ನನ್ನ ನಂಬರ್ ತಗೊಳ್ಳಿ ಚಿತ್ರ ಚೆನ್ನಾಗಿಲ್ಲ ಎಂದ್ರೆ ಕಾಲ್ ಮಾಡಿ ಎಂದು ಬಿಲ್ಡಪ್ ಕೊಟ್ಟ ನಿರ್ದೇಶಕನ ಸ್ಥಿತಿ ಅಯ್ಯೋ ಪಾಪ!
ಇಂದು ( ಜೂನ್ 9 ) ಶುಕ್ರವಾರ ವಿವಿಧ ಭಾಷೆಗಳ ಹಲವು ಚಿತ್ರಗಳು ಬಿಡುಗಡೆಗೊಂಡಿವೆ. ತೆಲುಗಿನಲ್ಲಿ ಅನ್‌ಸ್ಟಾಪಬಲ್ ಎಂಬ ಚಿತ್ರ ಸಹ ಬಿಡುಗಡೆಗೊಂಡಿದೆ. ನಂದಮೂರಿ ಬಾಲಕೃಷ್ಣ ಆಹಾ ಅಪ್ಲಿಕೇಶನ್‌ನಲ್ಲಿ ನಡೆಸಿಕೊಡುತ್ತಿದ್ದ ಅನ್‌ಸ್ಟಾಪಬಲ್ ಕಾರ್ಯಕ್ರಮದ ಟೈಟಲ್ ಹೊಂದಿದ್ದ ಈ ಚಿತ್ರ ಬಿಡುಗಡೆಗೂ ಮುನ್ನ ತುಸು ಸದ್ದು ಮಾಡಿತ್ತು.
ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಸಿನಿ ರಸಿಕರ ಗಮನ ಸೆಳೆಯಲು ಸಾಕಷ್ಟು ಕಸರತ್ತನ್ನು ನಡೆಸಿತ್ತು. ಇದಕ್ಕೆ ತಕ್ಕಂತೆ ತುಸು ಪ್ರಚಾರವನ್ನೂ ಸಹ ಚಿತ್ರ ಪಡೆದುಕೊಂಡಿತ್ತು. ಇನ್ನು ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ಪ್ರಿ ರಿಲೀಸ್ ಕಾರ್ಯಕ್ರಮವನ್ನೂ ಸಹ ನಡೆಸಿದ ಚಿತ್ರತಂಡ ಭರದ ಹೇಳಿಕೆಗಳನ್ನು ನೀಡಿ ಸಿನಿ ರಸಿಕರನ್ನು ಚಿತ್ರ ನೋಡುವಂತೆ ಪ್ರೇರೇಪಿಸುವ ಕೆಲಸ ಮಾಡಲು ಮುಂದಾಗಿತ್ತು.

ಚಿತ್ರ ಕಾಮಿಡಿ ಎಂಟರ್‌ಟೈನರ್ ಆಗಿದ್ದು, ನಿಮ್ಮನ್ನೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಗಿಸಲಿದೆ ಎಂದು ಚಿತ್ರತಂಡ ಭರವಸೆ ನೀಡಿತ್ತು. ಈ ವಿಷಯವನ್ನು ಹೇಳುವ ಭರದಲ್ಲಿ ಚಿತ್ರದ ನಿರ್ದೇಶಕ ಡೈಮಂಡ್ ರತ್ನಬಾಬು ತನ್ನ ಮೊಬೈಲ್ ನಂಬರ್ ಕೊಟ್ಟು ಅತಿಯಾದ ವಿಶ್ವಾಸವನ್ನು ಹೊರಹಾಕಿದ್ದರು.
