋಪಿಕ್ ಮಾಡಬೇಕು ಎನ್ನುವುದು ತೆಲುಗು ಸಿನಿರಸಿಕರ ಬೇಡಿಕೆ. ಈ ಬಗ್ಗೆ ಪುತ್ರ ನಾಗಾರ್ಜುನ ಕೆಲ ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ತಾವೇ ಖುದ್ದಾಗಿ ಮುಂದೆ ನಿಂತು ತಂದೆ ಜೀವನಚರಿತ್ರೆಯನ್ನು ತೆರೆಗೆ ತರುವ ಇಂಗಿತ ವ್ಯಕ್ತಪಡಿಸುತ್ತಾ ಬರ್ತಿದ್ದಾರೆ.
ನಾಗೇಶ್ವರರಾವ್ ಬಗ್ಗೆ ಈ ತಲೆಮಾರಿನ ಬಹುತೇಕರಿಗೆ ಗೊತ್ತಿಲ್ಲ. ತೆಲುಗು ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದರು. ಹೈದರಾಬಾದ್‌ನಲ್ಲಿ ಅನ್ನಪೂರ್ಣ ಸ್ಟುಡಿಯೋ ನಿರ್ಮಿಸಿ ತೆಲುಗು ಚಿತ್ರಗಳ ನಿರ್ಮಾಣಕ್ಕೆ ಬೆಂಬಲವಾಗಿ ನಿಂತಿದ್ದರು. ನಂದಮೂರಿ ರಾಮಾರಾವ್ ಅವರಿಗೆ ಸರಿಸಮನಾಗಿ ತೆಲುಗು ಚಿತ್ರರಂಗದಲ್ಲಿ ನೇಮು ಫೇಮು ಸಂಪಾದಿಸಿದ್ದರು.

ಎನ್‌ಟಿಆರ್ ಮಾಸ್ ಹೀರೊ ಆಗಿ ಕಮಾಲ್ ಮಾಡಿದ್ದರು. ಮುಂದೆ ರಾಜಕೀಯರಂಗಕ್ಕೂ ಬಂದು ಸಕ್ಸಸ್ ಕಂಡರು. ಆದರೆ ಎಎನ್‌ಆರ್ ರೊಮ್ಯಾಂಟಿಕ್, ಫ್ಯಾಮಿಲಿ ಓರಿಯಂಟೆಡ್ ಸಿನಿಮಾಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದರು. ಡಾ. ರಾಜ್‌ಕುಮಾರ್ ಜೊತೆಗೂ ಎಎನ್‌ಆರ್ ಆತ್ಮೀಯ ಒಡನಾಟ ಹೊಂದಿದ್ದರು. ಸದ್ಯ ಅವರ ಮಗ ನಾಗಾರ್ಜುನ ಹಾಗೂ ಮೊಮ್ಮಕ್ಕಳಾದ ನಾಗಚೈತನ್ಯ ಹಾಗೂ ಅಖಿಲ್ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.
250ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಗೇಶ್ವರರಾವ್ ನಟಿಸಿದ್ದರು. ತೆಲುಗು ಮಾತ್ರವಲ್ಲದೇ ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಮಿಂಚಿದ್ದರು. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಎಎನ್‌ಆರ್ ತಮ್ಮ 10ನೇ ವಯಸ್ಸಿನಲ್ಲೇ ನಾಟಕಗಳಲ್ಲಿ ನಟಿಸೋಕೆ ಆರಂಭಿಸಿದ್ದರು. ಆರಂಭದಲ್ಲಿ ಮಹಿಳೆ ವೇಷ ಧರಿಸಿ ಬಹುತೇಕ ನಾಟಕಗಳಲ್ಲಿ ನಟಿಸಿದ್ದರು. 1944ರಲ್ಲೇ ಚಿತ್ರರಂಗ ಪ್ರವೇಶಿಸಿದ್ದರು. ಮೊದಲ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ಮಿಂಚಿದ್ದರು.

