ದುಡ್ಡು ಕೊಟ್ಟು ಟೀಸರ್ ಗೆಲ್ಲಿಸಿದ್ರು; ಸಲಾರ್ ಟೀಸರ್ ವ್ಯೂಸ್ ಫೇಕ್ ಎಂದು ಆರೋಪಿಸಿದ ನೆಟ್ಟಿಗರು!
ಜುಲೈ 6ರಂದು ಬೆಳಗ್ಗೆ 5.12ಕ್ಕೆ ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಸಲಾರ್ ಸಿನಿಮಾದ ಟೀಸರ್ ಬಿಡುಗಡೆಗೊಂಡಿತು. ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ್ದು, ಟೀಸರ್ ವೀಕ್ಷಿಸಿ ಚಿತ್ರ ಯಾವ ಕಥೆ ಆಧಾರಿತವಾಗಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಕಾತರರಾಗಿದ್ದರು.
ಆದರೆ ನಿರ್ದೇಶಕ ಪ್ರಶಾಂತ್ ನೀಲ್ ಟೀಸರ್‌ನಲ್ಲಿ ಸಿನಿ ರಸಿಕರಿಗೆ ಹೆಚ್ಚೇನೂ ಮಾಹಿತಿಯನ್ನು ಬಿಟ್ಟುಕೊಡಲಿಲ್ಲ. ಹಿರಿಯ ಕಲಾವಿದನ ಬಳಿ ನಾಯಕನನ್ನು ವೈಭವೀಕರಿಸುವ ಡೈಲಾಗ್ ಹೇಳಿಸಿರುವ ಪ್ರಶಾಂತ್ ನೀಲ್ ಖಳ ನಾಯಕರನ್ನು ಹುಲಿ, ಸಿಂಹ, ಚಿರತೆಗಳಿಗೆ ಹೋಲಿಸಿ ನಾಯಕನನ್ನು ಡೈನೋಸರ್‌ಗೆ ಹೋಲಿಸಿ ವಿಭಿನ್ನವಾದ ಎಲಿವೇಷನ್ ನೀಡಿದ್ದಾರೆ.

ಹೀಗೆ ನಾಯಕನಿಗೆ ಬಿಲ್ಡಪ್ ಕೊಟ್ಟಿರುವ ಪ್ರಶಾಂತ್ ನೀಲ್ ಟೀಸರ್‌ನಲ್ಲಿ ಎಲ್ಲಿಯೂ ಸಹ ಪ್ರಭಾಸ್ ಮುಖ ದರ್ಶನವನ್ನು ಮಾಡಿಸಿಯೇ ಇಲ್ಲ. ಟೀಸರ್‌ನ ಅಂತಿಮ ದೃಶ್ಯದಲ್ಲಿ ಪ್ರಭಾಸ್ ಅವರನ್ನು ಸೈಡ್ ಆಂಗಲ್‌ನಿಂದ ಮಾತ್ರ ತೋರಿಸಿರುವ ಪ್ರಶಾಂತ್ ನೀಲ್ ಟೀಸರ್ ಮೂಲಕ ಪ್ರಭಾಸ್ ಅಭಿಮಾನಿಗಳನ್ನು ಹಾಗೂ ಸಿನಿ ರಸಿಕರನ್ನು ನಿಜವಾಗಿಯೂ ಟೀಸ್ ಮಾಡಿಬಿಟ್ಟಿದ್ದಾರೆ.
ಇನ್ನು ಈ ಟೀಸರ್ ಅನ್ನು ಮುಂಜಾನೆ ಸೂರ್ಯ ಉದಯಿಸುವುದಕ್ಕೂ ಮುನ್ನ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದಾಗಲೇ ಇದು ತಪ್ಪು ನಿರ್ಧಾರ ಎಂದು ಹಲವಾರು ಮಂದಿ ಅಭಿಪ್ರಾಯ ಹೊರಹಾಕಿದ್ದರು. ಈ ಸಮಯದಲ್ಲಿ ಟೀಸರ್ ಬಿಡುಗಡೆ ಮಾಡಿದ್ರೆ ಹೆಚ್ಚು ವೀಕ್ಷಣೆಗಳು ಬರುವುದಿಲ್ಲ ಎಂದು ಊಹಿಸಿದ್ರು.
ಆದರೆ ನಡೆದಿದ್ದೇ ಬೇರೆ. ಸಲಾರ್ ಚಿತ್ರದ ಟೀಸರ್ ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ ಬರೋಬ್ಬರಿ 83 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಳ್ಳುವುದರ ಮೂಲಕ ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಟೀಸರ್ ಎನಿಸಿಕೊಂಡಿತು.
