ಕೊನೆಗೂ 'ವರಪ್ರಸಾದ್' ಕೈ ಹಿಡಿದ ನಯನತಾರಾ; 'ಟಾಕ್ಸಿಕ್' ಚಿತ್ರಕ್ಕೆ ಕೈ ಕೊಡ್ತಾರಾ?
ತಮಿಳು ನಟಿ ನಯನತಾರಾಗೆ ಅಭಿಮಾನಿಗಳು ಲೇಡಿ ಸೂಪರ್ ಸ್ಟಾರ್ ಬಿರುದು ಕೊಟ್ಟಿದ್ದಾರೆ. ಆದರೆ ಆಕೆ ಅದನ್ನು ತಿರಸ್ಕರಿಸಿದ್ದಾರೆ. ಮದುವೆ ಆಗಿ ಸಾರೋಗಸಿ ಪದ್ಧತಿಯಲ್ಲಿ ಅವಳಿ ಮಕ್ಕಳನ್ನು ಪಡೆದ ಬಳಿಕ ಕೂಡ ನಯನ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಮಕ್ಕಳ ಲಾಲನೆ ಪಾಲನೆ ಜೊತೆಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಪತಿ ವಿಘ್ನೇಶ್ ಶಿವನ್ ಜೊತೆ ಸೇರಿ ತಮ್ಮದೇ ಬ್ಯಾನರ್ ಅಡಿಯಲ್ಲಿ ನಯನತಾರ ಸಿನಿಮಾ ನಿರ್ಮಾಣ ಸಹ ಮಾಡುತ್ತಿದ್ದಾರೆ. ಸದ್ಯ ತೆಲುಗು, ತಮಿಳು ಹಾಗೂ ಕನ್ನಡ ಚಿತ್ರದಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ತೆಲುಗಿನಲ್ಲಿ ನಯನ್ ನಟನೆಯ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಬಿಡುಗಡೆ ಆಗ್ತಿದೆ. ಚಿತ್ರದ ಪ್ರಚಾರಕ್ಕೆ ಆಕೆ ಕೈಜೋಡಿಸಿದ್ದಾರೆ.

ಅನಿಲ್ ರಾವಿಪುಡಿ ನಿರ್ದೇಶನದ ಫ್ಯಾಮಿಲಿ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಇದು. ಚಿರಂಜೀವಿ ಜೋಡಿಯಾಗಿ ಚಿತ್ರದಲ್ಲಿ ನಯನ್ ಮಿಂಚಿದ್ದಾರೆ. ಈಗಾಗಲೇ ಚಿತ್ರದ 3 ಹಾಡುಗಳು ಹಿಟ್ ಆಗಿದೆ. 'ಮೀಸಾಲ ಪಿಲ್ಲ' ಸಾಂಗ್ 100 ಮಿಲಿಯನ್ ವೀವ್ಸ್ ಸಾಧಿಸಿ ಯೂಟ್ಯೂಬ್‌ನಲ್ಲಿ ದಾಖಲೆ ಬರೆದಿದೆ. ಜನವರಿ 12ಕ್ಕೆ ಸಿನಿಮಾ ಬಿಡುಗೆ ಆಗ್ತಿದೆ. ನಯನತಾರ ಚಿತ್ರದ ಪ್ರಚಾರದಲ್ಲಿ ಭಾಗಿ ಆಗಿರುವುದು ಅಚ್ಚರಿ ಮೂಡಿಸಿದೆ.
ಅರೇ ತಾವು ನಟಿಸಿದ ಸಿನಿಮಾ ಪ್ರಚಾರದಲ್ಲಿ ನಯನತಾರಾ ಭಾಗಿ ಆಗುವುದರಲ್ಲಿ ವಿಶೇಷ ಏನಿದೆ ಎಂದು ಅನ್ನಿಸಬಹುದು. ಖಂಡಿತ ಇದೆ. ನಯನತಾರಾ ಕೆಲ ವರ್ಷಗಳಿಂದ ತಮ್ಮ ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಈ ವಿಚಾರದ ಬಗ್ಗೆ ಚಿತ್ರತಂಡದ ಜೊತೆ ಚರ್ಚಿಸಿ ಬಳಿಕ ಚಿತ್ರಕ್ಕೆ ಸಹಿ ಮಾಡುತ್ತಾರೆ. ಆದರೆ 'ಮನ ಶಂಕರವರಪ್ರಸಾದ್ ಗಾರು' ಚಿತ್ರದ ಪ್ರಚಾರದಲ್ಲಿ ನಯನ್ ಭಾಗಿ ಆಗುತ್ತಿರುವುದು ಕೆಲವರ ಹುಬ್ಬೇರಿಸಿದೆ.
ಆರಂಭದಲ್ಲೇ ತಾವು ಚಿತ್ರದಲ್ಲಿ ನಟಿಸುತ್ತಿರುವುದಾಗಿ ಶೂಟ್ ಮಾಡಿದ್ದ ಪ್ರೊಮೊದಲ್ಲಿ ನಯನತಾರಾ ಕಾಣಿಸಿಕೊಂಡಿದ್ದರು. ಇದೀಗ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಮತ್ತೆ ಪ್ರಚಾರದ ಬಂಡಿ ಎಳೆಯುತ್ತಿದ್ದಾರೆ. ಇದು ತಮಿಳು ಫಿಲ್ಮ್ ಮೇಕರ್ಸ್ ಹುಬ್ಬೇರಿಸುವಂತೆ ಮಾಡಿದೆ. ಇಷ್ಟು ದಿನ ತಾವು ನಟಿಸಿದ ಸಿನಿಮಾಗಳ ಪ್ರಚಾರ ಒಲ್ಲೆ ಅನ್ನುತ್ತಿದ್ದ ನಯನತಾರ ಹೀಗೆ ದಿಢೀರನೆ ನಿರ್ಧಾರ ಬದಲಿಸಿದ್ದು ಏಕೆ ಎಂದು ಕೆಲವರು ಕೇಳುತ್ತಿದ್ದಾರೆ.
