ಅಯ್ಯಯ್ಯೋ.. ಅಣ್ಣಾವ್ರ ಹಿಟ್ ಸಿನಿಮಾ ರೀಮೆಕ್ ಮಾಡಿ ಹಾಳು ಮಾಡುತ್ತಿದ್ದಾರಾ?
ರೀಮೆಕ್ ಅಂದ್ರೆ ಒರಿಜಿನಲ್ ಸಿನಿಮಾವನ್ನು ಮೀರಿಸಬೇಕು. ಅದೇ ಕಾರಣಕ್ಕೆ ಕೆಲವರು ಇದನ್ನು ಸವಾಲಾಗಿ ಸ್ವೀಕರಿಸುತ್ತಾರೆ. ಮೂಲ ಚಿತ್ರಕ್ಕಿಂತ ನಾವು ಹೇಗೆ ಚೆನ್ನಾಗಿ ಸಿನಿಮಾ ಮಾಡಬಹುದು ಎನ್ನುವ ಸಾಹಸಕ್ಕೆ ಕೈ ಹಾಕುತ್ತಾರೆ. ಪ್ರೇಕ್ಷಕರು ಕೂಡ ಇದೇ ಲೆಕ್ಕಾಚಾರದಲ್ಲಿ ರಿಮೇಕ್ ಸಿನಿಮಾ ನೋಡುತ್ತಾರೆ.
ಪ್ಯಾನ್ ಇಂಡಿಯಾ ಜಮಾನದಲ್ಲಿ ರೀಮೆಕ್ ಸಿನಿಮಾಗಳ ಹಾವಳಿ ಕಮ್ಮಿ ಆಗಿದೆ. ಆದರೂ ಅಲ್ಲೊಂದು ಇಲ್ಲೊಂದು ಪ್ರಯತ್ನ ನಡೆಯುತ್ತಿದೆ. ಒಂದು ಭಾಷೆಯಲ್ಲಿ ಹಿಟ್ ಆಗಿರುವ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೀಮೆಕ್ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಇನ್ನು ನೆಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಲಾಗುತ್ತದೆ.

ಇನ್ನು ಪೌರಾಣಿಕ, ಐತಿಹಾಸಿಕ ಕಥೆಗಳನ್ನು ಸಿನಿಮಾ ಮಾಡುವವರು ಬಹಳ ಎಚ್ಚರಿಕೆ ವಹಿಸಬೇಕು. ಮೂಲಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಎಚ್ಚರಿಕೆ ವಹಿಸಬೇಕು. ಕಾಲ ಬದಲಾಗಿದೆ ಎಂದು ಹುಚ್ಚಾಟ ಮೆರೆಯಲು ಹೋಗಬಾರದು. 'ಆದಿಪುರುಷ್' ಚಿತ್ರದಲ್ಲಿ ಇಂತದ್ದೇ ಪ್ರಯತ್ನ ಮಾಡಿ ಚಿತ್ರತಂಡ ಸೋತಿತ್ತು.
ಇವತ್ತಿಗೂ 'ಆದಿಪುರುಷ್' ಸಿನಿಮಾ ಬಗ್ಗೆ ಮಾತನಾಡಲು ಪ್ರಭಾಸ್ ಹಿಂಜರಿಯುತ್ತಾರೆ. ಅವರ ಸಿನಿಕರಿಯರ್‌ನಲ್ಲಿ ಅದೊಂದು ಕಹಿ ನೆನಪಾಗಿ ಉಳಿದುಬಿಟ್ಟಿದೆ. 'ರಾಮಾಯಣ' ಕಾವ್ಯವನ್ನು ತೆರೆಗೆ ತರುವಾಗ ನಿರ್ದೇಶಕ ಓಂ ರಾವುತ್ ಮಾಡಿದ ಎಡವಟ್ಟು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಚಿತ್ರದ ಸ್ಯಾಂಪಲ್‌ಗಳು ಬಂದಾಗಲೇ ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಮುಖ್ಯವಾಗಿ ರಾವಣನನ್ನು ತೋರಿಸಿದ ಬಗೆ ಟೀಕೆಗೆ ಗುರಿಯಾಗಿತ್ತು.
