ಬಿಡುಗಡೆಗೆ ಮುನ್ನವೇ ಬ್ಲಾಕ್‌ಬಸ್ಟರ್ ಎನಿಸಿಕೊಂಡ 'ಅಖಂಡ' ಸಿನಿಮಾ
ಕೆಲವು ಸಿನಿಮಾಗಳಿರುತ್ತವೆ, ಅವು ಸೆಟ್ಟೇರಿದಾಗಲೇ ಗೊತ್ತಾಗಿಬಿಡುತ್ತದೆ ಸೂಪರ್ ಹಿಟ್ ಪಕ್ಕಾ ಎಂದು. ಇನ್ನು ಕೆಲ ಸಿನಿಮಾಗಳು ಚಿತ್ರೀಕರಣ ಮುಗಿವ ವೇಳೆಗಾಗಲೇ ಮಾರಾಟವೇ ಆಗಿಬಿಡುತ್ತವೆ. ಇನ್ನು ಕೆಲವು ಸಿನಿಮಾಗಳು ಬಿಡುಗಡೆಗೆ ಮುನ್ನವೇ ಬ್ಲಾಕ್‌ಬಸ್ಟರ್ ಎನಿಸಿಕೊಳ್ಳುತ್ತವೆ. ಅಂಥ ಸಿನಿಮಾ ಸಾಲಿಗೆ ಸೇರಿದೆ ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ' ಸಿನಿಮಾ.
ಬಾಲಕೃಷ್ಣ ನಟನೆಯ 'ಅಖಂಡ' ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಆದರೆ ಆಗಲೇ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ. ಕಾರಣ ಸಿನಿಮಾಕ್ಕೆ ಹೂಡಿದ್ದ ಬಂಡವಾಳದ ಮೇಲೆ ಲಾಭ ಈಗಾಗಲೇ ನಿರ್ಮಾಪಕ ಜೇಬು ಸೇರಿಬಿಟ್ಟಿದೆಯಂತೆ. ಹೀಗೆಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
'ಅಖಂಡ' ಸಿನಿಮಾ ಡಿಸೆಂಬರ್ 02 ರಂದು ಬಿಡುಗಡೆ ಆಗಲಿದೆ. ಆದರೆ ಈಗಾಗಲೇ ಸಿನಿಮಾ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಸಿನಿಮಾಕ್ಕೆ ಹಾಕಿದ್ದ ಬಂಡವಾಳ ಲಾಭವಾಗಿ ಮರಳಿ ನಿರ್ಮಾಪಕರನ್ನು ಸೇರಿದೆ. ಸಿನಿಮಾವು ಈಗಾಗಲೇ 59 ಕೋಟಿ ಬ್ಯುಸಿನೆಸ್ ಮಾಡಿದೆ!

ಆಂಧ್ರ-ತೆಲಂಗಾಣದಲ್ಲಿ 51 ಕೋಟಿಗೆ ಮಾರಾಟ
ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಸಿನಿಮಾ ಬಿಡುಗಡೆ ಹಕ್ಕಿನಿಂದ ನಿರ್ಮಾಪಕರಿಗೆ ಬರೋಬ್ಬರಿ 51 ಕೋಟಿ ಲಭಿಸಿದೆ. ಇದು ಸಾಮಾನ್ಯದ ಮೊತ್ತವೇನೂ ಅಲ್ಲ. ನಿಜಾಮ್ ಪ್ರದೇಶ ಹಾಗೂ ಕರಾವಳಿ ಭಾಗದಲ್ಲಿ ಸಿನಿಮಾವು 11 ಮತ್ತು 12 ಕೋಟಿಗೆ ಮಾರಾಟವಾಗಿದೆ. ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವ ಬಾಲಕೃಷ್ಣರ ಮೊದಲ ಸಿನಿಮಾ ಇದು. ಭಾರತದ ಇತರೆ ಭಾಗಗಳು ಹಾಗೂ ವಿದೇಶಿ ಬಿಡುಗಡೆಯಿಂದ ಒಂಬತ್ತು ಕೋಟಿ ಹಣವನ್ನು ಸಿನಿಮಾವು ಗಳಿಸಿದೆ.

ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ ಸಿನಿಮಾ
ಈ ಲೆಕ್ಕ ಕೇವಲ ಸಿನಿಮಾ ಬಿಡುಗಡೆ ಹಕ್ಕಿನ ಮಾರಾಟದ್ದು. ಸಿನಿಮಾದ ಟಿವಿ ಹಕ್ಕು, ಒಟಿಟಿ ಪ್ರಸಾರ ಹಕ್ಕು, ಆಡಿಯೋ, ಇನ್ನಿತರೆಗಳನ್ನು ಸೇರಿಸಿದರೆ ಸಿನಿಮಾ ಈಗಾಗಲೇ 7೦ ಕೋಟಿ ಕಲೆಕ್ಷನ್ ದಾಟಿ ಆಗಿದೆ. ಆ ಮೂಲಕ ಬ್ಲಾಕ್ ಬಸ್ಟರ್ ಪಟ್ಟವನ್ನು ಗಳಿಸಿಕೊಂಡಿದ್ದಾಗಿದೆ. ಸಿನಿಮಾವು ಡಿಸೆಂಬರ್ 03 ರಂದು ಬಿಡುಗಡೆ ಆಗುತ್ತಿದ್ದು, ಅಂದು ಸಹ ದೊಡ್ಡ ಓಪನಿಂಗ್ ಅನ್ನು ಸಿನಿಮಾಕ್ಕೆ ಧಕ್ಕಬಹುದೆಂಬ ನಿರೀಕ್ಷೆ ಚಿತ್ರತಂಡಕ್ಕಿದೆ.

ಭಿನ್ನ ಗೆಟಪ್‌ನಲ್ಲಿ ನಟ ಬಾಲಕೃಷ್ಣ
'ಅಖಂಡ' ಸಿನಿಮಾದಲ್ಲಿ ಬಾಲಕೃಷ್ಣ ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾ ತಾಂತ್ರಿಕನಾಗಿ ಹಾಗೂ ಸಾಮಾನ್ಯ ವ್ಯಕ್ತಿಯಾಗಿ ಎರಡು ಭಿನ್ನ ಶೇಡ್‌ನಲ್ಲಿ ಬಾಲಕೃಷ್ಣ ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಟ್ರೇಲರ್ ಅನ್ನು ಎರಡು ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಿನಿಮಾದ ಎರಡು ಹಾಡುಗಳು ಬಿಡುಗಡೆ ಆಗಿದ್ದು ಹಾಡುಗಳು ಸಹ ಸೂಪರ್ ಹಿಟ್ ಆಗಿವೆ. ಈ ಸಿನಿಮಾದ ಬಗ್ಗೆ ಸ್ವತಃ ಬಾಲಕೃಷ್ಣ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗೆಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.

ಬೋಯಪಾಟಿ ಶ್ರೀನಿ ಜೊತೆಗೆ ಇದು ಮೂರನೇ ಸಿನಿಮಾ
'ಅಖಂಡ' ಸಿನಿಮಾವನ್ನು ಬೊಯಪಾಟಿ ಶ್ರೀನು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಪ್ರಗ್ಯಾ ಜೈಸ್ವಾಲ್ ನಟಿಸಿದ್ದಾರೆ. ಜಗಪತಿ ಬಾಬು, ಶ್ರೀಕಾಂತ್, ಕನ್ನಡದ ಅವಿನಾಶ್ ವಿಲನ್‌ಗಳಾಗಿ ಕಾಣಿಸಿಕೊಂಡಿದ್ದಾರೆ. ನಟ ಸಾಯಿಕುಮಾರ್ ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದರೆ, ನಿರ್ಮಾಣ ಮಾಡಿರುವುದು ಮಿರ್ಯಾಲ ರವೀಂದ್ರ ರೆಡ್ಡಿ. ಈ ಹಿಂದೆ ಬೋಯಪಾಟಿ ಶ್ರೀನು ನಿರ್ದೇಶನದ 'ಲೆಜೆಂಡ್' ಹಾಗೂ 'ಸಿಂಹಾ' ಸಿನಿಮಾಗಳಲ್ಲಿ ಬಾಲಕೃಷ್ಣ ನಟಿಸಿದ್ದರು. ಎರಡೂ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. 'ಅಖಂಡ' ಸಿನಿಮಾದ ಬಳಿಕ ಬಾಲಕೃಷ್ಣ ತಮ್ಮ 107ನೇ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡುತ್ತಿದ್ದು, ಯುವ ನಟಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ನಡುವೆ ಇದೇ ಮೊದಲ ಬಾರಿಗೆ ಟಾಕ್ ಶೋ ಒಂದನ್ನು ಸಹ ಬಾಲಕೃಷ್ಣ ನಡೆಸಿಕೊಡುತ್ತಿದ್ದಾರೆ. 'ಅನ್‌ಸ್ಟಾಪೆಬಲ್ ಬಾಲಕೃಷ್ಣ' ಹೆಸರಿನ ಟಾಕ್ ಶೋ ಅನ್ನು 'ಆಹಾ' ತೆಲುಗು ಒಟಿಟಿಗಾಗಿ ಬಾಲಕೃಷ್ಣ ನಡೆಸುತ್ತಿದ್ದು, ತೆಲುಗು ಚಿತ್ರರಂಗದ ಅತಿಥಿಗಳನ್ನು ಕರೆಸಿ ಖಾರವಾದ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆಯುತ್ತಿದ್ದಾರೆ ಬಾಲಕೃಷ್ಣ.


Click it and Unblock the Notifications











