ಸಮಂತಾ ಮೇಲೆ ಆರೋಪ: ನಾನು ಹಾಗೆ ಹೇಳೇ ಇಲ್ಲ ಎಂದ ನಾಗಾರ್ಜುನ
ನಟಿ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇಧನದ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಇಬ್ಬರು ಪರಸ್ಪರ ಬೇರಾಗಿ ಮೂರು ತಿಂಗಳಾದರೂ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಈಗಲೂ ಇವರಿಬ್ಬರ ವಿಚ್ಛೇಧನದ ಬಗೆಗಿನ ಸುದ್ದಿಗಳು ಹರಿದಾಡುತ್ತಲೇ ಇವೆ.
ಇಂದು ಸಮಂತಾ ಹಾಗೂ ನಾಗ ಚೈತನ್ಯರ ವಿಚ್ಛೇಧನದ ಬಗ್ಗೆ ದೊಡ್ಡ ಸುದ್ದಿಯೊಂದು ಹರಿದಾಡಲು ಆರಂಭಿಸಿತ್ತು. ನಾಗ ಚೈತನ್ಯ ತಂದೆ, ನಟ ನಾಗಾರ್ಜುನ ಮಗನ ವಿಚ್ಛೇಧನದ ಬಗ್ಗೆ ಮಹತ್ವದ ವಿಷಯವೊಂದನ್ನು ಮಾತನಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು.
ವಿಚ್ಛೇಧನ ಬೇಕಿದ್ದಿದ್ದು ಸಮಂತಾಗೆ, ಆಕೆಯೇ ಮೊದಲು ವಿಚ್ಛೇಧನಕ್ಕೆ ಅರ್ಜಿ ಹಾಕಿದ್ದು, ನಾಗ ಚೈತನ್ಯ ಸಮಂತಾರ ಬೇಡಿಕೆಯನ್ನು ಮನ್ನಿಸಿ ವಿಚ್ಛೇಧನಕ್ಕೆ ಒಪ್ಪಿಕೊಂಡರು ಎಂದು ಹೇಳಿದ್ದಾರೆಂದು ಹಲವು ಮಾಧ್ಯಮಗಳು ವರದಿ ಮಾಡಿದವು.
ನಾಗಾರ್ಜುನ ಹೇಳಿಕೆ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಯಥಾವತ್ತು ಚರ್ಚೆಗಳು, ಪೋಸ್ಟ್‌ಗಳು ಆರಂಭವಾಗಿ, ಸಮಂತಾರನ್ನು ಟ್ರೋಲ್ ಮಾಡಲಾಯಿತು. ಇದೀಗ ನಾಗಾರ್ಜುನ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಟ್ವೀಟ್ ಮಾಡಿರುವ ನಾಗಾರ್ಜುನ
ಟ್ವೀಟ್ ಮಾಡಿರುವ ನಾಗಾರ್ಜುನ, ''ಸಮಂತಾ ಹಾಗೂ ನಾಗ ಚೈತನ್ಯರ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳು ಸುಳ್ಳು ಮತ್ತು ಅಸಂಬದ್ಧ. ಈ ಬಗ್ಗೆ ನಾನು ಹೇಳಿಕೆ ನೀಡಿಲ್ಲ. ಗಾಳಿಸುದ್ದಿಗಳನ್ನು ಸುದ್ದಿಗಳ ಹೆಸರಲ್ಲಿ ಪ್ರಸಾರ ಮಾಡಬಾರದು ಎಂದು ನಾನು ನನ್ನ ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿಕೊಳ್ಳುತ್ತೇನೆ'' ಎಂದಿದ್ದಾರೆ. ಜೊತೆಗೆ 'ಸುದ್ದಿ ನೀಡಿ ಗಾಳಿಸುದ್ದಿಯಲ್ಲ' ಎಂಬ ಹ್ಯಾಷ್‌ಟ್ಯಾಗ್ ಅನ್ನು ಸಹ ನಾಗಾರ್ಜುನ ಬಳಸಿದ್ದಾರೆ.

ನಾಗಾರ್ಜುನ ಹೇಳಿದ್ದಾಗಿ ವರದಿ
ನಾಲ್ಕು ವರ್ಷ ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು. ಇವರ ಸಂಸಾರ ಚೆನ್ನಾಗಿಯೇ ಇತ್ತು. ಬಿಡುವು ಸಿಕ್ಕಾಗಲೆಲ್ಲಾ ಔಟಿಂಗ್ ಹೋಗುತ್ತಿದ್ದರು. ಒಟ್ಟಿಗೆ ಜಿಮ್, ಪ್ರವಾಸ ಎಲ್ಲವರನ್ನೂ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದೇ ವಿಚಾರ ನಾಗಾರ್ಜುನಗೂ ಕಾಡುತ್ತಿದೆ. " ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು. ಆದರೆ, ಈ ನಿರ್ಧಾರವನ್ನು ದಿಢೀರನೇ ಯಾಕೆ ತೆಗೆದುಕೊಂಡರು ಎನ್ನುವುದು ನನಗೆ ಗೊತ್ತಿಲ್ಲ. 2021ರ ಹೊಸ ವರ್ಷವನ್ನು ಇಬ್ಬರೂ ಒಟ್ಟಿಗೆ ಸಂಭ್ರಮಿಸಿದ್ದಾರೆ. ಇದಾದ ಬಳಿಕ ಸಮಸ್ಯೆ ಎದುರಾಗಿರಬಹುದು." ಎಂದು ನಾಗಾರ್ಜುನ ಸಂದರ್ಶನವೊಂದರಲ್ಲಿ ಹೇಳಿದ್ದಾಗಿ ವರದಿಯಾಗಿತ್ತು. ಆದರೆ ನಾನು ಹಾಗೇನೂ ಹೇಳೇ ಇಲ್ಲ ಎಂದು ನಾಗಾರ್ಜುನ ಈಗ ಹೇಳಿದ್ದಾರೆ.

