ಪಾತ್ರ ಇಷ್ಟವಿಲ್ಲದಿದ್ದರೆ ರಿಜೆಕ್ಟ್ ಮಾಡಬಹುದು, ಯಾರು ಗನ್ ಇಟ್ಟು ಬಲವಂತ ಮಾಡಲ್ಲ; ನಂದಿನಿ ರೆಡ್ಡಿ
ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ 3ನೇ ವಾರವೂ ಯಶಸ್ವಿ ಪ್ರದರ್ಶನ ಕಾಣ್ತಿದೆ. ಇತ್ತೀಚೆಗೆ ಚಿತ್ರದಲ್ಲಿ ಒಂದಷ್ಟು ಬದಲಾವಣೆ ಪ್ರದರ್ಶನ ಮಾಡಲಾಗ್ತಿದೆ. ಹಾಗಾಗಿ ಈಗಾಗಲೇ ಸಿನಿಮಾ ನೋಡಿದವರು ಮತ್ತೆ ಚಿತ್ರಮಂದಿರಗಳ ಕಡೆ ಮುಖ ಮಾಡಿದ್ದಾರೆ. ಇದೆಲ್ಲದರ ನಡುವೆ ಜಾನ್ವಿ ಕಪೂರ್ ಪಾತ್ರದ ವಿವಾದ ಮಾತ್ರ ತಣ್ಣಗಾಗಿಲ್ಲ. ಇದೇ ವಿಚಾರದ ಬಗ್ಗೆ ಮಹಿಳಾ ನಿರ್ದೇಶಕಿ ನಂದಿನಿ ರೆಡ್ಡಿ ಮಾತನಾಡಿದ್ದಾರೆ.
'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ಪಾತ್ರ ಪೋಷಣೆ ಬಗ್ಗೆ ಚಕಾರ ಎದ್ದಿತ್ತು. ಕೆಲ ಸನ್ನಿವೇಶಗಳಲ್ಲಿ ಆಕೆಯನ್ನು ತೋರಿಸಿರುವ ಕ್ಯಾಮರಾ ಆಂಗಲ್‌ಗಳ ಬಗ್ಗೆ ಕೂಡ ಅಸಮಾಧಾನ ವ್ಯಕ್ತವಾಗಿತ್ತು. ಕೂಡಲೇ ನಿರ್ದೇಶಕ ಬುಚ್ಚಿಬಾಬು ಕ್ಷಮೆ ಕೇಳಿದ್ದರು. ಅಂತಹ ಸನ್ನಿವೇಶಗಳನ್ನು ತೆಗೆಯುವುದಾಗಿ ಹೇಳಿದ್ದರು. ಈಗ ವಿವಾದಾತ್ಮಕ ದೃಶ್ಯಗಳನ್ನು ತೆಗೆದು ಬೇರೆ ಒಂದಷ್ಟು ಒಳ್ಳೆ ದೃಶ್ಯಗಳನ್ನು ಸೇರಿಸಿದ್ದಾರೆ. ಇನ್ನು ವಿವಾದದಲ್ಲಿ ಯಾರದ್ದು ತಪ್ಪು? ಯಾರದ್ದು ಸರಿ? ಎನ್ನುವ ಚರ್ಚೆ ಕೂಡ ನಡೀತಿದೆ.

ಹೀಗೆ ಪಾತ್ರ ಪೋಷಣೆ ಮಾಡಿ ಬರೆದ ಬರಹಗಾರರದ್ದು ತಪ್ಪಾ? ಒಪ್ಪಿ ನಟಿಸಿದ್ದ ನಟಿಯ ತಪ್ಪಾ? ಎನ್ನುಚ ವಾದ ಮುನ್ನಲೆಗೆ ಬಂದಿದೆ. ಇದೇ ವಿಚಾರದ ಬಗ್ಗೆ ನಟಿಯರಾದ ಆಶಿಕಾ ರಂಗನಾಥ್ ಹಾಗೂ ಡಿಂಪಲ್ ಹಯಾತಿ ಕೂಡ ಪ್ರತಿಕ್ರಿಯಿಸಿದ್ದರು. ಇದರಲ್ಲಿ ಫಿಲ್ಮ್ ಮೇಕರ್ಸ್ ಮಾಡುವುದು ತಪ್ಪು ಎನ್ನುವ ಅರ್ಥದಲ್ಲಿ ವಾದಿಸಿದ್ದರು. ನಟಿಸುವ ಮುನ್ನ ಕಥೆ ಹೇಳಿರುತ್ತಾರೆ, ಎಂತಹ ದೃಶ್ಯಗಳಿವೆ ಎಂದು ನಟಿಗೆ ಮೊದಲೇ ಗೊತ್ತಿರುತ್ತದೆ. ಚಿತ್ರೀಕರಣದ ಸಮಯದಲ್ಲಿ ಕೂಡ ಯಾವ ರೀತಿ ಚಿತ್ರಿಸಿದ್ದಾರೆ ಎಂದು ಕಲಾವಿದರ ಮಾನಿಟರ್ ನೋಡಬಹುದು. ಹಾಗಾಗಿ ಜಾನ್ವಿ ಕಪೂರ್ ಹೇಗೆ ನಟಿಸೋಕೆ ಒಪ್ಪಿದ್ರು? ಎಂದು ಕೆಲವರು ಕೇಳುತ್ತಿದ್ದಾರೆ. ಇದೇ ಅರ್ಥದಲ್ಲಿ ನಿರ್ದೇಶಕಿ ನಂದಿನಿ ರೆಡ್ಡಿ ಸಹ ಮಾತನಾಡಿದ್ದಾರೆ.
ಕಲಾವಿದರಿಗೆ ಎಲ್ಲಾ ಗೊತ್ತಿದ್ದು ನಟಿಸುತ್ತಾರೆ. ಇಲ್ಲಿ ಫಿಲ್ಮ್ ಮೇಕರ್ಸ್ ತಪ್ಪೇನಿದೆ. ಅವಕಾಶ ಬೇಡ ಅಂದ್ರೆ ತಿರಸ್ಕರಿಸಬಹುದು. ಒಪ್ಪಿ ನಟಿಸಿದ ಮೇಲೆ ತಪ್ಪು ಎಲ್ಲಿಂದ ಬಂತು ಎನ್ನುವ ಅರ್ಥದಲ್ಲಿ ನಂದಿನಿ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಚಿತ್ರವನ್ನು ನಂದಿನಿ ರೆಡ್ಡಿ ನಿರ್ದೇಶಿಸಿ ಗೆದ್ದಿದ್ದಾರೆ. ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಸಿನಿಮಾ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ABN Chitrajyothi ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡುತ್ತಾ 'ಪೆದ್ದಿ' ವಿವಾದದ ಬಗ್ಗೆ ನಂದಿನಿ ರೆಡ್ಡಿ ಉತ್ತರಿಸಿದ್ದಾರೆ.

