'ಆದಿಪುರುಷ್' ಪೋಸ್ಟರ್‌ನಲ್ಲಿ ಮತ್ತೆ ಎಡವಟ್ಟು? ಹಾಲಿವುಡ್‌ನಿಂದ ಕಾಪಿ ಮಾಡಿ ಸರಿಯಾಗಿ ಎಡಿಟ್ ಮಾಡ್ಲಿಲ್ವಾ?
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಪೌರಾಣಿಕ ಕಥಾಹಂದರದ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಟೀಸರ್ ನೋಡಿ ಬೇಸರಗೊಂಡಿದ್ದ ಅಭಿಮಾನಿಗಳು ಟ್ರೈಲರ್ ನೋಡಿ ಕೊಂಚ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಕಾರಣಾಂತರಗಳಿಂದ ಪದೇ ಪದೇ ವಿವಾದಕ್ಕೆ ಸಿಲುಕಿಕೊಳ್ತಿದೆ. 'ಆದಿಪುರುಷ್' ಪೋಸ್ಟರ್, ಟೀಸರ್ ಎಲ್ಲದರ ಬಗ್ಗೆಯೂ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಾ ಬರ್ತಿದ್ದಾರೆ.
ಓಂ ರಾವುತ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಟೀ ಸೀರಿಸ್ ಜೊತೆ ರೆಟ್ರೋಫಿಲ್ಸ್ ಸಂಸ್ಥೆ ಜಂಟಿಯಾಗಿ ಸಿನಿಮಾ ನಿರ್ಮಿಸಿದೆ. ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಕಟ್ಟಿಕೊಡಲಾಗಿದೆ. ಆದರೆ ಸ್ಯಾಂಪಲ್‌ಗಳನ್ನು ನೋಡುತ್ತಿದ್ದರೆ ಇಷ್ಟು ಕೋಟಿ ಖರ್ಚು ಮಾಡಿ ಎಂಥಹ ಸಿನಿಮಾ ಮಾಡಿದ್ದಾರೆ ಅಂತ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ರಾಮನಾಗಿ ಪ್ರಭಾಸ್ ನಟಿಸಿದ್ದರೆ ಸೀತೆಯಾಗಿ ಕೃತಿ ಸನೂನ್, ರಾವಣನಾಗಿ ಸೈಫ್ ಅಲಿಖಾನ್ ಮಿಂಚಿದ್ದಾರೆ.

'ಆದಿಪುರುಷ್' ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿಯಿದೆ ಎಂದು ಹೇಳಿ ಚಿತ್ರತಂಡ ಹೊಸ ಪೋಸ್ಟರ್ ಹಂಚಿಕೊಂಡಿದೆ. ಆಗಸದಲ್ಲಿ ಹಾರುವ ಸಾಗುತ್ತಿರುವ ಹನುಮಂತನ ಬೆನ್ನೇರಿ ರಾವಣನ ಸೈನ್ಯದ ವಿರುದ್ಧ ಶ್ರೀರಾಮ ಬಾಣ ಪ್ರಯೋಗ ಮಾಡುತ್ತಿರುವು ದೃಶ್ಯ ಇದು. ಪೋಸ್ಟರ್ ಮೊದಲ ನೋಟದಲ್ಲೇ ಗಮನ ಸೆಳೀತಿದೆ. ಟ್ರೈಲರ್‌ನಲ್ಲಿ ಈ ಝಲಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಪೋಸ್ಟರ್ ಕೂಡ ಸಖತ್ ಕಿಕ್ ಕೊಡ್ತಿದೆ. ಆದರೆ ಪೋಸ್ಟರ್‌ನಲ್ಲಿ ಗಗನಚುಂಬಿ ಕಟ್ಟಡ ಇರುವುದು ನೋಡಿ ಕೆಲವರು ಅಚ್ಚರಿಗೊಂಡಿದ್ದಾರೆ.

