ಸುಭಾಷ್ ಚಂದ್ರ ಬೋಸ್ ಹೆಸರು ಬರೀ ಪ್ರಚಾರಕ್ಕೆ, ಇದನ್ನು ಸಿನಿಮಾ ಅಂತಾರಾ? ನಿಖಿಲ್ 'ಸ್ಪೈ' ಚಿತ್ರಕ್ಕೆ ಬಂದ ಪ್ರತಿಕ್ರಿಯೆಗಳಿವು!
ಕಳೆದ ವರ್ಷ ಬಿಡುಗಡೆಗೊಂಡ ಕಾರ್ತಿಕೇಯ 2 ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಕ್ಲಬ್ ಸೇರಿದ್ದ ತೆಲುಗು ನಟ ನಿಖಿಲ್ ಸಿದ್ಧಾರ್ಥ ಮತ್ತೊಮ್ಮೆ ತಾನೊಬ್ಬ ಉತ್ತಮ ಸ್ಕ್ರಿಪ್ಟ್ ಸೆಲೆಕ್ಟರ್ ಎಂಬುದನ್ನು ಸಾಬೀತುಪಡಿಸಿದ್ದರು. ಆ ಚಿತ್ರದ ಬಳಿಕ ಅದೇ ವರ್ಷ 18 ಪೇಜಸ್ ಚಿತ್ರದ ಮೂಲಕವೂ ಸಹ ಮತ್ತೊಂದು ಯಶಸ್ಸನ್ನು ಗಳಿಸಿದ ನಿಖಿಲ್ ಸಿದ್ಧಾರ್ಥ್ ಅಭಿನಯದ 'ಸ್ಪೈ' ಎಂಬ ಚಿತ್ರ ಇಂದು ( ಜೂನ್ 29 ) ಬಿಡುಗಡೆಗೊಂಡಿದೆ.
ಈ ಚಿತ್ರದಲ್ಲಿ ನಿಖಿಲ್ ನಾಯಕನಾಗಿ ನಟಿಸಿದ್ದು, ನಾಯಕಿಯಾಗಿ ತಮಿಳಿನ ಐಶ್ವರ್ಯ ಮೆನನ್ ಬಣ್ಣ ಹಚ್ಚಿದ್ದಾರೆ. ಮೂಲತಃ ತೆಲುಗು ಚಿತ್ರವಾಗಿರುವ ಸ್ಪೈ ಚಿತ್ರ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಸಹ ಡಬ್ ಆಗಿದ್ದು ಪ್ಯಾನ್ ಇಂಡಿಯಾ ಸಿನಿಮಾ ಎನಿಸಿಕೊಂಡಿದೆ.

ಈ ಚಿತ್ರಕ್ಕೆ ನೂತನ ನಿರ್ದೇಶಕ ಗ್ಯಾರಿ ಬಿಎಚ್ ಎಂಬ ಆಕ್ಷನ್ ಕಟ್ ಹೇಳಿದ್ದು, ಚಿತ್ರದ ಟ್ರೈಲರ್ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಚಿತ್ರದ ಟ್ರೈಲರ್‌ನಲ್ಲಿ ಸುಭಾಷ್ ಚಂದ್ರ ಬೋಸ್‌ರ ಜೀವನದ ಬಗ್ಗೆ ಇಲ್ಲಿಯವರೆಗೂ ಎಲ್ಲಿಯೂ ಹೇಳದ ರಹಸ್ಯವೊಂದನ್ನು ಹೇಳಲಿದ್ದೇವೆ ಎಂಬುದನ್ನು ತೋರಿಸಲಾಗಿತ್ತು ಎಂಬುದನ್ನು ತೋರಿಸಲಾಗಿತ್ತು. ಈ ಅಂಶ ಸಿನಿ ರಸಿಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹಾಗೂ ಕುತೂಹಲವನ್ನು ಹುಟ್ಟುಹಾಕಿತ್ತು.
ಹೀಗೆ ದೊಡ್ಡ ಮಟ್ಟದ ನಿರೀಕ್ಷೆಯನ್ನೇ ಹುಟ್ಟುಹಾಕಿದ್ದ ಸ್ಪೈ ಚಿತ್ರ ಇಂದು ತೆರೆಗೆ ಬಂದಿದ್ದು, ಮೊದಲ ದಿನದ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆ ಚಿತ್ರ ವೀಕ್ಷಿಸಿ ಹೊರಬಂದ ಸಿನಿ ರಸಿಕರು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹೇಗಿದೆ ಎಂಬುದನ್ನು ಬರೆದುಕೊಳ್ಳುತ್ತಿದ್ದಾರೆ.
