ಬೆಂಗಳೂರಿನಲ್ಲಿ ದಸರಾ ಅಬ್ಬರ; ಕರ್ನಾಟಕ ಫಸ್ಟ್ ಡೇ ಗಳಿಕೆಯಲ್ಲಿ ಚಿರಂಜೀವಿ ಚಿತ್ರವನ್ನೇ ಹಿಂದಿಕ್ಕಿದ ನಾನಿ!
ನಿನ್ನೆ ( ಮಾರ್ಚ್ 30 ) ರಾಮನವಮಿ ಪ್ರಯುಕ್ತ ವಿವಿಧ ಚಿತ್ರರಂಗಗಳ ಹಲವು ಚಿತ್ರಗಳು ತೆರೆಗೆ ಬಂದಿವೆ. ಕನ್ನಡದಲ್ಲಿ ಡಾಲಿ ಧನಂಜಯ್ ನಟನೆಯ ಬಹು ನಿರೀಕ್ಷಿತ ಚಿತ್ರ ಗುರುದೇವ್ ಹೊಯ್ಸಳ ಚಿತ್ರ ತೆರೆಗೆ ಬಂದಿದ್ದು, ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ದಸರಾ, ತಮಿಳಿನಲ್ಲಿ ಮಫ್ತಿ ಚಿತ್ರದ ರಿಮೇಕ್ ಪತ್ತು ತಲ ಹಾಗೂ ಹಿಂದಿಯಲ್ಲಿ ಖೈದಿ ರಿಮೇಕ್ ಭೋಲಾ ಚಿತ್ರಗಳು ತೆರೆಗೆ ಬಂದಿವೆ.
ಗುರುವಾರವಾದರೂ ಸಹ ಈ ಎಲ್ಲಾ ಚಿತ್ರಗಳು ಉತ್ತಮ ಆರಂಭವನ್ನೇ ಪಡೆದುಕೊಂಡಿವೆ. ಧನಂಜಯ್ ನಟನೆಯ ಹೊಯ್ಸಳ ಬ್ಲಾಕ್‌ಬಸ್ಟರ್ ಓಪನಿಂಗ್ ಪಡೆದುಕೊಂಡರೆ, ದಸರಾ ಸಹ ಭರ್ಜರಿ ಆರಂಭ ಪಡೆದುಕೊಂಡಿದೆ. ಇನ್ನುಳಿದಂತೆ ರಿಮೇಕ್ ಚಿತ್ರಗಳಾದ ಭೋಲಾ ಹಾಗೂ ಪತ್ತು ತಲ ಸಾಧಾರಣ ಆರಂಭವನ್ನು ಪಡೆದುಕೊಂಡಿವೆ.

ಅದರಲ್ಲಿಯೂ ನಾನಿ ನಟನೆಯ ದಸರಾ ಚಿತ್ರ ವಾರಾಂತ್ಯವಲ್ಲದಿದ್ದರೂ ದೊಡ್ಡ ಕಲೆಕ್ಷನ್ ಮಾಡುವ ಮೂಲಕ ಮುಂಚೂಣಿಯಲ್ಲಿದೆ. ಇನ್ನು ನಾನಿ ನಟನೆಯ ಕಳೆದ ನಾಲ್ಕೈದು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿಸಿದ ಯಶಸ್ಸು ಸಾಧಿಸಿರಲಿಲ್ಲ. ಹಾಗಾಗಿ ದಸರಾ ಮೊದಲಿಗೆ ಸಾಧಾರಣ ಬುಕಿಂಗ್ ಅನ್ನೇ ಪಡೆದುಕೊಂಡಿತ್ತು. ಆದರೆ ಚಿತ್ರದ ಮೊದಲ ಪ್ರದರ್ಶನ ಮುಗಿದು ಸಿನಿ ರಸಿಕರು ಚಿತ್ರವನ್ನು ಹಾಡಿ ಹೊಗಳಲು ಶುರು ಮಾಡಿದ್ದೇ ತಡ ಸಂಜೆ ಹಾಗೂ ರಾತ್ರಿಯ ಪ್ರದರ್ಶನಗಳು ಹೌಸ್‌ಫುಲ್ ಆದವು.
ಪರಿಣಾಮ ಚಿತ್ರ ಮೊದಲ ದಿನ ವಿಶ್ವದಾದ್ಯಂತ 38.65 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಅಬ್ಬರಿಸಿತು. ಇದು ನಾನಿ ಕೆರಿಯರ್‌ನಲ್ಲೇ ಅತಿದೊಡ್ಡ ಓಪನಿಂಗ್ ಪಡೆದುಕೊಂಡ ಚಿತ್ರ ಎನಿಸಿಕೊಂಡಿತು. ನಾನಿ ಕೊನೆ ಚಿತ್ರ ಅಂಟೆ ಸುಂದರಾನಿಕಿ ಮಾಡಿದ್ದ ಒಟ್ಟು ಕಲೆಕ್ಷನ್ ಅನ್ನು ಈ ಚಿತ್ರ ಮೊದಲ ದಿನವೇ ಮಾಡಿಬಿಟ್ಟಿದೆ.

