ಮೊದಲ ದಿನ 38 ಕೋಟಿ ಗಳಿಸಿದ್ದ 'ದಸರಾ' ಎರಡನೇ ದಿನದ ಕಲೆಕ್ಷನ್‌ನಲ್ಲಿ ಭಾರೀ ಕುಸಿತ!
ಮೊನ್ನೆ ( ಮಾರ್ಚ್ 30 ) ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ವಿವಿಧ ಚಿತ್ರರಂಗಗಳ ಹಲವು ಚಿತ್ರಗಳು ಬಿಡುಗಡೆಗೊಂಡವು. ಕನ್ನಡದಲ್ಲಿ ಡಾಲಿ ಧನಂಜಯ್ ನಟನೆಯ ಬಹು ನಿರೀಕ್ಷಿತ ಚಿತ್ರ ಗುರುದೇವ್ ಹೊಯ್ಸಳ, ತಮಿಳಿನಲ್ಲಿ ಮಫ್ತಿ ಚಿತ್ರದ ರಿಮೇಕ್ ಪತ್ತು ತಲ, ಹಿಂದಿಯಲ್ಲಿ ಖೈದಿ ರಿಮೇಕ್ ಭೋಲಾ ಹಾಗೂ ತೆಲುಗಿನಲ್ಲಿ ನಾನಿ ನಟನೆಯ ಬಹು ನಿರೀಕ್ಷಿತ ದಸರಾ ಚಿತ್ರಗಳು ಒಂದೇ ದಿನ ಬಿಡುಗಡೆಗೊಂಡವು.
ವಿಶೇಷವೆಂದರೆ ಈ ಎಲ್ಲಾ ಚಿತ್ರಗಳೂ ಸಹ ಸಿನಿ ರಸಿಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನೇ ಪಡೆದುಕೊಂಡಿವೆ. ಅದರಲ್ಲಿಯೂ ವಿಶೇಷವಾಗಿ ಸ್ವಮೇಕ್ ಸಿನಿಮಾಗಳಾದ ಗುರುದೇವ್ ಹೊಯ್ಸಳ ಹಾಗೂ ದಸರಾ ಚಿತ್ರಗಳು ಬೃಹತ್ ಮೆಚ್ಚುಗೆಗಳನ್ನು ಪಡೆದುಕೊಂಡವು. ಕಳೆದ ಐದಾರು ಚಿತ್ರಗಳಲ್ಲಿ ನಿರೀಕ್ಷಿಸಿದ ಯಶಸ್ಸನ್ನು ಸಾಧಿಸದೇ ಇದ್ದ ಧನಂಜಯ್ ಹಾಗೂ ನಾನಿ ಈ ಇಬ್ಬರೂ ಸಹ ಈ ಚಿತ್ರಗಳ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ.

ಇನ್ನು ನಾನಿ ನಟನೆಯ ದಸರಾ ಸಿನಿಮಾ ಬೃಹತ್ ಗೆಲುವನ್ನು ಕಂಡಿದ್ದು ತೆಲುಗು ಚಿತ್ರರಂಗದ ಹಲವಾರು ಸ್ಟಾರ್ ನಟರ ಚಿತ್ರಗಳ ದಾಖಲೆಯನ್ನೇ ಸಿನಿಮಾ ಹೊಡೆದುರಳಿಸಿದೆ. ಯುಎಸ್ಎ ನೆಲದಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನಗಳ ಮೂಲಕ 600000 ಡಾಲರ್‌ಗಳಿಗಿಂತ ಹೆಚ್ಚಿನ ಕಲೆಕ್ಷನ್ ಮಾಡಿದ ದಸರಾ ಅಲ್ಲಿ ಪುಷ್ಪ ಚಿತ್ರ ಮಾಡಿದ್ದ ಒಟ್ಟಾರೆ ಕಲೆಕ್ಷನ್ ಅನ್ನು ಹಿಂದಿಕ್ಕಿತ್ತು.
ಹೀಗೆ ಬಿಡುಗಡೆಗೂ ಹಿಂದಿನ ದಿನ ವಿದೇಶಿ ನೆಲದಲ್ಲಿ ಅಬ್ಬರಿಸಿದ ದಸರಾ ದೇಶದಲ್ಲಿ ಬಿಡುಗಡೆಯಾದ ಮೇಲೆ ಇಲ್ಲಿಯೂ ಸಹ ತನ್ನ ಅಬ್ಬರವನ್ನು ಮುಂದುವರಿಸಿತು. ಮೊದಲನೇ ದಿನ ವಿಶ್ವದಾದ್ಯಂತ 38 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ ದಸರಾ ಚಿತ್ರ ನಾನಿ ನಟನೆಯ ಕೊನೆಯ ಚಿತ್ರ ಮಾಡಿದ್ದ ಒಟ್ಟಾರೆ ಕಲೆಕ್ಷನ್ ಅನ್ನು ಒಂದೇ ದಿನದಲ್ಲಿ ಹಿಂದಿಕ್ಕಿತು.

