ನಿಮ್ಮನ್ನು ತಬ್ಬಿಕೊಳ್ಳೋಣ ಅಂದ್ಕೊಂಡೆ.. ಆದ್ರೆ ಸೀರೆ ಉಟ್ಕೊಂಡಿದ್ದೀರಾ.. ನಟಿಯರ ಬಗ್ಗೆ ನರೇಶ್ ಹೇಳಿಕೆ ವೈರಲ್
ತೆಲುಗು ನಟ ನರೇಶ್ ಸದ್ಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದ್ಕಾಲದಲ್ಲಿ ಹೀರೊ ಆಗಿ ನಟಿಸಿದ್ದು ಇದೆ. ಕನ್ನಡ ನಟಿ ಪವಿತ್ರಾ ಲೋಕೇಶ್ ಜೊತೆ ನರೇಶ್ ಮದುವೆ ಆಗಿದ್ದಾರೆ ಎನ್ನಲಾಗ್ತಿದೆ. ತಮ್ಮಿಬ್ಬರ ಲವ್ ಸ್ಟೋರಿಯನ್ನು 'ಮತ್ತೆ ಮದುವೆ' ಹೆಸರಿನಲ್ಲಿ ಸಿನಿಮಾ ಮಾಡಿ ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಮಾಡಿದ್ದರು.
ಸದ್ಯ 'ಹೇ ಭಗವಾನ್' ಎಂಬ ಚಿತ್ರದಲ್ಲಿ ನರೇಶ್ ನಟಿಸಿದ್ದಾರೆ. ಇಂದು (ಫೆಬ್ರವರಿ 12) ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೀತು. ವೇದಿಕೆಯಲ್ಲಿ ಚಿತ್ರದ ನಾಯಕಿಯರಾದ ಶಿವಾನಿ ಹಾಗೂ ಶ್ರವಂತಿ ಬಗ್ಗೆ ನರೇಶ್ ಹೇಳಿಕೆವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇತ್ತೀಚೆಗೆ ನಡೆದ ವಿವಾದದ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳಲ್ಲಿ ಮಹಿಳೆಯರೆಲ್ಲಾ ಸೀರೆಯಲ್ಲಿ ಕಾಣಿಸುತ್ತಿದ್ದಾರೆ ಎಂದಿದ್ದಾರೆ. ತೆಲುಗು ನಟ ಶಿವಾಜಿ ವಿವಾದಾತ್ಮಕ ಹೇಳಿಕೆ ವಿವಾದವನ್ನು ನೆನಪಿಸಿದ್ದಾರೆ.

ವ್ಯಾಲಂಟೈನ್ಸ್ ಡೇ ಭಾಗವಾಗಿ ಇವತ್ತು ಹಗ್ ಡೇ ಅಂತೆ ಎನ್ನುತ್ತ ವೇದಿಕೆ ಮೇಲಿದ್ದ ಪುರುಷರನ್ನು ನಟ ನರೇಶ್ ತಬ್ಬಿಕೊಂಡಿದ್ದಾರೆ. ಬಳಿಕ ನಟಿಯರಾದ ಶಿವಾನಿ ಮತ್ತು ಶ್ರವಂತಿ ಬಳಿ ಹೋಗಿದ್ದಾರೆ . "ನಿಮ್ಮನ್ನು ಕೂಡ ಹಗ್ ಮಾಡಬೇಕು ಎಂದುಕೊಂಡೆ. ಆದರೆ, ನೀವಿಬ್ಬರೂ ಸೀರೆ ಉಟ್ಟಿದ್ದೀರಾ. ಕೆಲ ಘಟನೆಗಳ ನಂತರ, ಬಹುತೇಕರು ವೇದಿಕೆಗಳಲ್ಲಿ ಸೀರೆ ಉಟ್ಟಿರುವುದನ್ನು ನೋಡಬಹುದು. ಭಾರತೀಯ ಸಂಸ್ಕೃತಿಯ ಪ್ರಕಾರ, ಪುರುಷರು ಮಹಿಳೆಯರನ್ನು ತಬ್ಬಿಕೊಳ್ಳಬಾರದು, ಆದ್ದರಿಂದ ನೀವಿಬ್ಬರೂ ತಬ್ಬಿಕೊಳ್ಳಿ" ಎಂದು ಹೇಳಿ ನರೇಶ್ ನಕ್ಕಿದ್ದಾರೆ.
