ಭಾನುವಾರವೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ದಸರಾ ಮೊದಲ ವಾರಾಂತ್ಯಕ್ಕೆ ಗಳಿಸಿದ್ದೆಷ್ಟು?
ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಯುವ ನಿರ್ದೇಶಕ ಶ್ರೀಕಾಂತ್ ಒಡೆಲಾ ಕಾಂಬಿನೇಶನ್‌ನ ಚಿತ್ರ ದಸರಾ ಈಗ ಎಲ್ಲೆಡೆ ಸದ್ದು ಮಾಡ್ತಿದೆ. ವರ್ಷದ ಆರಂಭದಿಂದಲೂ ಹಿಟ್ ಮೇಲೆ ಹಿಟ್ ಕೊಡುತ್ತಿರುವ ಟಾಲಿವುಡ್‌ನಿಂದ ಮತ್ತೊಂದು ಹಿಟ್ ಚಿತ್ರ ಬಂದಿದೆ. ಕಳೆದ ಗುರುವಾರ ಮಾರ್ಚ್ 30ರಂದು ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ದಸರಾ ಚಿತ್ರ ತೆರೆಗೆ ಬಂದ ದಸರಾ ಚಿತ್ರ ಸದ್ಯ ಭಾರತ ಬಾಕ್ಸ್ ಆಫೀಸ್‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿ ಅಬ್ಬರಿಸುತ್ತಿದೆ.
ಇನ್ನು ಧರಣಿಯಾಗಿ ಕಾಣಿಸಿಕೊಂಡಿರುವ ನಾನಿ ನಟನೆಗೆ ಸಿನಿ ರಸಿಕರು ಮನ ಸೋತಿದ್ದಾರೆ. ಚಿತ್ರ ಪ್ರೇಮಿಗಳು ಚಿತ್ರ ಎಲ್ಲಿಯೂ ನಿರ್ದೇಶಕ ಶ್ರೀಕಾಂತ್ ಒಡೆಲಾ ನಿರ್ದೇಶನದ ಮೊದಲ ಚಿತ್ರ ಎಂಬ ಫೀಲ್ ಕೊಡುವುದಿಲ್ಲ, ಅಷ್ಟರ ಮಟ್ಟಿಗೆ ಅಚ್ಚುಕಟ್ಟಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ತೆಲಂಗಾಣ ಶೈಲಿಯ ತೆಲುಗು ಭಾಷೆಯಲ್ಲಿ ಮೂಡಿ ಬಂದಿರುವ ದಸರಾ ಪಕ್ಕಾ ಮಾಸ್ ಸಿನಿಮಾವಾಗಿದ್ದು, ನಾಯಕ ಹಾಗೂ ಸ್ನೇಹಿತನ ನಡುವಿನ ಸ್ನೇಹದ ಕಥನ ಚಿತ್ರದಲ್ಲಿದೆ.

