ಮದುವೆಯಾಗಿ ಮೂರೇ ವರ್ಷಕ್ಕೆ ಡಿವೋರ್ಸ್ ಪಡೆದ ಚಿರಂಜೀವಿ ಸಹೋದರನ ಪುತ್ರಿ ನಿಹಾರಿಕಾ!
ಬಣ್ಣದ ಲೋಕದಲ್ಲಿ ಮದುವೆಯಾದ ಕೆಲವೇ ವರ್ಷಗಳಲ್ಲಿ ಡಿವೋರ್ಸ್ ಪಡೆದುಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಈ ಹಿಂದೆ ಬಾಲಿವುಡ್ ಇಂಡಸ್ಟ್ರಿಯಲ್ಲಿ ಕೇಳಿ ಬರುತ್ತಿದ್ದ ಈ ಡಿವೋರ್ಸ್ ಸುದ್ದಿಗಳು ಇದೀಗ ದಕ್ಷಿಣ ಭಾರತದ ಚಿತ್ರರಂಗಗಳಲ್ಲಿಯೂ ಸಾಮಾನ್ಯವಾಗಿಬಿಟ್ಟಿದೆ.
ಸ್ಟಾರ್ ನಟ - ನಟಿಯರೇ ವಿವಾಹ ವಿಚ್ಛೇದನ ಪಡೆದುಕೊಂಡು ಸುದ್ದಿಗೀಡಾದ ಹಲವಾರು ಸುದ್ದಿಗಳನ್ನು ನೀವೆಲ್ಲಾ ಈಗಾಗಲೇ ಸಾಕಷ್ಟು ಬಾರಿ ಕೇಳಿದ್ದು, ಇದೀಗ ಅಂತಹ ಸುದ್ದಿಗಳ ಸಾಲಿಗೆ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅವರ ಸಹೋದರನ ಪುತ್ರಿ ನಿಹಾರಿಕಾ ಕೊನಿಡೆಲಾ ಸಹ ಸೇರಿಕೊಂಡಿದ್ದಾರೆ.

ಹೌದು, ತೆಲುಗು ನಟ ಚಿರಂಜೀವಿ ಅವರ ಸೋದರ ನಾಗೇಂದ್ರ ಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ ಈಗ ತನ್ನ ಮಾಜಿ ಪತಿ ಚೈತನ್ಯ ಅವರಿಂದ ವಿವಾಹ ವಿಚ್ಛೇದನ ಪಡೆದುಕೊಂಡಿದ್ದು, ಈ ವಿಷಯವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ಚೈತನ್ಯ ಹಾಗೂ ನಾನು ಸಹಮತದಿಂದ ದೂರಾಗಲು ತೀರ್ಮಾನಿಸಿದ್ದೇವೆ. ನನ್ನ ಬೆಂಬಲವಾಗಿ ನಿಂತ ನನ್ನ ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ಧನ್ಯವಾದಗಳು. ಈ ವೈಯಕ್ತಿಕ ವಿಚಾರದಲ್ಲಿ ಪ್ರೈವೆಸಿ ನೀಡಿ" ಎಂದು ಬರೆದುಕೊಂಡು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹೀಗಿದ್ದರೂ ಸಹ ನಿಹಾರಿಕಾ ಕೊನಿಡೆಲಾ ವಿಚ್ಛೇದನದ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಇಬ್ಬರ ನಡುವಿನ ಈ ಮನಸ್ತಾಪಕ್ಕೆ ಕಾರಣವೇನು ಎಂಬುದರ ಕುರಿತು ಈಗಾಗಲೇ ಚರ್ಚೆಗಳು ಶುರುವಾಗಿವೆ. ಇನ್ನು ನಿಹಾರಿಕಾ ಕೊನಿಡೆಲಾ ಈ ಪೋಸ್ಟ್‌ನ ಕಾಮೆಂಟ್ ಆಪ್ಷನ್ ಅನ್ನು ಆಫ್ ಮಾಡಿದ್ದು ನೆಗೆಟಿವ್ ಕಾಮೆಂಟ್‌ಗಳ ಕಾಟ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾರೆ.
