ರೀಲ್ - ರಿಯಲ್: ಊಹಿಸಿದಂತೆ ಶಾಕ್ ಕೊಟ್ಟ ನರೇಶ್- ಪವಿತ್ರಾ ಲೋಕೇಶ್
ನರೇಶ್- ಪವಿತ್ರಾ ಲೋಕೇಶ್ ನಟನೆಯ 'ಮಳ್ಳಿ ಪೆಳ್ಳಿ' ಸಿನಿಮಾ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ತಮ್ಮಿಬ್ಬರ ನಿಜ ಜೀವನದ ಕತೆಯನ್ನೇ ಸಿನಿಮಾ ರೂಪದಲ್ಲಿ ನರೇಶ್ ತೆರೆಗೆ ತರುತ್ತಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎಂ. ಎಸ್ ರಾಜು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎನ್ನಲಾಗ್ತಿದೆ.
3ನೇ ಪತ್ನಿ ರಮ್ಯಾ ರಘುಪತಿ ಎದುರು ಮೈಸೂರಿನ ಹೋಟೆಲ್ ಕೋಣೆಯಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆ ಕಾಣಿಸಿಕೊಂಡಿದ್ದರು. ಆ ವಿಡಿಯೋ ಭಾರೀ ವೈರಲ್ ಆಗಿತ್ತು. ಸದ್ಯ 'ಮಳ್ಳಿ ಪೆಳ್ಳಿ' ಚಿತ್ರದಲ್ಲಿ ಈ ದೃಶ್ಯವನ್ನು ರೀಕ್ರಿಯೇಟ್ ಮಾಡಲಾಗಿದೆ. ಚಿತ್ರದಲ್ಲಿ ರಮ್ಯಾ ರಘುಪತಿಯನ್ನು ಪಾತ್ರವನ್ನು ಕೂಡ ತೋರಿಸಲಾಗಿದೆ. ವಿನಿತಾ ವಿಜಯ್‌ಕುಮಾರ್ ಆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆ ಮಾಧ್ಯಮಗಳ ಮುಂದೆ ಆರೋಪ ಮಾಡುವ ಪತಿಯ ಬಗ್ಗೆ ಮಾಡುವ ಆರೋಪಗಳನ್ನು ಟೀಸರ್‌ನಲ್ಲಿ ಹೈಲೆಟ್ ಮಾಡಿ ತೋರಿಸಲಾಗಿದೆ.

ಕೆಲ ದಿನಗಳ ಹಿಂದೆಯೇ ನರೇಶ್ ಇಂತಾದೊಂದು ಸಿನಿಮಾ ಮಾಡುತ್ತಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಈ ಸಿನಿಮಾ ಪ್ರಚಾರಕ್ಕಾಗಿ ಲಿಪ್‌ಲಾಕ್ ಸೀನ್, ಮದುವೆ ಸೀನ್ ಹಾಗೂ ದುಬೈಗೆ ಹನಿಮೂನ್ ಹೋಗಿ ಬಂದಂತ ವಿಡಿಯೋಗಳನ್ನು ರಿಲೀಸ್ ಮಾಡಿದ್ದರು. ಈ ಸಿನಿಮಾ 'ಮತ್ತೆ ಮದುವೆ' ಹೆಸರಿನಲ್ಲಿ ಕನ್ನಡಕ್ಕೂ ಡಬ್ ಆಗಿ ಬರ್ತಿದೆ. ಶೀಘ್ರದಲ್ಲೇ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ತಮ್ಮದೇ ವೈಯಕ್ತಿಕ ಜೀವನದ ವಿವಾದಸ್ಪದ ವಿಚಾರಗಳನ್ನು ನರೇಶ್ ಈ ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ.

