ಶ್ರೀಲೀಲಾ ಜೊತೆ ಹೋಲಿಕೆ ಮಾಡಿದ್ದಕ್ಕೆ ಬೆಂಗಳೂರು ಬೆಡಗಿ ಗರಂ
ಚಿತ್ರರಂಗದಲ್ಲಿ ಪ್ರತಿಭೆ ಜೊತೆಗೆ ಅದೃಷ್ಟ ಕೂಡ ಇರಬೇಕು ಎನ್ನುತ್ತಾರೆ. ಕೆಲವರಿಗೆ ಅನಾಯಾಸವಾಗಿ ಅವಕಾಶಗಳು ಸಿಗುತ್ತದೆ. ಮತ್ತೆ ಕೆಲವರಿಗೆ ಅಷ್ಟು ಸುಲಭವಾಗಿ ಅವಕಾಶ ಅರಸಿ ಬರುವುದಿಲ್ಲ. ಕೆಲ ನಟಿಯರು 5-10 ವರ್ಷ ಚಿತ್ರರಂಗದಲ್ಲಿ ಇದ್ದರೂ ಬೆರಳೆಣಿಯೆಷ್ಟು ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಾರೆ.
ವರ್ಷಕ್ಕೆ ಎರಡ್ಮೂರು ಸಿನಿಮಾಗಳಲ್ಲಿ ನಟಿಸುವವರು ಇದ್ದಾರೆ. ಇದೀಗ ಶ್ರೀಲೀಲಾ ಜೊತೆ ತಮ್ಮ ಹೋಲಿಕೆ ಮಾಡಿ ಮಾತನಾಡಿದ್ದಕ್ಕೆ ನಟಿ ನಿಧಿ ಅಗರ್‌ವಾಲ್ ಬೇಸರಗೊಂಡಿದ್ದಾರೆ. ಈ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದಾರೆ. ಹೈದರಾಬಾದ್‌ನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಓದಿ ಬೆಳೆದವರು ನಿಧಿ ಅಗರ್‌ವಾಲ್. 'ಮುನ್ನಾ ಮೈಕೆಲ್' ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದಿದ್ದರು.

ಚಿತ್ರರಂಗಕ್ಕೆ ಬಂದ 7 ವರ್ಷಗಳಲ್ಲಿ ನಿಧಿ ಕೇವಲ 8 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಕೆ ನಟಿಸುತ್ತಿರುವ ಮತ್ತೆರಡು ಸಿನಿಮಾಗಳು ಬಿಡುಗಡೆ ಆಗಬೇಕಿದೆ. ಗ್ಲಾಮರಸ್ ರೋಲ್‌ಗಳಲ್ಲಿ ನಟಿಸೋಕು ಚೆಲುವೆ ಮುಂದೆ ಇರುತ್ತಾರೆ. ಆದರೂ ಅವಕಾಶಗಳು ಅಷ್ಟಾಗಿ ಸಿಗಲಿಲ್ಲ. ಸ್ಟಾರ್ ನಟರ ಜೊತೆಗೆ ನಟಿಸೋ ಛಾನ್ಸ್ ಕೂಡ ಅಷ್ಟಕ್ಕಷ್ಟೆ ಎನ್ನುವಂತಾಗಿದೆ. ಆದರೆ ಶ್ರೀಲೀಲಾ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದ 4 ವರ್ಷಗಳಲ್ಲಿ 8 ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಮಹೇಶ್ ಬಾಬು, ಬಾಲಕೃಷ್ಣ, ರವಿತೇಜಾ ರೀತಿಯ ಸ್ಟಾರ್ ನಟರ ಜೊತೆ ಶ್ರೀಲೀಲಾ ತೆರೆಹಂಚಿಕೊಂಡು ಗೆದ್ದಿದ್ದಾರೆ. 2019ರಲ್ಲಿ 'ಇಸ್ಮಾರ್ಟ್ ಶಂಕರ್' ಸಿನಿಮಾ ಬಳಿಕ ನಿಧಿ ಎಷ್ಟು ಸಿನಿಮಾ ಮಾಡಿದ್ದಾಳೆ? 2021ರಲ್ಲಿ ಬಂದ ಶ್ರೀಲೀಲಾ 20 ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ನೆಟ್ಟಿಗರೊಬ್ಬರು ಟ್ವಿಟ್ಟರ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ನಿಧಿ ಅಗರ್‌ವಾಲ್ ರಿಪ್ಲೇ ಮಾಡಿರುವುದು ವೈರಲ್ ಆಗುತ್ತಿದೆ. ಕೆಲ ಅಭಿಮಾನಿಗಳು ಇದಕ್ಕೆ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಒಳ್ಳೆ ಸಿನಿಮಾಗಳಲ್ಲಿ ನಟಿಸಬೇಕು ಎಂಬ ನಿಮ್ಮ ನಿರ್ಧಾರ ಸರಿ ಇದೆ ಎನ್ನುತ್ತಿದ್ದಾರೆ.