ಕೆಲ ದಿನಗಳ ಹಿಂದೆ ತೆಲುಗು ನಟ ಶಿವಾಜಿ ಕಾರ್ಯಕ್ರಮವೊಂದರಲ್ಲಿ ನಟಿಯರ ವೇಷಭೂಷಣದ ಬಗ್ಗೆ ನೀಡಿದ್ದ ಹೇಳಿಕೆವೊಂದು ಭಾರೀ ವಿಚಾದಕ್ಕೆ ಕಾರಣವಾಗಿತ್ತು. ಅವರು ಬಳಸಿದ ಒಂದೆರಡು ಪದಗಳು ಭಾರೀ ಚರ್ಚೆ ಹುಟ್ಟು ಹಾಕಿತ್ತು. ಅದಕ್ಕೆ ಕ್ಷಮೆ ಕೇಳಿದ್ದರು. ಇನ್ನುಳಿದಂತೆ ಶಿವಾಜಿ ಹೇಳಿಕೆ ಬಗ್ಗೆ ಪರ ವಿರೋಧ ಚರ್ಚೆ ನಡೆದಿದ್ದು ಗೊತ್ತೇಯಿದೆ. ತೆಲುಗು ನಟಿ, ನಿರೂಪಕಿ ಅನಸೂಯ ಭಾರಧ್ವಜ್ ಹಾಗೂ ಗಾಯಕಿ ಚಿನ್ಮಯಿ ಶ್ರೀಪಾದ ಈ ಬಗ್ಗೆ ಗರಂ ಆಗಿದ್ದರು. ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಚರ್ಚೆ ಹುಟ್ಟು ಹಾಕಿದ್ದರು. ಮಹಿಳೆಯರು ತಮ್ಮಿಷ್ಟದ ಬಟ್ಟೆ ಧರಿಸುವುದು ತಪ್ಪಾ ಎಂದು ಗರಂ ಆಗಿದ್ದರು.
ಪರೋಕ್ಷವಾಗಿ ನಟ ಶಿವಾಜಿ ಹೇಳಿಕೆ ವಿವಾದವನ್ನು ನರೇಶ್ ಕೆದಕಿದ್ದಾರೆ. ನಟಿಯರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಂಗಾಂಗ ಪ್ರದರ್ಶನ ಮಾಡುವಂತಹ ಬಟ್ಟೆ ಧರಿಸುತ್ತಾರೆ ಅದು ಸರಿಯಲ್ಲ ಎಂದು ಶಿವಾಜಿ ಹೇಳಿದ್ದರು. "ಹೀರೊಯಿನ್ಸ್ ಹೀಗೆ ಕೆಟ್ಟದಾಗಿ ಬಟ್ಟೆ ಹಾಕಿಕೊಂಡು ಹೋದ್ರೆ ದರಿದ್ರ ಅನುಭವಿಸಬೇಕಾಗುತ್ತದೆ. ನಿಮ್ಮ ಅಂದ ಸೀರೆಯಲ್ಲಿ, ಮೈತುಂಬಾ ತೊಡವ ಬಟ್ಟೆಯಲ್ಲಿರುತ್ತೆ. ಅಂಗಾಂಗ ಪ್ರದರ್ಶನದಲ್ಲಿ ಇರಲ್ಲ. ಇಂತಹ ಬಟ್ಟೆ ಹಾಕಿಕೊಂಡಾಗ ಕೆಲವರು ನಗುತ್ತಾ ಹೇಳಿದ್ರು, ಒಳಗೊಳಗೆ ಬೈಯ್ದುಕೊಳ್ತಾರೆ. ನಟಿ ಸಾವಿತ್ರಿ, ಸೌಂದರ್ಯ, ರಶ್ಮಿಕಾ ನೋಡಿ ಕಲೀರಿ. ಗ್ಲಾಮರ್ ಒಂದು ಹಂತದವರೆಗೆ ಇರಬೇಕು, ಅತಿಯಾಗಬಾರದು. ಸೀರೆ ಉಟ್ಟು ನಮ್ಮ ಸಂಸ್ಕೃತಿಯನ್ನು ಕಾಪಾಡಿ" ಎಂದಿದ್ದರು.
ಭಾರೀ ಆಕ್ರೋಶದ ನಡುವೆ ಕೆಲ ನಟಿಯರು ಶಿವಾಜಿ ಹೇಳಿಕೆ ಒಪ್ಪಿಕೊಂಡಿದ್ದರು. ನಾವು ಯಾವ ಜಾಗಕ್ಕೆ ಹೋಗುತ್ತೇವೆ ಅದಕ್ಕೆ ತಕ್ಕಂತೆ ಬಟ್ಟೆ ಧರಿಸಬೇಕು ಎಂದಿದ್ದರು. ನಟ ಶಿವಾಜಿ ಬಳಸಿದ ಕೆಲ ಕೆಟ್ಟ ಪದಗಳು ತಪ್ಪಾಗಿರಬಹುದು. ಆದರೆ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದರು.
ಗೋಪಿ ಆಚಾರ್ಯ ನಿರ್ದೇಶನದ 'ಹೇ ಭಗವಾನ್' ಚಿತ್ರದಲ್ಲಿ ಸುಹಾಸ್, ಶಿವಾನಿ, ಸುದರ್ಶನ್ ಹಾಗೂ ನರೇಶ್ ಸೇರಿ ದೊಡ್ಡ ಕಲಾವಿದರ ದಂಡೇ ಇದೆ. ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಫೆಬ್ರವರಿ 20ರಂದು ತೆರೆಗೆ ಬರಲಿದೆ.


Click it and Unblock the Notifications