ಹೌದು, ನಾನಿ ನಟನೆಯ ಕೊನೆಯ ಚಿತ್ರ ಅಂಟೆ ಸುಂದರಾನಿಕಿ ಒಟ್ಟಾರೆ 38 ಕೋಟಿ ಗಳಿಕೆ ಮಾಡಿತ್ತು. ಸದ್ಯ ದಸರಾ ಮೊದಲ ದಿನವೇ 38.65 ಕೋಟಿ ಗಳಿಸಿ ಅಬ್ಬರಿಸಿದೆ. ಈ ಮೂಲಕ ಕಳೆದ ನಾಲ್ಕೈದು ಸಿನಿಮಾಗಳಲ್ಲಿ ಎಡವಿ ಕೆಳಗೆ ಬಿದ್ದಿದ್ದ ನಾನಿ ಪುಟಿದೆದ್ದಿದ್ದು ಗೆಲುವಿನ ಕೇಕೆ ಹಾಕಿದ್ದಾರೆ.
ಹೀಗೆ ಬಿಡುಗಡೆ ದಿನ 38 ಕೋಟಿ ಗಳಿಕೆ ಮಾಡಿದ್ದ ನಾನಿ ನಟನೆಯ ದಸರಾ ಚಿತ್ರ ಎರಡನೇ ದಿನ ಎಷ್ಟು ಗಳಿಸಬಹುದು ಎಂಬ ಕುತೂಹಲವಿತ್ತು. ಈ ಕುತೂಹಲಕ್ಕೆ ಚಿತ್ರತಂಡ ಬ್ರೇಕ್ ಹಾಕಿದ್ದು, ಚಿತ್ರ ಎಷ್ಟು ಗಳಿಸಿದೆ ಎಂಬುದನ್ನು ಅಧಿಕೃತವಾಗಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಿಳಿಸಿದೆ. ಮೊದಲ ದಿನ 38 ಕೋಟಿ ರೂಪಾಯಿ ಗಳಿಕೆ ಮಾಡಿದ್ದ ದಸರಾ ಚಿತ್ರ ಎರಡನೇ ದಿನ 15 ಕೋಟಿ ಗಳಿಕೆಯನ್ನು ಮಾಡಿದೆ. ಈ ಮೂಲಕ ಎರಡು ದಿನಗಳಲ್ಲಿ ದಸರಾ 53 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ವಿಶ್ವ ಮಾರುಕಟ್ಟೆಯಲ್ಲಿ ಸಂಪಾದಿಸಿದೆ.
ಹೀಗೆ ಬಿಡುಗಡೆ ದಿನ ಬರೋಬ್ಬರಿ 38 ಕೋಟಿ ಗಳಿಕೆ ಮಾಡಿದ್ದ ದಸರಾ ಚಿತ್ರ ಎರಡನೇ ದಿನ ಅರ್ಧಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಇಷ್ಟು ದೊಡ್ಡ ಮಟ್ಡದ ಕುಸಿತಕ್ಕೆ ಕಾರಣವೂ ಸಹ ಇದೆ. ಚಿತ್ರ ಗುರುವಾರ ಬಿಡುಗಡೆಯಾಗಿದ್ದು ಆ ದಿನ ರಾಮನವಮಿ ಇದ್ದ ಕಾರಣ ನಿರೀಕ್ಷೆಯಂತೆ ದೊಡ್ಡ ಕಲೆಕ್ಷನ್ ಮಾಡಿದೆ. ಇನ್ನು ಎರಡನೇ ದಿನ ಶುಕ್ರವಾರವಾಗಿದ್ದು, ರಜಾದಿನವಲ್ಲದ ಕಾರಣ ಇಷ್ಟರ ಮಟ್ಟಿಗೆ ಕಲೆಕ್ಷನ್‌ನಲ್ಲಿ ಕುಸಿತ ಕಂಡಿದೆ. ಅಲ್ಲದೇ ಮೂರನೇ ದಿನ ಶನಿವಾರ ಹಾಗೂ ನಾಲ್ಕನೇ ದಿನ ಭಾನುವಾರವಾಗಿದ್ದು, ಈ ದಿನಗಳಂದು ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿ ನಾಲ್ಕು ದಿನಗಳಲ್ಲಿಯೇ ನೂರು ಕೋಟಿ ಕ್ಲಬ್ ಸೇರುವ ನಿರೀಕ್ಷೆಗಳಿವೆ.


Click it and Unblock the Notifications