ಸಾಮಾನ್ಯವಾಗಿ ಗ್ರಾಫಿಕ್ ಡಿಸೈನರ್‌ಗಳು ಹೊಸ ಪೋಸ್ಟರ್ ಡಿಸೈನ್ ಮಾಡುವಾಗ ರೆಫರೆನ್ಸ್‌ಗೆ ಬೇರೆ ಯಾವುದಾದರೂ ಪೋಸ್ಟರ್ ಬಳಸುತ್ತಾರೆ. ಅದೇ ರೀತಿ 'ಆದಿಪರುಷ್' ಚಿತ್ರದ ಈ ಹೊಸ ಪೋಸ್ಟರ್‌ಗೂ ಯಾವ್ದೋ ಹಾಲಿವುಡ್ ಪೋಸ್ಟರ್ ತೆಗೆದುಕೊಂಡಿದ್ದಾರೆ. ಆದರೆ ಎಡಿಟ್ ಮಾಡುವ ವೇಳೆ ಒರಿಜಿನಲ್ ಪೋಸ್ಟರ್‌ನಲ್ಲಿದ್ದ ಕಟ್ಟಡವನ್ನು ತೆಗೆಯಲು ಮರೆತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಇಷ್ಟು ದೊಡ್ಡ ಸಿನಿಮಾ ಪೋಸ್ಟರ್ ರಿಲೀಸ್ ಮಾಡುವಾಗ ಇದನ್ನೆಲ್ಲಾ ನೋಡಿಕೊಳ್ಳಬೇಕು. ರಾಮಾಯಣ ಕಾಲದಲ್ಲಿ ಆಧುನಿಕ ಕಾಲದ ಕಟ್ಟಡಗಳು ಹೇಗೆ ಬರೋಕೆ ಸಾಧ್ಯ. ಇದರಲ್ಲಿ ಏನಾದರೂ ಲಾಜಿಕ್ ಇದ್ಯಾ? ಎಂದು ಕೇಳುತ್ತಿದ್ದಾರೆ.
ರಾಮನವಮಿ ಪೋಸ್ಟರ್ ಬಗ್ಗೆ ಟೀಕೆ
ಈ ಹಿಂದೆ ಬಿಡುಗಡೆಯಾಗಿದ್ದ 'ಆದಿಪುರುಷ್' ಪೋಸ್ಟರ್‌ಗಳಲ್ಲೂ ನೆಟ್ಟಿಗರು ಇದೇ ರೀತಿ ತಪ್ಪುಗಳನ್ನು ಹುಡುಕಿದ್ದರು. ರಾಮನವಮಿ ಸಂಭ್ರಮದಲ್ಲಿ ಬಂದ ಪೋಸ್ಟರ್ ಭಾರೀ ಚರ್ಚೆ ಹುಟ್ಟುಹಾಕಿತ್ತು. ರಾವಣ ಸಂಹಾರದ ನಂತರ ಸೀತಾ, ಲಕ್ಷ್ಮಣ, ಹನುಮಂತನ ಸಮೇತರಾಗಿ ಶ್ರೀರಾಮ ಕಾಣಿಸಿಕೊಳ್ಳುವ ಪೋಸ್ಟರ್ ಅದು. ಆದರೆ ಅದರಲ್ಲಿ ಸೀತಾ ದೇವಿಯ ಬೈತಲೆಯಲ್ಲಿ ಸಿಂಧೂರ ಇಲ್ಲ, ಕೈಯಲ್ಲಿ ಬಳೆಗಳಿಲ್ಲ ಎಂದು ಕೆಲವರು ಚಕಾರ ಎತ್ತಿದ್ದರು. ಪೌರಾಣಿಕ ಸಿನಿಮಾ ಮಾಡುವಾಗ ಇದನ್ನೆಲ್ಲಾ ನೋಡಿಕೊಳ್ಳಬೇಕು ಅಂತ ಟೀಕಿಸಿದ್ದರು.
ಸೀತಾನವಮಿ ಪೋಸ್ಟರ್‌ಗೆ ಮೆಚ್ಚುಗೆ
ಇನ್ನು ಸೀತಾನವಮಿ ವಿಶೇಷವಾಗಿ ಬಂದ ಪೋಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆ ಪೋಸ್ಟರ್ ರಿಲೀಸ್ ಮಾಡಿ ತಂಡ ಮೆಚ್ಚುಗೆ ಗಳಿಸಿತ್ತು. ಇತ್ತೀಚೆಗೆ ರಿಲೀಸ್ ಆಗಿದ್ದ ಚಿತ್ರದ ಟ್ರೈಲರ್ ಒಂದು ಹಂತಕ್ಕೆ ಅಭಿಮಾನಿಗಳಿಗೆ ಸಮಾಧಾನ ತಂದಿತ್ತು. ಟೀಸರ್‌ಗಿಂತ ಉತ್ತಮವಾಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಅಂದಹಾಗೆ ಚಿತ್ರದಲ್ಲಿ ಇಡೀ ರಾಮಾಯಣ ಕಥೆ ಹೇಳದೇ ಕೇವಲ ವನವಾಸ, ಸೀತಾಪಹರಣ, ರಾವಣ ಸಂಹಾರದ ಕಥೆ ಹೇಳುತ್ತಿರುವಂತೆ ಕಾಣ್ತಿದೆ.
ಪ್ರೀಮಿಯರ್ ಶೋ ಕ್ಯಾನ್ಸಲ್
ಅಂದಹಾಗೆ ಜೂನ್ 16ಕ್ಕೆ ವಿಶ್ವದಾದ್ಯಂತ ಸಿನಿಮಾ ರಿಲೀಸ್‌ಗೂ ಮುನ್ನ ಟ್ರಿಬೈಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಆಗಬೇಕಿತ್ತು. ಈಗಾಗಲೇ ಟಿಕೆಟ್ ಕೂಡ ಸೋಲ್ಡ್‌ಔಟ್ ಆಗಿತ್ತು. ಆದರೆ ಇದೀಗ ಚಿತ್ರತಂಡ ಸಿನಿಮಾ ಪ್ರದರ್ಶನಕ್ಕೆ ಹಿಂದೇಟು ಹಾಕ್ತಿದೆ. ಅಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡರೆ ಅದು ಓಪನಿಂಗ್ಸ್ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ 4 ದಿನ ಮೊದಲು ಸಿನಿಮಾ ಪ್ರೀಮಿಯರ್ ಶೋ ರದ್ದು ಪಡಿಸಿದೆ.


Click it and Unblock the Notifications











