ಹಿಂದಿ ಹೇರಿಕೆ ಸಮರ್ಥಿಸಿಕೊಂಡ ಪವನ್ ಕಲ್ಯಾಣ್; ಕನ್ನಡಿಗರಿಂದಲೂ ಟೀಕೆ
ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಕೂಡ ಈ ಬಗ್ಗೆ ಪದೇ ಪದೆ ಆಕ್ರೋಶ ಭುಗಿಲೇಳುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರ ರೂಪಿಸಿರುವ ಕೇಂದ್ರದ ನಿರ್ಧಾರವನ್ನು ತಮಿಳುನಾಡು ಸರ್ಕಾರ ವಿರೋಧಿಸಿದೆ. ಆದರೆ ಈ ಬಗ್ಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿ ಟಾಂಗ್ ಕೊಟ್ಟಿದ್ದಾರೆ.
ಆಂಧ್ರದ ಪೀಠಾಪುರದಲ್ಲಿ ನಡೆದ ಜನಸೇನಾ ಪಕ್ಷದ ಸಮಾವೇಶದಲ್ಲಿ ಪವನ್ ಕಲ್ಯಾಣ್ ಮಾತನಾಡಿದ್ದಾರೆ. "ಮಾತನಾಡಿದರೆ ಸಾಕು, ಸಂಸ್ಕೃತ ಭಾಷೆಯನ್ನು ಬೈಯುತ್ತಾರೆ. ದಕ್ಷಿಣದ ಮೇಲೆ ಹಿಂದಿ ಹೇರಲಾಗುತ್ತಿದೆ ಎಂದು ಕ್ಯಾತೆ ತೆಗೆಯುತ್ತಿದ್ದಾರೆ. ಎಲ್ಲವೂ ರಾಷ್ಟ್ರೀಯ ಭಾಷೆಗಳಲ್ಲವೇ? ತಮಿಳುನಾಡಿನಲ್ಲಿ ಹಿಂದಿ ಬೇಡ ಎಂದು ಹೇಳುತ್ತಿದ್ದಾರೆ. ತಮಿಳು ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ. ಅವರಿಗೆ ಹಿಂದಿಯಿಂದ ಹಣ ಬೇಕು, ಉತ್ತರ ಪ್ರದೇಶದಿಂದ ಹಣ ಬೇಕು, ಬಿಹಾರದಿಂದ ಹಣ ಬೇಕು, ಛತ್ತೀಸ್‌ಗಢದಿಂದ ಹಣ ಬೇಕು, ಬಿಹಾರದ ಎಲ್ಲಾ ಕಾರ್ಮಿಕರು ಬೇಕು, ಆದರೆ ನಾವು ಹಿಂದಿಯನ್ನು ದ್ವೇಷಿಸೋದು ನ್ಯಾಯನಾ? ಇದು ಬದಲಾಗಬೇಕು" ಎಂದು ಪವನ್ ಹೇಳಿದ್ದಾರೆ.

ಮಾತು ಮುಂದುವರೆಸಿರುವ ಪವನ್ ಕಲ್ಯಾಣ್ "ಭಾಷೆಗಳನ್ನು ದ್ವೇಷಿಸುವ ಅಗತ್ಯವಿಲ್ಲ. ನಾನು ಎಲ್ಲಾ ಹಿಂದೂಗಳಿಗೆ ಮುಸ್ಲಿಮರಿಂದ ಕಲಿಯಬೇಡಿ ಎಂದು ಹೇಳುತ್ತೇನೆ... ದೇವಾಲಯಗಳಲ್ಲಿ ಸಂಸ್ಕೃತದಲ್ಲಿ ಮಂತ್ರಗಳನ್ನು ಪಠಿಸಬಾರದು ಎನ್ನುತ್ತಾರೆ. ಆದರೆ ಮುಸ್ಲಿಮರು ಯಾವತ್ತಾದರೂ ಆ ರೀತಿ ಹೇಳುತ್ತಾರೆಯೇ? ಮುಸ್ಲಿಮರು ಯಾರೇ ಆಗಿರಲಿ, ಅವರು ಅರೇಬಿಕ್ ಅಥವಾ ಉರ್ದು ಭಾಷೆಯಲ್ಲಿ ಪ್ರಾರ್ಥಿಸುತ್ತಾರೆ. ಹಿಂದೂ ಧರ್ಮದಲ್ಲಿ ಮಂತ್ರಗಳು ಸಂಸ್ಕೃತದಲ್ಲಿವೆ. ಹಾಗಾಗಿ ನಾವು ತಮಿಳು ಅಥವಾ ತೆಲುಗಿನಲ್ಲಿ ಮಂತ್ರಗಳನ್ನು ಪಠಿಸಬೇಕೇ?" ಎಂದು ಪವನ್ ಕಲ್ಯಾಣ್ ಪ್ರಶ್ನಿಸಿದ್ದಾರೆ.
"ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ದಕ್ಷಿಣ ರಾಜ್ಯಗಳಲ್ಲಿ ಸ್ಥಾನಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳಿಕೆ ನೀಡುತ್ತಿರುವವರು, ಅವು ನಿಜವಾಗಿಯೂ ಕಡಿಮೆಯಾಗುತ್ತವೆಯೇ ಎಂದು ಚರ್ಚಿಸಬೇಕು. ಇನ್ನು ರೂಪಾಯಿ ಚಿಹ್ನೆಯನ್ನು ಬದಲಾಯಿಸಿ ತಮಿಳಿನಲ್ಲಿ ಹಾಕುವುದರ ಅರ್ಥವೇನು? ವಿವೇಕ, ಆಲೋಚನೆ ಬೇಡವೇ? ಉತ್ತರ ಮತ್ತು ದಕ್ಷಿಣ ಭಾರತ ಎಂದು ಹೇಳುತ್ತಾ ಉತ್ತರದವರು ಬಿಳಿಯರು. ನಾವು ದಕ್ಷಿಣದವರು ಕರಿಯರು ಎಂದು ಹೇಳುವ ಮೂಲಕ ದೇಶವನ್ನು ವಿಭಜಿಸಲು ಪ್ರಯತ್ನಿಸಬಾರದು. ರಾಜಕೀಯ ಸಂಘರ್ಷಗಳು ಸಹಜ. ಆ ನೆಪದಲ್ಲಿ ದೇಶವನ್ನು ವಿಭಜಿಸಬೇಡಿ" ಎಂದು ಪವನ್ ಆಗ್ರಹಿಸಿದ್ದಾರೆ.
ಹಿಂದಿ ಹೇರಿಕೆ ಬಗ್ಗೆ ಪವನ್ ಕಲ್ಯಾಣ್ ವಾದವನ್ನು ಸಾಕಷ್ಟು ಜನ ಟೀಕಿಸುತ್ತಿದ್ದಾರೆ. ಕೆಲ ಕನ್ನಡಿಗರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿ ಹೇರಿಕೆಯನ್ನು ದಕ್ಷಿಣದ ಎಲ್ಲಾ ರಾಜ್ಯಗಳು ವಿರೋಧಿಸಬೇಕು. ಕೇಂದ್ರ ಸರ್ಕಾರಕ್ಕರ ಜನಸೇನಾ ಪಕ್ಷ ಬೆಂಬಲ ಸೂಚಿಸಿದೆ. ಆಂಧ್ರದಲ್ಲಿ ಮೈತ್ರಿ ಮಾಡಿಕೊಂಡು ಪವನ್ ಡಿಸಿಎಂ ಆಗಿದ್ದಾರೆ. ಹಾಗಾಗಿ ಕೇಂದ್ರ ನಡೆಯನ್ನು ಕೊಂಡಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಾವು ನಮ್ಮ ಸಿನಿಮಾಗಳನ್ನು ಡಬ್ ಮಾಡಿ ಹಿಂದಿಯಲ್ಲಿ ಬಿಡುಗಡೆ ಮಾಡ್ತಿಲ್ಲ. ಅಲ್ಲಿನವರು ಡಿಮ್ಯಾಂಡ್ ಮಾಡಿ ಸಿನಿಮಾ ಡಬ್ ಮಾಡಿ ನೋಡುತ್ತಿದ್ದಾರೆ. ಅವರು ನೋಡಲ್ಲ ಅಂದರೆ ನಾವು ಸಿನಿಮಾ ಡಬ್ ಮಾಡಿ ಏನು ಪ್ರಯೋಜನ. ಹಿಂದಿ ಹೇರಿಕೆಗೂ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡುವುದಕ್ಕೂ ಲಿಂಕ್ ಮಾಡಬೇಡಿ ಎಂದು ತಮಿಳರು ಆಂಧ್ರ ಡಿಸಿಎಂಗೆ ಸೋಶಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡುತ್ತಿದ್ದಾರೆ.
ಹಿಂದಿ ಹೇರಿಕೆ ಬಗ್ಗೆ ಪವನ್ ಕಲ್ಯಾಣ್ ವಾದವನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಟೀಕಿಸಿದ್ದಾರೆ. "ನಿಮ್ಮ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ ಎನ್ನುವುದು ಮತ್ತೊಂದು ಭಾಷೆಯನ್ನು ದ್ವೇಷಿಸಿದಂತೆ ಅಲ್ಲ. ಸ್ವಾಭಿಮಾನದಿಂದ ನಮ್ಮ ಮಾತೃಭಾಷೆಯನ್ನು, ನಮ್ಮ ತಾಯಿಯನ್ನು ಕಾಪಾಡಿಕೊಳ್ಳುವುದು ಅಂತ ಯಾರಾದರೂ ಪವನ್ ಕಲ್ಯಾಣ್‌ಗೆ ಹೇಳಿ" ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
ತಮಿಳುನಾಡು ಸರ್ಕಾರ ಇತ್ತೀಚೆಗೆ ತನ್ನ ಬಜೆಟ್ ಪತ್ರಗಳಲ್ಲಿ ಅಧಿಕೃತ ರೂಪಾಯಿ ಚಿಹ್ನೆಯನ್ನು ಬಳಸಿಕೊಂಡಿರಲಿಲ್ಲ. ಬದಲಿಗೆ ತಮಿಳಿನ 'ರೂ' ಅಕ್ಷರವನ್ನು ಬಳಸಿತ್ತು. ಈ ಬಗ್ಗೆ ಪರ, ವಿರೋಧ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ತ್ರಿಭಾಷಾ ನೀತಿ ವಿಚಾರ ಕೂಡ ಅಲ್ಲಿ ಕಾವು ಪಡೆದುಕೊಂಡಿದೆ. ಇದೆಲ್ಲದರ ನಡುವೆ ಪವನ್ ಕಲ್ಯಾಣ್ ಹೇಳಿಕೆ ಮತ್ತಷ್ಟು ಚರ್ಚೆಗೆ ಆಸ್ಪದ ನೀಡಿದೆ.


Click it and Unblock the Notifications