"ಇಸ್ಮಾರ್ಟ್ ಶಂಕರ್ ಬಳಿಕ ನಿಧಿ ಅಗರ್‌ವಾಲ್ 'ಹೀರೋ' ಸಿನಿಮಾ ಮಾಡಿದ್ದಳು. 3 ತಮಿಳು ಸಿನಿಮಾಗಳಲ್ಲಿ ನಟಿಸಿದಳು. ಬಳಿಕ 'ಹರಿಹರ ವೀರಮಲ್ಲು' ಚಿತ್ರಕ್ಕೆ ಸಹಿ ಮಾಡಿದ್ದಳು. ನಾನು ನನ್ನ ಸಮಯ ತೆಗೆದುಕೊಂಡು ಒಳ್ಳೆಯ ಸ್ಕ್ರಿಪ್ಟ್ ಎಂದು ನನಗೆ ಅನಿಸುವ ಚಿತ್ರಗಳಿಗೆ ಸಹಿ ಹಾಕುತ್ತೇನೆ, ಕೆಲವೊಮ್ಮೆ ಆಯ್ಕೆ ತಪ್ಪಾಗಿರಬಹುದು. ಆದರೆ ನನ್ನ ಉದ್ದೇಶ ಒಳ್ಳೆಯ ಸಿನಿಮಾದ ಭಾಗವಾಗುವುದು. ನನಗೆ ಯಾವುದೇ ಆತುರವಿಲ್ಲ. ನಾನು ಇಲ್ಲೇ ಉಳಿಯಬೇಕು ಎಂದುಕೊಂಡಿದ್ದೇನೆ ಸಹೋದರ. ನನ್ನ ಬಗ್ಗೆ ಚಿಂತಿಸಬೇಡಿ" ಎಂದು ನಯವಾಗಿಯೇ ತಿವಿದಿದ್ದಾರೆ.
'ಮುನ್ನಾ ಮೈಖೇಲ್' ಹಿಂದಿ ಸಿನಿಮಾ ಬಳಿಕ ನಿಧಿ ಟಾಲಿವುಡ್ ಪ್ರವೇಶಿದರು. 'ಸವ್ಯಸಾಚಿ' ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಬಳಿಕ 'ಮಿ. ಮಜ್ನು', 'ಇಸ್ಮಾರ್ಟ್ ಶಂಕರ್', 'ಹೀರೊ' ಸಿನಿಮಾಗಳಲ್ಲಿ ನಟಿಸಿದ್ದರು. ಅತ್ತ ತಮಿಳಿನಲ್ಲಿ 'ಈಶ್ವರನ್', 'ಭೂಮಿ', 'ಕಳಗ ತಲೈವನ್' ಎಂಬ ಸಿನಿಮಾಗಳಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಸದ್ಯ ಪವನ್ ಕಲ್ಯಾಣ್ ನಟನೆಯ ಐತಿಹಾಸಿಕ ಸಿನಿಮಾ 'ಹರಿಹರ ವೀರಮಲ್ಲು' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ರಾಜಾಸಾಬ್' ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಮಿಂಚಿದ್ದಾರೆ.
ಸಾಕಷ್ಟು ಜಾಹೀರಾತುಗಳಲ್ಲಿ ಕೂಡ ನಿಧಿ ಅಗರ್‌ವಾಲ್ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಹಾಟ್ ಹಾಟ್ ಫೋಟೊಶೂಟ್ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 3 ಕೋಟಿಗೂ ಅಧಿಕಾ ಫಾಲೋವರ್ಸ್ ಇದ್ದಾರೆ. ಇನ್ನು ಅಭಿಮಾನಿಗಳು ಆಕೆಯ ವಿಗ್ರಹ ಇಟ್ಟು ಅಬಿಷೇಕ, ಪೂಜೆ ಮಾಡಿದ್ದ ವೀಡಿಯೋಗಳು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಸದ್ಯ ಕೈಯಲ್ಲಿ 2 ದೊಡ್ಡ ಸಿನಿಮಾಗಳಿವೆ. ಈ ಸಿನಿಮಾಗಳ ಭವಿಷ್ಯ ಏನಾಗುತ್ತದೆ ಮುಂದೆ ಕಾದು ನೋಡಬೇಕಿದೆ.


Click it and Unblock the Notifications