ಮೊದಲಿಗೆ ಈ ಚಿತ್ರದಲ್ಲಿ ನಟಿಸಿದ ಹಾಗೂ ತೆರೆ ಹಿಂದೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ ರತ್ನಬಾಬು ಬಳಿಕ ತಮ್ಮ ಮೇಲೆ ನಡೆಯುತ್ತಿರುವ ಟ್ರೋಲ್ಸ್ ಕುರಿತೂ ಸಹ ಮಾತನಾಡಿದರು. "ಟ್ರೋಲ್‌ಗಳು ನಡೆಯುತ್ತಿವೆ ಎಂದು ಹಲವರು ಹೇಳಿದ್ದಾರೆ. ಆದರೆ ನಾನು ಕಥೆ ಬರಹಗಾರನಾಗಿ ಹಲವಾರು ಹಿಟ್ ಚಿತ್ರಗಳ ಕಥೆ ಬರೆದಿದ್ದೇನೆ. ನಾನು ಬರೆದ ಕಾಮಿಡಿ ಚಿತ್ರಗಳೆಲ್ಲವೂ ಹಿಟ್ ಆಗಿವೆ. ಅದೇ ರೀತಿ ಈ ಚಿತ್ರವೂ ಸಹ ಹಿಟ್ ಆಗುತ್ತೆ. ಮತ್ತೆ ಹೇಳುತ್ತಿದ್ದೇನೆ. ಜೂನ್ 9ರಂದು ಬೆಳಗ್ಗೆ 8.45ರಿಂದ ಪ್ರದರ್ಶನಗಳು ಆರಂಭಗೊಳ್ಳಲಿವೆ. 9291485678 ಇದು ನನ್ನ ನಂಬರ್. ಎರಡು ಗಂಟೆ ಇರುವ ಈ ಚಿತ್ರದಲ್ಲಿ ನಿಮಲ್ಲಿ ಯಾರಿಗೆ ನಗು ಬಾರದಿದ್ದರೆ ನನಗೆ ಫೋನ್ ಮಾಡಿ, ನಾನೇ ಉತ್ತರ ನೀಡುತ್ತೇನೆ. ನನ್ನ ಪಿಎ ಕಾಲ್ ರಿಸೀವ್ ಮಾಡುವುದಿಲ್ಲ, ನಾನೇ ಮಾಡುತ್ತೇನೆ. ಸಕ್ಸಸ್ ಹೊಡೀತಿವಿ" ಎಂದು ಹೇಳಿಕೆಯನ್ನು ನೀಡಿದ್ದರು.
ಹೀಗೆ ನಿರ್ದೇಶಕ ಡೈಮಂಡ್ ರತ್ನಬಾಬು ಹೇಳಿದ್ದ ದಿನ ಇಂದು ಬಂದೇಬಿಟ್ಟಿದೆ ಹಾಗೂ ಚಿತ್ರವೂ ಬಿಡುಗಡೆಯಾಗಿದೆ. ಆದರೆ ನಿರ್ದೇಶಕರು ಕೊಟ್ಟಿದ್ದ ಆ ನಂಬರ್ ಮಾತ್ರ ಸ್ವಿಚ್ ಆಫ್ ಆಗಿದೆ. ಚಿತ್ರ ನೋಡಿ ಬಂದು ಕರೆ ಮಾಡಲು ಯತ್ನಿಸಿದ ಸಿನಿ ರಸಿಕರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಚಿತ್ರ ಎಲ್ಲೆಡೆ ಕೆಟ್ಟ ವಿಮರ್ಶೆ ಪಡೆದುಕೊಳ್ಳುತ್ತಿದೆ. ಯಾವ ವೆಬ್ ತಾಣ ಸಹ ಚಿತ್ರಕ್ಕೆ 1.5ಕ್ಕಿಂತ ಹೆಚ್ಚು ಸ್ಟಾರ್‌ಗಳ ರೇಟಿಂಗ್ ನೀಡಿಲ್ಲ. ಹೀಗೆ ನಂಬರ್ ನೀಡಿ ಬಿಲ್ಡಪ್ ಕೊಟ್ಟಿದ್ದ ನಿರ್ದೇಶಕ ಡೈಮಂಡ್ ರತ್ನಬಾಬು ಸ್ಥಿತಿ ಅಯ್ಯೋ ಪಾಪ ಎನಿಸುವಂತಾಗಿದೆ.


Click it and Unblock the Notifications