ಮಗನ ಬಗ್ಗೆ ಹೆಮ್ಮೆ ಇದೆ ಎಂದಿದ್ದ ನಾಗಾರ್ಜುನ
ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇಧನದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾಗಾರ್ಜುನ 'ನನಗೆ ನನ್ನ ಮಗನ ಹೆಮ್ಮೆಯೂ ಇದೆ'' ಎಂದ್ದರು. ''ವಿಚ್ಛೇಧನದ ಬಳಿಕ ನಾಗ ಚೈತನ್ಯ ವರ್ತನೆ ಕಂಡು ನನಗೆ ಹೆಮ್ಮೆ ಎನಿಸಿದೆ. ವಿಚ್ಛೇಧನ ಆದಾಗಿನಿಂದಲೂ ಆತ ಸಮಚಿತ್ತದಿಂದ ಇದ್ದಾನೆ. ವಿಚ್ಛೇಧನ ಬಹಳ ಕಠಿಣವಾದ ವಿಷಯ, ಹಲವರು ತಮ್ಮ ಸಂಯಮ ಕಳೆದುಕೊಂಡು ವರ್ತಿಸುತ್ತಾರೆ, ಆದರೆ ನಾಗ ಚೈತನ್ಯ ಹಾಗೆ ಮಾಡಿಲ್ಲ. ಮಾಮೂಲಿನಂತೆಯೇ ಇದ್ದಾನೆ. ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದಾನೆ'' ಎಂದಿದ್ದರು.

11 ವರ್ಷದ ಸಂಬಂಧಕ್ಕೆ ಅಂತ್ಯ ಹಾಡಿದ ಜೋಡಿ
ನಾಗ ಚೈತನ್ಯ ಮತ್ತು ಸಮಂತಾ ಇಬ್ಬರೂ ತಮ್ಮ 11 ವರ್ಷಗಳ ಪ್ರೀತಿಯನ್ನು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ವಿಚ್ಛೇಧನದ ಮೂಲಕ ಅಂತ್ಯಗೊಳಿಸಿದರು. 2010ರಿಂದಲೂ ಈ ಜೋಡಿ ಪ್ರೀತಿಸುತ್ತಿತ್ತು. 2017 ರಲ್ಲಿ ಮನೆಯರ ಒಪ್ಪಿಗೆ ಮೇರೆಗೆ ವಿವಾಹವಾದರು. ಬಳಿಕ ಕಳೆದ ವರ್ಷ ಅಕ್ಟೋಬರ್ ನಲ್ಲಿ ವಿಚ್ಛೇಧನವನ್ನು ಪ್ರಕಟಿಸಿದರು. ಪರಸ್ಪರ ಒಪ್ಪಿ ವಿಚ್ಛೇಧನ ಪಡೆಯುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಒಟ್ಟಿಗೆ ಪೋಸ್ಟ್ ಹಾಕಿದ್ದರು ಈ ಜೋಡಿ. ಈಗ ಇಬ್ಬರೂ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ 'ಶಾಕುಂತಲಂ', ಇಂಗ್ಲೀಷ್ ಸಿನಿಮಾ 'ಅರೇಂಜ್‌ಮೆಂಟ್ಸ್ ಆಫ್ ಲವ್', ಹಿಂದಿಯ ಎರಡು ಸಿನಿಮಾ, ತಮಿಳಿನ 'ಕಾತುವಾಕ್ಕು ರೆಂಡು ಕಾದಲ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾಗ ಚೈತನ್ಯ ನಟನೆಯ 'ಬಂಗಾರ್ರಾಜು' ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿ ಹಿಟ್ ಆಗಿದೆ. 'ಥ್ಯಾಂಕ್ ಯೂ' ಸಿನಿಮಾ ಏಪ್ರಿಲ್‌ನಲ್ಲಿ ಬಿಡುಗಡೆ ಆಗಲಿದೆ. ನಾಗಚೈತನ್ಯ ನಟಿಸಿರುವ ಹಿಂದಿಯ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಸಹ ಏಪ್ರಿಲ್‌ನಲ್ಲಿಯೇ ಬಿಡುಗಡೆ ಆಗಲಿದೆ.


Click it and Unblock the Notifications