ಹೀಗೆ ವಿಶ್ವದಾದ್ಯಂತ ಅಬ್ಬರಿಸಿರುವ ದಸರಾ ಕರ್ನಾಟಕದಲ್ಲಿಯೂ ಸಹ ಆ ದಿನ ಬಿಡುಗಡೆಗೊಂಡ ಉಳಿದ ಚಿತ್ರಗಳನ್ನು ಹಿಂದಿಕ್ಕಿ ಹೆಚ್ಚು ಗಳಿಕೆ ಮಾಡಿದೆ. ಹಾಗಿದ್ದರೆ, ದಸರಾ ಮೊದಲ ದಿನ ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಹಾಗೂ ಮೊದಲ ದಿನಕ್ಕಿಂತ ಎರಡನೇ ದಿನ ಬೆಂಗಳೂರಿನಲ್ಲಿ ಎಷ್ಟು ಹೆಚ್ಚು ಶೋಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ದಸರಾ ಮೊದಲ ದಿನ ಕರ್ನಾಟಕದಲ್ಲಿ 2.70 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಇದು ನಾನಿ ಸಿನಿ ಜೀವನಲ್ಲಿಯೇ ಕರ್ನಾಟಕದಲ್ಲಿ ದಾಖಲಾದ ದೊಡ್ಡ ಓಪನಿಂಗ್ ಎನಿಸಿಕೊಂಡಿದೆ. ಈ ಮೂಲಕ ಈ ವರ್ಷ ಬಿಡುಗಡೆಗೊಂಡ ತೆಲುಗು ಚಿತ್ರಗಳ ಪೈಕಿ ರಿಲೀಸ್ ದಿನ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಕಂಡ ಚಿತ್ರ ಎನಿಸಿಕೊಂಡಿದೆ. ಕರ್ನಾಟಕದಲ್ಲಿ ಬಿಡುಗಡೆ ದಿನ ಬಾಲಯ್ಯ ನಟನೆಯ ವೀರಸಿಂಹ ರೆಡ್ಡಿ 2.87 ಕೋಟಿ ಗಳಿಕೆ ಮಾಡಿತ್ತು. ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ 2.34 ಕೋಟಿ ಕಲೆಕ್ಷನ್ ಮಾಡಿತ್ತು. ಈ ಮೂಲಕ 2.7 ಕೋಟಿ ಕಲೆಕ್ಷನ್ ಮಾಡಿರುವ ದಸರಾ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರವನ್ನೇ ಹಿಂದಿಕ್ಕಿ ಅಬ್ಬರಿಸಿದೆ.
ಇನ್ನು ಇಂದು ( ಮಾರ್ಚ್ 31 ) ಬೆಂಗಳೂರಿನಲ್ಲಿ ದಸರಾ ಅಬ್ಬರ ಜೋರಾಗಿದ್ದು, ನಗರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಚಿತ್ರಗಳಿಗಿಂತ ಹೆಚ್ಚು ಶೋಗಳನ್ನು ಪಡೆದುಕೊಂಡಿದೆ. ದಸರಾ ಇಂದು 331 ಪ್ರದರ್ಶನಗಳನ್ನು ಪಡೆದುಕೊಂಡಿದ್ದರೆ, ಭೋಲಾ 274 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಗುರುದೇವ್ ಹೊಯ್ಸಳ 257, ವಿಡುದಲೈ ಭಾಗ 1 203 ಹಾಗೂ ಪತ್ತುತಲ 192 ಪ್ರದರ್ಶನಗಳನ್ನು ಪಡೆದುಕೊಂಡಿದೆ.


Click it and Unblock the Notifications











