"ನಮ್ಮಪ್ಪ ತಪ್ಪು ಮಾಡಿದ್ದಾರೆ.. ಪವಿತ್ರಾ ಹೇಗೆ ಅಂದ್ರೆ?": ಪವಿತ್ರಪ್ರೇಮದ ಬಗ್ಗೆ ನರೇಶ್ ಮಗ ಪ್ರತಿಕ್ರಿಯೆ
ಟಾಲಿವುಡ್ ನಟ ನರೇಶ್, ಕನ್ನಡ ನಟಿ ಪವಿತ್ರಾ ಲೋಕೇಶ್ ಲವ್ ಸ್ಟೋರಿ ಕಳೆದ ವರ್ಷ ಭಾರೀ ಸದ್ದು ಮಾಡಿತ್ತು. ಇಬ್ಬರು ಸಹಜೀವನ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಮುಂದೆ ಮದುವೆ ಆಗುತ್ತೇವೆ ಎಂದಿದ್ದಾರೆ. ನರೇಶ್ ಈಗಾಗಲೇ ಇಬ್ಬರಿಗೆ ಡಿವೋರ್ಸ್ ನೀಡಿ 3ನೇ ಮದುವೆ ಆಗಿದ್ದಾರೆ. 3ನೇ ಪತ್ನಿ ರಮ್ಯಾ ರಘುಪತಿಯಿಂದಲೂ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪವಿತ್ರಾ ಲೋಕೇಶ್ ನಮ್ಮ ದಾಂಪತ್ಯದಲ್ಲಿ ಹುಳಿ ಹಿಂಡಿದ್ದಾಳೆ ಎಂದು ಮೊದಲಿಗೆ ರಮ್ಯಾ ರಘುಪತಿ ಮಾಧ್ಯಮದ ಮುಂದೆ ಬಂದಿದ್ದರು. ಅಲ್ಲಿಂದ ಮುಂದೆ ಆರೋಪ ಪ್ರತ್ಯಾರೋಪಗಳ ಸುರಿಮಳೆ ಆಯಿತು. ಮೈಸೂರಿನ ಹೋಟೆಲ್ ಕೋಣೆಯಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡ ಮೇಲೆ ಅದು ಭಾರೀ ಚರ್ಚೆ ಹುಟ್ಟಿಹಾಕಿತ್ತು. ನರೇಶ್- ಪವಿತ್ರಾ ಬಗ್ಗೆ ರಮ್ಯಾ ರಘುಪತಿ ಗುರುತರವಾದ ಆರೋಪಗಳನ್ನು ಮಾಡಿದ್ದರು.

ತಮ್ಮದೇ ಸ್ಟೋರಿಯನ್ನು ನರೇಶ್ 'ಮಳ್ಳಿ ಪೆಳ್ಳಿ' ಎನ್ನುವ ಸಿನಿಮಾ ಮಾಡಿದರು. ತಾವೇ ನಿರ್ಮಿಸಿದ ಚಿತ್ರದಲ್ಲಿ ನರೇಶ್- ಪವಿತ್ರಾ ತಮ್ಮದೇ ನಿಜ ಜೀವನದ ಪಾತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾ ವಿವಾದ ಸೃಷ್ಟಿಸಿತ್ತು. ಈ ಸಿನಿಮಾ ರಿಲೀಸ್ ಮಾಡದಂತೆ ರಮ್ಯಾ ಕೋರ್ಟ್ ಮೆಟ್ಟಿಲೇರಿದರು. ಇನ್ನು ಸಿನಿಮಾ ಓಟಿಟಿಗೂ ಬರದಂತೆ ತಡೆಯುವ ಪ್ರಯತ್ನ ಮಾಡಿದ್ದರು. ಆದರೆ ಎಲ್ಲವೂ ವಿಫಲವಾಗಿತ್ತು.
ನರೇಶ್- ಪವಿತ್ರಾ ಲವ್ ಸ್ಟೋರಿ ಬಗ್ಗೆ ನರೇಶ್ ಮೊದಲ ಪತ್ನಿ ಮಗ ನವೀನ್ ಈಗ ಪ್ರತಿಕ್ರಿಯಿಸಿದ್ದಾರೆ. ಸುಮನ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಭಾಗಿ ಆಗಿ ಮಾತನಾಡಿದ್ದಾರೆ. "ನಮ್ಮ ಫ್ಯಾಮಿಲಿಯಲ್ಲಿ ಯಾರಿಗೆ ಏನು ಅನ್ನಿಸಿದರೆ ಅದನ್ನು ಮಾಡುತ್ತಾರೆ. ಯಾರ ಮೇಲೂ ಅವಲಂಬಿತರಾಗುವುದಿಲ್ಲ. ಮೊದಲಿನಿಂದಲೂ ಅದೇ ರೀತಿ ನಡೆಯುತ್ತಿದೆ. ಈ ಹಾದಿಯಲ್ಲಿ ಕೊಂಚ ತಪ್ಪುಗಳಾಗಿವೆ. ನನ್ನ ತಂದೆ ಕೂಡ ತಪ್ಪು ಮಾಡಿದ್ದಾರೆ. ತಪ್ಪು ಮಾಡಿದರು ಎನ್ನುವುದಕ್ಕಿಂತ ಮಾಡಿದ ತಪ್ಪಿಗೆ ಪರಿಹಾರ ಕಂಡುಕೊಂಡರು ಎಂದುಕೊಂಡಿದ್ದೇನೆ"

