ರಾಮನವಮಿ ಪ್ರಯುಕ್ತ ಬಿಡುಗಡೆಗೊಂಡ 4 ಚಿತ್ರಗಳ ಪೈಕಿ ಕರ್ನಾಟಕದಲ್ಲಿ ವಾರಾಂತ್ಯಕ್ಕೆ ಹೆಚ್ಚು ಗಳಿಸಿದ ಚಿತ್ರ ಯಾವುದು?
ಕಳೆದ ವಾರ ಗುರುವಾರ ಹಾಗೂ ಶುಕ್ರವಾರ ಎರಡೂ ದಿನಗಳೂ ಸಹ ಚಿತ್ರಗಳು ಬಿಡುಗಡೆಗೊಂಡಿವೆ. ಶುಕ್ರವಾರ ಸಾಮಾನ್ಯವಾಗಿ ಸಿನಿಮಾ ದಿನವಾದ ಕಾರಣ ಕೆಲ ಚಿತ್ರಗಳು ಬಿಡುಗಡೆಗೊಂಡರೆ, ಗುರುವಾರ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಹಲವು ಚಿತ್ರಗಳು ಬಿಡುಗಡೆಗೊಂಡವು. ಕನ್ನಡದಲ್ಲಿ ಡಾಲಿ ಧನಂಜಯ್ ನಟನೆಯ ಬಹು ನಿರೀಕ್ಷಿತ ಚಿತ್ರ ಗುರುದೇವ್ ಹೊಯ್ಸಳ ಚಿತ್ರ ತೆರೆಗೆ ಬಂದರೆ, ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಬಹು ನಿರೀಕ್ಷಿತ ಸಿನಿಮಾ ದಸರಾ ತೆರೆಗೆ ಬಂತು.
ಇವುಗಳ ಜತೆಗೆ ಕನ್ನಡದ ಮಫ್ತಿ ಚಿತ್ರದ ರಿಮೇಕ್ ಚಿತ್ರವಾದ ಸಿಳಂಬರಸನ್ ನಟನೆಯ ತಮಿಳು ಚಿತ್ರ ಪತ್ತು ತಲ ಹಾಗೂ ತಮಿಳಿನ ಖೈದಿ ಚಿತ್ರದ ರಿಮೇಕ್ ಆದ ಅಜಯ್ ದೇವಗನ್ ನಟನೆಯ ಹಿಂದಿ ಚಿತ್ರ ಭೋಳಾ ಚಿತ್ರಗಳು ತೆರೆಗೆ ಬಂದವು. ಹೀಗೆ ಶ್ರೀ ರಾಮನವಮಿ ಹಬ್ಬದ ದಿನದಂದು ಎರಡು ರಿಮೇಕ್ ಹಾಗೂ ಎರಡು ಸ್ವಮೇಕ್ ಚಿತ್ರಗಳು ಬಿಡುಗಡೆಗೊಂಡವು.

ಇನ್ನು ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರಿದ್ದು, ಇಲ್ಲಿ ಈ ನಾಲ್ಕೂ ಚಿತ್ರಗಳೂ ಸಹ ದೊಡ್ಡ ಬಿಡುಗಡೆಯನ್ನೇ ಕಂಡಿವೆ. ಹೇಳಬೇಕೆಂದರೆ ಮೊದಲ ದಿನ ಕನ್ನಡದ ಗುರುದೇವ್ ಹೊಯ್ಸಳ ಚಿತ್ರಕ್ಕಿಂತ ತೆಲುಗಿನ ದಸರಾ ಚಿತ್ರಕ್ಕೆ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳು ಸಿಕ್ಕಿದವು ಹಾಗೂ ದೊಡ್ಡ ಓಪನಿಂಗ್ ಕೂಡ ಸಿಕ್ಕಿತು. ಹೀಗೆ ಒಳ್ಳೆಯ ಓಪನಿಂಗ್ ಪಡೆದುಕೊಂಡ ಈ ನಾಲ್ಕು ಚಿತ್ರಗಳ ಪೈಕಿ ಮೊದಲ ವಾರಾಂತ್ಯಕ್ಕೆ ಕರ್ನಾಟಕದಲ್ಲಿ ಯಾವ ಚಿತ್ರ ಹೆಚ್ಚು ಗಳಿಕೆ ಮಾಡಿದೆ ಎಂಬ ಮಾಹಿತಿಯನ್ನು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ತಿಳಿಸಿದ್ದಾರೆ. ಈ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.
ಶ್ರೀ ರಾಮನವಮಿ ಪ್ರಯುಕ್ತ ಬಿಡುಗಡೆಗೊಂಡ ಚಿತ್ರಗಳ ಪೈಕಿ ನಾನಿ ನಟನೆಯ ತೆಲುಗು ಚಿತ್ರ ದಸರಾ ರಾಜ್ಯದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ. ಮೊದಲ ದಿನ ರಾಜ್ಯದಲ್ಲಿ 2.7 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದ ದಸರಾ ಚಿತ್ರ ಮೊದಲ ನಾಲ್ಕು ದಿನಗಳಲ್ಲಿ 6.65 ಕೋಟಿ ಗಳಿಕೆ ಮಾಡಿದೆ.
ಇನ್ನು ಕನ್ನಡದ ಗುರುದೇವ್ ಹೊಯ್ಸಳ ಚಿತ್ರ ರಾಜ್ಯದಲ್ಲಿ ಎಷ್ಟು ಗಳಿಕೆ ಮಾಡಿದೆ ಎಂಬ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೆ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಚಿತ್ರ ಎಷ್ಟು ಗಳಿಸಿದೆ ಎಂಬುದನ್ನು ತಮ್ಮ ವೆಬ್ ತಾಣಗಳಲ್ಲಿ ಹಂಚಿಕೊಂಡಿವೆ. ಇವರ ಪ್ರಕಾರ ಗುರುದೇವ್ ಹೊಯ್ಸಳ ಚಿತ್ರ ಮೊದಲ ನಾಲ್ಕು ದಿನಗಳಲ್ಲಿ 4 ಕೋಟಿ ಗಳಿಕೆ ಮಾಡಿದೆ.

ಇನ್ನು ಖೈದಿ ಚಿತ್ರದ ರಿಮೇಕ್ ಭೋಳಾ ಮೊದಲ ನಾಲ್ಕು ದಿನಗಳಲ್ಲಿ ಕರ್ನಾಟಕದಲ್ಲಿ 2.95 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಅತ್ತ ಸಿಳಂಬರಸನ್ ನಟನೆಯ ಪತ್ತು ತಲ ಚಿತ್ರ ಮೊದಲ ನಾಲ್ಕು ದಿನಗಳಲ್ಲಿ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 1.7 ಕೋಟಿ ಕಲೆಕ್ಷನ್ ಮಾಡಿದೆ.
ಇನ್ನು ರಾಜ್ಯದಲ್ಲಿ ಈ ರೀತಿಯಾದರೆ ದಸರಾ ವಿಶ್ವದಾದ್ಯಂತ ಮೊದಲ ನಾಲ್ಕು ದಿನಗಳಲ್ಲಿ 87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ತನ್ನೊಟ್ಟಿಗೆ ಬಿಡುಗಡೆಯಾದ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿದೆ. ಭೋಳಾ ಚಿತ್ರ 44 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಪತ್ತು ತಲ ಚಿತ್ರ 40 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.


Click it and Unblock the Notifications











