ನಾನಿ ನಟನೆಯ ದಸರಾ 5 ದಿನಗಳಲ್ಲಿ ಗಳಿಸಿದ್ದೆಷ್ಟು? ನೂರು ಕೋಟಿಗೆ ಇನ್ನೆಷ್ಟು ಬೇಕು?
ಕಳೆದ ಗುರುವಾರ ( ಮಾರ್ಚ್ 30 ) ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ವಿವಿಧ ಚಿತ್ರರಂಗಗಳ ಹಲವು ಚಿತ್ರಗಳು ಬಿಡುಗಡೆಗೊಂಡವು. ಕನ್ನಡದಲ್ಲಿ ಡಾಲಿ ಧನಂಜಯ್ ನಟನೆಯ ಬಹು ನಿರೀಕ್ಷಿತ ಚಿತ್ರ ಗುರುದೇವ್ ಹೊಯ್ಸಳ, ತಮಿಳಿನಲ್ಲಿ ಮಫ್ತಿ ಚಿತ್ರದ ರಿಮೇಕ್ ಪತ್ತು ತಲ, ಹಿಂದಿಯಲ್ಲಿ ಖೈದಿ ರಿಮೇಕ್ ಭೋಲಾ ಹಾಗೂ ತೆಲುಗಿನಲ್ಲಿ ನಾನಿ ನಟನೆಯ ಬಹು ನಿರೀಕ್ಷಿತ ದಸರಾ ಚಿತ್ರಗಳು ಒಂದೇ ದಿನ ಬಿಡುಗಡೆಗೊಂಡವು.
ವಿಶೇಷವೆಂದರೆ ಈ ಎಲ್ಲಾ ಚಿತ್ರಗಳೂ ಸಹ ಸಿನಿ ರಸಿಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನೇ ಪಡೆದುಕೊಂಡಿವೆ. ಅದರಲ್ಲಿಯೂ ವಿಶೇಷವಾಗಿ ಸ್ವಮೇಕ್ ಸಿನಿಮಾಗಳಾದ ಗುರುದೇವ್ ಹೊಯ್ಸಳ ಹಾಗೂ ದಸರಾ ಚಿತ್ರಗಳು ಬೃಹತ್ ಮೆಚ್ಚುಗೆಗಳನ್ನು ಪಡೆದುಕೊಂಡವು. ಕಳೆದ ಮೂರ್ನಾಲ್ಕು ಚಿತ್ರಗಳಲ್ಲಿ ಈಗಿನ ಪ್ಯಾನ್ ಇಂಡಿಯಾ ರೇಂಜಿಗೆ ತಕ್ಕ ಗೆಲುವನ್ನು ಸಾಧಿಸುವಲ್ಲಿ ಎಡವಿದ್ದ ನಾನಿ ಈ ದಸರಾ ಸಿನಿಮಾ ಮೂಲಕ ಗೆಲುವು ಕಂಡು ಕಮ್‌ಬ್ಯಾಕ್ ಮಾಡಿದ್ದಾರೆ.

ಈ ಹಿಂದೆ ನಿರ್ದೇಶಕ ಸುಕುಮಾರ್ ಅಡಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದ ಶ್ರೀಕಾಂತ್ ಒಡೆಲಾ ನಿರ್ದೇಶನದ ಅಡಿಯಲ್ಲಿ ಈ ಚಿತ್ರ ಮೂಡಿಬಂದಿದ್ದು, ಶ್ರೀಕಾಂತ್ ಫಸ್ಟ್ ಬಾಲ್ ಸಿಕ್ಸರ್ ಚಚ್ಚಿದ್ದಾರೆ. ಸ್ನೇಹ, ಪ್ರೀತಿ, ಕುಗ್ರಾಮ, ಅಲ್ಲಿನ ರಾಜಕೀಯ ಹಾಗೂ ಆ ರಾಜಕೀಯ ವ್ಯಕ್ತಿಗಳ ಆಲ್ಕೋಹಾಲ್ ಮಾಫಿಯಾ ಸುತ್ತ ಸುತ್ತುವ ಮಾಸ್ ಹಾಗೂ ಎಮೋಷನಲ್ ಕಥೆಯನ್ನು ಹೊಂದಿರುವ ದಸರಾ ಚಿತ್ರ ಮೊದಲಿಗೆ ಯುಎಸ್ಎಯಲ್ಲಿ ಪ್ರೀಮಿಯರ್ ಪ್ರದರ್ಶನವನ್ನು ಕಂಡು ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು.
ಯುಎಸ್ಎಯಲ್ಲಿ ಗೆದ್ದ ದಸರಾ ಭಾರತದ ನೆಲದಲ್ಲಿಯೂ ಸಹ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಚಿತ್ರದ ಕಥೆಯಲ್ಲಿ ಹೊಸತನವಿರದಿದ್ದರೂ ರಿಚ್ ಮೇಕಿಂಗ್, ಛಾಯಾಗ್ರಹಣ, ಬ್ಯಾಕ್‌ಗ್ರೌಂಡ್ ಮ್ಯೂಸಿಕ್, ಸಂಕಲನ ಹಾಗೂ ಮುಖ್ಯವಾಗಿ ಕಲಾವಿದರ ನಟನೆ ಚಿತ್ರಕ್ಕೆ ಗೆಲುವಿನ ಮಾಲೆ ತೊಡಿಸಿದ್ದವು.