ಇನ್ನು ನಿಹಾರಿಕಾ ಕೊನಿಡೆಲಾ ಹಾಗೂ ಪತಿ ಚೈತನ್ಯ ನಡುವೆ ಎಲ್ಲವೂ ಸರಿ ಇಲ್ಲ, ಇಬ್ಬರ ನಡುವೆ ಬಿಕ್ಕಟ್ಟಿದೆ ಎಂಬ ಸುದ್ದಿಗಳು ಆಗಾಗ ಹರಿದಾಡಿದ್ದರೂ ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ದಿನ ಕಳೆದಂತೆ ಇಬ್ಬರ ನಡುವೆ ಮನಸ್ತಾಪ ಇರುವ ವಿಚಾರ ಜನರಿಗೆ ಅರ್ಥವಾಗಿಬಿಟ್ಟಿತ್ತು. ಆದರೂ ಸಹ ಇದು ವದಂತಿ ಇರಬಹುದು ಎಂಬ ಅನುಮಾನವನ್ನೂ ಕೆಲ ನೆಟ್ಟಿಗರು ವ್ಯಕ್ತಪಡಿಸಿದ್ದರು.
ಆದರೆ ಈಗ ಸ್ವತಃ ನಿಹಾರಿಕಾ ಕೊನಿಡೆಲಾ ಅವರೇ ಡಿವೋರ್ಸ್ ತೆಗೆದುಕೊಂಡಿದ್ದೇವೆ ಎಂದು ಸುದ್ದಿಯನ್ನು ಬಹಿರಂಗವಾಗಿ ಪ್ರಕಟಿಸುವ ಮೂಲಕ ಈ ಎಲ್ಲಾ ಗೊಂದಲಕ್ಕೂ ತೆರೆ ಎಳೆದಿದ್ದಾರೆ.
ಇನ್ನು ನಿಹಾರಿಕಾ ಕೊನಿಡೆಲಾ ಕಿರುತೆರೆಯಲ್ಲಿ ನಡೆಯುವ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದು, ಹಲವಾರು ಚಿತ್ರಗಳು ಹಾಗೂ ವೆಬ್ ಸರಣಿಗಳಲ್ಲಿಯೂ ಸಹ ನಟಿಸಿದ್ದಾರೆ. ಇವುಗಳ ಜತೆಗೆ ಕೆಲವೊಂದಷ್ಟು ಚಿತ್ರಗಳಲ್ಲಿಯೂ ಸಹ ನಿಹಾರಿಕಾ ಕೊನಿಡೆಲಾ ನಾಯಕಿಯಾಗಿ ನಟಿಸಿದ್ದು, ಸಿನಿ ರಸಿಕರಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ.
ಇನ್ನು ಈ ವರ್ಷ ಬಿಡುಗಡೆಗೊಂಡ 'ಡೆಡ್ ಫಿಕ್ಸೆಲ್ಸ್' ಎಂಬ ವೆಬ್ ಸರಣಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ನಿಹಾರಿಕಾ ಕೊನಿಡೆಲಾ ಬೋಲ್ಡ್ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ. ಇದ್ದದ್ದನ್ನು ಇದ್ದ ಹಾಗೆ ಹೇಳುವ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದ ನಿಹಾರಿಕಾ ಕೊನಿಡೆಲಾ ಅಡಲ್ಟ್ ಕಂಟೆಂಟ್ ಡೈಲಾಗ್‌ಗಳನ್ನೂ ಸಹ ಹೇಳಿದ್ದರು. ಈ ಕಾರಣದಿಂದ ಏನಾದರೂ ಈ ಜೋಡಿಯ ನಡುವೆ ಬಿರುಕು ಮೂಡಿತಾ ಎಂಬ ಪ್ರಶ್ನೆ ಇದೀಗ ತೆಲುಗು ಸಿನಿ ರಸಿಕರಲ್ಲಿ ಹಾಗೂ ಮೆಗಾ ಫ್ಯಾಮಿಲಿ ಅಭಿಮಾನಿಗಳಲ್ಲಿ ಮೂಡಿದೆ.


Click it and Unblock the Notifications











