ನಟಿ ನಮಿತಾ ಮನೆಯಲ್ಲಿ 6 ಅಡಿ ಎತ್ತರ ನೀರು: ಅವಳಿ ಮಕ್ಕಳೊಂದಿಗೆ ಸಂಕಷ್ಟಕ್ಕೆ ಸಿಲುಕಿದ್ದ ನಟಿ
ಚೆನ್ನೈನಲ್ಲಿ ಮಿಗ್ಜಾಮ್ ಚಂಡಮಾರುತ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಭಾರೀ ಮಳೆಗೆ ಜನರ ಮನೆಗಳು ಜಲಾವೃತವಾಗಿವೆ. ಸಂಕಷ್ಟಕ್ಕೆ ಸಿಲುಕಿದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗುತ್ತಿದೆ. ರಸ್ತೆಗೆ ನೀರು ನುಗ್ಗಿದ್ದು, ಸಂಚಾರ ಕೂಡ ಅಸ್ತವ್ಯಸ್ಥಗೊಂಡಿದೆ.
ಸಾಮಾನ್ಯ ಜನರ ಪರಿಸ್ಥಿತಿ ಹೀಗಿದ್ದರೆ, ಅತ್ತ ಸೆಲೆಬ್ರೆಟಿಗಳು ಕೂಡ ಈ ಪ್ರವಾಹದಲ್ಲಿ ಸಿಲುಕಿದ್ದರು. ಬಾಲಿವುಡ್ ನಟ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಹಾಗೂ ತಮಿಳು ನಟ ವಿಷ್ಣು ವಿಶಾಲ್‌ರನ್ನು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡ ಸೇರಿ ಸುರಕ್ಷಿತ ಸ್ಥಳಕ್ಕೆ ಸೇರಿಸಿದ್ದಾರೆ.

ಆಮಿರ್ ಖಾನ್ ಹಾಗೂ ವಿಷ್ಣು ವಿಶಾಲ್ ಜೊತೆಗೆ ದಕ್ಷಿಣ ಭಾರತದ ಜನಪ್ರಿಯ ನಟಿ ನಮಿತಾ ಚಂಡಮಾರುತ ಮಿಗ್ಜಾಮ್ ಸೃಷ್ಠಿಸಿದ ಮಳೆಯಲ್ಲಿ ಸಿಲುಕಿದ್ದರು. ಚೆನ್ನೈ ಸಮೀಪದಲ್ಲಿರುವ ಪಲ್ಲಿಕರಣ ನಾರಾಯಣಪುರಂ ಕೆರೆ ಒಡೆದು ಮನೆಗೆ ನುಗ್ಗಿದೆ. ಇದರಿಂದ ನಟಿ ನಮಿತಾ ಮನೆ ಜಲಾವೃತಗೊಂಡಿದೆ.
ಕಳೆದೆರಡು ದಿನಗಳಿಂದ ಮಿಗ್ಜಾಮ್ ಚಂಡಮಾರುತ ಭಾರೀ ಅವಾಂತರವನ್ನೇ ಸೃಷ್ಠಿಸಿತ್ತು. ಬಿಡದಂತೆ ಸುರಿದ ಮಳೆ ಚೆನ್ನೈ ನಿವಾಸಿಗಳನ್ನು ಹೈರಾಣಿಗಿಸಿದೆ. 2015ರಲ್ಲಿ ಸುರಿದ ಮಳೆಗಿಂತ ಹೆಚ್ಚಿತ್ತು ಎಂದು ಚೆನ್ನೈ ಜನತೆ ಅಭಿಪ್ರಾಯ ಪಟ್ಟಿದ್ದಾರೆ. ಚೆನ್ನೈನ ಅರಂಗನಾಥನ್ ಸಬ್‌ವೇ, ಟಿ.ನಗರ ಸಬ್‌ವೇ, ಅಂಬತ್ತೂರು, ಚೂಲೈಮೇಡು, ವಲಸರವಕ್ಕಂ, ಅಣ್ಣಾನಗರ ಅಂತಹ ನಗರಗಳು ಜಲಾವೃತಗೊಂಡಿದೆ. ಅದರಲ್ಲೂ ಪಲ್ಲಿಕರಣದ ಲೇಕ್ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ನಿಲ್ಲಿಸಲಾಗಿದ್ದ ಎಲ್ಲಾ ಕಾರುಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ.

ಪ್ರವಾಹ ಹೆಚ್ಚಿದ್ದರಿಂದ ಪಳ್ಳಿಕರಣ ನಾರಾಯಣಪುರಂ ಕೆರೆಯ ದಡ ಒಡೆದಿದೆ. ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿದೆ. ಪಳ್ಳಿಕರಣ, ಸಮೀಪದ ದುರೈಪಕ್ಕಂ ಪ್ರದೇಶ ಜಲಾವೃತಗೊಂಡಿದೆ. ಪಳ್ಳಿಕರಣ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ದಕ್ಷಿಣ ಭಾರತದ ನಟಿ ನಮಿತಾ ವಾಸವಿದ್ದರು. ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ಅಪಾರ್ಟ್‌ಮೆಂಟ್ ಬಳಿಗೆ ರಕ್ಷಣಾ ತಂಡ ತಲುಪಲು ತಡವಾಗಿದ್ದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ವರದಿಯಾಗಿದೆ.
ನಟಿ ನಮಿತಾ ದಕ್ಷಿಣ ಭಾರತದ ಜನಪ್ರಿಯ ನಟಿ. ಕನ್ನಡ, ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. 2017ರಲ್ಲಿ ತಿರುಪತಿಯಲ್ಲಿ ಉದ್ಯಮಿ ವೀರೇಂದ್ರ ಚೌಧರಿಯನ್ನು ನಮಿತಾ ಮದುವೆ ಆಗಿದ್ದರು. ಈ ಜೋಡಿಗೆ ಇಬ್ಬರು ಅವಳಿ ಮಕ್ಕಳು ಜನಿಸಿದ್ದಾರೆ.


Click it and Unblock the Notifications











