Boys Hostel Trailer: ತೆಲುಗು ಬಾಬುಗಳಿಗೆ ಕ್ವಾಟ್ಲೆ ಕೊಡೊಕೆ ಹಾಸ್ಟೆಲ್ ಹುಡುಗ್ರು ಹೊಂಟ್ರು: ರಮ್ಯಾ, ದಿಗಂತ್ ಇಲ್ಲ
ಕನ್ನಡ ಸಿನಿರಸಿಕರಿಗೆ ಕಚಗುಳಿ ಕೊಟ್ಟು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ ಹಾಸ್ಟೆಲ್ ಹುಡುಗರು ಈಗ ಆಂಧ್ರ, ತೆಲಂಗಾಣಕ್ಕೆ ಹೊರಟಿದ್ದಾರೆ. ಈಗಾಗಲೇ ತೆಲುಗಿಗೆ ಸಿನಿಮಾ ಡಬ್ ಆಗಿದ್ದು ಆಗಸ್ಟ್ 26ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಸದ್ಯ ತೆಲುಗು ಟ್ರೈಲರ್ ಹೊರಬಂದು ಸದ್ದು ಮಾಡ್ತಿದೆ. ನಿತಿನ್ ಕೃಷ್ಣಮೂರ್ತಿ ತಂಡದ ಪ್ರಯತ್ನ ತೆಲುಗಿನಲ್ಲೂ ಯಶಸ್ವಿಯಾಗುವ ಸುಳಿವು ಸಿಗುತ್ತಿದೆ.
ಜುಲೈ 21ಕ್ಕೆ ಕರ್ನಾಟಕದಾದ್ಯಂತ ಈ ಕಾಮಿಡಿ ಎಂಟರ್‌ಟೈನರ್ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ರಿಲೀಸ್ ಆಗಿತ್ತು. ಯುವಜನತೆಯನ್ನು ಚಿತ್ರಮಂದಿರಗಳಿಗೆ ಸೆಳೆದಿತ್ತು. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಮಾಡಿದ್ದ ಚಿತ್ರಕ್ಕೆ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಬೆಂಬಲ ಸಿಕ್ಕಿತ್ತು. ಮೊದಲ ದಿನದಿಂದಲೂ ಪುನೀತ್ ರಾಜ್‌ಕುಮಾರ್ ತಂಡದ ಬೆನ್ನಿಗೆ ನಿಂತಿದ್ದರು. ರಮ್ಯಾ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದರು. ರಕ್ಷಿತ್ ಶೆಟ್ಟಿ ತಮ್ಮದೇ ಬ್ಯಾನರ್ ಮೂಲಕ ಸಿನಿಮಾ ಬಿಡುಗಡೆ ಮಾಡಿದ್ದರು. ರಿಷಬ್ ಶೆಟ್ಟಿ, ದಿಗಂತ್ ಕೂಡ ಸಣ್ಣ ಪಾತ್ರಗಳಲ್ಲಿ ಮಿಂಚಿದ್ದರು.

ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಪ್ರಯತ್ನದಲ್ಲೇ ಕಮಾಲ್ ಮಾಡಿದ್ದರು. ನಿರ್ದೇಶನ ಮಾತ್ರವಲ್ಲದೇ ಒಂದು ಪಾತ್ರದಲ್ಲೂ ನಟಿಸಿ ಗಮನ ಸೆಳೆದರು. ಪ್ರಜ್ವಲ್, ಮಂಜುನಾಥ್ ನಾಯಕ್, ಚೇತನ್ ದುರ್ಗ ಚಿತ್ರದ ತಾರಾಗಣದಲ್ಲಿದ್ದಾರೆ. ಒಂದೇ ಒಂದು ಹಾಸ್ಟೆಲ್‌ನಲ್ಲಿ ಒಂದು ರಾತ್ರಿಯಲ್ಲಿ ನಡೆಯುವ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇನ್ನು ಹಾಸ್ಟೆಲ್‌ನಲ್ಲಿ ಇರುವವರು, ಹಾಸ್ಟೆಲ್‌ನಲ್ಲಿ ಇದ್ದವರು ಸಿನಿಮಾ ನೋಡಿ ಬಿದ್ದು ಬಿದ್ದು ನಕ್ಕಿದ್ದರು.
400ಕ್ಕೂ ಹೆಚ್ಚು ಜನ ಈ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಇನ್ನು ಅಜನೀಶ್ ಲೋಕನಾಥ್ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಅಂದಹಾಗೆ ತೆಲುಗಿನಲ್ಲಿ ಒಂದಿಬ್ಬರು ಕಲಾವಿದರನ್ನು ಬದಲಿಸಲಾಗಿದೆ. ರಮ್ಯಾ ಬದಲಿಗೆ ಲೆಕ್ಚರರ್ ಪಾತ್ರದಲ್ಲಿ ರಶ್ಮಿ ಗೌತಮ್ ನಟಿಸಿದ್ದಾರೆ. ಇನ್ನು ಶಾರ್ಟ್ ಫಿಲ್ಮ್ ಎಡಿಟರ್ ಬಂಟಿ ಗೌಡ ಪಾತ್ರದಲ್ಲಿ ದಿಗಂತ್ ಬದಲು ತರುಣ್ ಭಾಸ್ಕರ್ ಕಾಣಿಸಿಕೊಂಡಿದ್ದಾರೆ. 'ಕಾಂತಾರ' ಚಿತ್ರದ ಮೂಲಕ ರಿಷಬ್ ಶೆಟ್ಟಿ ತೆಲುಗು ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಅವರ ಗೆಸ್ಟ್ ಅಪಿಯರೆನ್ಸ್ ಟಾಲಿವುಡ್‌ನಲ್ಲಿ ಪ್ಲಸ್ ಆಗುವ ಸಾಧ್ಯತೆಯಿದೆ.

