ಕುಡಿದು ಮಾತನಾಡಿದ್ರಾ ನಟಿ ಪೂಜಾ ಹೆಗ್ಡೆ? ಸಿಕ್ಕಾಪಟ್ಟೆ ಟ್ರೋಲ್
ಬಹುಭಾಷಾ ನಟಿ ಪೂಜಾ ಹೆಗ್ಡೆ ಕ್ರೇಜ್ ಯಾಕೋ ಕಮ್ಮಿ ಆಗುತ್ತಿದೆ. ಅದ್ಯಾಕೋ ಈಕೆ ಸಿನಿಕರಿಯರ್ ಅಷ್ಟೇನು ಉತ್ತಮವಾಗಿಲ್ಲ. ನೋಡಲು ಚೆನ್ನಾಗಿ ಇದ್ದರೂ ದೊಡ್ಡ ಬ್ರೇಕ್ ಸಿಗಲಿಲ್ಲ. ಸ್ಟಾರ್ ನಟರ ಜೊತೆ ನಟಿಸಿದರೂ ಪ್ರಯೋಜನವಾಗಲಿಲ್ಲ. ಮಾತನಾಡುವ ವೇಳೆ ಸಣ್ಣ ಎಡವಟ್ಟು ಮಾಡಿ ಇದೀಗ ಮುಂಬೈ ಬೆಡಗಿ ಟ್ರೋಲ್ ಆಗುತ್ತಿದ್ದಾರೆ.
ತಮಿಳಿನ 'ಮುಗಮುಡಿ' ಚಿತ್ರದ ಮೂಲಕ ಪೂಜಾ ಹೆಗ್ಡೆ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ ಹೃತಿಕ್ ರೋಷನ್ ಜೊತೆ 'ಮೆಹೆಂಜೋದಾರೊ' ಚಿತ್ರದಲ್ಲಿ ನಟಿಸಿದರು. ಆದರೆ ಚಿತ್ರ ಗೆಲ್ಲಿಲಿಲ್ಲ. ತೆಲುಗಿನ 'ದುವ್ವಾಡೆ ಜಗನ್ನಾಥಂ' ಹಾಗೂ 'ಅಲಾವೈಕುಂಠಪುರಂಲೊ' ಚಿತ್ರದಲ್ಲಿ ತಕ್ಕಮಟ್ಟಿಗೆ ಯಶಸ್ಸು ಸಿಕ್ಕಿತ್ತು. ಆದರೂ ಸಿನಿಮಾ ಗೆಲುವಿನ ಕ್ರೆಡಿಟ್ ಎಲ್ಲಾ ನಟ ಅಲ್ಲು ಅರ್ಜುನ್ ಪಾಲಾಗಿತ್ತು.

ತೆಲುಗಿನ 'ಅಲಾವೈಕುಂಠಪುರಂಲೊ' ಚಿತ್ರಕ್ಕಾಗಿ ಸೈಮಾ ಸೇರಿದಂತೆ ಕೆಲ ಪ್ರಶಸ್ತಿಗಳು ಕೂಡ ಪೂಜಾ ಹೆಗ್ಡೆ ಸಿಕ್ಕಿತ್ತು. ಆದರೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ 'ಅಲಾವೈಕುಂಠಪುರಂಲೊ' ತಮಿಳು ಸಿನಿಮಾ ಎಂದು ಹೇಳಿ ಪೂಜಾ ಹೆಗ್ಡೆ ಟ್ರೋಲ್ ಆಗುತ್ತಿದ್ದಾರೆ. ಮಾತನಾಡುವ ಭರದಲ್ಲಿ ಬಾಯ್ತಪ್ಪಿ ಹೀಗೆ ಹೇಳಿದ್ರು ಎನ್ನಲಾಗ್ತಿದೆ. ಆದರೆ ಸಿನಿರಸಿಕರು ಟ್ರೋಲ್ ಮಾಡುತ್ತಿದ್ದಾರೆ. ತಾನು ನಟಿಸಿರುವ ಸಿನಿಮಾ ಯಾವ ಭಾಷೆಯದ್ದು ಎಂದು ಹೇಳಲು ಗೊತ್ತಾಗಲ್ವಾ? ಎಂದು ಕೆಲವರು ಟೀಕಿಸುತ್ತಿದ್ದಾರೆ.
ತೆಲುಗು ಸಿನಿಮಾಗಳು ಹೆಚ್ಚಾ ತಮಿಳು ಸಿನಿಮಾ ಹೆಚ್ಚಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ಚರ್ಚೆ ನಡೆಯುತ್ತದೆ. ಈ ವೇಳೆ ನೆಟ್ಟಿಗರು ಪರಸ್ಪರ ಕೆಸರೆರಚಾಟ ನಡೆಸುತ್ತಿರುತ್ತಾರೆ. 'ಪೊನ್ನಿಯಿನ್ ಸೆಲ್ವಲ್' ಸಿನಿಮಾ ಬಿಡುಗಡೆ ವೇಳೆ ಇದು ತಾರಕಕ್ಕೇರಿತ್ತು. 'ಬಾಹುಬಲಿ' ಚಿತ್ರವನ್ನು ಮೀರಿಸುವಂತೆ ತಮಿಳಿನಲ್ಲಿ ಸಿನಿಮಾ ಮಾಡೋಕೆ ಆಗಲ್ಲ ಎಂದು ತೆಲುಗು ನೆಟ್ಟಿಗರು ವ್ಯಂಗ್ಯವಾಡಿದ್ದರು. ಇದೆಲ್ಲದರ ನಡುವೆ ಪೂಜಾ ಈಗ ಭಾಷೆಯ ವಿಚಾರದಲ್ಲಿ ಎಡವಟ್ಟು ಮಾಡಿದ್ದಾರೆ.
ದಕ್ಷಿಣ ಭಾರತ ಎಂದರೆ ತಮಿಳು, ಮದ್ರಾಸ್ ಎಂದು ಉತ್ತರ ಭಾರತದವರು ಭಾವಿಸಿದ್ದಾರೆ. ಅದೇ ಕಾರಣಕ್ಕೆ ಪೂಜಾ ಹೆಗ್ಡೆಗೆ ಕೂಡ 'ಅಲಾವೈಕುಂಠಪುರಂಲೊ' ತೆಲುಗು ಸಿನಿಮಾ ಎನ್ನುವುದು ಮರೆತು ಹೋಗಿದೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಕೆಲವರಂತೂ ಪೂಜಾ ಹೆಗ್ಡೆ ಕುಡಿದು ಈ ರೀತಿಯೆಲ್ಲಾ ಮಾತನಾಡಿದ್ದಾರಾ? ಆಕೆಗೆ ಏನು ಮಾತನಾಡುತ್ತಿದ್ದೇನೆ ಎನ್ನುವುದು ಗೊತ್ತಿಲ್ವಾ? ಎಂದು ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