ದಾದಾ ಸಾಹೇಬ್ ಫಾಲ್ಕೆ, ಪದ್ಮಶ್ರೀ, ಪದ್ಮಭೂಷಣ, ಪದ್ಮ ವಿಭೂಷಣ ಸೇರಿ ಸಾಕಷ್ಟು ಪ್ರಶಸ್ತಿ ಗೌರವಗಳು ನಾಗೇಶ್ವರರಾವ್ ಅವರಿಗೆ ಲಭಿಸಿತ್ತು. 1923ರಲ್ಲಿ ಜನಿಸಿದ್ದ ಎಎನ್‌ಆರ್ 2014ರಲ್ಲಿ ಕೊನೆಯುಸಿರೆಳೆದಿದ್ದರು. 'ಮನಂ' ಚಿತ್ರದಲ್ಲಿ ಅಕ್ಕಿನೇನಿ ಕುಟುಂಬದ 3 ತಲೆಮಾರಿನ ಕಲಾವಿದರು ನಟಿಸಿದ್ದರು. ದೇವದಾಸು, ಪ್ರೇಮ್ ನಗರ್, ಲೈಲಾ ಮಜ್ನು, ಅನಾರ್ಕಲಿ, ಮಾಯಾಬಜಾರ್ ಅವರು ನಟಿಸಿದ ಕೆಲ ಸೂಪರ್ ಹಿಟ್ ಸಿನಿಮಾಗಳು.
ಎನ್‌ಟಿಆರ್ ಜೊತೆಗೆ ಪೈಪೋಟಿ ಇದ್ದರೂ ಎಎನ್‌ಆರ್ ಒಳ್ಳೆ ಬಾಂಧವ್ಯ ಹೊಂದಿದ್ದರು. ಈ ಹಿಂದೆ 'ಕಥಾ ನಾಯಕುಡು' ಹಾಗೂ 'ಮಹಾನಾಯಕುಡು' ಹೆಸರಿನಲ್ಲಿ ಎನ್‌ಟಿಆರ್ ಬಯೋಪಿಕ್ ಸಿನಿಮಾ ಬಂದಿತ್ತು. ಇದೀಗ ನಾಗಾರ್ಜುನ ತಮ್ಮ ತಂದೆ ಬಯೋಪಿಕ್ ಬಗ್ಗೆ ಮಾತನಾಡಿದ್ದಾರೆ. ತಂದೆಯವರ ಕಥೆಯನ್ನು ಇಂಟ್ರೆಸ್ಟಿಂಗ್ ಆಗಿ ತೆರೆಮೇಲೆ ತರಬೇಕು. ಅದಕ್ಕಾಗಿ ಚರ್ಚೆ ನಡೀತಿದೆ ಎಂದಿದ್ದಾರೆ.
ಎರಡು ವರ್ಷದ ಹಿಂದೆ ಎಎನ್‌ಆರ್ ಬಯೋಪಿಕ್ ಬಗ್ಗೆ ನಾಗ್ ವಿಭಿನ್ನವಾಗಿ ಮಾತನಾಡಿದ್ದರು. ತಂದೆಯವರ ಕಥೆಯನ್ನು ಸಿನಿಮಾ ಮಾಡೋಕೆ ಸಾಧ್ಯವಿಲ್ಲ. ಬೇಕಿದ್ದರೆ ವೆಬ್ ಸೀರಿಸ್ ಮಾಡಬಹುದು ಎಂದಿದ್ದರು. ತಂದೆ ಜರ್ನಿಯಲ್ಲಿ ಏರಿಳಿತ ಇಲ್ಲ. ಅವರು ಪ್ರಯಾಣ ಮೇಲ್ಮುಖವಾಗಿಯೇ ಇತ್ತು. ಹಾಗಾಗಿ ಬಯೋಪಿಕ್ ಮಾಡಿದರೆ ಬೋರ್ ಎನಿಸಬಹುದು ಎಂದು ನಾಗಾರ್ಜುನ ತಿಳಿಸಿದ್ದರು.
ಒಂದು ವೇಳೆ ನಾಗೇಶ್ವರರಾವ್ ಬಯೋಪಿಕ್ ಸಿನಿಮಾ ಬಂದರೆ ಯಾರು ಅವರ ಪಾತ್ರಕ್ಕೆ ಸೂಕ್ತ ಎನ್ನುವ ಚರ್ಚೆ ನಡೀತಿದೆ. ಎನ್‌ಟಿಆರ್ ಬಯೋಪಿಕ್‌ನಲ್ಲಿ ಎಎನ್‌ಆರ್ ಆಗಿ ಮೊಮ್ಮಗ ಸುಮಂತ್ ನಟಿಸಿದ್ದರು. ತೆರೆಮೇಲೆ ಥೇಟ್ ತಾತನಂತೆ ಕಂಡಿದ್ದು ಮಾತ್ರವಲ್ಲ, ಅವರಂತೆ ನಟಿಸೋ ಪ್ರಯತ್ನ ಮಾಡಿದ್ದರು. ಒಂದು ವೇಳೆ ಬಯೋಪಿಕ್ ಸಿನಿಮಾ ಅಥವಾ ವೆಬ್ ಸೀರಿಸ್ ಮಾಡಿದರೂ ಸುಮಂತ್ ನಟಿಸಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ತಮ್ಮದೇ ಬ್ಯಾನರ್‌ನಲ್ಲಿ ನಾಗಾರ್ಜುನ ತಮ್ಮ ತಂದೆ ಬಯೋಪಿಕ್ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದರೆ. ಆದರೆ ಯಾವಾಗ ಎನ್ನುವುದು ಗೊತ್ತಿಲ್ಲ. ಅದಕ್ಕೆ ಸರಿಯಾದ ನಿರ್ದೇಶಕರು ಬೇಕು ಎಂದು ನಾಗ್ ಹೇಳುತ್ತಾ ಬರ್ತಿದ್ದಾರೆ.


Click it and Unblock the Notifications