ಇನ್ನು ದಸರಾ ಮೊದಲ ದಿನ ವಿಶ್ವದಾದ್ಯಂತ ಬರೋಬ್ಬರಿ 38 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಭರ್ಜರಿ ಆರಂಭ ಪಡೆದುಕೊಂಡಿತ್ತು. ಇದು ನಾನಿ ಸಿನಿ ಕೆರಿಯರ್‌ನಲ್ಲೇ ಬಿಗ್ಗೆಸ್ಟ್ ಓಪನಿಂಗ್ ಆಗಿತ್ತು. ಹೀಗೆ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದ ದಸರಾ ಎರಡನೇ ದಿನ 15 ಕೋಟಿ ರೂಪಾಯಿಗಳನ್ನು ಗಳಿಸಿತು, ಮೂರನೇ ದಿನ 18 ಕೋಟಿ ರೂಪಾಯಿಗಳನ್ನು ಗಳಿಸಿತು, ನಾಲ್ಕನೇ ದಿನ 16 ಕೋಟಿ ರೂಪಾಯಿಗಳನ್ನು ಗಳಿಸಿತು ಹಾಗು ಐದನೇ ದಿನ 5 ಕೋಟಿ ಗಳಿಸಿದೆ.
ಈ ಮೂಲಕ ದಸರಾ ಐದು ದಿನಗಳಲ್ಲಿ ಒಟ್ಟು 92 ಕೋಟಿ ಗಳಿಕೆ ಮಾಡಿದ್ದು, ಒಟ್ಟು 92 ಕೋಟಿ ರೂಪಾಯಿಗಳನ್ನು ಗಳಿಸಿದೆ. ನೂರು ಕೋಟಿ ಕ್ಲಬ್ ಸೇರಲು ಚಿತ್ರ ಇನ್ನೂ 8 ಕೋಟಿ ಗಳಿಸಬೇಕಿದ್ದು, ಇನ್ನೆರಡು ದಿನಗಳಲ್ಲಿ ಈ ಮೈಲಿಗಲ್ಲನ್ನು ಮುಟ್ಟಿ ಏಳು ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿದ ಸಾಧನೆ ಮಾಡುವ ಸಾಧ್ಯತೆಗಳಿವೆ. ಭಾರತದಲ್ಲಿ ಮಾತ್ರವಲ್ಲದೇ ಓವರ್‌ಸೀಸ್‌ನಲ್ಲಿಯೂ ದಸರಾ ಚಿತ್ರದ ಕಲೆಕ್ಷನ್ ಜೋರಾಗಿದ್ದು, ಅಮೆರಿಕಾದಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಹತ್ತು ಲಕ್ಷ ಡಾಲರ್‌ಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ದಸರಾ ಯುಎಸ್ಎಯಲ್ಲಿ ಹತ್ತು ಲಕ್ಷ ಡಾಲರ್‌ಗಳಿಗಿಂತ ಅತಿಹೆಚ್ಚು ಗಳಿಕೆ ಮಾಡಿದ ನಾನಿ ನಟನೆಯ ಎಂಟನೇ ಸಿನಿಮಾ ಎನಿಸಿಕೊಂಡಿದೆ.


Click it and Unblock the Notifications