"ಯಾರ ಬಗ್ಗೆಯೂ ನಾನು ತಪ್ಪಾಗಿ ಭಾವಿಸುವುದಿಲ್ಲ. ಜನ ನಮ್ಮ ಫ್ಯಾಮಿಲಿ ಬಗ್ಗೆ ಏನು ಮಾತನಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಜನರಿಗೆ ಇಷ್ಟವಾಗುವಂತೆ ನಾವು ಬದುಕಲು ಸಾಧ್ಯ ಇಲ್ಲ ಅಲ್ಲವೇ? ಅಪ್ಪ ಯಾವುದೇ ನಿರ್ಧಾರ ಕೈಗೊಂಡರು ನಾನು ಗೌರವಿಸುತ್ತೇನೆ. ಅವರು ಸಂತೋಷವಾಗಿ ಇದ್ದಾರಾ? ಇಲ್ವಾ? ಅನ್ನೋದಷ್ಟೆ ನಮಗೆ ಬೇಕಿರುವುದು. ಅವರು ಸಂತೋಷವಾಗಿದ್ದಾರೆ. ನನಗೂ ಸಂತೋಷ"
"ಹೊರೆಗೆ ಜನ ಏನು ಅಂದುಕೊಂಡರೂ ನಮ್ಮ ತಂದೆ ತಲೆ ಕೆಡಿಸಿ ತಮಗೆ ಅನ್ನಿಸಿದ್ದನ್ನು ಮಾಡಿಕೊಂಡು ಹೋಗುತ್ತಾರೆ. ಇದು ಆತನಿಂದ ಕಲಿಯಬೇಕಿರುವ ಪಾಠ. ಪವಿತ್ರಾ ಲೋಕೇಶ್ನ ನನಗೆ ಬಹಳ ವರ್ಷಗಳಿಂದ ಗೊತ್ತು. ಬಹಳ ಒಳ್ಳೆಯವರು. ನಾನು ಯಾವುದಾದರೂ ಪ್ರಾಜೆಕ್ಟ್ ಕೈಗೆತ್ತಿಕೊಂಡರೆ ಆಲ್ ಬೆಸ್ಟ್ ಎಂದು ಹೇಳುತ್ತಾರೆ. ಆಗಾಗ್ಗೆ ಮಾತನಾಡುತ್ತೇವೆ. ಊಟಕ್ಕೆ ಸೇರುತ್ತಿದ್ದೆವು. ಆಕೆಯನ್ನು ಪವಿತ್ರ ಅವರೇ ಎಂದೇ ಕರೆಯುತ್ತೇನೆ" ಎಂದು ನವೀನ್ ಹೇಳಿದ್ದಾರೆ.
ನರೇಶ್ ಮೊದಲ ಪತ್ನಿ ರೇಖಾ ಸುಪ್ರಿಯಾ ಪುತ್ರ ನವೀನ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸತ್ಯ' ಎನ್ನುವ ಶಾರ್ಟ್ ಫಿಲ್ಮ್ ನಿರ್ದೇಶಿಸಿದ್ದರು. ಕೆಲ ವರ್ಷಗಳ ಹಿಂದೆ ತುಂಬಾ ದಪ್ಪ ಇದ್ದ ನವೀನ್ ಬಳಿಕ ವರ್ಕೌಟ್ ಮಾಡಿ ಸಿಕ್ಸ್‌ಪ್ಯಾಕ್ ಮಾಡಿದ್ದರು. ಇದರಿಂದ ತಮಗೆ ಕಿಡ್ನಿಗಳಿಗೆ ಸಮಸ್ಯೆ ಆಯಿತು ಎಂದಿದ್ದರು. ಇದೀಗ ಮತ್ತೆ ವರ್ಕೌಟ್ ಬಿಟ್ಟು ದಪ್ಪಗಾಗಿದ್ದಾರೆ.
ನರೇಶ್ ಈಗಾಗಲೇ 3ನೇ ಪತ್ನಿ ರಮ್ಯಾ ರಘಪತಿಯಿಂದ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಮಗನಿಗಾಗಿ ನಾನು ಡಿವೋರ್ಸ್ ಕೊಡಲ್ಲ ಎಂದು ರಮ್ಯಾ ಹೇಳುತ್ತಿದ್ದಾರೆ. ಇತ್ತೀಚೆಗೆ ನರೇಶ್ ಪರ ಬಂದ ಕೋರ್ಟ್ ತೀರ್ಪಿನಲ್ಲೂ ಇಬ್ಬರು ಒಟ್ಟಿಗೆ ಜೀವನ ನಡೆಸುತ್ತಿಲ್ಲ ಎನ್ನುವುದು ಸಾಬೀತಾಗಿದೆ. ಹಾಗಾಗಿ ಶೀಘ್ರದಲ್ಲೇ ನರೇಶ್‌ಗೆ ಡಿವೋರ್ಸ್ ಸಿಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.


Click it and Unblock the Notifications