ಪವಿತ್ರಾ ಲೋಕೇಶ್ ಜೊತೆಗಿನ ರಿಲೇಷನ್‌ಶಿಪ್, 3ನೇ ಪತ್ನಿ ರಮ್ಯಾ ರಘುಪತಿ ಜೊತೆಗಿನ ಜಗಳ, ಆಕೆ ಮಾಧ್ಯಮಗಳ ಮುಂದೆ ಮಾಡಿದ ಆರೋಪ, ಮೈಸೂರು ಹೋಟೆಲ್‌ನಲ್ಲಿ ನಡೆದ ಹೈಡ್ರಾಮಾ ಎಲ್ಲವನ್ನು ಎಳೆ ಎಳೆಯಾಗಿ ಚಿತ್ರದಲ್ಲಿ ಹೇಳಲಾಗುತ್ತಿದೆ. ಟೀಸರ್ ನೋಡ್ತಿದ್ರೆ ರಮ್ಯಾ ರಘುಪತಿ ಅವರನ್ನು ಟಾರ್ಗೆಟ್ ಮಾಡಿ ನರೇಶ್ ಸಿನಿಮಾ ಮಾಡಿರೋದು ಅರ್ಥವಾಗುತ್ತಿದೆ. ತಾವು ಚಿತ್ರರಂಗಕ್ಕೆ ಬಂದು 50 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ನರೇಶ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
"ತೆಲುಗು ಇಂಡಸ್ಟ್ರಿಯವರು ಕನ್ನಡದ ಮೇಲೆ ಕಣ್ಣಾಕ್ತಿದ್ದಾರಲ್ಲ" ಅನ್ನುವ ಡೈಲಾಗ್ ಮೂಲಕ ಟೀಸರ್ ಶುರುವಾಗುತ್ತದೆ. ತಮ್ಮದೇ ನಿಜ ಜೀವನದ ಕಥೆಯಲ್ಲೇ ನರೇಶ್- ಪವಿತ್ರಾ ತಾವೇ ನಟಿಸಿರುವುದರಿಂದ ಇದು ನಿಜ ಜೀವನದ ಕಥೆ ಅಂತಲೇ ಭಾಸವಾಗುತ್ತಿದೆ. ಟೀಸರ್ ನೋಡಿದವರು 'ಏನ್ ಟ್ವಿಸ್ಟ್ ಗುರು ಇದು', ಇದು ಬರೀ ಸಿನಿಮಾ ಅಲ್ಲ, ನರೇಶ್ ಬಯೋಪಿಕ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಲೇಟು ವಯಸ್ಸಿನ ಪ್ರೀತಿ ಪ್ರೇಮ, ಮದುವೆ ಹಿನ್ನೆಲೆಯಲ್ಲಿ ಸಿನಿಮಾ ಕಥೆ ಸಾಗಲಿದೆ.
ಜಯಸುಧಾ, ಶರತ್ ಬಾಬು, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಅನಂತ ಶ್ರೀರಾಮ್ ಸಾಹಿತ್ಯ 'ಮಳ್ಳಿ ಪೆಳ್ಳಿ' ಚಿತ್ರಕ್ಕಿದೆ. ಈ ಸಿನಿಮಾ ಮೂಲಕ ತಮ್ಮ ಮೇಲಿನ ಆರೋಪಗಳಿಗೆ ನರೇಶ್ ಉತ್ತರ ಕೊಡಲು ಹೊರಟಂತೆ ಕಾಣುತ್ತಿದೆ. ಅಷ್ಟೇ ಅಲ್ಲ ನಿರ್ಮಾಪಕರಾಗಿ ಅದನ್ನು ಎನ್'ಕ್ಯಾಶ್' ಮಾಡಿಕೊಳ್ಳುವ ಪ್ರಯತ್ನ ಕೂಡ ಮಾಡ್ತಿದ್ದಾರೆ.
ನರೇಶ್ ಹಾಗೂ ಪವಿತ್ರಾ ಪ್ರೇಮಿಗಳಾ? ಅಥವಾ ಅವರೇ ಹೇಳಿಕೊಂಡಿರುವಂತೆ ಆತ್ಮೀಯ ಸ್ನೇಹಿತರು ಮಾತ್ರನಾ? ಈ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಬೇಕು ಎನ್ನುವವರು 'ಮಳ್ಳಿ ಪೆಳ್ಳಿ' ಸಿನಿಮಾ ನೋಡುವ ಸಾಧ್ಯತೆಯಿದೆ. ಮೇ ತಿಂಗಳಿನಲ್ಲಿ ಸಿನಿಮಾ ರಿಲೀಸ್ ಪ್ರಯತ್ನಗಳು ನಡೀತಿದೆ.


Click it and Unblock the Notifications