ಹೀಗೆ ಸಲಾರ್ ಟೀಸರ್ ಊಹೆಗೂ ಮೀರಿದ ವ್ಯೂಸ್‌ಗಳನ್ನು ಪಡೆದುಕೊಂಡು 100 ಮಿಲಿಯನ್ ವೀಕ್ಷಣೆಗಳನ್ನು ಕೇವಲ 43 ಗಂಟೆಗಳಲ್ಲಿ ಸಾಧಿಸಿತು. ಹೀಗೆ ಬಿಡುಗಡೆಗೊಂಡ ಎರಡು ದಿನಗಳ ಒಳಗೆ ಈ ದಾಖಲೆ ಬರೆದಿರುವ ಸಲಾರ್ ಟೀಸರ್ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿ ಬರುತ್ತಿದೆ.
ಹೌದು, ಸಲಾರ್ ಟೀಸರ್ ಪಡೆದುಕೊಂಡಿರುವ ವ್ಯೂಸ್ ಫೇಕ್ ಎಂದು ಹಲವಾರು ಸಿನಿ ರಸಿಕರು ಆರೋಪಿಸಿದ್ದಾರೆ. ಸಲಾರ್ ಚಿತ್ರತಂಡ ಹಾಗೂ ಪ್ರಭಾಸ್ ಪ್ರಚಾರದ ತಂಡಗಳು ಸಲಾರ್ ಚಿತ್ರದ ಟೀಸರ್ ಅನ್ನು ದುಡ್ಡು ಕೊಟ್ಟು ಜಾಹೀರಾತಿನ ಜಾಗಗಳಲ್ಲಿ ಪ್ರದರ್ಶಿಸಿ ವೀಕ್ಷಣೆಗಳನ್ನು ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ.
ಇನ್ನು ಕೇವಲ ಆರೋಪ ಮಾಡುವುದಲ್ಲದೇ ಯುಟ್ಯೂಬ್‌ನಲ್ಲಿ ಬೇರೆ ವಿಡಿಯೊಗಳನ್ನು ನೋಡಲು ಆರಂಭಿಸಿದರೆ ಆ ವಿಡಿಯೊ ಆರಂಭವಾಗುವುದಕ್ಕೂ ಮುನ್ನ ಸಲಾರ್ ಟೀಸರ್ ಪ್ರಸಾವಾಗುತ್ತಿದೆ ಎಂಬುದಕ್ಕೆ ಸ್ಕ್ರೀನ್‌ಶಾಟ್‌ಗಳನ್ನೂ ಸಹ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
ಹೀಗೆ ದುಡ್ಡ ಕೊಟ್ಟು ಪ್ರಮೋಟ್ ಮಾಡಿದ ಕಾರಣಕ್ಕೆ ಸಲಾರ್ ಟೀಸರ್ ಇಷ್ಟು ದೊಡ್ಡ ಮಟ್ಟದ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ, ಅದರಲ್ಲಿಯೂ ದೊಡ್ಡ ಮಟ್ಟದಲ್ಲಿ ನೆಗೆಟಿವ್ ಪ್ರತಿಕ್ರಿಯೆಯನ್ನೇ ಪಡೆದುಕೊಂಡಿರುವ ಸಲಾರ್ ಟೀಸರ್ ಇಷ್ಟು ದೊಡ್ಡ ಸಂಖ್ಯೆಯ ವ್ಯೂಸ್ ಪಡೆದುಕೊಳ್ಳಲು ಹೇಗೆ ಸಾಧ್ಯ ಎಂದು ನೆಟ್ಟಿಗರು ವಾದ ಮಾಡುತ್ತಿದ್ದಾರೆ.
ಇನ್ನು ಸಲಾರ್ ಮಾತ್ರವಲ್ಲದೇ ಈಗಿನ ಆನ್‌ಲೈನ್ ಯುಗದಲ್ಲಿ ಬೇರೆ ಚಿತ್ರತಂಡಗಳೂ ಸಹ ಇದೇ ರೀತಿ ತಮ್ಮ ಟೀಸರ್ ಹಾಗೂ ಟ್ರೈಲರ್‌ಗಳನ್ನು ಪ್ರಮೋಟ್ ಮಾಡಿದ ಉದಾಹರಣೆಗಳಿವೆ.
ಹೀಗಾಗಿ ಈ ರೀತಿಯ ಮಾರ್ಗಗಳು ಟೀಸರ್ ಅನ್ನು ಪ್ರಮೋಟ್ ಮಾಡಲು ಬಳಸಲಾಗುತ್ತಿರುವ ಹೊಸ ಜಾಹೀರಾತಿನ ತಂತ್ರ ಹಾಗೂ ಅದು ಕಾಮನ್ ಎಂದು ಇನ್ನೂ ಕೆಲ ಸಿನಿ ರಸಿಕರು ಅಭಿಪ್ರಾಯ ತಿಳಿಸಿದ್ದಾರೆ.


Click it and Unblock the Notifications