ಈ ಪೈಕಿ ಬಹುತೇಕ ವಿಮರ್ಶೆಗಳು ನೆಗೆಟಿವ್ ಆಗಿಯೇ ಇವೆ. ಶ್ರೀಕಾಂತ್ ಎಂಬ ಸಿನಿ ರಸಿಕ ಚಿತ್ರವನ್ನು ವೀಕ್ಷಿಸಿದ ಬಳಿಕ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರದ ಕುರಿತು ಬರೆದುಕೊಂಡಿದ್ದು "ಸ್ಪೈ ಚಿತ್ರ ಸರಿಯಾದ ಕಥೆಯಿಲ್ಲದ ಮತ್ತೊಂದು ಸಾಮಾನ್ಯ ಸಿನಿಮಾ. ದೇಶದ ಅತಿದೊಡ್ಡ ರಹಸ್ಯ ಎಂಬುದು ಕೇವಲ ಪ್ರಚಾರದ ಗಿಮಿಕ್ ಅಷ್ಟೇ ಹಾಗೂ ಅದು ಎಲ್ಲಿಯೂ ಸಹ ಕಥೆಗೆ ಸಂಬಂಧಪಡುವುದಿಲ್ಲ. ಕೇವಲ ಹಿನ್ನೆಲೆ ಸಂಗೀತ ಹಾಗೂ ಕೆಲ ಆಕ್ಷನ್ ದೃಶ್ಯಗಳು ಮಾತ್ರ ಚೆನ್ನಾಗಿದೆ ಅಷ್ಟೇ. ಸಾಧಾರಣಕ್ಕಿಂತ ಕಳಪೆ" ಎಂದು ಉಲ್ಲೇಖಿಸಿದ್ದಾರೆ.
ಸುಜಿತ್ ಎಂಬ ಮತ್ತೋರ್ವ ಸಿನಿ ರಸಿಕ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದ್ದು, "ಡಬ್ಬಾ ಸಿನಿಮಾ. ಏನೂ ಇಲ್ಲ. ಒಂದು ದೃಶ್ಯಕ್ಕೂ ಮತ್ತೊಂದು ದೃಶ್ಯಕ್ಕೂ ಯಾವುದೇ ಸಂಬಂಧವಿಲ್ಲ. ಈ ಚಿತ್ರವನ್ನು ನೋಡದೇ ಇರಬಹುದು" ಎಂದು ಬರೆದುಕೊಂಡಿದ್ದಾರೆ.
ಶಿವ ಎಂಬ ಚಿತ್ರ ಪ್ರೇಮಿ ಚಿತ್ರದ ವಿಮರ್ಶೆಯನ್ನು ಹಂಚಿಕೊಂಡಿದ್ದು "ಉಫ್.. ನಿರ್ದೇಶನ ಕೈಕೊಟ್ಟಿದೆ. ತಾರಾಗಣ ಸರಿಯಾಗಿಲ್ಲ. ರಾ ಏಜೆಂಟ್‌ಗಳೆಂದರೆ ನಂಬಲಾಗದ ಹಾಗಿದ್ದಾರೆ. ಎರಡು ಗಂಟೆಗಳ ಸಿನಿಮಾವಾದರೂ ಹುಚ್ಚು ಬೋರ್ ಹೊಡೆಸಿತು" ಎಂದು ಬರೆದುಕೊಂಡಿದ್ದಾರೆ.
ಪ್ರಶಾಂತ್ ಹೆಸರಿನ ಮತ್ತೋರ್ವ ಸಿನಿ ರಸಿಕ ಚಿತ್ರದ ವಿಮರ್ಶೆಯನ್ನು ಹಂಚಿಕೊಂಡಿದ್ದು "ಸ್ಪೈ ಅಂತ ಹೆಸರು ಇಟ್ಟುಬಿಟ್ರೆ ಆಗಲ್ಲ. ಚಿತ್ರದ ಪಾತ್ರಧಾರಿಗಳೂ ಸಹ ಸ್ಪೈ ರೀತಿ ನಟಿಸಬೇಕು. ಅಣ್ಣನಿಗೆ ಬಂದ ಸಮಸ್ಯೆಯನ್ನು ತಮ್ಮ ಬಂದು ಸರಿ ಮಾಡ್ತಾನೆ. ಇದನ್ನೂ ಹೊರತುಪಡಿಸಿ ಚಿತ್ರದಲ್ಲಿ ಇನ್ನೇನಿದೆ? ಇದಕ್ಕೆ ಬೋಸ್ ಅವರ ಕಥೆಯನ್ನು ಸೇರಿಸಿದ್ದಾರೆ. ಥ್ಯಾಂಕ್ಸ್.. ಸಮಸ್ತೆ" ಎಂದು ಬೇಸರದಿಂದ ಬರೆದುಕೊಂಡಿದ್ದಾರೆ.
ಹೀಗೆ ಸ್ಪೈ ಕುರಿತ ವಿಮರ್ಶೆಗಳನ್ನು ತಿಳಿದುಕೊಳ್ಳಲು ಟ್ವಿಟರ್ ಕಡೆ ತಲೆ ಹಾಕಿದವರಿಗೆ ಹೆಚ್ಚಾಗಿ ನೆಗೆಟಿವ್ ವಿಮರ್ಶೆಗಳೇ ಕಾಣಸಿಗಲಿವೆ. ಪಾಸಿಟಿವ್ ವಿಮರ್ಶೆಗಳೆಂದರೆ ಎಲ್ಲೋ ಒಬ್ಬರು ಮಾಡಿರುವ 'ಒಂದು ಸಾರಿ ನೋಡಬಹುದು' ಎಂಬ ಟ್ವೀಟ್‌ಗಳು ಮಾತ್ರ.


Click it and Unblock the Notifications