ಇದೀಗ ಕನ್ನಡದ 'ಬೇಡರ ಕನ್ನಪ್ಪ' ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತೆ ತೆರೆಗೆ ತರಲಾಗುತ್ತಿದೆ. ತೆಲುಗು ನಟ ಮಂಚು ವಿಷ್ಣು ಹೀರೊ ಆಗಿ ಸಿನಿಮಾ ಮೂಡಿ ಬರ್ತಿದೆ. ಬಹುಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಮೋಹನ್ ಲಾಲ್, ಪ್ರಭಾಸ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನಾಟಕ ರೂಪದಲ್ಲಿ ಪ್ರದರ್ಶನಗೊಳ್ಳುತ್ತಿದ್ದ 'ಬೇಡರ ಕಣ್ಣಪ್ಪ' ಕಥೆಯನ್ನು ಕನ್ನಡದಲ್ಲಿ ತೆರೆಗೆ ತರಲಾಗಿತ್ತು.
ಡಾ. ರಾಜ್‌ಕುಮಾರ್ ಹೀರೊ ಆಗಿ ನಟಿಸಿದ ಮೊದಲ ಸಿನಿಮಾ ಇದು. ಮುಂದೆ ತೆಲುಗಿನಲ್ಲಿ ಕೃಷ್ಣಂರಾಜು ಈ ಚಿತ್ರ ರೀಮೆಕ್ ಮಾಡಿದ್ದರು. ಅದೇ ಕಥೆಯನ್ನು ಕೊಂಚ ಬದಲಿಸಿ ಕನ್ನಡದಲ್ಲಿ ಮತ್ತೆ ಶಿವರಾಜ್‌ಕುಮಾರ್ ಹೀರೊ ಆಗಿ 'ಶಿವಮೆಚ್ಚಿದ ಕಣ್ಣಪ್ಪ' ಸಿನಿಮಾ ಬಂದಿತ್ತು. ಇದೇ ಕಥೆಯನ್ನು ತೆಲುಗಿನಲ್ಲಿ ಮತ್ತೆ ಸಿನಿಮಾ ಮಾಡುವ ಪ್ರಯತ್ನ ಬಹಳ ದಿನಗಳಿಂದ ನಡೆಯುತ್ತಿತ್ತು. ಪ್ರಭಾಸ್ ಹೀರೊ ಆಗುತ್ತಾರೆ ಎನ್ನಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ನಟ ಮೋಹನ್ ಬಾಬು ತಮ್ಮ ಮಗನನ್ನು ಹೀರೊ ಮಾಡಿ 'ಕಣ್ಣಪ್ಪ' ಕಥೆಯನ್ನು ತೆರೆಗೆ ತರುತ್ತಿದ್ದಾರೆ. ಆದರೆ ಚಿತ್ರದ ಟೀಸರ್, ಪೋಸ್ಟರ್‌ಗಳು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ. ಇವತ್ತಿನ ಕಾಲಕ್ಕೆ ತಕ್ಕಂತೆ ಕಥೆ ಹೇಳಬೇಕು ಎನ್ನುವ ಪ್ರಯತ್ನ ಎಲ್ಲೋ ಮಿಸ್ ಹೊಡೆಯುತ್ತಿದೆ. ಇದು ಮತ್ತೊಂದು 'ಆದಿಪುರುಷ್' ಆಗಿಬಿಡುತ್ತಾ? ಎನ್ನುವ ಆತಂಕವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ.