ಸಿನಿಮಾ ಕಥೆ ಏನು ಅನ್ನುವುದನ್ನು ನೋಡುವುದಾದರೆ, ನೂರಾರು ವಿದ್ಯಾರ್ಥಿಗಳಿರುವ ತುಂಗಾ ಹಾಸ್ಟೆಲ್. ಅಲ್ಲಿ ಒಬ್ಬ ಸ್ಟ್ರಿಕ್ಟ್ ವಾರ್ಡನ್. ಅದೇ ಹಾಸ್ಟೆಲ್ ವಿದ್ಯಾರ್ಥಿ ಅಜಿತ್‌ಗೆ ಸಿನಿಮಾ ನಿರ್ದೇಶಕನಾಗುವ ಕನಸು. ಒಂದು ಶಾರ್ಟ್ ಫಿಲ್ಮ್ ಮಾಡಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಆತ ಮುಂದಾಗುತ್ತಾನೆ. ಹಾಸ್ಟೆಲ್ ವಾರ್ಡನ್ ದಿಢೀರನೆ ಸುಸೈಡ್ ನೋಟ್‌ನಲ್ಲಿ ಒಂದಷ್ಟು ಹುಡುಗರ ಹೆಸರು ಬರೆದಿಟ್ಟು ಸುಸೈಡ್ ಮಾಡಿಕೊಂಡರೆ ಮುಂದೆ ಏನಾಗುತ್ತದೆ? ಅನ್ನೋದನ್ನು ಲೈವ್‌ನಲ್ಲಿ ಶೂಟ್ ಮಾಡಬೇಕು ಎಂದುಕೊಳ್ಳುತ್ತಾನೆ. ಆದರೆ ಈ ಹಾದಿಯಲ್ಲಿ ಏನೆಲ್ಲಾ ಆಗುತ್ತೆ ಅನ್ನೋದು ಸಿನಿಮಾ ಕಥೆ.
ಈಗಾಗಲೇ ಕೆಲ ತೆಲುಗು ಪ್ರೇಕ್ಷಕರು ಕನ್ನಡದಲ್ಲೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನೋಡಿದರೆ ಕಥೆ ಏನು ಎಂದು ಅರ್ಥವೇ ಆಗುತ್ತಿಲ್ಲ. 'ಬಾಯ್ಸ್ ಹಾಸ್ಟೆಲ್' ಸಿನಿಮಾ ನೋಡಲೇಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ವರುಣ್ ಸ್ಟುಡಿಯೋಸ್ ಮತ್ತು ಗುಲ್‌ಮೊಹರ್ ಫಿಲ್ಮ್ಸ್ ಬ್ಯಾನರ್‌ನಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನಿರ್ಮಾಣವಾಗಿದೆ. ಡೈಲಾಗ್‌ಗಳು ಸ್ಪೀಡ್ ಇರುವುದರಿಂದ ತೆಲುಗಿಗೆ ಡಬ್ ಮಾಡುವುದು ಕಷ್ಟ ಎನ್ನಲಾಗಿತ್ತು. ಆದರೆ ಕೊನೆಗೂ ತಂಡ ಅದರಲ್ಲಿ ಯಶಸ್ವಿಯಾಗಿದೆ. ಕನ್ನಡದಲ್ಲಿ ಸಿನಿಮಾ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ತೆಲುಗಿನಲ್ಲಿ ಎಷ್ಟರಮಟ್ಟಿಗೆ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ.


Click it and Unblock the Notifications