"ನಟಿಯರಿಗೆ ತಮ್ಮ ಪಾತ್ರಗಳ ಆಯ್ಕೆಯಲ್ಲಿ ಸ್ವಾತಂತ್ರ್ಯವಿಲ್ಲ ಅಂತಾರೆ, ಆದರೆ ನಾನು ಅದನ್ನು ಒಪ್ಪುವುದಿಲ್ಲ. ಅನೇಕ ನಟಿಯರು ಪಾತ್ರದಲ್ಲಿ ತಮಗೆ ತೃಪ್ತಿ ಇಲ್ಲದಿದ್ದಾಗ ಅವಕಾಶಗಳನ್ನು ಬಹಿರಂಗವಾಗಿ ತಿರಸ್ಕರಿಸುವುದನ್ನು ನಾವು ನೋಡಿದ್ದೇವೆ. ನಿರ್ದೇಶಕರು ಕಥೆ ಹೇಳುವಾಗ ಪಾತ್ರದ ಪ್ರತಿಯೊಂದು ಅಂಶವನ್ನು ವಿವರಿಸುತ್ತಾರೆ. ಎಲ್ಲಾ ಕೇಳಿದ ಬಳಿಕ ಕಲಾವಿದರು ನಟಿಸೋಕೆ ಒಪ್ಪುತ್ತಾರೆ. ಆದ್ದರಿಂದ, ಎಲ್ಲಾ ಆರೋಪಗಳನ್ನು ಫಿಲ್ಮ್ ಮೇಕರ್ಸ್ ಮೇಲೆ ಹೊರಿಸುವುದು ಸರಿಯಲ್ಲ. ಕಲಾವಿದರು ಸಂಭಾವನೆ ಪಡೆದು ತಮ್ಮ ಇಷ್ಟ ಇದ್ದಾಗ ಮಾತ್ರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಯಾರು ಕೂಡ ಗನ್ ಪಾಯಿಂಟ್‌ನಲ್ಲಿ ನಟಿಸುವಂತೆ ಬಲವಂತಪಡಿಸುತ್ತಿಲ್ಲ" ಎಂದು ನಂದಿನಿ ರೆಡ್ಡಿ ಹೇಳಿದ್ದಾರೆ.
ಮಹಿಳಾ ನಿರ್ದೇಶಕಿ ಹೀಗೆ ಹೇಳಿರುವುದು ಭಾರೀ ವೈರಲ್ ಆಗ್ತಿದೆ. ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ್ದ ನಂದಿನಿ ರೆಡ್ಡಿ "ಪ್ರೇಕ್ಷಕರು ಬದಲಾಗಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಫಿಲ್ಮ್ ಮೇಕರ್ಸ್ ಸಿನಿಮಾ ಮಾಡಬೇಕು. ಸಿನಿಮಾ ಸಮಾಜದ ಕನ್ನಡಿ. ಅದಕ್ಕೆ ತಕ್ಕಂತೆ ನಾವು ಸಿನಿಮಾ ಮಾಡಬೇಕಾಗುತ್ತದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ತಪ್ಪಿನ ಅರಿವಾಗುತ್ತಿದ್ದಂತೆ ಬುಚ್ಚಿಬಾಬು ಕ್ಷಮೆ ಕೇಳಿದ್ರಲ್ಲ. ಇದರಿಂದ ನಾವು ಪಾಠ ಕಲಿಯಬೇಕು. ಇದು ಒಂದು ಅರ್ಥದಲ್ಲಿ ಒಳ್ಳೆಯದೇ ಆಯ್ತಲ್ಲ" ಎಂದಿದ್ದರು.


Click it and Unblock the Notifications