ಚಿತ್ರದಲ್ಲಿ ರಕ್ತಸಿಕ್ತ ಹೊಡೆದಾಟದ ದೃಶ್ಯಗಳು ಇದ್ದರೂ ಕೂಡ ಎಮೋಷನಲ್ ಹಾಗೂ ಸೆಂಟಿಮೆಂಟ್ ಅಂಶಗಳು ದೊಡ್ಡ ಜಾಗವನ್ನೇ ಪಡೆದುಕೊಂಡಿವೆ. ನಾಯಕಿಯಾಗಿ ನಟಿ ಕೀರ್ತಿ ಸುರೇಶ್ ಅದ್ಭುತ ನಟನೆ ಮಾಡಿದ್ದರೆ, ದಿಯಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ನಾಯಕ ಧರಣಿ ಪ್ರಾಣ ಸ್ನೇಹಿತನ ಪಾತ್ರದಲ್ಲಿ ನಟಿಸಿ ತೆಲುಗು ಸಿನಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಇನ್ನು ಚಿತ್ರ ರಿವೇಂಜ್ ಡ್ರಾಮಾವಾಗಿದ್ದು ಈ ರೀತಿಯ ಕಥಾಹಂದರ ಹೊಂದಿರುವ ಸಿನಿಮಾಗಳು ಈ ಹಿಂದೆ ಸಾಕಷ್ಟು ಬಂದಿರುವುದನ್ನು ಕಾಣಬಹುದಾಗಿದೆ.
ಆದರೆ ನಿರ್ದೇಶಕರು ಕಥೆ ಹೇಳಿರುವ ರೀತಿ, ರಿಚ್ ಮೇಕಿಂಗ್, ಅದ್ಭುತ ಛಾಯಾಗ್ರಹಣ ಹಾಗೂ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲುವಂತೆ ಮಾಡಿದೆ. ಹೀಗೆ ಚಿತ್ರತಂಡದ ಎಲ್ಲಾ ವಿಭಾಗದ ಅಚ್ಚುಕಟ್ಟಾದ ಕೆಲಸಗಳಿಂದಾಗಿ ದಸರಾ ಬೃಹತ್ ಗೆಲುವನ್ನು ಕಂಡಿದ್ದು, ಕೇವಲ ಪ್ರೇಕ್ಷಕರ ಪ್ರತಿಕ್ರಿಯೆ ವಿಷಯದಲ್ಲಿ ಮಾತ್ರವಲ್ಲದೇ ಗಳಿಕೆ ವಿಚಾರದಲ್ಲಿಯೂ ಸಹ ಗೆದ್ದಿದೆ.
ಹೌದು, ಬಿಡುಗಡೆ ದಿನ ಬರೋಬ್ಬರಿ 38 ಕೋಟಿ ಗಳಿಕೆ ಮಾಡಿ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ ದಸರಾ ಸಿನಿಮಾ ನಾನಿ ಸಿನಿ ಕೆರಿಯರ್‌ನಲ್ಲಿ ಅತಿದೊಡ್ಡ ಓಪನಿಂಗ್ ಪಡೆದುಕೊಂಡ ಚಿತ್ರ ಎನಿಸಿಕೊಂಡಿತ್ತು. ಹೀಗೆ ಬಿಡುಗಡೆ ದಿನ ದೊಡ್ಡ ಓಪನಿಂಗ್ ಪಡೆದುಕೊಂಡಿದ್ದ ದಸರಾ ಎರಡನೇ ದಿನ 15 ಕೋಟಿ ರೂಪಾಯಿಗಳನ್ನು ಗಳಿಸಿತು, ಮೂರನೇ ದಿನ 18 ಕೋಟಿ ರೂಪಾಯಿಗಳನ್ನು ಗಳಿಸಿತು ಹಾಗೂ ನಾಲ್ಕನೇ ದಿನವಾದ ಭಾನುವಾರವೂ ಸಹ ಚಿತ್ರ ದೊಡ್ಡ ಕಲೆಕ್ಷನ್ ಮಾಡಿದ್ದು, 16 ಕೋಟಿ ರೂಪಾಯಿಗಳನ್ನು ಗಳಿಸಿದೆ.

ಈ ಮೂಲಕ ದಸರಾ ಮೊದಲ ನಾಲ್ಕು ದಿನಗಳಲ್ಲಿ 87 ಕೋಟಿ ರೂಪಾಯಿ ಗಳಿಕೆ ಮಾಡಿದ್ದು ನೂರು ಕೋಟಿ ಕ್ಲಬ್ ಸೇರುವತ್ತ ಹೆಜ್ಜೆ ಹಾಕಿದೆ. ಈ ಕಲೆಕ್ಷನ್ ಮಾಹಿತಿಯನ್ನು ಚಿತ್ರತಂಡ ಪ್ರತಿದಿನ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹಂಚಿಕೊಂಡಿದೆ. ಇನ್ನು ನಾನಿ ನಟನೆಯ ಯಾವ ಚಿತ್ರವೂ ಇಷ್ಟರ ಮಟ್ಟಿಗೆ ಗಳಿಕೆ ಮಾಡಿದ ಉದಾಹರಣೆ ಇಲ್ಲ. ನಾನಿ ನಟನೆಯ ಕೊನೆಯ ಚಿತ್ರ ಅಂಟೆ ಸುಂದರಾನಿಕಿ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡರೂ ಸಹ ಒಟ್ಟಾರೆ 38 ಕೋಟಿ ಗಳಿಸಿತ್ತಷ್ಟೇ. ಆದರೆ ದಸರಾ ಚಿತ್ರ ಮೊದಲ ದಿನವೇ 38 ಕೋಟಿ ಗಳಿಸಿದ್ದು, ಈ ಮೂಲಕ ಸಾಲು ಸಾಲು ಸೋಲುಗಳ ಬಳಿಕ ಗೆದ್ದು ಕಮ್‌ಬ್ಯಾಕ್ ಮಾಡಿದ್ದಾರೆ.


Click it and Unblock the Notifications