'ಕಣ್ಣಪ್ಪ' ಚಿತ್ರದಲ್ಲಿ ನಟಿಸಿರುವ ಕಲಾವಿದರ ಪಾತ್ರಗಳನ್ನು ಪರಿಚಯಿಸುತ್ತಾ ಒಂದೊಂದೇ ಪೋಸ್ಟರ್ ರಿಲೀಸ್ ಮಾಡಲಾಗುತ್ತಿದೆ. ಚಿತ್ರದಲ್ಲಿ ಕನ್ನಡ ನಟ ದೇವರಾಜ್ ಕೂಡ ನಟಿಸುತ್ತಿದ್ದಾರೆ. ನೀಲಿಫಲ ಪರ್ವತದ ಜನಾಂಗವೊಂದರ ನಾಯಕ ಮುಂಡನು ಪಾತ್ರದಲ್ಲಿ ಡೈನಾಮಿಕ್ ಸ್ಟಾರ್ ಬಣ್ಣ ಹಚ್ಚಿದ್ದಾರೆ. ಆದರೆ ಪೋಸ್ಟರ್ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರದ ಮುಖ್ಯ ಸನ್ನಿವೇಶಗಳನ್ನು ನ್ಯೂಜಿಲೆಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಭಾರತದಲ್ಲಿ ನಡೆದ ಕಥೆಯನ್ನು ನ್ಯೂಜಿಲೆಂಡ್ ಕಾಡಿನಲ್ಲಿ ಶೂಟ್ ಮಾಡುತ್ತಿರುವುದು ಯಾಕೆ? ಎಂದು ಕೆಲವರು ಚಕಾರ ಎತ್ತಿದ್ದರು. ಟೀಸರ್‌ನಲ್ಲಿ ಕೂಡ ನೇಟಿವಿಟಿ ಮಿಸ್ ಆಗಿದ್ದು ಗೊತ್ತಾಗುತ್ತಿತ್ತು. ವಾಸ್ತವ, ನೈಜತೆಗೆ ಬಹಳ ದೂರವಾಗಿ ಸಿನಿಮಾ ಮೂಡಿ ಬರುತ್ತಿರುವುದು ಗೊತ್ತಾಗುತ್ತಿದೆ. ಸಾಮಾನ್ಯ ಬೇಡ ದಿಣ್ಣನನ್ನು ಮಹಾ ಪರಾಕ್ರಮಿ ಎನ್ನುವಂತೆ ಆಕ್ಷನ್ ಸನ್ನಿವೇಶಗಳನ್ನು ಚಿತ್ರಿಸಲಾಗಿದೆ. ಇದೀಗ ಪೋಸ್ಟರ್‌ಗಳ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಿದರೂ ಸಿನಿಮಾ ನೋಡಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
'ಕಣ್ಣಪ್ಪ' ಚಿತ್ರದಲ್ಲಿ ಪ್ರಭಾಸ್, ಮೋಹನ್ ಲಾಲ್ ರೀತಿಯ ಸ್ಟಾರ್ ನಟರ ಅವಶ್ಯಕತೆ ಏನಿತ್ತು? ಎಂದು ಕೆಲವರು ಕೇಳುತ್ತಿದ್ದಾರೆ. ಇರುವ ಕಥೆಯನ್ನು ಇರುವಂತೆ ತೋರಿಸುವುದು ಬಿಟ್ಟು ಏನೇನೋ ಮಾಡಿ ಹಳ್ಳು ಹಿಡಿಸುತ್ತಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಾರೆ. ಪ್ರಭಾಸ್ ಇದ್ದಾರೆ ಎನ್ನುವ ಕಾರಣಕ್ಕೆ ಈ ಸಿನಿಮಾ ನೋಡುತ್ತೀವಿ ಅಷ್ಟೇ ಎಂದು ಕೆಲವರು ಹೇಳುತ್ತಿದ್ದಾರೆ. ಆದರೂ ಮಂಚು ವಿಷ್ಣುಗೆ ಈ ಕಥೆ ಸೂಟ್ ಆಗಲ್ಲ ಎಂದು ಕೆಲವರು ಈಗಾಗಲೇ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











