'ರಾಧೆ-ಶ್ಯಾಮ್' ಸಿನಿಮಾಕ್ಕೆ ನೆಗೆಟಿವ್ ವಿಮರ್ಶೆ: ಪ್ರಭಾಸ್ ಅಭಿಮಾನಿ ಆತ್ಮಹತ್ಯೆ!
ಪ್ರಭಾಸ್ ಅಭಿನಯದ 'ಸಾಹೋ' ಸಿನಿಮಾದಲ್ಲಿ ಸಂಭಾಷಣೆ ಒಂದಿದೆ. ತಮ್ಮತ್ತ ಗುಂಡು ಹಾರಿಸುತ್ತಿರುವವರ ಕುರಿತು ನಾಯಕಿ ಶ್ರದ್ಧಾ ಕಪೂರ್ ಪ್ರಭಾಸ್ ಅನ್ನು ಕೇಳುತ್ತಾರೆ 'ಯಾರವರು?' ಎಂದು ಅದಕ್ಕೆ ಪ್ರಭಾಸ್ 'ನನ್ನ ಫ್ಯಾನ್ಸ್' ಎನ್ನುತ್ತಾರೆ. 'ಇಷ್ಟೊಂದು ವೈಯಲೆಂಟ್ (ಹಿಂಸಾತ್ಮಕ) ಅಭಿಮಾನಿಗಳಾ?' ಎಂದು ಶ್ರದ್ಧಾ ಕೇಳಿದಾಗ, 'ಅವರು ನನ್ನ ಡೈ ಹಾರ್ಡ್ ಫ್ಯಾನ್ಸ್' ಎನ್ನುತ್ತಾರೆ ಪ್ರಭಾಸ್.
Recommended Video
ವ್ಯಕ್ತಿ ಪೂಜೆಯ ಪರಾಕಾಷ್ಟೆಯಲ್ಲಿ ಆರಾಧಕ ತನ್ನ ಬುದ್ಧಿ ಸ್ಥಿಮಿತ ಕಳೆದುಕೊಳ್ಳುತ್ತಾನೆ ಎಂಬುದಕ್ಕೆ ಪ್ರಭಾಸ್ ಅಭಿಮಾನಿಯೊಬ್ಬ ಸಾಕ್ಷಿ. ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾದ ಬಗ್ಗೆ ಕೆಟ್ಟ ವಿಮರ್ಶೆಗಳು ಬಂದಿವೆಯೆಂದು, ಸಿನಿಮಾ ಚೆನ್ನಾಗಿಲ್ಲವೆಂದು ಜನ ಮಾತನಾಡಿಕೊಳ್ಳುತ್ತಿದ್ದಾರೆಂದು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ!
ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ರವಿ ತೇಜ ಹೆಸರಿನ ಪ್ರಭಾಸ್ ಅಭಿಮಾನಿಯೊಬ್ಬ, 'ರಾಧೆ-ಶ್ಯಾಮ್' ಸಿನಿಮಾ ಚೆನ್ನಾಗಿಲ್ಲವೆಂದು ಬೇಸರಗೊಂಡು, ಸಿನಿಮಾದ ಮೇಲಿದ್ದ ತನ್ನ ನಿರೀಕ್ಷೆಗಳು ಹುಸಿಯಾದುವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಕುಟುಂಬವನ್ನು ಶೋಕ ಸಾಗರಕ್ಕೆ ದೂಡಿದ್ದಾನೆ.