ನಿರ್ದೇಶಕ ಅನಿಲ್ ರಾವಿಪುಡಿ ಬಳಿ ಬಂದು 'ಮನ ಶಂಕರವರಪ್ರಸಾದ್ ಗಾರು' ಚಿತ್ರದ ಪ್ರಚಾರದ ಬಗ್ಗೆ ನಯನತಾರಾ ಮಾತನಾಡುವಂತೆ ಹೊಸದೊಂದು ಪ್ರೋಮೊ ರಿಲೀಸ್ ಆಗಿದೆ. ಸಿನಿಮಾ ಪ್ರಾರಂಭಿಸಿದ್ದಾಗ ಒಂದು ಪ್ರಮೋಷನಲ್ ವೀಡಿಯೋ ಮಾಡಿದ್ವಿ ಈಗ ಏನು ಇಲ್ವಾ? ಎಂದು ನಯನ್ ಕೇಳಿದ್ದಾರೆ. ಇದಕ್ಕೆ ತಲೆ ಸುತ್ತಿ ಬಿದ್ದಂತೆ ಅನಿಲ್ ನಟಿಸಿದ್ದು ಬಳಿಕ ಸಾವರಿಸಿಕೊಂಡು "ನೀವೇ ಪ್ರಮೋಷನ್ ಮಾಡೋಣ ಅಂದಿದ್ದೇ ದೊಡ್ಡ ಪ್ರಮೋಷನ್. ನೀವು ಕೇಳಿದ್ರಲ್ಲ ಅಷ್ಟೇ ಸಾಕು.. ಬರೀ ಸಿನಿಮಾ ರಿಲೀಸ್ ಡೇಟ್ ಹೇಳಿ ಸಾಕು" ಎಂದಿದ್ದಾರೆ. ಜನವರಿ 12ಕ್ಕೆ ಸಿನಿಮಾ ರಿಲೀಸ್ ಎಂದು ನಯನತಾರ ಹೇಳಿದ್ದಾರೆ. ಪ್ರಮೋಷನಲ್ ವೀಡಿಯೋ ವೈರಲ್ ಆಗ್ತಿದೆ.
ನಯನತಾರಾ ಸಿನಿಮಾ ಪ್ರಚಾರದಲ್ಲಿ ಯಾಕೆ ಭಾಗವಹಿಸಲ್ಲ ಎಂದು ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. "ಸಿನಿಮಾ ಮಾಡುವುದು ಮಾತ್ರ ನನ್ನ ಕೆಲಸ, ಪ್ರಚಾರ ಮಾಡುವುದು ನನ್ನ ಕೆಲಸವಲ್ಲ. ಸಿನಿಮಾ ಮಾತನಾಡಬೇಕೆ ಹೊರತು, ಪ್ರಚಾರವಲ್ಲ.. ''ನಾನು ಬಹಳ ಖಾಸಗಿ ವ್ಯಕ್ತಿ. ಹೆಚ್ಚು ಜನರು ಸೇರುವ ಕಡೆ ನಾನು ಹೋಗಲು ಇಷ್ಟಪಡುವುದಿಲ್ಲ" ಎಂದಿದ್ದರು. ಚಿರಂಜೀವಿ ಜೊತೆ ನಟಿಸಿದ್ದ 'ಸೈರಾ' ಚಿತ್ರದ ಪ್ರಚಾರದಲ್ಲಿ ಕೂಡ ಆಕೆ ಭಾಗಿ ಆಗಿರಲಿಲ್ಲ.
ಯಶ್ ನಿರ್ಮಿಸಿ ನಟಿಸುತ್ತಿರುವ 'ಟಾಕ್ಸಿಕ್' ಚಿತ್ರದ ಪ್ರಮುಖ ಪಾತ್ರದಲ್ಲಿ ನಯನತಾರ ನಟಿಸಿದ್ದಾರೆ. ಇತ್ತೀಚೆಗೆ ಗಂಗಾ ಎನ್ನುವ ಪವರ್‌ಫುಲ್ ಪಾತ್ರದಲ್ಲಿ ಆಕೆಯ ಫಸ್ಟ್ ಲುಕ್ ರಿವೀಲ್ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗ್ತಿದೆ. ಶೀಘ್ರದಲ್ಲೇ ದೊಡ್ಡಮಟ್ಟದಲ್ಲಿ ಈ ಸಿನಿಮಾ ಪ್ರಚಾರ ಆರಂಭಿಸಬೇಕಿದೆ. ನಿಜಕ್ಕೂ ನಯನತಾರಾ ಚಿತ್ರದ ಪ್ರಚಾರದಲ್ಲಿ ಭಾಗಿ ಆಗುತ್ತಾರಾ? ಸಿನಿಮಾಗಳ ಪ್ರಚಾರಕ್ಕೆ ಹೋಗಲ್ಲ ಎನ್ನುವ ತಮ್ಮ ನಿರ್ಧಾರ ಬದಲಿಸಿಕೊಂಡಿದ್ದಾರಾ? ಕಾದು ನೋಡಬೇಕಿದೆ.


Click it and Unblock the Notifications











