ಅಕ್ಕಿನೇನಿ ಕುಟುಂಬಕ್ಕೆ ಬಾಲಕೃಷ್ಣ ಅಪಮಾನ: ಕುಟುಕಿದ ಅಕ್ಕಿನೇನಿ ಕುಡಿಗಳು
ತೆಲುಗು ಚಿತ್ರರಂಗ ಕೆಲವು ಕುಟುಂಬಗಳ ಹಿಡಿತದಲ್ಲಿರುವುದು ಹೊಸ ವಿಷಯವೇನಲ್ಲ. ಮೆಗಾಸ್ಟಾರ್ ಕುಟುಂಬ ಅಥವಾ ಕೋನಿಡೇಲ ಕುಟುಂಬ, ನಂದಮೂರಿ ಕುಟುಂಬ, ದಗ್ಗುಬಾಟಿ ಕುಟುಂಬ ಮತ್ತು ಅಕ್ಕಿನೇನಿ ಕುಟುಂಬಗಳು ತೆಲುಗು ಚಿತ್ರರಂಗದ ನಾಲ್ಕು ಪ್ರಮುಖ ಸ್ಥಂಭಗಳು.
ಈ ನಾಲ್ಕು ಕುಟುಂಬಗಳ ನಡುವೆ 'ಎಲ್ಲವೂ ಸರಿಯಾಗಿಲ್ಲ', ಆಗಾಗ್ಗೆ ಸಣ್ಣ ಪುಟ್ಟ ಮನಸ್ಥಾಪಗಳು ಬರುತ್ತಿರುತ್ತವೆ. ಈಗಲೂ ಹಾಗೆಯೇ ಆಗಿದೆ.
ಮೈಕು ಕೈಗೆ ಸಿಕ್ಕರೆ ಹಿಂದು ಮುಂದು ನೋಡದೆ ಮಾತನಾಡುವ ನಟ ಬಾಲಕೃಷ್ಣ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ತೆಲುಗಿನ ಜನಪ್ರಿಯ ಸಿನಿ ಕುಟುಂಬ ಅಕ್ಕಿನೇನಿ ಬಗ್ಗೆ ಅಪಮಾನಕರ ಮಾತೊಂದನ್ನು ಆಡಿದ್ದಾರೆ. ಅದೀಗ ವಿವಾದ ಎಬ್ಬಿಸಿದೆ.

ಅಕ್ಕಿನೇನಿ-ತೊಕ್ಕಿನೇನಿ ಎಂದ ಬಾಲಕೃಷ್ಣ
ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಂದಮೂರಿ ಬಾಲಕೃಷ್ಣ, ಅಲ್ಲಿ ತಮ್ಮ ಆತ್ಮೀಯರೊಬ್ಬರನ್ನು ನೆರೆದಿದ್ದ ಪ್ರೇಕ್ಷಕರಿಗೆ ಪರಿಚಯಿಸುತ್ತಾ, ಈತ ಸೆಟ್‌ನಲ್ಲಿ ಇದ್ದನೆಂದರೆ ನನಗೆ ಒಳ್ಳೆಯ ಟೈಂ ಪಾಸ್, ಹಳೆಯ ವಿಷಯಗಳನ್ನು ಮಾತನಾಡುತ್ತಾ ಕೂತುಬಿಡುತ್ತೇವೆ, ಎನ್‌ಟಿಆರ್, ಅವರ ಡೈಲಾಗ್‌ಗಳು, ಅಕ್ಕಿನೇನಿ-ತೊಕ್ಕಿನೇನಿ ಎಂದುಕೊಂಡು ಮಾತು ನಡೆಯುತ್ತಲೇ ಇರುತ್ತದೆ ಎಂದುಬಿಟ್ಟಿದ್ದಾರೆ.

ತೆಲುಗು ಚಿತ್ರರಂಗದ ದಂತಕತೆ ಅಕ್ಕಿನೇನಿ ನಾಗೇಶ್ವರ ರಾವ್
ಇದು ಸ್ವತಃ ಅಕ್ಕಿನೇನಿ ಕುಟುಂಬಕ್ಕೆ ಹಾಗೂ ಅಕ್ಕಿನೇನಿ ಕುಟುಂಬದ ಅಭಿಮಾನಿಗಳಿಗೆ ತೀವ್ರ ಅಸಮಾಧಾನ ತರಿಸಿದೆ. ತೆಲುಗು ಚಿತ್ರರಂಗದ ದಂತಕತೆ ಅಕ್ಕಿನೇನಿ ನಾಗೇಶ್ವರ ರಾವ್, ಖ್ಯಾತ ನಟ ನಾಗಾರ್ಜುನ ಈಗಿನ ಯುವನಟರಾದ ಅಕ್ಕಿನೇನಿ ನಾಗಚೈತನ್ಯ ಹಾಗೂ ಅಖಿಲ್ ಅವರುಗಳು ಇದೇ ಕುಟುಂಬದ ಕುಡಿಗಳು.

ಸಾಮಾಜಿಕ ಜಾಲತಾಣದಲ್ಲಿ ಖಂಡನೆ
ಅಕ್ಕಿನೇನಿ ನಾಗೇಶ್ವರರಾವ್ ಅಂಥಹಾ ಮಹಾನ್ ನಟರ ಕುಟುಂಬವನ್ನು 'ತೊಕ್ಕಿನೇನಿ' ಎಂಬ ಪದ ಬಳಸಿ ನಿಂದಿಸಿರುವುದನ್ನು ಅಕ್ಕಿನೇನಿ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ. ಅಕ್ಕಿನೇನಿ ಕುಟುಂಬದ ಕುಡಿಗಳಾದ ನಾಗ ಚೈತನ್ಯ ಹಾಗೂ ಅಖಿಲ್ ಅಕ್ಕಿನೇನಿ ಅವರುಗಳು ಸಹ ಬಾಲಕೃಷ್ಣರ ಈ ಬಿಡುಬೀಸು ಹೇಳಿಕೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ನಾಗಚೈತನ್ಯ, ಅಖಿಲ್ ಅಕ್ಕಿನೇನಿ ಪೋಸ್ಟ್
''ನಂದಮೂರಿ ತಾರಕರಾಮಾ ರಾವ್, ಅಕ್ಕಿನೇನಿ ನಾಗೇಶ್ವರ ರಾವ್ ಹಾಗೂ ಎಸ್‌ವಿ ರಂಗಾರಾವ್ ಅವರುಗಳು ತೆಲುಗು ಕಲಾದೇವಿಯ ಮುದ್ದು ಮಕ್ಕಳು. ಅವರನ್ನು ಅಪಮಾನಿಸುವುದು ನಮ್ಮನ್ನು ನಾವೇ ಅಪಮಾನಿಸಿಕೊಂಡಂತೆ'' ಎಂದು ಯಾರ ಹೆಸರೂ ಉಲ್ಲೇಖಿಸದೆ ನಾಗಚೈತನ್ಯ ಹಾಗೂ ಅಖಿಲ್ ಅಕ್ಕಿನೇನಿ ಅವರುಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಬಾಲಕೃಷ್ಣರ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ಬಾಲಕೃಷ್ಣ ಕ್ಷಮೆ ಕೇಳಬೇಕೆಂದು ಅಕ್ಕಿನೇನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಿದ್ದಾರೆ.


Click it and Unblock the Notifications