ಕರ್ನೂಲಿನ ತಿಲಕ್ ನಗರ ನಿವಾಸಿಯಾಗಿದ್ದ 24 ವರ್ಷ ವಯಸ್ಸಿನ ರವಿ ತೇಜ, ಪ್ರಭಾಸ್‌ರ ಅಭಿಮಾನಿಯಾಗಿದ್ದ. 'ರಾಧೆ-ಶ್ಯಾಮ್' ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ. ಆದರೆ ಸಿನಿಮಾ ಚೆನ್ನಾಗಿಲ್ಲದೇ ಇರುವುದು ರವಿ ತೇಜ ಅನ್ನು ಖಿನ್ನತೆಗೆ ಗುರಿ ಮಾಡಿತ್ತು. ಹೀಗಾಗಿ ತನ್ನ ಮನೆಯಲ್ಲಿಯೇ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಳೆದ ವರ್ಷ 'ರಾಧೆ-ಶ್ಯಾಮ್' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆವ ಸಂದರ್ಭದಲ್ಲಿ ಸಹ ಕೆಲವು ಪ್ರಭಾಸ್ ಅಭಿಮಾನಿಗಳು ಆತ್ಮಹತ್ಯೆ ಪತ್ರ ಬರೆದಿದ್ದರು. 'ರಾಧೆ-ಶ್ಯಾಮ್' ಸಿನಿಮಾದ ಅಪ್‌ಡೇಟ್ ಬಿಡುಗಡೆ ಮಾಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸಿನಿಮಾದ ಟೀಸರ್ ಬಿಡುಗಡೆ ಮಾಡಿತ್ತು ಚಿತ್ರತಂಡ.
ಪ್ರಭಾಸ್-ಪೂಜಾ ಹೆಗ್ಡೆ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಮಾರ್ಚ್ 11 ರಂದು ಬಿಡುಗಡೆ ಆಗಿದೆ. ಪ್ರೇಮಕತೆ ಹೊಂದಿರುವ ಈ ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳು ಬಂದಿಲ್ಲ. ಸಿನಿಮಾ ಸಾಧಾರಣಕ್ಕಿಂತಲೂ ಕಳಪೆಯಾಗಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಭಾಸ್ ಅಭಿಮಾನಿಗಳು ಸಹ 'ರಾಧೆ-ಶ್ಯಾಮ್' ಸಿನಿಮಾದಿಂದ ನಿರಾಶೆಗೊಳಗಾಗಿದ್ದಾರೆ.
ತೆಲುಗು ರಾಜ್ಯಗಳಲ್ಲಿ ಸಿನಿಮಾ ನಟರ ಬಗೆಗಿನ ಅಭಿಮಾನ ಅತಿರೇಕ ಎನ್ನುವಷ್ಟಿದೆ. ಸ್ಟಾರ್ ನಟರ ಅಭಿಮಾನಿಗಳು ಪರಸ್ಪರ ಜಗಳವಾಡುವುದು, ಎದುರಾಳಿ ನಟನ ಸಿನಿಮಾ ಬಿಡುಗಡೆ ದಿವಸ ಗಲಾಟೆ ಮಾಡುವುದು ಇದೆ. ಜೂ ಎನ್‌ಟಿಆರ್ ಅಭಿಮಾನಿಯೊಬ್ಬ ಪವನ್ ಕಲ್ಯಾಣ್ ಅಭಿಮಾನಿಗೆ ಚಾಕು ಇರಿದು ಕೊಂದ ಘಟನೆ ಸಹ ಕೆಲ ವರ್ಷಗಳ ಹಿಂದಷ್ಟೆ ನಡೆದಿತ್ತು.
ತಮ್ಮ ಅಭಿಮಾನಿಯ ಈ ಅತಿರೇಕದ ವರ್ತನೆ ಬಗ್ಗೆ ನಟ ಪ್ರಭಾಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಘಟನೆಯಿಂದ ಪ್ರಭಾಸ್ ಮೇಲೆ ಹಾಗೂ ಪ್ರಭಾಸ್‌ರ ಮುಂದಿನ ಸಿನಿಮಾಗಳನ್ನು ನಿರ್ದೇಶನ ಮಾಡುವ ನಿರ್ದೇಶಕ ಮೇಲೆ ಒತ್ತಡವಂತೂ ಹೆಚ್ಚಾಗಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777
for India
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]


Click it and Unblock the Notifications











